ತ್ರಿವಳಿ ತಲಾಖ್ ನಿಷೇಧಿಸುವ ಕಾನೂನನ್ನು ಪರಿಗಣಿಸುವ ಸಲುವಾಗಿ ಇನ್ನು ಮುಂದೆ ಆಗಸ್ಟ್ 1 ಅನ್ನು ಮುಸ್ಲಿಂ ಮಹಿಳಾ ಹಕ್ಕುಗಳ ದಿನವಾಗಿ ಆಚರಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವಾಲಯ ಇತ್ತೀಚೆಗೆ ಘೋಷಣೆ ಮಾಡಿದ್ದರೂ 2 ವರ್ಷಗಳ ಹಿಂದೆ ಜಾರಿಗೆ ತಂದಿರುವ ಮುಸ್ಲಿಂ ಮಹಿಳೆಯರ ಕಾಯ್ದೆ (ವಿವಾಹ ಸಂರಕ್ಷಣಾ ಕಾಯ್ದೆ) ಯು ಪ್ರಸ್ತುತ ಮಹಿಳೆಯರ ಜೀವನವನ್ನು ಇನ್ನಷ್ಟು ಕ್ಲಿಷ್ಟಕರವಾಗಿಸಿದೆ. ತೆಲಂಗಾಣದಲ್ಲಿ ಮುಸ್ಲಿಂ ಮಹಿಳೆಯರ ಪತಿಯಂದಿರು ತಲಾಖ್ ಕೇಳದೆಯೇ ತ್ಯಜಿಸುತ್ತಿದ್ದಾರೆ. ಇದರಿಂದಾಗಿ ಮಹಿಳೆಯರಿಗೆ ಮರುಮದುವೆಯಾಗಲು ಇಲ್ಲವೇ ನಿರ್ವಹಣೆಗಾಗಿ ಆರ್ಥಿಕ ನೆರವು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ತೆಲಂಗಾಣದ ಝಕೀರ ಎಂಬ ಮಹಿಳೆಯ ವಿವಾಹವು ಬರೇ 18 ದಿನಗಳಲ್ಲಿ ಕೊನೆಗೊಂಡಿದ್ದು ಆಕೆಯ ಪತಿ ಕೊಲೆ ಪ್ರಕರಣದಿಂದಾಗಿ ಜೈಲು ಸೇರಿದ್ದ. ಹೀಗಾಗಿ ಯುವ ವಿವಾಹಿತೆಯನ್ನು ಆಕೆಯ ಮನೆಗೆ ಕಳುಹಿಸಲಾಯಿತು. ಪುಟ್ಟ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಝಕೀರ ಪತಿಯೊಂದಿಗೆ ತೆರಳಲು ಕಾಯುತ್ತಿದ್ದಳು. ಆದರೆ ಇತ್ತ ಪತಿ ಬೇಲ್ ಪಡೆದು ಸೆರೆಮನೆಯಿಂದ ಹೊರಬರುತ್ತಿದ್ದಂತೆಯೇ ಇನ್ನೊಂದು ವಿವಾಹವಾಗಿದ್ದಾನೆ. ದಾಖಲೆಗಳ ಪ್ರಕಾರ ಈತನಿಗೆ ಬೇಲ್ ನೀಡಲು ಹಣವನ್ನು ಹೊಂದಿಸಿರುವುದು ಝಕೀರಾಳ ಕುಟುಂಬವಾಗಿದೆ.
ಆತನ ಜಾಮೀನಿಗಾಗಿ ನಾವು 25 ಲಕ್ಷ ರೂ. ಹಣ ಪಾವತಿಸಿದ್ದೇವೆ. ಆದರೂ, ಆತ ನನ್ನನ್ನು ತ್ಯಜಿಸಿದ್ದಾರೆ ಎಂದು 25ರ ಹರೆಯದ ಝಕೀರ ಕಣ್ಣೀರಾಕಿದ್ದಾರೆ. ನನಗೆ ವಿಚ್ಛೇದನ ನೀಡಲು ಅಥವಾ ಆರ್ಥಿಕ ನೆರವು ನೀಡಲು ನಿರಾಕರಿಸಿದ್ದಾರೆ. ವಿಚ್ಛೇದನಕ್ಕಾಗಿ ಒತ್ತಾಯಿಸಿದಲ್ಲಿ ನನ್ನ ಮಗನನ್ನು ಮರಳಿ ಪಡೆಯುವುದಾಗಿ ಹೆದರಿಸಿದ್ದಾರೆ ಎಂದು ಝಕೀರಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಝಕೀರಾಳಂತೆ ತೆಲಂಗಾಣದ ಹಲವು ಮುಸ್ಲಿಂ ಮಹಿಳೆಯರೂ ತ್ರಿವಳಿ ತಲಾಖ್ ನಿರ್ಬಂಧದಿಂದಾಗಿ ಪತಿಯರ ಶೋಷಣೆಗೆ ಒಳಗಾಗಿದ್ದು ಮಹಿಳಾ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಂಸ್ಥೆಯಲ್ಲಿ ನ್ಯಾಯಕ್ಕಾಗಿ ಕಾತರದ ಕಣ್ಣಿನಿಂದ ಕಾಯುತ್ತಿದ್ದಾರೆ.
ಸುಲ್ತಾನಾ ಎಂಬ ಇನ್ನೊಬ್ಬ ಹೆಣ್ಣು ಮಗಳು 14ರ ಹರೆಯದಲ್ಲಿಯೇ ಮೊದಲ ವಿವಾಹವಾಗಿ ನಂತರ ಪೋಷಕರ ಒತ್ತಾಯದ ಮೇರೆಗೆ ಎರಡನೆಯ ವಿವಾಹವಾದರು. ಈಗ ಸುಲ್ತಾನ ಇಬ್ಬರು ಮಕ್ಕಳ ತಾಯಿಯಾಗಿದ್ದು ಪತಿ ಆಕೆಯೊಂದಿಗಿಲ್ಲ. ನನ್ನ ಎರಡನೆಯ ಪತಿ ಬೇರೆ ಯಾರನ್ನೋ ಪ್ರೀತಿಸಿದ ಕಾರಣ ನನ್ನನ್ನು ಬಿಟ್ಟು ಹೊರಟು ಹೋದರು. ಆತನನ್ನ ಹೇಗೆ ತಡೆಯಬೇಕು ಎಂಬುದು ಕೂಡ ನನಗೆ ತಿಳಿದಿಲ್ಲ ಎಂದು ಕಣ್ಣೀರು ಹಾಕುತ್ತಾರೆ.
ಮಹಿಳಾ ಅಭಿವೃದ್ಧಿ ಸಂಸ್ಥೆ ಶಹೀನ್ನ ಸ್ಥಾಪಕರಾಗಿರುವ ಜಮೀಲಾ ನಿಶಾತ್ ಕೂಡ ಸುಲ್ತಾನಾಳ ಪತಿಯೊಂದಿಗೆ ಸಂವಾದ ನಡೆಸಿದ್ದು ಆತ ವಿಚ್ಛೇದನ ನೀಡಲು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ. ವಕ್ಫ್ ಬೋರ್ಡ್ಗೆ ಹೋದರೂ ಕೂಡ ಮಹಿಳೆಯರಿಗೆ ನ್ಯಾಯ ದೊರೆಯುವುದು ಸಂಶಯವಾಗಿದೆ. ಅಲ್ಲಿನ ಪ್ರಕ್ರಿಯೆಗಳು ಹಲವಾರು ವರ್ಷಗಳವರೆಗೆ ನಡೆಯುತ್ತವೆ. ಕೊನೆಗೆ ಅನ್ಯಾಯಕ್ಕೆ ಒಳಗಾಗುವುದು ಮಹಿಳೆಯೇ ಆಗಿರುತ್ತಾರೆ ಎಂದು ನಿಶಾತ್ ತಿಳಿಸಿದ್ದಾರೆ.
ಆರ್ಥಿಕ ನಿರ್ವಹಣಾ ವೆಚ್ಚವನ್ನು ವಿಸ್ತರಿಸಲಾಗಿದೆ. ನಾವು ಪ್ರತಿ ತಿಂಗಳು 5ರಿಂದ 6 ಲಕ್ಷ ರೂ ಹಣವನ್ನು ಮಹಿಳೆಯರಿಗೆ ಹಂಚುತ್ತಿದ್ದೇವೆ. ಹೀಗಾಗಿ ಮಹಿಳೆಯರಿಗೆ ಕೊಂಚವಾದರೂ ಆರ್ಥಿಕ ನೆರವು ದೊರೆಯಲಿ ಎಂಬುದು ನಮ್ಮ ಆಶಯವಾಗಿದೆ. ಇದುವರೆಗೆ 360 ಮಹಿಳೆಯರಿಗೆ ನ್ಯಾಯಾಲಯದ ಆದೇಶ ದೊರಕಿದ್ದು ಆದೇಶದ ಮೇರೆಗೆ ನಾವು 5000 - 10,000 ರೂ.ವರೆಗೆ ಪ್ರತಿ ತಿಂಗಳು ಹಣ ನೀಡುತ್ತಿದ್ದೇವೆ ಎಂದು ತೆಲಂಗಾಣ ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಸಲೀಮ್ ತಿಳಿಸಿದರು.
ಪತ್ನಿಯರನ್ನು ತ್ಯಜಿಸುವುದು ಜೈಲುಪಾಲಾಗುವುದನ್ನು ತಡೆಯುವ ವಿಧಾನವಾಗಿದೆ
ತ್ರಿವಳಿ ತಲಾಖ್ ನಿಷೇಧದ ನಂತರ ಮುಸ್ಲಿಂ ಪುರುಷರು ಪತ್ನಿಯರನ್ನು ತ್ಯಜಿಸುವ ವಿಧಾನ ಕಂಡುಕೊಂಡಿದ್ದು ಇದರಿಂದ ಸೆರೆಮನೆ ವಾಸ ಅನುಭವಿಸುವುದನ್ನು ತಪ್ಪಿಸಿಕೊಳ್ಳಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ