Tamil Nadu Elections - ತಮಿಳುನಾಡು ಚುನಾವಣೆ: ಬಿಜೆಪಿ ಪಾಲಿಗೆ 20 ಸೀಟು; ಕನ್ಯಾಕುಮಾರಿಗೂ ಕಮಲ

ತಮಿಳುನಾಡಿನ 234 ಕ್ಷೇತ್ರಗಳ ಪೈಕಿ ಬಿಜೆಪಿಗೆ ಸ್ಪರ್ಧಿಸಲು ಎಐಎಡಿಎಂಕೆ 20 ಕ್ಷೇತ್ರಗಳನ್ನ ಬಿಟ್ಟುಕೊಟ್ಟಿದೆ. ಇದರ ಜೊತೆಗೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಜೆಪಿ ಸ್ಪರ್ಧಿಸಲಿದೆ. ಎಐಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಬಿಜೆಪಿ ಸೇರಿ 9 ಪಕ್ಷಗಳು ಇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ಚೆನ್ನೈ(ಮಾ. 06): ಮುಂಬರಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳ ಮಧ್ಯೆ ಸೀಟು ಹಂಚಿಕೆ ವಿಚಾರ ಅಂತಿಮಗೊಂಡಿದೆ. ನಾಲ್ಕು ಸುತ್ತುಗಳ ಮಾತುಕತೆ ಬಳಿಕ ಎಐಎಡಿಎಂಕೆ ಪಕ್ಷ ಬಿಜೆಪಿಗೆ 20 ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ. ಇದರ ಜೊತೆಗೆ ಉಪಚುನಾವಣೆ ಎದುರಿಸುತ್ತಿರುವ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನೂ ಬಿಜೆಪಿಗೆ ಕೊಡಲು ಎಐಎಡಿಎಂಕೆ ಒಪ್ಪಿಕೊಂಡಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕಮಲ ಪಾಳಯದ ಬಲ ಈ ದ್ರಾವಿಡ ನೆಲದಲ್ಲಿ ವೃದ್ಧಿಯಾಗಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.

  ತಮಿಳುನಾಡಿನ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು. ಇದರಿಂದಾಗಿ ವಾರಕ್ಕಿಂತಲೂ ಹೆಚ್ಚು ಕಾಲ ಮಾತುಕತೆ ನಡೆದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಅಮಿತ್ ಶಾ ಅವರು ತಮಿಳುನಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಡಿಸಿಎಂ ಪನೀರ್ ಓ ಸೆಲ್ವಂ ಅವರಿಬ್ಬರ ಜೊತೆ ಮಾತುಕತೆಯನ್ನೂ ನಡೆಸಿ ಹೋಗಿದ್ದರು. ಆದರೂ ಸೀಟು ಹಂಚಿಕೆ ವಿಚಾರದಲ್ಲಿ ಸಹಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಕಗ್ಗಂಟು ಇನ್ನಷ್ಟು ಕಾಲ ಮುಂದುವರಿಯಬಹುದು ಎಂದುಕೊಂಡಿರುವಾಗಲೇ ಇದೀಗ ಎಐಎಡಿಎಂಕೆ ಪಕ್ಷ ಬಿಜೆಪಿಗೆ 20 ಸ್ಥಾನಗಳನ್ನ ಬಿಟ್ಟುಕೊಡಲು ಒಪ್ಪಿಕೊಂಡಿರುವ ವಿಚಾರ ಹೊರಬಂದಿದೆ.

  ಇದನ್ನೂ ಓದಿ: West Bengal Assembly Election 2021: ನಂದಿಗ್ರಾಮದಿಂದ ಬ್ಯಾನರ್ಜಿ ಸ್ಪರ್ಧೆ, 291 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಟಿಎಂಸಿ

  ಕುತೂಹಲದ ಸಂಗತಿ ಇರುವುದು ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ್ದು. ಇಲ್ಲಿ 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪೋನ್ ರಾಧಾಕೃಷ್ಣನ್ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹೆಚ್ ವಸಂತಕುಮಾರ್ ಅವರಿಗೆ ಗೆಲುವಿನ ಮಾಲೆ ಸಿಕ್ಕಿತ್ತು. ದುರದೃಷ್ಟವಶಾತ್, ವಸಂತಕುಮಾರ್ ಕಳೆದ ವರ್ಷ ಮೃತಪಟ್ಟ ಹಿನ್ನೆಲೆಯಲ್ಲಿ ಕ್ಷೇತ್ರ ಖಾಲಿ ಉಳಿದಿದೆ. ಅಲ್ಲೀಗ ಉಪಚುನಾವಣೆ ನಡೆಯುತ್ತಿದೆ. ಕುತೂಹಲದ ಸಂಗತಿ ಎಂದರೆ, ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿ ಅವರಿಗೆ ಕಾರ್ತಿ ಚಿದಂಬರಮ್ ಮನವಿ ಮಾಡಿಕೊಂಡು ಪತ್ರವನ್ನೂ ಬರೆದಿದ್ದಾರೆ.

  234 ಕ್ಷೇತ್ರಗಳಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಒಂದೆಡೆ, ಎಐಎಡಿಎಂಕೆ, ಬಿಜೆಪಿ, ಪಿಎಂಕೆ, ಡಿಎಂಡಿಕೆ ಸೇರಿದಂತೆ ಒಂಬತ್ತು ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಮತ್ತೊಂದೆಡೆ ಡಿಎಂಕೆ, ಕಾಂಗ್ರೆಸ್ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಸೇರಿದಂತೆ 10 ಪಕ್ಷಗಳ ಮೈತ್ರಿಕೂಟ ಇದೆ. ಮಗದೊಂದೆಡೆ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮೈಯಂ ನೇತೃತ್ವದಲ್ಲಿ ಮೂರು ಪಕ್ಷಗಳ ಸಣ್ಣ ಮೈತ್ರಿಕೂಟ ಇದೆ.

  ಇದನ್ನೂ ಓದಿ: Sushant Case - ಸುಶಾಂತ್ ಪ್ರಕರಣ: ರಿಯಾ ಚಕ್ರಬರ್ತಿ ಸೇರಿ 35 ಮಂದಿ ವಿರುದ್ಧ ಎನ್​ಸಿಬಿ ಚಾರ್ಜ್​ಶೀಟ್

  ಎಐಎಡಿಎಂಕೆ ಪಕ್ಷ ಪಿಎಂಕೆಗೆ 23 ಸ್ಥಾನಗಳನ್ನ ಬಿಟ್ಟುಕೊಡುವುದಾಗಿ ಫೆ. 28ರಂದು ಹೇಳಿತ್ತು. ಇದೀಗ ಬಿಜೆಪಿಗೆ 20 ಸ್ಥಾನಗಳು ಸಿಕ್ಕಿವೆ. ಮೈತ್ರಿಕೂಟದ ಮತ್ತೊಂದು ಪ್ರಮುಖ ಪಕ್ಷವಾದ ಡಿಎಂಡಿಕೆಯೊಂದಿಗೆ ಸೀಟು ಹಂಚಿಕೆಗೆ ಮಾತುಕತೆ ಇನ್ನೂ ನಡೆಯುತ್ತಿದೆ. ಡಿಎಂಡಿಕೆಗೆ 15 ಕ್ಷೇತ್ರ ಹಾಗೂ ಒಂದು ರಾಜ್ಯಸಭಾ ಸ್ಥಾನವನ್ನ ಬಿಟ್ಟುಕೊಡಲು ಎಐಎಡಿಎಂಕೆ ಮುಂದಾಗಿದೆ. ಇವತ್ತು ಅಥವಾ ನಾಳೆಯೊಳಗೆ ಇದೂ ಅಂತಿಮವಾಗಬಹುದು.

  ತಮಿಳುನಾಡು ವಿಧಾನಸಭಾ ಚುನಾವಣೆಯ ಜೊತೆಗೆ ಇನ್ನೂ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಮ್ ಮತ್ತು ಪುದುಚೇರಿ ರಾಜ್ಯಗಳಲ್ಲೂ ಎಲೆಕ್ಷನ್ ಆಗುತ್ತಿದೆ. ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳು ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಬಹುಮತ ಸಿಗಬಹುದು ಎಂದು ಅಂದಾಜು ಮಾಡಿವೆ. ಆದರೆ, ಚುನಾವಣೆಗೆ ಇನ್ನೂ ಕಾಲಾವಕಾಶ ಇರುವುದರಿಂದ ಲೆಕ್ಕಾಚಾರಗಳು ಏರುಪೇರೂ ಆಗಬಹುದು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈಗಾಗಲೇ ಬಲವೃದ್ಧಿಸಿಕೊಂಡಿದೆ. ಪಾಂಡಿಚೆರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಏರಲು ಬಿಜೆಪಿ ವೇದಿಕೆ ಸಜ್ಜು ಮಾಡಿಕೊಂಡಿದೆ. ಅಸ್ಸಾಮ್ ರಾಜ್ಯದಲ್ಲೂ ಬಿಜೆಪಿ ಮರಳಿ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ದೇವರ ನಾಡು ಕೇರಳದಲ್ಲಿ ಬಿಜೆಪಿಗೆ ಈ ಬಾರಿ ಬೆರಳೆಣಿಕೆಯ ಸ್ಥಾನ ಸಿಕ್ಕರೆ ಹೆಚ್ಚು ಎಂಬಂತಿದೆ ಸದ್ಯದ ಪರಿಸ್ಥಿತಿ.
  Published by:Vijayasarthy SN
  First published: