HOME » NEWS » National-international » AHMED PATEL WHO WAS A POWER CENTER IN THE CONGRESS PARTY SNVS

ಸ್ವಾಮಿನಿಷ್ಠೆ ಜೊತೆಗೆ ಕಾಂಗ್ರೆಸ್​ನ ಪವರ್ ಸೆಂಟರ್, ಟ್ರಬಲ್ ಶೂಟರ್ ಎಲ್ಲವೂ ಆಗಿದ್ದ ಅಹಮದ್ ಪಟೇಲ್

Ahmed Patel Obituary - ಸೋನಿಯಾ ಅವರಿಗೆ ಅಹ್ಮದ್ ಪಟೇಲ್ ಗೋ ಟು ಮ್ಯಾನ್ ಆಗಿದ್ದರು. ಎಂಥದ್ದೇ ಸಂದರ್ಭವನ್ನಾದರೂ ನಿಭಾಯಿಸಬಲ್ಲಂಥ ಟ್ರಬಲ್ ಶೂಟರ್ ಎನಿಸಿದ್ದರು. ಕಾಂಗ್ರೆಸ್​ನ ಪವರ್ ಸೆಂಟರ್ ಆಗಿ ಹೈಕಮಾಂಡ್ ವಹಿಸಿದ ಕೆಲಸವನ್ನ ಚಾಚೂತಪ್ಪದೇ ಅವರು ಆಚರಣೆಗೆ ತರಬಲ್ಲಂಥವರಾಗಿದ್ದರು.

news18
Updated:November 25, 2020, 10:59 AM IST
ಸ್ವಾಮಿನಿಷ್ಠೆ ಜೊತೆಗೆ ಕಾಂಗ್ರೆಸ್​ನ ಪವರ್ ಸೆಂಟರ್, ಟ್ರಬಲ್ ಶೂಟರ್ ಎಲ್ಲವೂ ಆಗಿದ್ದ ಅಹಮದ್ ಪಟೇಲ್
ಅಹಮದ್ ಪಟೇಲ್
  • News18
  • Last Updated: November 25, 2020, 10:59 AM IST
  • Share this:
ಮೊಘಲರ ದೊರೆ ಮೊಹಮ್ಮದ್ ಶಾ ಅವರ ಆಸ್ಥಾನದಿಂದ ನಿಜಾಮ್ ಉಲ್ ಮುಲ್ಕ್ ನಿರ್ಗಮನವಾದ ನಂತರ ಮೊಘಲ್ ಸಾಮ್ರಾಜ್ಯ ಬೇಗನೇ ಪತನ ಆಯಿತು ಎಂದು ಇತಿಹಾಸದ ಪಾಠಗಳು ಹೇಳುತ್ತವೆ. ಈಗ ಅಹ್ಮದ್​ಭಾಯ್ ಮೊಹಮ್ಮದ್​ಭಾಯ್ ಪಟೇಲ್ ಅವರ ನಿಧನದ ನಂತರ ಕಾಂಗ್ರೆಸ್ ಪಕ್ಷವೂ ಬೇಗ ಪತನದ ಹಾದಿ ಹಿಡಿಯಲಿದೆಯಾ ಎಂಬ ಪ್ರಶ್ನೆ ಮತ್ತು ಭಯ ಆವರಿಸಿದೆ. ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ದುರ್ಬಲಗೊಂಡು ಒಡಕುಗಳು ಹೆಚ್ಚುತ್ತಿರುವ ಹೊತ್ತಲ್ಲಿ ಅಹ್ಮದ್ ಪಟೇಲ್ ಅನುಪಸ್ಥಿತಿ ಇನ್ನಿಲ್ಲದಂತೆ ಕಾಡಲಿದೆ. ಕಾಂಗ್ರೆಸ್​ನ 23 ಅಸಮಾಧಾನಿತ ಮುಖಂಡರ ಗುಂಪಿನ ಧ್ವನಿ ಹೆಚ್ಚು ಕೇಳಲಾರಂಭಿಸಬಹುದು. ಈಗಿರುವ ವ್ಯವಸ್ಥೆಯನ್ನ ಮೀರಿ ಕೆಲ ಮುಖಂಡರು ತಮ್ಮ ಆಟಗಳನ್ನ ಆಡಲು ಧೈರ್ಯ ತೋರಬಹುದು.

ಯಾವುದೇ ಸಂದರ್ಭದಲ್ಲಾದರೂ ಆಸರೆಯಾಗಿ ಕಾಣಿಸುತ್ತಿದ್ದ ಅಹ್ಮದ್ ಪಟೇಲ್ ಅವರು ಇನ್ನಿಲ್ಲ ಎಂಬ ಸುದ್ದಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನ ಬಹಳವಾಗಿ ಕಾಡುತ್ತದೆ. ಅದರಲ್ಲೂ ಸೋನಿಯಾ ಅವರಿಗೆ ಅಹ್ಮದ್ ಪಟೇಲ್ ಗೋ ಟು ಮ್ಯಾನ್ ಆಗಿದ್ದರು. ಎಂಥದ್ದೇ ಸಂದರ್ಭವನ್ನಾದರೂ ನಿಭಾಯಿಸಬಲ್ಲಂಥ ಟ್ರಬಲ್ ಶೂಟರ್ ಎನಿಸಿದ್ದರು. ಅಂತೆಯೇ ಸೋನಿಯಾ ಗಾಂಧಿ ತಮ್ಮ ಸಂತಾಪ ಸಂದೇಶದಲ್ಲಿ ಅಹ್ಮದ್ ಪಟೇಲ್ ಅವರನ್ನ ‘ಭರಿಸಲಾಗದ ಕಾಮ್ರೇಡ್’ (ಅಂದರೆ ಯಾರೂ ಅವರ ಸ್ಥಾನ ತುಂಬಲಾರರು) ಎಂದು ಬಣ್ಣಿಸಿದ್ದಾರೆ.

ಸೋನಿಯಾಗೆ ಬಲ:

ಎರಡು ದಶಕಗಳ ಕಾಲ ಸೋನಿಯಾ ಗಾಂಧಿ ಅವರಿಗೆ ಅಹಮದ್ ಪಟೇಲ್ ಬಲವಾಗಿದ್ದರು. ಅವರು ಹೇಳಿದ ಕೆಲಸವನ್ನು ಚಾಚೂತಪ್ಪದೇ ಕಾರ್ಯಾಚರಣೆ ತರುವಂತೆ ಮಾಡಬಲ್ಲವರಾಗಿದ್ದರು. ಕಾಂಗ್ರೆಸ್ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಫೋನ್ ಕರೆ ಮಾಡಿ ಹೈಕಮಾಂಡ್​ನ ಕೆಲಸಗಳನ್ನ ಮಾಡಿಸುವಷ್ಟು ಪ್ರಭಾವಶಾಲಿಯಾಗಿದ್ದರು ಅಹ್ಮದ್ ಪಟೇಲ್. ಬಿಜೆಪಿಯೇತರ ಪಕ್ಷಗಳ ಮುಖಂಡರು, ಕಾರ್ಪೊರೇಟ್ ಕ್ಷೇತ್ರ, ಮಾಧ್ಯಮ, ಧಾರ್ಮಿಕ ಮುಖಂಡರು, ಎನ್​ಜಿಒ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಹ್ಮದ್ ಪಟೇಲ್ ಪ್ರಭಾವ ಬಹಳ ಮಟ್ಟಿಗೆ ಇತ್ತು. ಹೀಗೆ ತಮ್ಮ ಪ್ರಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಬಹಳಷ್ಟು ರಾಜಿ ಮಾಡಿಕೊಳ್ಳಬೇಕಾದ ಪ್ರಸಂಗ ಬಂದರೂ ಪರಿಹಾರ ಕಂಡುಕೊಳ್ಳದೇ ಬಿಡುತ್ತಿರಲಿಲ್ಲ.

ಕುಶಾಗ್ರಮತಿ ರಾಜಕಾರಣಿ:

ಅಹಮದ್ ಪಟೇಲ್ ಬಗ್ಗೆ ಕಾಂಗ್ರೆಸ್​ನೊಳಗೆ ಕೆಲ ಟೀಕೆಗಳೂ ಇವೆ. ಅವರಿಗೆ ಕಿಲ್ಲರ್ ಇನ್ಸ್​ಟಿಂಕ್ಟ್ ಇರಲಿಲ್ಲ ಎಂದು ಕೆಲವರು ಹೇಳುತ್ತಾರೆ. ಅಂದರೆ ಆಕ್ರಮಣಕಾರಿ ಸ್ವಭಾವದವರಾಗಿರಲಿಲ್ಲ ಎಂಬುದು ಅವರ ದೌರ್ಬಲ್ಯವಂತೆ. ಇದಕ್ಕೆ 2002ರ ಗುಜರಾತ್ ಗಲಭೆ ವಿಚಾರದಲ್ಲಿ ಅವರು ತಳೆದ ನಿಲುವುಗಳನ್ನ ಹಲವರು ಉಲ್ಲೇಖಿಸುತ್ತಾರೆ. ಗುಜರಾತ್ ಗಲಭೆ ಸಂಬಂಧ ಅಂದಿನ ಆ ರಾಜ್ಯದ ಸಿಎಂ ಆಗಿದ್ದ ನರೇಂದ್ರ ಮೋದಿ ವಿರುದ್ಧ ಬಿಗಿಯಾದ ಕಾನೂನು ಮತ್ತು ರಾಜಕೀಯ ಅಸ್ತ್ರಗಳಿಂದ ಕಟ್ಟಿಹಾಕುವ ಆಕ್ರಮಣಕಾರಿ ನಡೆಗಳನ್ನ ಅಹಮದ್ ಪಟೇಲ್ ಮಾಡಲಿಲ್ಲ. 2004ರ ಯುಪಿಎ ಸರ್ಕಾರದಲ್ಲಿದ್ದ ಕೆಲ ವ್ಯಕ್ತಿಗಳು ಮೋದಿ ವಿರುದ್ಧ ಕಠಿಣ ನಿಲುವು ತಳೆಯಬೇಕೆಂದು ಉತ್ಸಾಹದಲ್ಲಿದ್ದರು. ಆದರೆ, ಕಾನೂನು ಪ್ರಕಾರವಾಗಿ ಪ್ರಕರಣ ಸಾಗಲಿ ಎಂದು ಸೋನಿಯಾ ಗಾಂಧಿ ಮತ್ತು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನ ಒಪ್ಪಿಸಿದ್ದು ಅಹ್ಮದ್ ಪಟೇಲ್ ಅವರೆಯೇ. ಈ ವಿಚಾರದಲ್ಲಿ ಕಾಂಗ್ರೆಸ್​ನ ಒಂದು ವರ್ಗವು ಅಹ್ಮದ್ ಪಟೇಲ್ ಅವರ ಮೇಲೆ ಕೊನೆಯವರೆಗೂ ಕುಪಿತಗೊಂಡಿತ್ತು. ಆದರೆ, ಅಹಮದ್ ಪಟೇಲ್ ಆಲೋಚನೆ ಬೇರೆಯೇ ಇತ್ತು. ನರೇಂದ್ರ ಮೋದಿ ವಿರುದ್ಧ ಕಠಿಣ ನಿಲುವು ತಳೆದರೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಕೂಲ ಪರಿಸ್ಥಿತಿ ತಂದಿರಿಸಬಹುದು. ಯುಪಿಎ ಸರ್ಕಾರಕ್ಕೂ ಹಿನ್ನಡೆಯಾಗಬಹುದು ಎಂಬುದು ಅವರ ಭಯವಾಗಿತ್ತು.

ಹೀಗಾದ ಮಾತ್ರಕ್ಕೆ ಪಟೇಲ್ ಅವರಿಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇತ್ತು ಎಂದರೆ ತಪ್ಪಾಗುತ್ತದೆ. ಬಿಜೆಪಿ ಸೇರಿದಂತೆ ಸಂಘ ಪರಿವಾರದಿಂದ ಬಹಳ ಪೀಡಿತರಾದವರು ಅವರು. 1989ರಿಂದ ರಾಮಜನ್ಮಭೂಮಿ ಆಂದೋಲನದ ಪರಿಣಾಮವಾಗಿ ಗುಜರಾತ್​ನಲ್ಲಿ ವಿಶ್ವ ಹಿಂದೂಪರಿಷತ್ ಅಗಾಧವಾಗಿ ಬೆಳೆಯಿತು. ಅದಕ್ಕೂ ಮುನ್ನ ಗುಜರಾತ್​ನಲ್ಲಿ ಬೇರೆಯದೇ ಸ್ಥಿತಿ. ಇಲ್ಲಿ ಅಹಮದ್ ಪಟೇಲ್ ಅವರು 1977ರುಣದ 1984ರವರೆಗೆ ಭರೂಚ್ ಲೋಕಸಭಾ ಕ್ಷೇತ್ರವನ್ನು ಸತತ ಮೂರು ಬಾರಿ ಜಯಿಸಿದ್ದರು. ಗುಜರಾತ್ ರಾಜ್ಯದಿಂದ ಗೆಲ್ಲುತ್ತಿದ್ದ ಏಕೈಕ ಮುಸ್ಲಿಮ್ ಸಂಸದ ಅವರಾಗಿದ್ದರು. ಆದರೆ, 1989ರಲ್ಲಿ ರಾಜಕಾರಣದ ಚಹರೆಯೇ ಬದಲಾವಣೆಯಾಗಿ ಹೋಗಿತ್ತು. ಅಲ್ಲಿಯವರೆಗೆ ಪಟೇಲ್ ಅವರನ್ನ ಭರೂಚ್ ಕ್ಷೇತ್ರದ ಜನರು ಬಾಬು ಭಾಯ್ ಎಂದೇ ಗುರುತಿಸುತ್ತಿದ್ದರು. ಆದರೆ, ಚುನಾವಣೆಯ ವೇಳೆ ಅವರ ಬಾಬು ಭಾಯ್ ಹೆಸರಿನ ಬದಲು ಅಹಮದ್ ಎಂದು ವಿಹಿಂಪ ಪ್ರಚಾರ ಮಾಡಿ ಕೋಮುಬಣ್ಣ ಬಳಿಯಿತು. ತತ್​ಪರಿಣಾಮವಾಗಿ ಅಹಮದ್ ಪಟೇಲ್ 18,909 ಮತಗಳ ಅಂತರದಿಂದ ಸೋತುಹೋದರು. ಇದು ನನ್ನ ಸೋಲಿಗಿಂತ ಜಾತ್ಯತೀತತೆಗೆ ಆದ ಸೋಲು ಎಂದು ಪಟೇಲ್ ಬಹಳ ನೋವಿನಿಂದ ಹೇಳಿಕೊಂಡಿದ್ದರು.ಪವರ್ ಸೆಂಟರ್ ಆದ ಕಥೆ:

ಚುನಾವಣಾ ರಾಜಕಾರಣದಲ್ಲಿ ಆದ ಹಿನ್ನಡೆಯು ಪಟೇಲ್ ಅವರ ಎದೆಗುಂದಿಸಲಿಲ್ಲ. 1993ರಲ್ಲಿ ರಾಜ್ಯಸಭೆ ಪ್ರವೇಶಿಸಿದ ಅವರು ಅಂದಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರಿಗೆ ಹತ್ತಿರವಾದರು. ಆ ಹೊತ್ತಿನಲ್ಲಿ ಪಿವಿಎನ್ ರಾವ್ ಮತ್ತು ಸೋನಿಯಾ ಗಾಂಧಿ ಮಧ್ಯೆ ಸಂವಹನದ ಕೊರತೆ ಇತ್ತು. ಈ ಸಮಸ್ಯೆಯನ್ನ ನೀಗಿಸಲು ಅಹಮದ್ ಪಟೇಲ್ ಆಪದ್ಬಾಂಧವರಾಗಿ ಪರಿಣಮಿಸಿದ್ದರು. ಅಲ್ಲಿಂದ ಅಹಮದ್ ಪಟೇಲ್ ಮತ್ತು ಗಾಂಧಿ ಕುಟುಂಬದ ಮಧ್ಯೆ ಒಡನಾಟ ಹೆಚ್ಚಾಯಿತು. ಸೀತಾರಾಮ್ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಲೂ ಸೋನಿಯಾ ಗಾಂಧಿ ಜೊತೆ ಸಂವಹನಕ್ಕೆ ಅಹಮದ್ ಪಟೇಲ್ ಅವರನ್ನೇ ಬಳಸಿಕೊಳ್ಳಲಾಗುತ್ತಿತ್ತು. ಎಐಸಿಸಿಗೆ ಯಾರೇ ಅಧ್ಯಕ್ಷರಾದರೂ ಅಹಮದ್ ಪಟೇಲ್ ಅವರಿಗೆ ಹೆಚ್ಚು ಪ್ರಾಶಸ್ತ್ಯ ಇರುತ್ತಿತ್ತು. 2017ರಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದಾಗ ಪಕ್ಷದ ಒಳಗೆ ಕೆಲ ಮಂದಿ ‘ಹೊಸ ಸಿಪಿ (ಕಾಂಗ್ರೆಸ್ ಅಧ್ಯಕ್ಷ), ಅದೇ ಎಪಿ (ಅಹಮದ್ ಪಟೇಲ್)’ ಎಂದು ಪಿಸುಗುಡುತ್ತಿದ್ದರಂತೆ.

ಯುಪಿಎ ಆಡಳಿತದ ಅವಧಿಯಲ್ಲಿ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪ್ರಣಬ್ ಮುಖರ್ಜಿ ನಂತರ ಅಹಮದ್ ಪಟೇಲ್ ಅವರೇ ಅತಿ ಹಚ್ಚು ಪ್ರಭಾವಿ ಎನಿಸಿದ್ದರು. ರಾಹುಲ್ ಗಾಂಧಿ ಪ್ರವರ್ದಮಾನಕ್ಕೆ ಬಂದ ಬಳಿಕ ಅವರ ಬೆಂಬಲಿಗರು ಮತ್ತು ಹಿರಿಯ ತಲೆಮಾರಿನ ಮುಖಂಡರ ಮಧ್ಯೆ ಸಂಪರ್ಕಸೇತುವಾಗಿ ಇದ್ದವರು ಪಟೇಲ್ ಅವರೆಯೇ. ದೇಶದ ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನ ಅಹಮದ್ ಪಟೇಲ್ ವೈಯಕ್ತಿಕವಾಗಿ ಬಲ್ಲವರಾಗಿದ್ದರು. ಎಲ್ಲಾ ಚುನಾಯಿತ ಕಾಂಗ್ರೆಸ್ ಜನಪ್ರತಿನಿಧಿಗಳ ಪರಿಚಯ ಪಟೇಲ್ ಅವರಿಗೆ ಇತ್ತು ಎಂಬುದು ಸುಳ್ಳಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಬಹುಶಃ ಯಾರಿಗೂ ಇಲ್ಲದ ಗುಣವೊಂದು ಅಹಮದ್ ಪಟೇಲ್ ಅವರಿಗಿತ್ತು. ಅವರು ಎಂದೂ ಕೂಡ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಲು ಪ್ರಯತ್ನಿಸಲಿಲ್ಲ. ಪಕ್ಷದ ಮುಖ್ಯ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿಗೂ ಹಾತೊರೆದವರಲ್ಲ. ನವದೆಹಲಿಯ ಮದರ್ ತೆರೆಸಾ ರಸ್ತೆಯಲ್ಲಿದ್ದ ತಮ್ಮ ನಿವಾಸದಿಂದಲೇ ಅವರು ಕೆಲಸ ಮಾಡುತ್ತಿದ್ದರು. ಮುಖ್ಯಕಚೇರಿ ಇದ್ದ ಅಕ್ಬರ್ ರಸ್ತೆಯಂತೆ ಮದರ್ ತೆರೆಸಾ ರಸ್ತೆಯ 23ನೇ ನಂಬರ್​ನ ನಿವಾಸ ಒಂದು ಕಾಲದಲ್ಲಿ ಪವರ್ ಸೆಂಟರ್ ಎಂದೇ ಪರಿಗಣಿತವಾಗಿತ್ತು. ಇಲ್ಲಿ ಹೋಗಲು ಬರಲು ಹಲವು ಬಾಗಿಲುಗಳಿದ್ದವು. ವಿವಿಧ ಚೇಂಬರ್​ಗಳು, ಆಸನ ವ್ಯವಸ್ಥೆ ಬಹಳಷ್ಟು ವಿಚಾರಗಳ ಒಳಸುಳಿಯ ಸುಳಿವು ನೀಡುತ್ತಿದ್ದವು. ಇಲ್ಲಿಯೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು, ಪದಾಧಿಕಾರಿಗಳು, ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗುತ್ತಿದ್ದವು. ಸ್ಥಳೀಯ ಸಂಸ್ಥೆ ಚುನಾವಣೆಯ ಅಭ್ಯರ್ಥಿಗಳ ಹೆಸರೂ ಕೂಡ ಇಲ್ಲಿಯೇ ಅಂತಿಮಗೊಳ್ಳುತ್ತಿತ್ತು.

ಅಹಮದ್ ಪಟೇಲ್ ಅವರ ಅಪಾಯಿಂಟ್ಮೆಂಟ್ ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅದೃಷ್ಟ ಇದ್ದವರಿಗೆ ಲ್ಯಾಂಡ್​ಲೈನ್ ನಂಬರ್​ನಿಂದ ಕರೆ ಬಂದು ತಡರಾತ್ರಿ ಭೇಟಿಗೆ ಅವಕಾಶ ಸಿಗುತ್ತಿತ್ತು. ಹಾಗಾಗಿ, ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಪಟೇಲ್ ಅವರನ್ನ ಇನ್ನಿಲ್ಲದಂತೆ ಕಾಡುತ್ತಿರುತ್ತಿದ್ದರು. ಅವರು ಹೋಗುವ ಜಾಗಗಳ ಜಾಡುಹಿಡಿದು ಇವರೂ ಹೋಗುತ್ತಿದ್ದರು. ಪಟೇಲ್ ಅವರು ಪ್ರತೀ ಶುಕ್ರವಾರ ಮಸೀದಿಗೆ ಹೋಗಿ ನಮಾಜ್ ಮಾಡುತ್ತಿದ್ದರು. ಈ ಟಿಕೆಟ್ ಆಕಾಂಕ್ಷಿಗಳು ಆ ಮಸೀದಿಗೂ ಹೋಗಿ ಅವರನ್ನ ಎಡೆತಾಕುತ್ತಿದ್ದರು. ಹೀಗಾಗಿ, ಪಟೇಲ್ ಅವರು ಪ್ರತೀ ವಾರವೂ ಮಸೀದಿಯ ಸ್ಥಳ ಬದಲಾವಣೆ ಮಾಡುತ್ತಿದ್ದರು.

ಅಪ್ಪಟ ಆಸ್ತಿಕ: ಅಹ್ಮದ್ ಪಟೇಲ್ ಅವರಿಗೆ ದೇವರು, ಧರ್ಮ ಎಂದರೆ ಭಯ ಭಕ್ತಿ ಜಾಸ್ತಿ. ಪ್ರತೀ ವಾರ ಮಸೀದಿಗೆ ಹೋಗಿ ನಮಾಜ್ ಮಾಡುವುದನ್ನಾಗಲೀ, ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವುದನ್ನಾಗಲೀ, ಬೆಳಗಿನ ಹೊತ್ತಿನ ಕುರಾನ್ ಪಠಣೆಯನ್ನಾಗಲೀ, ರಂಜಾನ್ ಉಪವಾಸವನ್ನಾಗಲೀ ಅವರು ತಪ್ಪಿಸಿದವರಲ್ಲ.

ರಹಸ್ಯ ಬಿಟ್ಟುಕೊಡದ ನಿಷ್ಠಾವಂತ: 2014ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಅಹಮದ್ ಪಟೇಲ್ ಅವರು ಸಕ್ರಿಯ ರಾಜಕಾರಣದಿಂದ ಹಿಂದೆಸರಿಯಲು ಹಲವು ಬಾರಿ ಮುಂದಾಗಿದ್ದುಂಟು. ಆದರೆ, ಪ್ರತಿಬಾರಿಯೂ ಅವರಿಗೆ ತಡೆಯೊಡ್ಡಿ ನಿಲ್ಲಿಸಿದ್ದು ಸೋನಿಯಾ ಗಾಂಧಿಯೇ. ಹೈಕಮಾಂಡ್ ಮಾತನ್ನ ಒಪ್ಪದೇ ಬೇರೆ ದಾರಿ ಎಲ್ಲ ಎನ್ನುವಷ್ಟು ಅವರು ಸ್ವಾಮಿನಿಷ್ಠೆ ಹೊಂದಿದ್ದರು. ಇತ್ತೀಚಿಗಷ್ಟೇ ನಾನು ಅವರನ್ನು ಭೇಟಿಯಾದಾಗ ಒಂದು ವಿಚಾರ ಪ್ರಸ್ತಾಪಿಸಿದ್ದೆ. ತಮ್ಮ ಜೀವನದಲ್ಲಿ ಹಲವು ಅವಿಸ್ಮರಣೀಯ ಮತ್ತು ರಹಸ್ಯ ವಿಚಾರಗಳು ಅನುಭವಕ್ಕೆ ಬಂದಿವೆ. ಇವನ್ನೆಲ್ಲಾ ಸೇರಿಸಿ ನೀವು ಆತ್ಮಕಥೆ ಬರೆದರೆ ಬಹಳ ಚೆನ್ನಾಗಿರುತ್ತದೆ ಎಂದು ನಾನು ಸಲಹೆ ನೀಡಿದೆ. ಆದರೆ, ಅವರು ಕೂಡಲೇ ಈ ಸಲಹೆ ತಿರಸ್ಕರಿಸಿದರು. “ಈ ರಹಸ್ಯಗಳು ನನ್ನೊಂದಿಗೆಯೇ ಸಮಾಧಿಯಾಗಿ ಹೋಗಲಿ” ಎಂದು ಹೇಳಿದರು.

- Rasheed Kidwai, CNN-News18
Published by: Vijayasarthy SN
First published: November 25, 2020, 10:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading