ನವದೆಹಲಿ, ಜೂ. 22: ಖ್ಯಾತ ನಟ ರಾಜಕರಣಿ , ಮಾಜಿ ಶಾಸಕ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು (Mukhyamantri Chandru) ಆಮ್ ಆದ್ಮಿ ಪಾರ್ಟಿಗೆ (Aam Admi Party) ಸೇರ್ಪಡೆಯಾಗಿದ್ದು ಎಎಪಿ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಇದೇ ವೇಳೆ ದೆಹಲಿಯ ಮೊಹಲ್ಲಾ ಕ್ಲಿನಿಕ್ ಹಾಗೂ ದೆಹಲಿ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ತಮ್ಮ ಅನುಭವವನ್ನು ಹಂಚಿಕೊಂಡರು. ತಾವು ಕೇಜ್ರಿವಾಲರ ಜನಸ್ನೇಹಿ ಕಾರ್ಯಕ್ರಮಗಳ ಬಗ್ಗೆ ಕೇಳಿದ್ದೆನು, ಈಗ ಕಣ್ಣಾರೆ ನೋಡಿ ವಿಸ್ಮಿತನಾಗಿದ್ದೇನೆ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕದಾದ್ಯಂತ ಸಂಚರಿಸಿ, ದೆಹಲಿಯ ಈ ಕಾರ್ಯಕ್ರಮಗಳ ಬಗ್ಗೆ ಕನ್ನಡಿಗರಿಗೆ ತಿಳಿಹೇಳುವುದಾಗಿ ಹೇಳಿ, ಕರ್ನಾಟಕದ ಅಭಿವೃದ್ಧಿಗೆ ಆಮ್ ಆದ್ಮಿ ಪಾರ್ಟಿಯೇ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು.
ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿರವರು , “ಮುಖ್ಯಮಂತ್ರಿ ಚಂದ್ರುರವರು ನಾಡು, ನುಡಿ, ಜಲಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಇವುಗಳ ರಕ್ಷಣೆಯು ನಮ್ಮ ಪಕ್ಷದ ಮೂಲ ಸಿದ್ಧಾಂತ ಕೂಡ ಆಗಿದೆ.. ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳನ್ನು ಪ್ರೋತ್ಸಾಹಿಸುವ ಮೂಲಕ ಪ್ರಾದೇಶಿಕತೆಗೆ ಒತ್ತು ನೀಡಿ ರಾಷ್ಟ್ರದ ಸಮಗ್ರತೆ ಮತ್ತು ಐಕ್ಯತೆಯನ್ನು ಕಾಪಾಡುವುದೇ ಎಎಪಿಯ ಸ್ಪಷ್ಟ ನಿಲುವು.
ಚಂದ್ರು ರಾಜಕಾರಣದ ಹಾದಿ
ಮೌಲ್ಯಾಧರಿತ ರಾಜಕರಣಿ ರಾಮಕೃಷ್ಣ ಹೆಗಡೆ ಅವರ ಆಹ್ವಾನ ಮೇರೆಗೆ ಜನತಾ ಪಕ್ಷ ಸೇರಿ ಸಮಾಜಮುಖಿ ಕೆಲಸ ಮಾಡುತ್ತ ರಾಜ್ಯ ರಾಜಕಾರಣದಲ್ಲಿ ತಮ್ಮದೆ ಚಾಪು ಮೂಡಿಸಿದ ಚಂದ್ರು ಅವರು ಹೆಗಡೆ ಅವರ ನಂತರ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಸಿದ್ಧಾಂತ ಮೆಚ್ಚಿ ಬಿಜೆಪಿ ಸೇರಿದರು. ಆದರೆ ಬಿಜೆಪಿ ಕುಲಶಿತವಾಗಿದ್ದನು ನೋಡಿ , ಕಾಂಗ್ರೆಸ್ ಸೇರಿದರು, ಇತ್ತಿಚಿನ ದಿನಗಳಲ್ಲಿ ಎಲ್ಲ ಪಕ್ಷಗಳಿಂದ ಬೇಸರಗೊಂಡು ರಾಜಕಾರಣದಿಂದ ದೂರ ಉಳಿಯವ ಯೋಜನೆಯಲ್ಲಿ ಇದ್ದಾಗ , ಅರವಿಂದ ಕೇಜ್ರಿವಾಲ್ ಅವರ ಆದ್ಮಿ ಪಕ್ಷದ ಸಿದ್ದಾಂತ ಮೆಚ್ಚಿ ಆಮ್ ಅದ್ಮಿ ಪಕ್ಷ ಸೇರಿದರು.
ಇದನ್ನೂ ಓದಿ: Uddhav Thackeray: ನಾನು ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ! 'ಮಹಾ' ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್
ಗೌರಿಬಿದನೂರು ಕ್ಷೇತ್ರದ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಜನರ ಭಾವನೆಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಕ್ಕಿರುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಹಲವು ಸರ್ಕಾರಿ ತಾಣಗಳಲ್ಲಿ ಕನ್ನಡದಲ್ಲಿಯೂ ಸೂಚನಾ ಫಲಕಗಳು ಇರುವುದರ ಹಿಂದೆ ಚಂದ್ರುರವರ ಶ್ರಮವಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಮುಂದಿನ ಚುನಾವಣೆಯೇ ಟಾರ್ಗೆಟ್
"ಮುಂಬರುವ ಎಲ್ಲ ಚುನಾವಣೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧೆ ಮಾಡಲಿದೆ. ಎಲ್ಲ 224 ಸ್ಥಾನಗಳನ್ನು ಗೆಲ್ಲುವುದೆ ಆಮ್ ಆದ್ಮಿ ಪಾರ್ಟಿಯ ಗುರಿ. ಪ್ರಾಮಾಣಿಕ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಆಮ್ ಆದ್ಮಿ ಪಾರ್ಟಿ ಸೇರಬೇಕು” ಎಂದು ಚಂದ್ರುರವರು ಕರೆ ನೀಡಿದರು. “ಆಮ್ ಆದ್ಮಿ ಪಾರ್ಟಿಯು ದೇಶದ ರಾಜಕೀಯವನ್ನು ಸರಿದಾರಿಗೆ ತರುತ್ತಿದೆ. ಬೇರೆಲ್ಲ ಪಕ್ಷಗಳು ಶಿಕ್ಷಣ - ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯಿಸಿದರೆ, ಆಮ್ ಆದ್ಮಿ ಪಾರ್ಟಿ ಸರ್ಕಾರವು ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಈ ಮೂಲಕ ಸಮಾಜದ ಭವಿಷ್ಯವನ್ನು ಬಲಪಡಿಸುತ್ತಿದೆ. ಕರ್ನಾಟಕದಲ್ಲಿ ಎಎಪಿ ಅಧಿಕಾರಕ್ಕೇ ಬಂದು ಇಲ್ಲಿ ಕೂಡ ಪಾರದರ್ಶಕ ಹಾಗೂ ಜನಪರ ಆಡಳಿತ ನೀಡಿ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಮೂಡಬೇಕಿದೆ” ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ