ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ (Bharat Jodo Yatra) ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು, (Congress Leaders) ಕಾರ್ಯಕರ್ತರು ಭಾರತ್ ಜೋಡೋ ಯಾತ್ರೆಯ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಮಧ್ಯೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಶಸ್ವಿಯಾಗಿ ಭಾರತ್ ಜೋಡೋ ಯಾತ್ರೆ ನಡೆಸಿದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ದಿನಗಳಲ್ಲಿ ಮತ್ತೊಂದು ಮಹಾ ಪಾದಯಾತ್ರೆ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ.
ಹೌದು.. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹುಟ್ಟೂರಾದ ಗುಜರಾತ್‌ನ ಪೋರ್ ಬಂದರ್‌ನಿಂದ ಈಶಾನ್ಯ ರಾಜ್ಯ ಅಸ್ಸಾಂವರೆಗೆ ಕಾಂಗ್ರೆಸ್‌ನಿಂದ ಮತ್ತೊಂದು ಪಾದಯಾತ್ರೆ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಗುಜರಾತ್ ಕಾಂಗ್ರೆಸ್ ಘಟಕದಲ್ಲಿ ಚರ್ಚೆ ನಡೆದಿದ್ದು, ಹೈಕಮಾಂಡ್ ಪಾದಯಾತ್ರೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದೇ ತಿಂಗಳು ರಾಯಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾದಯಾತ್ರೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಡಬಲ್ ರಾಹುಲ್! ತದ್ರೂಪಿ ಯುವರಾಜನ ನೋಡಿ ಕಾರ್ಯಕರ್ತರೇ ಶಾಕ್!
ಮಹಾತ್ಮ ಗಾಂಧಿ ಹುಟ್ಟೂರಿನಿಂದ ಪಾದಯಾತ್ರೆ
ಅಂದ ಹಾಗೆ ಗುಜರಾತ್ ಕಾಂಗ್ರೆಸ್ ಘಟಕದ ವರಿಷ್ಠರ ಸಲಹೆಯಂತೆ ಈ ಪಾದಯಾತ್ರೆ ಮಹಾತ್ಮ ಗಾಂಧೀಜಿ ಅವರ ಹುಟ್ಟೂರಾದ ಪೋರ್ ಬಂದರ್‌ನಿಂದ ಆರಂಭ ಆಗುವ ಸಾಧ್ಯತೆ ಇದ್ದು, ಅಸ್ಸಾಂನಲ್ಲಿ ಸಮಾರೋಪ ನಡೆಯುವ ಸಾಧ್ಯತೆ ಇದೆ. ಗುಜರಾತ್‌ನಿಂದ ಅಸ್ಸಾಂವರೆಗೆ ಹತ್ತಾರು ರಾಜ್ಯಗಳನ್ನು ದಾಟಿ ಜನರ ಜೊತೆ ಬೆರೆತು ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ ಪಕ್ಷ ಮತ್ತು ಕಾರ್ಯಕರ್ತರಿಗೆ ಹೊಸ ಹುರುಪು ತುಂಬುವ ನಿಟ್ಟಿನಲ್ಲಿ ಈ ಪಾದಯಾತ್ರೆ ನಡೆಯಲಿದೆ. ಈ ಪಾದಯಾತ್ರೆಗೆ ಹೆಸರು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದ್ದು, 2023ರ ಕೊನೆಗೆ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆ ನನಗೂ ಅಲ್ಲ ಕಾಂಗ್ರೆಸ್‌ಗೂ ಅಲ್ಲ, ಭಾರತದ ಜನರಿಗಾಗಿ: ರಾಹುಲ್ ಗಾಂಧಿ
ಇತ್ತೀಚೆಗಷ್ಟೇ ಯಶಸ್ವಿಯಾಗಿ ಮುಕ್ತಾಯಗೊಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಗೆ ಜನರಿಂದ ಭರಪೂರ ಬೆಂಬಲ, ಪ್ರತಿಕ್ರಿಯೆ ಸಿಕ್ಕಿತ್ತು. ಜನರ ಈ ಸ್ಪಂದನೆ ನಿರೀಕ್ಷೆಗೂ ಮೀರಿದ್ದಾಗಿದೆ. ಭಾರತ್ ಜೋಡೋ ಯಾತ್ರೆಯ ಉದ್ದಕ್ಕೂ ದೇಶದ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ, ಅಸಮಾನತೆ, ದೌರ್ಜನ್ಯ ಮುಂತಾದ ವಿಚಾರಗಳ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಸ್ತಾಪ ಮಾಡಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ. ಕಳೆದ ಬಾರಿ ದಕ್ಷಿಣದಿಂದ ಉತ್ತರ ಭಾರತದ ಕಡೆಗೆ ಭಾರತ್ ಜೋಡೋ ಪಾದಯಾತ್ರೆ ಸಾಗಿತ್ತು. ಈ ಬಾರಿ ಪಶ್ಚಿಮ ಕರಾವಳಿಯಿಂದ ಪೂರ್ವ ದಿಕ್ಕಿನ ಕಡೆಗೆ ಪಾದಯಾತ್ರೆ ಸಾಗಲಿದೆ. ಆದರೆ ಈ ಪಾದಯಾತ್ರೆಗೆ ಇನ್ನಷ್ಟೇ ಗ್ರೀನ್ ಸಿಗ್ನಲ್ ಸಿಗಬೇಕಿದೆ.
ತೆಲಂಗಾಣದಲ್ಲಿ ‘ಹಾಥ್ ಸೇ ಹಾಥ್’ ಪಾದಯಾತ್ರೆ
ಇನ್ನು ಭಾರತ್ ಜೋಡೋ ಯಾತ್ರೆಯ ಭರ್ಜರಿ ಸಕ್ಸಸ್‌ನಿಂದ ಪ್ರೇರೇಪಿತಗೊಂಡಿರುವ ತೆಲಂಗಾಣ ಕಾಂಗ್ರೆಸ್ ಘಟಕ ತೆಲಂಗಾಣದಲ್ಲೂ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಹಾಥ್ ಸೇ ಹಾಥ್ ಜೋಡೋ ಅಂದರೆ ಕೈನಿಂದ ಕೈ ಸೇರಿಸುವ ಪಾದಯಾತ್ರೆಯನ್ನು ತೆಲಂಗಾಣ ಕಾಂಗ್ರೆಸ್ ನಡೆಸಲಿದ್ದು, ಸೋಮವಾರ ಈ ಪಾದಯಾತ್ರೆಗೆ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ಅವರು ಮುಲುಗು ಜಿಲ್ಲೆಯಲ್ಲಿ ಚಾಲನೆ ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರೆಯ ಸಂದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮುಂದುವರಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ