ನವದೆಹಲಿ: ಕೇಂದ್ರ ಸರ್ಕಾರವು ಹೊಸದಾಗಿ ಪರಿಚಯಿಸಿದ ಮಿಲಿಟರಿ ನೇಮಕಾತಿ ಯೋಜನೆಯಾದ ಅಗ್ನಿಪಥ (Agneepath) ಯೋಜನೆಯನ್ನು ವಿರೋಧಿ ಇಂದೂ ದೇಶಾದ್ಯಂತ ಪ್ರತಿಭಟನೆಗಳು (Agneepath Protest) ನಡೆದಿದ್ದು, ಹಿಂಸಾರೂಪ ತಳೆದಿವೆ. ಈ ಹಿನ್ನೆಲೆಯಲ್ಲಿ ದೇಶದ ನಾಗರಿಕರು ಶಾಂತಿ ಕಾಪಾಡಬೇಕೆಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಮನವಿ ಮಾಡಿದರು. ಸರ್ಕಾರವು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿ ಹೊಸ ಯೋಜನೆಯನ್ನು ಘೋಷಿಸಿರುವ ಬಗ್ಗೆ ನನಗೆ ಬೇಸರವಾಗಿದೆ. ಅಹಿಂಸಾತ್ಮಕ ರೀತಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವಂತೆ ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿನ್ನ ಜೊತೆ ಇರಲಿದೆ ಎಂದು ಸೋನಿಯಾ ಗಾಂಧಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿದೆ
ಸರ್ಕಾರವು ಹೊಸ ಸಶಸ್ತ್ರ ಪಡೆಗಳ ನೇಮಕಾತಿ ನೀತಿಯನ್ನು ಘೋಷಿಸಿರುವುದು ದುರದೃಷ್ಟಕರವಾಗಿದೆ, ಇದು ನಿಮ್ಮ ಧ್ವನಿಯನ್ನು ನಿರ್ಲಕ್ಷಿಸಿದಂತೆ ಎಂದು ಅವರು ಯುವಕರನ್ನು ಉದ್ದೇಶಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರಿಗೆ ತಮ್ಮ ಪಕ್ಷದ ಬೆಂಬಲವನ್ನು ಘೋಷಿಸಿದ ಕಾಂಗ್ರೆಸ್ ಅಧ್ಯಕ್ಷರು, ಯುವಕರ ಜೊತೆಗೆ ಹಲವಾರು ಮಾಜಿ ಸೈನಿಕರು ಮತ್ತು ರಕ್ಷಣಾ ತಜ್ಞರು ಯೋಜನೆಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Agnipath: ಒಂದೆಡೆ ಹೊತ್ತಿ ಉರಿಯುತ್ತಿರುವ 'ಅಗ್ನಿ', ಮತ್ತೊಂದೆಡೆ ಮೀಸಲಾತಿ! ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಕಾಂಗ್ರೆಸ್ ನಿಮ್ಮೊಂದಿಗಿದೆ
ಕೋವಿಡ್ ನಂತರದ ರೋಗಲಕ್ಷಣಗಳು, ಆರೋಗ್ಯ ಸಮಸ್ಯೆಗಳಿಂದಾಗಿ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಿಯಾ ಗಾಂಧಿ, ಸೈನ್ಯದಲ್ಲಿ ಲಕ್ಷಗಟ್ಟಲೆ ಹುದ್ದೆಗಳ ಹೊರತಾಗಿಯೂ ನೇಮಕಾತಿಯಲ್ಲಿ "ಮೂರು ವರ್ಷಗಳ ವಿಳಂಬ" ಯುವಕರ ನೋವನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು. ವಾಯುಪಡೆಯಲ್ಲಿ ಸೇರ್ಪಡೆಗಾಗಿ ಪರೀಕ್ಷೆಯನ್ನು ತೆಗೆದುಕೊಂಡ ನಂತರ ಫಲಿತಾಂಶಗಳು ಮತ್ತು ನೇಮಕಾತಿಗಳಿಗಾಗಿ ಕಾಯುತ್ತಿರುವ ಯುವಕರೊಂದಿಗೆ ಸಹಾನುಭೂತಿ ಹೊಂದಿದ್ದೇನೆ ಎಂದು ಹೇಳಿದರು. "ಕಾಂಗ್ರೆಸ್ ಪೂರ್ಣ ಶಕ್ತಿಯೊಂದಿಗೆ ನಿಮ್ಮೊಂದಿಗೆ ನಿಂತಿದೆ ಮತ್ತು ನಿಮ್ಮ ಹಿತಾಸಕ್ತಿಗಳಿಗಾಗಿ ಮತ್ತು ಈ ಯೋಜನೆಯನ್ನು ಹಿಂಪಡೆಯಲು ಹೋರಾಟ ಮಾಡುವ ಭರವಸೆ ನೀಡುತ್ತದೆ." ಎಂದರು.
ಅಗ್ನಿವೀರರಿಗೆ ಕೇಂದ್ರದಿಂದ ಗುಡ್ ನ್ಯೂಸ್
ಸರ್ಕಾರವು ರಕ್ಷಣಾ ಸಚಿವಾಲಯದಲ್ಲಿನ ಎಲ್ಲಾ ಖಾಲಿ ಹುದ್ದೆಗಳಲ್ಲಿ 10 ಪ್ರತಿಶತವನ್ನು 'ಅಗ್ನಿಪಥ್' ಯೋಜನೆಯಡಿ ನಾಲ್ಕು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸಶಸ್ತ್ರ ಪಡೆಗಳ ನೇಮಕಾತಿಗಾಗಿ ಮೀಸಲಿಡಲಾಗುವುದು ಎಂದು ಶನಿವಾರ ಹೇಳಿದೆ. CAPF ಮತ್ತು ಅಸ್ಸಾಂ ರೈಫಲ್ಸ್ನಲ್ಲಿ 10% ಖಾಲಿ ಹುದ್ದೆಗಳನ್ನು ಅಗ್ನಿವೀರ್ಗಳಿಗಾಗಿ ಕಾಯ್ದಿರಿಸಲು ಗೃಹ ಸಚಿವಾಲಯದ ಪ್ರಕಟಣೆಯ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರದಿಂದ ಹೊಸ ಘೋಷಣೆ ಬಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ಮತ್ತು ರಕ್ಷಣಾ ನಾಗರಿಕ ಹುದ್ದೆಗಳು ಮತ್ತು ಎಲ್ಲಾ 16 ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ 10% ಮೀಸಲಾತಿಯನ್ನು ಜಾರಿಗೊಳಿಸಲಾಗುವುದು. ಈ ಮೀಸಲಾತಿಯು ಮಾಜಿ ಸೈನಿಕರಿಗೆ ಈಗಿರುವ ಮೀಸಲಾತಿಗೆ ಹೆಚ್ಚುವರಿಯಾಗಿರುತ್ತದೆ.
ಇದನ್ನೂ ಓದಿ: Belagavi Bandh: ಅಗ್ನಿಪಥ್ ಯೋಜನೆ ವಿರೋಧಿಸಿ ಜೂ. 20ರಂದು ಬೆಳಗಾವಿ ಬಂದ್ಗೆ ಕರೆ
ನೇಮಕಾತಿಯಲ್ಲಿ ವಯಸ್ಸಿನ ಮಿತಿ ಸಡಿಲಿಕೆ
ಅಗ್ನಿವೀರ್ ಮೊದಲ ಬ್ಯಾಚ್ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಐದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಈಗಾಗಲೇ ಕೇಂದ್ರ ಸರ್ಕಾರ ಘೋಷಿಸಿದೆ. ಹೊಸ ಸೇನಾ ನೇಮಕಾತಿ ಯೋಜನೆಯ ವಯೋಮಿತಿಯನ್ನು 21 ವರ್ಷಗಳಿಂದ 23 ವರ್ಷಗಳಿಗೆ ಏರಿಕೆ ಮಾಡಿ ಒಂದು ಬಾರಿ ಬದಲಾವಣೆಯನ್ನು ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿದೆ . ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಗ್ನಿಪಥ್ ವಿರೋಧಿಸಿ ಇಂದು ಬಿಹಾರ ಬಂದ್
ಅಗ್ನಿಪಥ್ ವಿರೋಧಿಸಿ ಬಿಹಾರದ ವಿದ್ಯಾರ್ಥಿ ಸಂಘಟನೆಗಳು ಇಂದು ಬಿಹಾರ್ ಬಂದ್ಗೆ ಕರೆ ನೀಡಿವೆ. ಆಲ್ ಇಂಡಿಯಾ ಅಸೋಸಿಯೇಷನ್ ನೇತೃತ್ವದ ಸಂಸ್ಥೆಗಳು ಈ ಯೋಜನೆಯನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಕೋರಿ, ಬಂದ್ಗೆ ಬೆಂಬಲ ನೀಡಿವೆ. ಇನ್ನು ಲಾಲೂ ಪ್ರಸಾದ್ ಯಾದವ್ ಅವರ ನೇತೃತ್ವದ್ದ ಆರ್ಜೆಡಿ ಸಹ ಬಿಹಾರ ಬಂದ್ಗೆ ಬೆಂಬಲ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ