ಪಾಕಿಸ್ತಾನದ ಮಹಿಳಾ ಟಿಕ್ಟಾಕರ್ ಒಬ್ಬರನ್ನು ದೇಶದ ಸ್ವಾತಂತ್ರ್ಯದ ದಿನದಂದೇ ನೂರಾರು ಜನರು ಸೇರಿ ಆಕೆಯ ಬಟ್ಟೆಗಳನ್ನು ಹರಿದು ಎಸೆದು ಲೈಂಗಿಕ ಕಿರುಕುಳ ನೀಡಿದ ಘಟನೆ ಮಾಸುವ ಮುಂಚೆಯೆ ಮತ್ತೊಂದು ಇದೇ ರೀತಿಯ ಕಿರುಕುಳದ ಘಟನೆ ವರದಿಯಾಗಿದೆ. ಸ್ವಾತಂತ್ರ ದಿನ ಕಳೆದ ಕೆಲವೇ ದಿನಗಳಲ್ಲಿ, ರಿಕ್ಷಾದಲ್ಲಿ ಸವಾರಿ ಮಾಡುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಇನ್ನೊಂದು ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಅತ್ಯಂತ ಜನನಿಬಿಡ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಈ ರೀತಿಯ ಅಸಭ್ಯ ವರ್ತನೆ ಮಹಿಳೆಯ ಮೇಲೆ ನಡೆದಿದೆ.
ಈ ವಿಡಿಯೋ ಪಾಕಿಸ್ತಾನದ ಲಾಹೋರ್ನದ್ದಾಗಿದೆ ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ. ಮೋಟಾರ್ ಬೈಕ್ಗಳಿಂದ ಸುತ್ತುವರಿದಿರುವ ಪುರುಷರು ಮಹಿಳೆಯರನ್ನು ಸಾಕಷ್ಟು ದೂರದಿಂದ ಹಿಂಬಾಲಿಸಿರುವುದು ಹಾಗೂ ಅಸಭ್ಯ ರೀತಿಯಲ್ಲಿ ಅವರನ್ನು ಹಿಂಸಿಸುವುದನ್ನು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ಇತರ ಮಹಿಳೆಯರು ತನ್ನ ಹಿಂದೆ ಬರುತ್ತಿದ್ದ, ಕಿಚಾಯಿಸುತ್ತಿದ್ದ, ಚೇಷ್ಟೆ ಮಾಡುತ್ತಿದ್ದ ಪುರುಷರಿಗೆ ಬೆದರಿಕೆ ಹಾಕಲು ತನ್ನ ಚಪ್ಪಲಿಯನ್ನು ತೆಗೆದು ತೋರಿಸಿದ್ದಾಳೆ ಆದರೆ ಪುರುಷರು ಇದಕ್ಕೂ ಜಗ್ಗದೆ ತಮ್ಮ ಅಸಭ್ಯ ವರ್ತನೆಯನ್ನು ಮುಂದುವರೆಸಿದ್ದಾರೆ, ಚಪ್ಪಲಿ ತೋರಿಸಿದರು ಕಿರುಕುಳ ನೀಡುವುದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಯುವತಿಯು ರಿಕ್ಷಾದಿಂದ ಕೆಳಗಿಳಿಯಲು ಪ್ರಯತ್ನಿಸಿದಳು ಆದರೆ ಆಕೆಯ ಜೊತೆಗಿದ್ದ ಹಿರಿಯ ಮಹಿಳೆಯರು ಅದನ್ನು ತಡೆದರು.
ಘಟನೆಯ ಒಂದು ವಾರದ ನಂತರ, ಮಹಿಳಾ ಕಾರ್ಯಕರ್ತರು ಗ್ರೇಟರ್ ಇಕ್ಬಾಲ್ ಪಾರ್ಕ್ನಲ್ಲಿ ಜಮಾಯಿಸಿ ಮಹಿಳೆಯರ ಮೇಲೆ ನಡೆದಿರುವ ನಾಚಿಕೆಗೇಡಿನ ಘಟನೆಯನ್ನು ವಿರೋಧಿಸಿದರು ಮತ್ತು ಇಮ್ರಾನ್ ಖಾನ್ ನೇತೃತ್ವದ ಸರ್ಕಾರವು ಇಂತಹ ಘಟನೆಗಳನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ದೇಶದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಹೆಚ್ಚಾಗಲು ಮಹಿಳೆಯರು ಧರಿಸಿರುವ ಬಟ್ಟೆಗಳೇ ಕಾರಣ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಟೀಕಿಸಿದ ಕೆಲವು ತಿಂಗಳ ನಂತರ ಈ ಘಟನೆಗಳು ಸಂಭವಿಸಿವೆ. 'ಆಕ್ಸಿಯೋಸ್ ಆನ್ ಎಚ್ಬಿಒ'ಗೆ ನೀಡಿದ ಸಂದರ್ಶನದಲ್ಲಿ, ಖಾನ್ ಹೀಗೆ ಹೇಳಿದ್ದರು, "ಒಬ್ಬ ಮಹಿಳೆ ಕೆಲವೇ ಕೆಲವು ಬಟ್ಟೆಗಳನ್ನು ಧರಿಸಿದರೆ, ಅದು ಪುರುಷರ ಮೇಲೆ ಪ್ರಭಾವ ಬೀರುತ್ತದೆ, ಅವರು ರೋಬೋಟ್ಗಳಲ್ಲ ಇದು ಕೇವಲ ಸಾಮಾನ್ಯ ಜ್ಞಾನ. " ಎಂದು ನಾಲಿಗೆ ಹರಿಬಿಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ