ತಮಿಳುನಾಡು ಚುನಾವಣೆ: ಪಳನಿಸ್ವಾಮಿ ಎಐಎಡಿಎಂಕೆಯ ಸಿಎಂ ಅಭ್ಯರ್ಥಿ

ಎಐಎಡಿಎಂಕೆ ಪಕ್ಷದ ಎರಡು ಬಣಗಳ ಮಧ್ಯೆ ನಡೆದ ಸುದೀರ್ಘ ಚರ್ಚೆಯ ಬಳಿಕ ಇಂದು ಒಮ್ಮತಕ್ಕೆ ಬಂದಿದ್ದು, ಪಳನಿಸ್ವಾಮಿ ಅವರನ್ನೇ ಮತ್ತೆ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಈ ಬಣಗಳು ಅಣಿಗೊಂಡಿವೆ.

ಎಐಎಡಿಎಂಕೆ ಸಭೆ

ಎಐಎಡಿಎಂಕೆ ಸಭೆ

 • News18
 • Last Updated :
 • Share this:
  ಚೆನ್ನೈ(ಅ. 07): ಹಲವು ದಿನಗಳ ಹಗ್ಗಜಗ್ಗಾಟಗಳ ನಂತರ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಎರಡು ಬಣಗಳು ಇಂದು ಒಂದು ಒಮ್ಮತಕ್ಕೆ ಬರುವಲ್ಲಿ ಯಶಸ್ವಿಯಾಗಿವೆ. ಮುಖ್ಯಮಂತ್ರಿ ಏಡಪ್ಪಾಡಿ ಪಳನಿಸ್ವಾಮಿ ಅವರನ್ನೇ ಈ ಬಾರಿಯೂ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಬದಲಾಗಿ ಮತ್ತೊಂದು ಬಣದ ಓ ಪನ್ನೀರ್ ಸೆಲ್ವಂ ಅವರಿಗೆ ಪಕ್ಷದ ಆಡಳಿತದಲ್ಲಿ ಹೆಚ್ಚು ಅಧಿಕಾರ ಸಿಗುತ್ತಿದೆ.

  ಎಐಎಡಿಎಂಕೆಯ 11 ಸದಸ್ಯರ ಸಂಚಾಲನಾ ಸಮಿತಿ (ಸ್ಟೀರಿಂಗ್ ಕಮಿಟಿ) ರಚನೆ ಮಾಡಲಾಗಿದ್ದು, ಅದರಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಬಣದ 6 ಮಂದಿ ಹಾಗೂ ಪನ್ನೀರ್ ಸೆಲ್ವಂ ಬಣದ ಐವರಿಗೆ ಪ್ರಾತಿನಿಧ್ಯ ಇದೆ. ಈ ಸಮಿತಿಯಲ್ಲಿ ಪನ್ನೀರ್ ಸೆಲ್ವಂ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿನ್ನೆಯಿಂದಲೂ ಎರಡು ಬಣಗಳ ಮಧ್ಯೆ ಸುದೀರ್ಘ ವಾಗ್ವಾದ, ಚರ್ಚೆಗಳ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.

  ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಎಐಎಡಿಎಂಕೆ ಜೊತೆ ಬಿಜೆಪಿ, ಪಿಎಂಕೆ, ಡಿಎಂಡಿಕೆ, ಟಿಎಂಸಿ ಹಾಗೂ ಇತರ ಸಣ್ಣಪುಟ್ಟ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆ ಆಗಿರುವುದು ಮೈತ್ರಿಕೂಟಕ್ಕೆ ಒಂದು ಸ್ಥಿರತೆ ಸಿಗುವ ನಿರೀಕ್ಷೆ ಇದೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ, ಶಶಿಕಲಾ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಸದ್ಯದಲ್ಲೇ ಬಿಡುಗಡೆ ಆಗಲಿದ್ದಾರೆ. ಅವರು ರಿಲೀಸ್ ಆಗುವ ಮೊದಲೇ ಸಿಎಂ ಅಭ್ಯರ್ಥಿಯ ಘೋಷಣೆ ಮಾಡಲಾಗಿದೆ. ಶಶಿಕಲಾ ಅವರು ಜೈಲಿಗೆ ಹೋಗುವ ಮುನ್ನ ಪನ್ನೀರ್ ಸೆಲ್ವಂ ಬದಲು ಪಳನಿಸ್ವಾಮಿ ಅವರನ್ನ ಸಿಎಂ ಸ್ಥಾನಕ್ಕೆ ಕೂರಿಸಿದ್ದರು. ಈಗ ಶಶಿಕಲಾ ಸ್ವತಃ ಸಿಎಂ ಸ್ಥಾನಕ್ಕೆ ಕೂರಲು ಯತ್ನಿಸುವ ಮುನ್ನವೇ ಎಐಎಡಿಎಂಕೆ ಸಿಎಂ ಅಭ್ಯರ್ಥಿಯನ್ನ ಘೋಷಿಸಿದೆ.

  ಇದನ್ನೂ ಓದಿ: ಪಿಎಫ್ಐ ನಂಟು: ಹಾಥ್ರಸ್​ಗೆ ಹೋಗುವಾಗ ಬಂಧಿತರಾಗಿದ್ದ ನಾಲ್ವರ ವಿರುದ್ಧ ದೇಶದ್ರೋಹ ಪ್ರಕರಣ

  ಜಯಲಲಿತಾ ಮತ್ತು ಕರುಣಾನಿಧಿ ಸಾವಿನ ನಂತರ ಈಗ ತಮಿಳುನಾಡು ರಾಜಕಾರಣ ಹರಿವಿನ ನೀರಿನಂತಾಗಿದೆ. ಎಐಎಡಿಎಂಕೆ ಮತ್ತು ಡಿಎಂಕೆ ಪಕ್ಷಗಳ ಅತ್ಯುಚ್ಚ ನಾಯಕರ ಕೊರತೆಯನ್ನು ಬಳಸಿಕೊಂಡು ಪ್ರವರ್ಧಮಾನಕ್ಕೆ ಬರಲು ಹಲವರು ಹಾತೊರೆಯುತ್ತಿದ್ದಾರೆ. ನಟರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ತಮ್ಮ ಹೊಸ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಒಳ್ಳೆಯ ಜನಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ಧಾರೆ. ತಮಿಳುನಾಡಿನಲ್ಲಿ ಕಮಲ ಅರಳಿಸಲು ಬಿಜೆಪಿಗೂ ಇದು ಸಕಾಲವೆಂಬಂತಿದೆ. ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ತನ್ನೆಲ್ಲಾ ಬಲವನ್ನ ಒಗ್ಗೂಡಿಸಲು ಶತಪ್ರಯತ್ನ ಮಾಡುತ್ತಿದೆ.
  Published by:Vijayasarthy SN
  First published: