ಮುಂದಿನ ವಾರ ಸಿಡಬ್ಲ್ಯುಸಿ ಸಭೆ; ಕಾಂಗ್ರೆಸ್ ಅಧ್ಯಕ್ಷಗಿರಿಯ ಗೊಂದಲಕ್ಕೆ ಬೀಳುತ್ತಾ ತೆರೆ?

ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಬಗೆಗಿನ ನಿರ್ಧಾರವನ್ನು ಮುಂದೂಡಿದಷ್ಟೂ ಹೆಚ್ಚಿನ ಸಮಸ್ಯೆಗಳು ಉಂಟಾಗಿ, ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಲಿದೆ ಎಂಬ ಉದ್ದೇಶಕ್ಕೆ ಮುಂದಿನ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.

ರಾಹುಲ್ ಗಾಂಧಿ, ಸೋನಿಯಾ ಗಾಂಧಿ

ರಾಹುಲ್ ಗಾಂಧಿ, ಸೋನಿಯಾ ಗಾಂಧಿ

  • Share this:
 ನವದೆಹಲಿ (ಆ. 22): ಕಾಂಗ್ರೆಸ್​ಗೆ ಅಧ್ಯಕ್ಷ ಯಾರಾಗಬೇಕು ಎಂಬ ಬಗ್ಗೆ ಪಕ್ಷದಲ್ಲಿ ಇನ್ನೂ ಗೊಂದಲಗಳು ಬಗೆಹರಿದಿಲ್ಲ. ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಇಚ್ಛೆ. ಆದರೆ, ಸೋನಿಯಾ ಗಾಂಧಿ ಅವರಿಗೆ ತಮ್ಮ ಮಗ ರಾಹುಲ್ ಗಾಂಧಿಯನ್ನೇ ಕಾಂಗ್ರೆಸ್​ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಸೆ ಕಡಿಮೆಯಾಗಿಲ್ಲ. ಹೀಗಾಗಿ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಣಯವಾಗಿಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಿರಿಯ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಸಾಧ್ಯತೆಯಿದೆ.

ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ಎಲ್ಲ ನಾಯಕರೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಬಗೆಗಿನ ನಿರ್ಧಾರವನ್ನು ಮುಂದೂಡಿದಷ್ಟೂ ಹೆಚ್ಚಿನ ಸಮಸ್ಯೆಗಳು ಉಂಟಾಗಿ, ಪಕ್ಷದಲ್ಲಿ ಅಸಮಾಧಾನ ಹೆಚ್ಚಾಗಲಿದೆ ಎಂಬ ಉದ್ದೇಶಕ್ಕೆ ಈ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ.

ಕಾಂಗ್ರೆಸ್​ನಿಂದ ಅಮಾನತುಗೊಂಡಿರುವ ಸಂಜಯ್ ಝಾ ಇತ್ತೀಚೆಗಷ್ಟೇ ಸಂಸದರು, ಶಾಸಕರು ಸೇರಿದಂತೆ ನೂರಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಪಕ್ಷದ ನಾಯಕತ್ವ ಬದಲಾವಣೆಗೆ ಒತ್ತಾಯಿಸಿ ಪತ್ರ ಬರೆದಿದ್ದರು. ಹಾಗೇ, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು, ಆ ಚುನಾವಣೆ ಪಾರದರ್ಶಕವಾಗಿರಬೇಕು ಎಂದು ಪತ್ರ ಬರೆದಿದ್ದರು ಎಂದು ಟ್ವೀಟ್ ಮೂಲಕ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಫೋನ್ ಟ್ಯಾಪಿಂಗ್ ಸಂಸ್ಕೃತಿ ಕಾಂಗ್ರೆಸ್​ನದ್ದೇ ಹೊರತು ನಮ್ಮದಲ್ಲ; ಡಿ.ಕೆ. ಶಿವಕುಮಾರ್​ಗೆ ಆರ್​. ಅಶೋಕ್ ತಿರುಗೇಟು

ರಾಜಸ್ಥಾನದಲ್ಲಿ ಸೃಷ್ಟಿಯಾದ ರಾಜಕೀಯ ಹೈಡ್ರಾಮಾ ಒಂದು ಪಕ್ಷದಲ್ಲಿ ನಾಯಕನ ಅಗತ್ಯ ಎಷ್ಟು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕಾಂಗ್ರೆಸ್​ಗೆ ಅಧ್ಯಕ್ಷರ ನೇಮಕ ಮಾಡಲು ಚಿಂತಿಸಲಾಗಿದೆ. ಸದ್ಯಕ್ಕೆ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಅಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಾರದಿರಲು ರಾಹುಲ್ ಗಾಂಧಿ ಕೂಡ ಮುಖ್ಯ ಕಾರಣ ಎನ್ನಲಾಗುತ್ತಿದೆ. ಸೋನಿಯಾ ಗಾಂಧಿ ತಮ್ಮ ಮಗನನ್ನೇ ಪಕ್ಷದ ಉತ್ತರಾಧಿಕಾರಿಯನ್ನಾಗಿ ಮಾಡಲು ಹಠ ತೊಟ್ಟಿದ್ದರು. ಆದರೆ, ಅದಕ್ಕೆ ಪಕ್ಷದಲ್ಲೇ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ, ಖುದ್ದು ರಾಹುಲ್ ಗಾಂಧಿ ಕೂಡ ಈ ಬಗ್ಗೆ ಆಸಕ್ತಿ ತಳೆದಿಲ್ಲ. ಹೀಗಾಗಿ, ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

ಕೆಲವು ದಿನಗಳ ಹಿಂದಷ್ಟೇ ಸಂದರ್ಶನವೊಂದರಲ್ಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದ ಪ್ರಿಯಾಂಕಾ ಗಾಂಧಿ ಕೂಡ ಗಾಂಧಿ ಕುಟುಂಬದವರು ಅಧ್ಯಕ್ಷರಾಗುವುದಿಲ್ಲ. ಈ ವಿಷಯದಲ್ಲಿ ನಾನು ರಾಹುಲ್ ಗಾಂಧಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸುತ್ತೇನೆ ಎಂದಿದ್ದರು. ನಮ್ಮ ಕುಟುಂಬ ಯಾರೊಬ್ಬರೂ ಕಾಂಗ್ರೆಸ್​ ಪಕ್ಷಕ್ಕೆ ಅಧ್ಯಕ್ಷರಾಗುವುದಿಲ್ಲ ಎಂದು ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕಾಂಗ್ರೆಸ್ ಪಕ್ಷ ತನ್ನದೇ ದಾರಿಯಲ್ಲಿ ಸಾಗಬೇಕು. ಅದಕ್ಕೆ ನಮ್ಮ ಕುಟುಂಬಕ್ಕೆ ಸೇರಿರದ ವ್ಯಕ್ತಿ ಅಧ್ಯಕ್ಷರಾಗಬೇಕು ಎಂದು ನನಗೆ ಅನಿಸುತ್ತದೆ ಎಂದು ಕೂಡ ಪ್ರಿಯಾಂಕಾ ಗಾಂಧಿ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ಸಂಘ ಪರಿವಾರ ಜಾತಿವಾದಿಯೂ ಅಲ್ಲ, ದೇಶದ್ರೋಹಿಯೂ ಅಲ್ಲ; ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ. ರವಿ ಆಕ್ರೋಶ

ಗಾಂಧಿ ಕುಟುಂಬಕ್ಕೆ ಸೇರಿಲ್ಲದ ವ್ಯಕ್ತಿಯನ್ನು ನಾವು ನಮ್ಮ ನಾಯಕ (ಬಾಸ್) ಎಂದು ಒಪ್ಪಿಕೊಳ್ಳಲು ಸಿದ್ಧರಿದ್ದೇವೆ. ಒಂದುವೇಳೆ ನಮ್ಮ ಪಕ್ಷದ ಅಧ್ಯಕ್ಷರಾಗುವವರು 'ನೀನು ಉತ್ತರ ಪ್ರದೇಶದ ಜವಾಬ್ದಾರಿ ತೆಗೆದುಕೊಳ್ಳುವುದು ಬೇಡ, ಅಂಡಮಾನ್ ನಿಕೋಬಾರ್​​ಗೆ ಹೋಗು' ಎಂದು ಹೇಳಿದರೂ ನಾನು ಅದನ್ನು ಸ್ವೀಕರಿಸಲು ಸಿದ್ಧಳಿದ್ದೇನೆ. ನಮ್ಮ ಪಕ್ಷದ ಅಧ್ಯಕ್ಷರು ಯಾರೇ ಆದರೂ ಅವರ ಆದೇಶವನ್ನು ನಾನು ಖಂಡಿತ ಪಾಲಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನ್ನು ಅನುಭವಿಸಿದ ನಂತರ ಆ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರ ನೇಮಕ ಆಗುವವರೆಗೂ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿತ್ತು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಸಮಸ್ಯೆಯಿದೆ ಎಂದು ಖುದ್ದು ಕಾಂಗ್ರೆಸ್ ನಾಯಕರೇ ಹಲವು ಬಾರಿ ಅಸಮಾಧಾನ ಹೊರಹಾಕಿದ್ದರು. ನ್ಯೂಸ್​18 ಜೊತೆಗಿನ ಸಂದರ್ಶನವೊಂದರಲ್ಲಿ ಕೇರಳದ ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ್ದರು. ಒಂದುವೇಳೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಒಪ್ಪದೆ ಇದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು ಒಳ್ಳೆಯದು. ಹಾಗೇ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸ್ಥಾನಗಳಿಗೂ ಪಾರದರ್ಶಕ ಚುನಾವಣೆ ನಡೆದರೆ ಉತ್ತಮ. ಇದರಿಂದ ಯಾರಿಗೂ ಅಸಮಾಧಾನ ಇರುವುದಿಲ್ಲ ಎಂದು ಹೇಳಿದ್ದರು.
Published by:Sushma Chakre
First published: