ನವದೆಹಲಿ: ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಕಣದಲ್ಲಿ ಇದೇ ಮೊದಲ ಬಾರಿಗೆ ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಗಟ್ಟಿದನಿಯಲ್ಲಿ ಹೇಳಿದ್ದಾರೆ.
ಇಷ್ಟು ದಿನ ಕೇವಲ ತಮ್ಮ ಕೆಲಸದ ಬಗ್ಗೆ ಮಾತನಾಡುತ್ತಿದ್ದ, ನಮ್ಮ ಸರ್ಕಾರಸ ಕೆಲಸ ನೋಡಿಕೊಂಡು ಮತ ನೀಡಿ ಎಂದೇ ಹೇಳುತ್ತಿದ್ದ ಅರವಿಂದ ಕೇಜ್ರಿವಾಲ್ ಶನಿವಾರ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ದೆಹಲಿಯಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷದ ಸರ್ಕಾರವೇ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ದೆಹಲಿಯ ಕರೋಲ್ ಬಾಗ್ನಲ್ಲಿ ರೋಡ್ ಶೋ ನಡೆಸಿದ ಕೇಜ್ರಿವಾಲ್, ತಮ್ಮ ಸರ್ಕಾರದ ಉಚಿತ ಯೋಜನೆಗಳನ್ನು ಬಿಜೆಪಿ ಟೀಕಿಸಿದ್ದಕ್ಕೆ ಪ್ರತಿಕ್ರಿಯಿಸಿ, ಉಚಿತ ಸೇವೆಗಳ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿರುವುದನ್ನು ನೋಡಿದರೆ ನಮ್ಮ ಪಕ್ಷದ ಗೆಲುವು ಖಾತರಿಯಾಗಿದೆ ಎಂದು ಬಿಜೆಪಿಯ ಕಾಲೆಳೆದಿದ್ದಾರೆ.
ಕೇಜ್ರಿವಾಲ್ ರೋಡ್ ಶೋ ನಲ್ಲಿ 'ಫಿರ್ ಪಾಂಚ್ ಸಾಲ್, ಕೇಜ್ರಿವಾಲ್...' ಎಂಬ ಘೋಷಣೆಗಳು ಮೊಳಗುತ್ತಿದ್ದವು. ಆಮ್ ಆದ್ಮಿ ಕಾರ್ಯಕರ್ತರು ತಮ್ಮ ಪಕ್ಷದ ಚಿಹ್ನೆ ಪೊರಕೆ ಹಿಡಿದು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ನಡುವೆ ಮಾತನಾಡಿದ ಕೇಜ್ರಿವಾಲ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಉಚಿತ ಸೇವೆಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಮೂಲಕ ಅಮಿತ್ ಶಾ ದೆಹಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 16 ಲಕ್ಷ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು 65 ಸಾವಿರ ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ. ಅಮಿತ್ ಶಾ ಅವರಿಗೆ ಶಿಕ್ಷಣ ಎಂದರೇನು ಎಂಬುದೇ ಗೊತ್ತಿಲ್ಲ. ದೆಹಲಿಯ ಸರ್ಕಾರಿ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳನ್ನು ಮಾತನಾಡಿಸಲಿ. ಅವರೇ ಪಾಠ ಮಾಡಲಿದ್ದಾರೆ ಎಂದು ಅಮಿತ್ ಶಾ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ದಿನ ಹತ್ತಿರ ಆಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ ಗ್ರಾಫ್ ಮೇಲೇರುತ್ತಿದೆ. ಇದನ್ನರಿತ ರಾಜಕಾರಣಿಗಳು ಆಮ್ ಆದ್ಮಿ ಪಕ್ಷದ ಕಡೆ ಮುಖ ಮಾಡುತ್ತಿದ್ದಾರೆ. ಇವತ್ತು ದೆಹಲಿಯಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಹರಶರಣ್ ಸಿಂಗ್ ಬಿಜೆಪಿ ಬಿಟ್ಟು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು. ಹರಶರಣ್ ಸಿಂಗ್ ಅವರನ್ನು ಅರವಿಂದ ಕೇಜ್ರಿವಾಲ್ ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು.
ಇದನ್ನು ಓದಿ: ದೆಹಲಿ ವಿಧಾನಸಭಾ ಚುನಾವಣೆ: 30 ಮಂದಿ ನಾಮಪತ್ರ ವಾಪಸ್: ಅಖಾಡದಲ್ಲಿ ಉಳಿದವರೆಷ್ಟು?
ಇನ್ನೊಂದು ಬೆಳವಣಿಗೆಯಲ್ಲಿ ಇವತ್ತು ದೆಹಲಿ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧಕ್ಕೆ ಹೋಲಿಸಿ ಕೋಮುಪ್ರಚೋದನೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ಅವರಿಗೆ 2 ದಿನ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗ ಶಿಕ್ಷೆ ಪ್ರಕಟಿಸಿದೆ. ನಿನ್ನೆ ಕಪಿಲ್ ಮಿಶ್ರಾ ವಿರುದ್ಧ ದೂರು ದಾಖಲಾಗಿತ್ತು. ಇಂದು ವಿಚಾರಣೆ ನಡೆಸಿದ ಚುನಾವಣಾ ಆಯೋಗ ಕಪಿಲ್ ಮಿಶ್ರಾಗೆ 2 ದಿನದ ಮಟ್ಟಿಗೆ ಚುನಾವಣಾ ಪ್ರಚಾರಕ್ಕೆ ನಿಷೇಧ ವಿಧಿಸಿದೆ.
ಆಮ್ ಆದ್ಮಿ ಪಕ್ಷ ರೋಡ್ ಶೋ ಮತ್ತಿತರ ಸಭೆ ಸಮಾರಂಭಗಳ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಂತ ರೀತಿಯಲ್ಲಿ ಮತದಾರನ ಮನಗೆಲ್ಲುವ ಪ್ರಯತ್ನ ಮಾಡುತ್ತಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ