Char Dham ಯಾತ್ರೆಗೆ ನಿರೀಕ್ಷೆಗೂ ಮೀರಿದ ಯಾತ್ರಿಕರು; ಆರು ದಿನದಲ್ಲೇ 20 ಮಂದಿ ಸಾವು

ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಲ್ಲಿ ಯಾತ್ರಾರ್ಥಿಗಳ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ

ಕೇದಾರನಾಥ ದೇವಾಲಯ

ಕೇದಾರನಾಥ ದೇವಾಲಯ

 • Share this:
  ಹಿಂದುಗಳ ಪವಿತ್ರ ಚಾರ್​ಧಾಮ್​ ಯಾತ್ರೆ (Char Dham Yatra) ಆರಂಭವಾದ ಆರು ದಿನಗಳಲ್ಲಿ ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ನಿರೀಕ್ಷೆಗೂ ಮೀರಿದ ಭಕ್ತ ಸಾಗರ ಹರಿದು ಬರುತ್ತಿದೆ. ಕೋವಿಡ್​​ನಿಂದಾಗಿ (Covid) ಕಳೆದೆರಡು ವರ್ಷಗಳಿಂದ ಯಾತ್ರೆ ಕೈಗೊಳ್ಳಲು ಸಾಧ್ಯವಾಗದ ಹಿನ್ನಲೆ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಇನ್ನು ಈ ಯಾತ್ರೆ ಸುಲಭದ ಮಾರ್ಗವಲ್ಲ. ಗಿರಿ ಶಿಖರಗಳನ್ನು ಕಾಲ್ನಡಿಗೆ ಮೂಲಕ ಸಾಗುವ ವ್ಯವಸ್ಥೆಯಾಗಿದೆ. ಈ ಯಾತ್ರೆಯಲ್ಲಿ ಈ ಬಾರಿ 20 ಯಾತ್ರಿಕರು ಸಾವನ್ನಪ್ಪಿರುವ ವರದಿ ಆಗಿದೆ.

  ಯಾತ್ರೆ ಸಾಗುವ ಮಾರ್ಗ ಸುಲಭವಲ್ಲ
  ಚಾರ್​ಧಾಮ್​​ ಯಾತ್ರೆ ಪ್ರಾರಂಭವಾದ ಆರು ದಿನಗಳಲ್ಲಿ ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಹೋಗುತ್ತಿದ್ದ 20 ಯಾತ್ರಿಕರು ಸಾವನ್ನಪ್ಪಿದ್ದಾರೆ. ಅವ್ಯವಸ್ಥೆ ಮತ್ತು ಕಷ್ಟಕರ ಪರಿಸ್ಥಿತಿಗಳ ನಡುವೆ, ವೃದ್ಧರು ಮತ್ತು ಅಸ್ವಸ್ಥ ಯಾತ್ರಾರ್ಥಿಗಳ ಜೀವನವು ಕಾಲ್ನಡಿಗೆಯಲ್ಲಿ ಸಾಗುವ ವೇಳೆ ಈ ದುರಂತ ಸಂಭವಿಸಿದೆ. ಚಾರ್‌ಧಾಮ್ ಯಾತ್ರೆಯ ಮಾರ್ಗಗಳಲ್ಲಿ ಆರೋಗ್ಯ ಸೇವೆಗಳಿಗೆ ಸಾಕಷ್ಟು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಯಾತ್ರಾರ್ಥಿಗಳು ಮನವಿ ಮಾಡಿದ್ದಾರೆ. ಕೇದಾರನಾಥ ಮತ್ತು ಯಮುನೋತ್ರಿ ಧಾಮದ ಕಷ್ಟಕರವಾದ ಪಾದಚಾರಿ ಮಾರ್ಗಗಳಲ್ಲಿ ಆರೋಗ್ಯ ಸೇವೆಗಳೊಂದಿಗೆ ವಾಸ್ತವ್ಯಕ್ಕೆ ಸಾಕಷ್ಟು ವ್ಯವಸ್ಥೆಯೂ ಇಲ್ಲ ಎಂದು ದೂರಿದ್ದಾರೆ.

  20 ಯಾತ್ರಿಕರು ಸಾವು

  ಮಾಹಿತಿ ಪ್ರಕಾರ ಯಮುನೋತ್ರಿ ಮತ್ತು ಗಂಗೋತ್ರಿಧಾಮದಲ್ಲಿ 14 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇವರಲ್ಲಿ ನೇಪಾಳಿ ಕಾರ್ಮಿಕರೂ ಇದ್ದಾರೆ. ಜೊತೆಗೆ ಕೇದಾರನಾಥದಲ್ಲಿ ಐವರು ಮತ್ತು ಬದರಿನಾಥದಲ್ಲಿ ಒಬ್ಬರು ಭಕ್ತರು ಸಾವನ್ನಪ್ಪಿರುವ ವರದಿಗಳಿವೆ. ಹೀಗೆ ಆರು ದಿನಗಳಲ್ಲಿ 20 ಯಾತ್ರಾರ್ಥಿಗಳು ಸಾವನ್ನಪ್ಪಿರುವುದು ಯಾತ್ರೆಯ ಆಯೋಜಕರು ಹಾಗೂ ಆಡಳಿತ ಮಂಡಳಿಯನ್ನು ಚಿಂತೆಗೀಡು ಮಾಡಿದೆ.

  ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಯಾತ್ರಿಕರು
  ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳ ನಂತರ, ಚಾರ್​ಧಾಮ್​​ ಯಾತ್ರೆಯನ್ನು ಪೂರ್ಣ ಸಾಮರ್ಥ್ಯದಲ್ಲಿ ನಡೆಸಲಾಗುತ್ತಿದೆ. ಕೇದಾರನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಗಳಲ್ಲಿ ಯಾತ್ರಾರ್ಥಿಗಳ ಸಾಮರ್ಥ್ಯಕ್ಕಿಂತ ಎರಡು ಪಟ್ಟು ಹೆಚ್ಚು ಭಕ್ತರು ದರ್ಶನಕ್ಕೆ ಆಗಮಿಸುತ್ತಿರುವ ಹಿನ್ನಲೆ  ಈ ಸಮಸ್ಯೆ ಎದುರಾಗಿದೆ. ಇದರಿಂದ ಭಕ್ತರು ಧಾಮಗಳಲ್ಲಿ ಅವ್ಯವಸ್ಥೆ ಎದುರಿಸುತ್ತಿದ್ದಾರೆ.  ಈ ಬಾರಿ ಯಾತ್ರೆ ಆರಂಭವಾದ ಆರು ದಿನಗಳಲ್ಲೇ 20 ಯಾತ್ರಾರ್ಥಿಗಳು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಹಠಾತ್ ಸಾವನ್ನಪ್ಪಿದ್ದಾರೆ. ಇದರಲ್ಲಿ ಸೋಮವಾರ ಮೂವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

  ಇದನ್ನು ಓದಿ: ಚಾರ್​​ಧಾಮ್​ ಯಾತ್ರೆ; ಇದಕ್ಕೂ ಮುನ್ನ ಈ ವಿಷಯದ ತಿಳಿಯುವುದು ಅವಶ್ಯ

  ಹವಾಮಾನ ವೈಪರೀತ್ಯದಿಂದ ಬಳಲುವ ಸಾಧ್ಯತೆ
  ಕೇದಾರನಾಥ ಮತ್ತು ಯಮುನೋತ್ರಿ ಧಾಮಕ್ಕೆ ಯಾತ್ರಾರ್ಥಿಗಳು ಕಷ್ಟದ ಹಾದಿಯಲ್ಲಿ ಸಾಗಬೇಕು. ಎತ್ತರದ ಪ್ರದೇಶಗಳಲ್ಲಿ ಹಾದುಹೋಗುವ ಪಾದಚಾರಿಗಳಿಗೆ ಚಳಿಯೊಂದಿಗೆ ಆಮ್ಲಜನಕದ ಕೊರತೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಅಸ್ತಮಾದಿಂದ ಬಳಲುತ್ತಿರುವ ರೋಗಿಗಳು ಕಾಲ್ನಡಿಗೆಯಲ್ಲಿ ಹತ್ತುವಲ್ಲಿ ಆರೋಗ್ಯ ಹದಗೆಡುವ ಅಪಾಯವಿದೆ. ಈ ಹಿನ್ನಲೆ ಈ ಬಗ್ಗೆ ಎಚ್ಚರವಹಿಸುವುದು ಕೂಡ ಅವಶ್ಯ.

  ಇದನ್ನು ಓದಿ: ಗೂಳಿಯ ರೂಪದಲ್ಲಿ ನೆಲೆನಿಂತ ಶಿವ; ಕೇದಾರನಾಥ ದೇಗುಲದ ವಿಶೇಷತೆ ಇದು

  ಯಾತ್ರೆ ಮುನ್ನ ಎಚ್ಚರಿಕೆ ಅವಶ್ಯ

  ಪ್ರಯಾಣದ ಮಾರ್ಗಗಳಲ್ಲಿ ಆರೋಗ್ಯ ಸೇವೆಗಳಿಗಾಗಿ ವೈದ್ಯರು, ಅರೆವೈದ್ಯರ ತಂಡಗಳನ್ನು ನಿಯೋಜಿಸಲಾಗಿದೆ. ಪ್ರಯಾಣದ ಮಾರ್ಗಗಳಲ್ಲಿ ವೈದ್ಯಕೀಯ ಘಟಕಗಳಲ್ಲಿ ವೈದ್ಯರೊಂದಿಗೆ ಔಷಧಗಳು, ಆಂಬ್ಯುಲೆನ್ಸ್‌ಗಳಿಗೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ. ಎತ್ತರದ ಪ್ರದೇಶಗಳಲ್ಲಿ, ಆಮ್ಲಜನಕದ ಕೊರತೆಯಿಂದಾಗಿ ಹೆಚ್ಚಿದ ರಕ್ತದೊತ್ತಡದ ದೂರು ಇದೆ. ಪ್ರಯಾಣಿಕರು ಈಗಾಗಲೇ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸಿದ ನಂತರ ವೈದ್ಯಕೀಯ ತಪಾಸಣೆ ಮಾಡಿದ ನಂತರ ಪ್ರಯಾಣಿಸಬೇಕು ಎಂದು ಸೂಚನೆ ನೀಡಲಾಗಿದೆ
  Published by:Seema R
  First published: