HOME » NEWS » National-international » AGRI REFORMS WILL INCREASE INCOME OF FARMERS SAYS PM MODI SNVS

ಕೃಷಿ ಕಾಯ್ದೆಗಳಿಂದ ಹೊಸ ಮಾರುಕಟ್ಟೆ ಸೃಷ್ಟಿ; ರೈತರಿಗೆ ಅನುಕೂಲ: ಪ್ರಧಾನಿ ಮೋದಿ

ರೈತರ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರದ ಕೃಷಿ ಕಾಯ್ದೆಗಳನ್ನ ಪ್ರಧಾನಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿದ್ದಾರೆ. ಈ ಸುಧಾರಣೆ ಕ್ರಮಗಳಿಂದ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ. ರೈತರ ಆದಾಯ ಹೆಚ್ಚಳವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

news18
Updated:December 12, 2020, 1:17 PM IST
ಕೃಷಿ ಕಾಯ್ದೆಗಳಿಂದ ಹೊಸ ಮಾರುಕಟ್ಟೆ ಸೃಷ್ಟಿ; ರೈತರಿಗೆ ಅನುಕೂಲ: ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: December 12, 2020, 1:17 PM IST
  • Share this:
ನವದೆಹಲಿ(ಡಿ. 12): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರಿಯುತ್ತಿರುಂತೆಯೇ ಪ್ರಧಾನಿ ಮೋದಿ ಅವರು ಕೇಂದ್ರದ ಸುಧಾರಣಾ ಕ್ರಮಗಳನ್ನ ಮತ್ತೊಮ್ಮೆ ಸಮರ್ಥನೆ ಮಾಡಿದರು. ಕೃಷಿ ಕ್ಷೇತ್ರದಲ್ಲಿ ಕೇಂದ್ರ ಮಾಡುತ್ತಿರುವ ಸುಧಾರಣೆಗಳಿಂದ ರೈತರಿಗೆ ಬಹಳ ಅನುಕೂಲವಾಗುತ್ತದೆ. ಹೊಸ ಕೃಷಿ ಮಾರುಕಟ್ಟೆಗಳು ಸೃಷ್ಟಿಯಾಗುತ್ತವೆ ಎಂದು ನರೇಂದ್ರ ಮೋದಿ ಹೇಳಿದರು. ಭಾರತೀಯ ವಾಣಿಜ್ಯ ಮತ್ತು ಉದ್ಯಮ ಒಕ್ಕೂಟ (ಎಫ್​ಐಸಿಸಿಐ)ದ 93ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಅನುಕೂಲಗಳನ್ನ ಸಂಕ್ಷಿಪ್ತವಾಗಿ ವಿವರಿಸಿದರು.

“ಇವತ್ತು ಭಾರತೀಯ ರೈತರು ತಮ್ಮ ಬೆಳೆ ಉತ್ಪನ್ನಗಳನ್ನ ಎಪಿಎಂಸಿಯಲ್ಲೂ ಮಾರಬಹುದು. ಹೊರಗೂ ಮಾರಬಹುದು. ಹಾಗೆಯೇ, ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲೂ ಅವರು ಮಾರಾಟ ಮಾಡಬಹುದು. ರೈತರ ಆದಾಯವನ್ನು ಹೆಚ್ಚಿಸಿ ಅವರಿಗೆ ಆರ್ಥಿಕ ಅನುಕೂಲತೆಗಳನ್ನ ಕಲ್ಪಿಸಲು ಈ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಿಬಿಐ ವಶದಲ್ಲಿದ್ದ 103 ಕೆಜಿ ಚಿನ್ನಾಭರಣ ನಾಪತ್ತೆ!; ಮದ್ರಾಸ್​ ಹೈಕೋರ್ಟ್​ನಿಂದ ​ಪೊಲೀಸ್ ತನಿಖೆಗೆ ಆದೇಶ

“ಒಂದು ಸಮರ್ಥ ಸರಕಾರವು ತನ್ನ ಸಂಪನ್ಮೂಲಗಳ ಸದ್ಬಳಕೆಗೆ ಉತ್ತೇಜನ ನೀಡುತ್ತದೆ. ಭಾರತದ ಕಾರ್ಪೊರೇಟ್ ತೆರಿಗೆ ವ್ಯವಸ್ಥೆಯು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ತೆರಿಗೆ ಎನಿಸಿದೆ. ಅಜ್ಞಾತವಾಗಿ ತೆರಿಗೆ ಪರಿಶೀಲನೆ ಮತ್ತು ಅಜ್ಞಾತವಾಗಿ ಮನವಿ ಮಾಡುವ ವ್ಯವಸ್ಥೆ ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಒಳ್ಳೆಯ ಆರ್ಥಿಕತೆಯಲ್ಲಿ ಒಂದು ವಲಯದ ಅಭಿವೃದ್ಧಿಯಾದರೆ ಅದರ ಸಕಾರಾತ್ಮಕ ಪರಿಣಾಮ ಇತರ ವಲಯಗಳ ಮೇಲೂ ಆಗುತ್ತದೆ” ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಎರಡು ವಾರಗಳಿಂದ ಅವಿರತವಾಗಿ ರೈತ ಸಂಘಟನೆಗಳು ದೆಹಲಿಯ ಗಡಿ ಬಳಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ಪ್ರಧಾನಿ ಅವರಿಂದ ಈ ಸಮರ್ಥನೆ ಕೇಳಿಬಂದಿದೆ. ಪ್ರತಿಭಟನೆ ನಿಲ್ಲುವ ಲಕ್ಷಣ ಗೋಚರಿಸದ ಕಾರಣ ಕೇಂದ್ರ ಸರ್ಕಾರ ರೈತರೊಂದಿಗೆ ಆರನೇ ಸುತ್ತಿನ ಸಭೆ ಕರೆದಿದೆ. ಜೈಪುರ-ದೆಹಲಿ ಮತ್ತು ದೆಹಲಿ-ಆಗ್ರಾ ರಸ್ತೆಗಳನ್ನ ತಡೆಯಲು ರೈತರು ಮುಂದಾಗುತ್ತಿರುವಂತೆಯೇ ದೆಹಲಿಯ ಗಡಿಭಾಗಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಈ ಹೊತ್ತಲ್ಲಿ ಸರ್ಕಾರ ಮತ್ತು ರೈತರ ನಡುವಿನ ಮುಂದಿನ ಮಾತುಕತೆ ಸಫಲವಾಗುತ್ತದಾ ಎಂದು ಕಾದುನೋಡಬೇಕು.

ಇದನ್ನೂ ಓದಿ: Farmers Protest: ರೈತರ ತೀವ್ರ ಪ್ರತಿಭಟನೆಗೆ ಬೆಚ್ಚಿದ ಕೇಂದ್ರ ಸರ್ಕಾರ; ಡಿಸೆಂಬರ್ ‌15ಕ್ಕೆ 6ನೇ ಸುತ್ತಿನ ಸಭೆ

ಎಪಿಎಂಸಿ ಮಾರುಕಟ್ಟೆ ಜೊತೆ ಖಾಸಗಿ ಮಾರುಕಟ್ಟೆ ವ್ಯವಸ್ಥೆಯನ್ನೂ ರೂಪಿಸುವುದು ಕೇಂದ್ರದ ಮೂರು ಕಾಯ್ದೆಗಳ ಮೂಲಾಂಶವಾಗಿದೆ. ಇದು ಎಪಿಎಂಸಿಯನ್ನು ಮುಚ್ಚಿ ಕೃಷಿ ಮಾರುಕಟ್ಟೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವ ಚಿತಾವಣೆ ಎಂಬುದು ರೈತ ಸಂಘಟನೆಗಳ ಭಯವಾಗಿದೆ. ಹಾಗೆಯೇ, ಇದುವರೆಗೂ ಇರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಯೋಜನೆಯನ್ನೂ ಸರ್ಕಾರ ಕೈಬಿಡುತ್ತದೆ ಎಂಬುದು ರೈತರ, ಅದರಲ್ಲೂ ಪಂಜಾಬ್ ಮತ್ತು ಹರಿಯಾಣ ರೈತರ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತರ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ.
Published by: Vijayasarthy SN
First published: December 12, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories