ಆರು ಗಂಟೆಗಳ ಕಾಲ ಕಾದು, ಕಡೆಗೂ ಕೊನೆ ದಿನ ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಕೇಜ್ರಿವಾಲ್! ಇನ್ನು ಅಸಲಿ ಆಟ ಶುರು

ಈಗ ನಾಮಪತ್ರಗಳ ಸಲ್ಲಿಕೆ ಮುಕ್ತಾಯವಾಗಿದೆ. ಇನ್ನೇನಿದ್ದರೂ ಯಾರು ತಮ್ಮ ಉಮೇದುವಾರಿಕೆ ವಾಪಸ್ ಪಡೆಯುತ್ತಾರೆ. ಅದಕ್ಕಾಗಿ ಯಾವ ರಾಜಕೀಯ ಪಕ್ಷ ಯಾವ ಕಸರತ್ತು ಮಾಡುತ್ತದೆ? ಪ್ರಚಾರ ಹೇಗಿರುತ್ತದೆ? ಗೆಲುವಿಗೆ ಯಾವ ರೀತಿಯ ತಂತ್ರ ರೂಪಿಸುತ್ತವೆ? ಎಂಬ ಕುತೂಹಲ.

news18-kannada
Updated:January 21, 2020, 8:44 PM IST
ಆರು ಗಂಟೆಗಳ ಕಾಲ ಕಾದು, ಕಡೆಗೂ ಕೊನೆ ದಿನ ನಾಮಪತ್ರ ಸಲ್ಲಿಸಿದ ಮುಖ್ಯಮಂತ್ರಿ ಕೇಜ್ರಿವಾಲ್! ಇನ್ನು ಅಸಲಿ ಆಟ ಶುರು
ನಾಮಪತ್ರ ಸಲ್ಲಿಕೆಗಾಗಿ ಚುನಾವಣಾಧಿಕಾರಿ ಕಚೇರಿಯಲ್ಲಿ ಕಾದು ಕುಳಿತ್ತಿದ್ದ ಸಿಎಂ ಅರವಿಂದ ಕೇಜ್ರಿವಾಲ್.
  • Share this:
ನವದೆಹಲಿ (ಜ. 21): ದೆಹಲಿ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇವತ್ತು ಕಡೆ ದಿನ.‌ ನಿನ್ನೆ ನಾಮಪತ್ರ ಸಲ್ಲಿಸಲು ವಿಫಲರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವತ್ತು ಸತತ ಆರು ಗಂಟೆಗಳ ಕಾಲ ಚುನಾವಣಾಧಿಕಾರಿ ಕಚೇರಿಯಲ್ಲಿ ಕಾದು ನಾಮಪತ್ರ ಸಲ್ಲಿಸಿದರು. ಕಡೆ ದಿನದ ಬೆಳವಣಿಗೆಗಳು ಹೀಗಿವೆ.

ತಾವೇ ಆಯೋಜಿಸಿದ್ದ ಮೆರವಣಿಗೆ ಮಧ್ಯೆ ಸಿಲುಕಿ‌ ಸಮಯಕ್ಕೆ ಸರಿಯಾಗಿ ಚುನಾವಣಾಧಿಕಾರಿ ಕಚೇರಿ ತಲುಪಲಾಗದೆ ನಿನ್ನೆ ನಾಮಪತ್ರ ಸಲ್ಲಿಸಲು ವಿಫಲರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವತ್ತು ನಾಮಪತ್ರ ಸಲ್ಲಿಸಿದರು. ಆದರೆ ಕೇಜ್ರಿವಾಲ್ ಇವತ್ತು ಬೇಗನೆ ಬಂದರೂ ಗಂಟೆಗಟ್ಟಲೆ ಚುನಾವಣಾಧಿಕಾರಿ‌ ಕಚೇರಿಯಲ್ಲಿ ಕಾದು ಕುಳಿತು ನಾಮಪತ್ರ ಸಲ್ಲಿಸಬೇಕಾಯ್ತು. ಏಕೆಂದರೆ ಇವರಿಗಿಂತಲೂ ಮುಂಚಿತವಾಗಿ 44 ಮಂದಿ ನಾಮಪತ್ರ ಸಲ್ಲಿಸೋಕೆ ಬಂದಿದ್ದರು. ಕೇಜ್ರಿವಾಲ್ ಅವರ ಸಂಖ್ಯೆ 45 ಆಗಿತ್ತು. ನಾಮಪತ್ರ ಸಲ್ಲಿಕೆಗೆ ತಡ ಮಾಡಿ‌ ಕೇಜ್ರಿವಾಲ್ ಅವರನ್ನು ಚುನಾವಣಾ ಕಣದಿಂದಲೇ ಇಲ್ಲದಂತೆ ಮಾಡಲು ವಿಪಕ್ಷದವರು ಕುಟಿಲ ತಂತ್ರ ಮಾಡಿದ್ದಾರೆ ಅಂತಾ ಆಮ್ ಆದ್ಮಿ ಪಕ್ಷ ಆರೋಪ ಕೂಡ ಮಾಡಿದೆ.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಕಡೆ ದಿನದವರೆಗೂ ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದವು. ತನ್ನದು ದೊಡ್ಡ ಪಕ್ಷ ಎಂದು ಬೀಗಿಕೊಳ್ಳುವ ಬಿಜೆಪಿ ತನ್ನ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು ಸೋಮವಾರ ಮಧ್ಯರಾತ್ರಿ ಒಂದೂವರೆಗೆ. ಹಳೆಯ ಪಕ್ಷ ಕಾಂಗ್ರೆಸ್ ಕಡೆಯ ದಿನವಾದ ಇವತ್ತು ಕೂಡ ಐವರ ಹೆಸರನ್ನು ಘೋಷಣೆ ಮಾಡಿತು. ಹೀಗಾಗಿ ಕಡೆ ಗಳಿಗೆವರೆಗೂ ಎರಡೂ ಪಕ್ಷದಲ್ಲಿ ಟಿಕೆಟ್ ಗೊಂದಲ ತಾಂಡವವಾಡುತ್ತಿತ್ತು.

ಅರವಿಂದ ಕೇಜ್ರಿವಾಲ್ ವಿರುದ್ಧ ಬಿಜೆಪಿ ಬಹಳಷ್ಟು ಅಳೆದು ತೂಗಿ ಕಡೆಗೆ ಯುವ ನಾಯಕ ಸುನೀಲ್ ಯಾದವ್​ಗೆ ಟಿಕೆಟ್ ನೀಡಿದೆ. ಹೀಗಾಗಿ ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದವರು ಅಸಮಾಧಾನಗೊಂಡಿದ್ದಾರೆ. ಇದಲ್ಲದೆ ತಿಲಕ್ ನಗರದ‌ ಟಿಕೆಟ್ ಆಕಾಂಕ್ಷಿ ದೆಹಲಿ ಬಿಜೆಪಿ ವಕ್ತಾರರಾದ ತಾಜಿಂದರ್ ಸಿಂಗ್ ಅವರಿಗೆ ಹರಿನಗರದಿಂದ ಅವಕಾಶ ಮಾಡಿಕೊಡಲಾಗಿದೆ.

ಇದನ್ನು ಓದಿ: ವಿದ್ಯಾರ್ಥಿಗಳಿಗೆ ಉಚಿತ ಬಸ್, ಯಮುನಾ ಸ್ವಚ್ಚ, ದೆಹಲಿ ಮಾಲಿನ್ಯ ನಿಯಂತ್ರಣ; 10 ಗ್ಯಾರಂಟಿ ಕಾರ್ಡ್​ ಬಿಡುಗಡೆ ಮಾಡಿದ ಆಪ್​

ಸಾರಿಗೆ ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ತ್ರಿನಗರ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದ ಆಮ್ ಆದ್ಮಿ ಪಕ್ಷವು ಕಡೆ ಗಳಿಗೆಯಲ್ಲಿ ಅವರ ಪತ್ನಿ ಪ್ರೀತಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಜಿತೇಂದ್ರ ಸಿಂಗ್ ತೋಮರ್ ಅವರ 2015ರ ಗೆಲುವನ್ನು ದೆಹಲಿ ಹೈಕೋರ್ಟ್ ಅಸಿಂಧು ಎಂದು ಹೇಳಿದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಈ ರೀತಿ ಮಾಡಿದೆ.

ಈಗ ನಾಮಪತ್ರಗಳ ಸಲ್ಲಿಕೆ ಮುಕ್ತಾಯವಾಗಿದೆ. ಇನ್ನೇನಿದ್ದರೂ ಯಾರು ತಮ್ಮ ಉಮೇದುವಾರಿಕೆ ವಾಪಸ್ ಪಡೆಯುತ್ತಾರೆ. ಅದಕ್ಕಾಗಿ ಯಾವ ರಾಜಕೀಯ ಪಕ್ಷ ಯಾವ ಕಸರತ್ತು ಮಾಡುತ್ತದೆ? ಪ್ರಚಾರ ಹೇಗಿರುತ್ತದೆ? ಗೆಲುವಿಗೆ ಯಾವ ರೀತಿಯ ತಂತ್ರ ರೂಪಿಸುತ್ತವೆ? ಎಂಬ ಕುತೂಹಲ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ