2017ರಿಂದ ಈವರೆಗಿನ ಎಲ್ಲ ದಾಖಲೆಗಳನ್ನು ವೆಬ್ಸೈಟ್ನಿಂದ ಡಿಲೀಟ್ ಮಾಡಿದ ರಕ್ಷಣಾ ಇಲಾಖೆ
ಭಾರತ ಬಾಲ್ಕೋಟ್ನಲ್ಲಿ ನಡೆಸಿದ ವಾಯು ದಾಳಿ, ಭಾರತ-ಪಾಕ್ ಕಿತ್ತಾಟ, ಡೋಕ್ಲಾಮ್ನಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದು ಸೇರಿ ಸಾಕಷ್ಟು ವಿಚಾರಗಳು ಈ ವರದಿಗಳಲ್ಲಿ ಉಲ್ಲೇಖ ಆಗಿರಲಿಲ್ಲ ಎನ್ನಲಾಗಿದೆ.
ನವದೆಹಲಿ (ಅಕ್ಟೋಬರ್ 8): ಲಡಾಖ್ನಲ್ಲಿ ಚೀನಾ ನಡೆಸುತ್ತಿರುವ ಆಕ್ರಮಣ ವಿಚಾರ, 2017ರ ಡೋಕ್ಲಾಮ್ ಬಿಕಟ್ಟಿನ ವರದಿ ಸೇರಿ 2017ರಿಂದ ಇಲ್ಲಿಯವರೆಗೆ ಇದ್ದ ಎಲ್ಲಾ ಮಾಸಿಕ ವರದಿಗಳನ್ನು ರಕ್ಷಣಾ ಇಲಾಖೆ ತನ್ನ ವೆಬ್ಸೈಟ್ನಿಂದ ತೆಗೆದು ಹಾಕಿದೆ. ಈ ಬಗ್ಗೆ ಇಂಡಿಯನ್ಸ್ ಎಕ್ಸ್ಪ್ರೆಸ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆ ಅಕ್ಟೋಬರ್ ತಿಂಗಳಾಂತ್ಯದೊಳಗೆ ಈ ವರದಿಗಳು ಮತ್ತೆ ವೆಬ್ಸೈಟ್ಗೆ ಮರಳಲಿವೆ ಎಂದು ಹೇಳಿದೆ. ಈ ವರದಿಗಳನ್ನು ತೆಗೆದಿದ್ದೇಕೆ ಎನ್ನುವ ಪ್ರಶ್ನೆಗೂ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿದೆ. ಈಗ ತೆಗೆದು ಹಾಕಿರುವ ವರದಿಗಳನ್ನು ಹೆಚ್ಚು ಸಮಗ್ರವಾಗಿ ರೂಪಿಸಿ ಮತ್ತೆ ಪೋಸ್ಟ್ ಮಾಡಲಾಗುವುದು ಎಂದು ರಕ್ಷಣಾ ಇಲಾಖೆ ಹೇಳಿದೆ. ಗಡಿ ಭಾಗದಲ್ಲಿ ಚೀನಾ-ಹಾಗೂ ಭಾರತದ ನಡುವೆ ಘರ್ಷಣೆ ಆರಂಭವಾಗಿತ್ತು. ಪೂರ್ವ ಲಡಾಖ್ನಲ್ಲಿ ಅತಿಕ್ರಮಣ ಮಾಡಿದ್ದ ಚೀನಾ ಸೇನೆಯನ್ನು ಆಗಸ್ಟ್ 6ರಂದು ಓಡಿಸಿದ್ದು ಹೌದು ಎಂದು ರಕ್ಷಣಾ ಇಲಾಖೆಯಲ್ಲಿ ಹಾಕಲಾದ ದಾಖಲೆಗಳು ಹೇಳಿದ್ದವು.
ಈಗ ಈ ವರದಿಗಳನ್ನು ಮತ್ತೆ ಪೋಸ್ಟ್ ಮಾಡುವುದಕ್ಕೂ ಮುನ್ನ ಈ ಮೊದಲಿದ್ದ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಭಾರತ ಬಾಲ್ಕೋಟ್ನಲ್ಲಿ ನಡೆಸಿದ ವಾಯು ದಾಳಿ, ಭಾರತ-ಪಾಕ್ ಕಿತ್ತಾಟ, ಡೋಕ್ಲಾಮ್ನಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದು ಸೇರಿ ಸಾಕಷ್ಟು ವಿಚಾರಗಳು ಈ ವರದಿಗಳಲ್ಲಿ ಉಲ್ಲೇಖ ಆಗಿರಲಿಲ್ಲ ಎನ್ನಲಾಗಿದೆ.
ಭಾರತ ಮತ್ತು ಚೀನಾದ ಎಲ್ಎಸಿ ಗಡಿಯಾದ್ಯಂತ ಪೈಪೋಟಿಯ ಮೇಲೆ ಎರಡೂ ದೇಶಗಳ ಸೇನಾ ಪಡೆಗಳ ನಿಯೋಜನೆಯಾಗಿ ಏರ್ಪಡುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನ ಮಾಡುವ ಪ್ರಯತ್ನ ಮುಂದುವರಿದಿದೆ. ಪೂರ್ವ ಲಡಾಖ್ ಭಾಗದ ಎಲ್ಎಸಿಯಲ್ಲಿ ಎರಡೂ ಕಡೆಯ ಮತ್ತಷ್ಟು ಸೇನಾಪಡೆಗಳ ನಿಯೋಜನೆ ಮಾಡದಿರಲು ನಿರ್ಧರಿಸಿದ್ದವು. ಎರಡೂ ಸೇನೆಗಳ ಹಿರಿಯ ಕಮಾಂಡರ್ ಮಟ್ಟದಲ್ಲಿ ಕಳೆದ ತಿಂಗಳು ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿರುವುದು ತಿಳಿದು ಬಂದಿತ್ತು. ಆದರೆ, ಎಲ್ಎಸಿಯಿಂದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಲೀ ಅಥವಾ ಏಪ್ರಿಲ್ಗೆ ಮುಂಚೆ ಇದ್ದ ಎಲ್ಎಸಿ ಸ್ಥಿತಿಗೆ ಮರಳುವುದಾಗಲೀ ಈ ಬಗ್ಗೆ ನಿರ್ಧಾರ ಆಗಿಲ್ಲ. ಈಗಿರುವ ಸೂಕ್ಷ್ಮ ಪರಿಸ್ಥಿತಿ ಹೀಗೇ ಮುಂದುವರಿಯಲಿದೆಯಾದರೂ ಇನ್ನಷ್ಟು ಸೇನಾ ನಿಯೋಜನೆ ತಪ್ಪಿಸುವುದರಿಂದ ಪರಿಸ್ಥಿತಿ ಉಲ್ಬಣಗೊಳ್ಳುವುದು ತಪ್ಪಿದಂತಾಗುತ್ತದೆ.
Published by:Rajesh Duggumane
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ