ವಿಕಾಸ್ ದುಬೆ ಎನ್ಕೌಂಟರ್; ಮಗ ಸಾವನ್ನಪ್ಪಿದ ಮೂರೇ ದಿನಕ್ಕೆ ಹೃದಯಾಘಾತದಿಂದ ಅಪ್ಪನೂ ನಿಧನ
Vikas Dubey Encounter: ವಿಕಾಸ್ ದುಬೆ ಅವರ ತಂದೆ ರಾಮ್ಕುಮಾರ್ ದುಬೆ ತಮ್ಮ ಮಗನ ಸಾವಿನ ಬಳಿಕ ಮಗಳ ಮನೆಯಲ್ಲಿ ವಾಸವಾಗಿದ್ದರು. ಕಾನ್ಪುರದ ಬಳಿ ಇರುವ ಮಗಳ ಮನೆಯಲ್ಲಿ ಇಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನವದೆಹಲಿ (ಜು. 13): ಕಾನ್ಪುರದಲ್ಲಿ 8 ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಆತ ಸಾವನ್ನಪ್ಪಿದ ಮೂರೇ ದಿನದಲ್ಲಿ ಇಂದು ವಿಕಾಸ್ ದುಬೆಯ ತಂದೆಯೂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ವಿಕಾಸ್ ದುಬೆ ಅವರ ತಂದೆ ರಾಮ್ಕುಮಾರ್ ದುಬೆ ತಮ್ಮ ಮಗನ ಸಾವಿನ ಬಳಿಕ ಮಗಳ ಮನೆಯಲ್ಲಿ ವಾಸವಾಗಿದ್ದರು. ಕಾನ್ಪುರದ ಬಳಿ ಇರುವ ಮಗಳ ಮನೆಯಲ್ಲಿ ಇಂದು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಕಾಸ್ ದುಬೆಯ ಎನ್ಕೌಂಟರ್ ಬಳಿಕ ಮಾನಸಿಕವಾಗಿ ಬಹಳ ನೊಂದಿದ್ದ ಅವರು ಮಗನ ಅಂತ್ಯಕ್ರಿಯೆ ಕೂಡ ನೆರವೇರಿಸಿರಲಿಲ್ಲ. ಹೀಗಾಗಿ, ವಿಕಾಸ್ ದುಬೆಯ ಭಾವನೇ ಅಂತ್ಯಕ್ರಿಯೆ ನೆರವೇರಿಸಿದ್ದರು. ಮಗನ ಸಾವಿನಿಂದ ಆಘಾತಕ್ಕೊಳಗಾಗಿದ್ದ ರಾಮ್ಕುಮಾರ್ ದುಬೆ 2 ದಿನಗಳಿಂದ ಅನ್ನ, ನೀರು ಸೇವಿಸಿರಲಿಲ್ಲ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಪೊಲೀಸ್ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯ ಅಂತ್ಯಕ್ರಿಯೆಯನ್ನು ಶನಿವಾರ ಬಿಗಿ ಭದ್ರತೆಯಲ್ಲಿ ನೆರವೇರಿಸಲಾಗಿತ್ತು. ಉತ್ತರ ಪ್ರದೇಶದ ಕಾನ್ಪುರದಲ್ಲಿ 8 ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಿ ಕಾನ್ಪುರಕ್ಕೆ ಕರೆದೊಯ್ಯುವಾಗ ಪೊಲೀಸ್ ವಾಹನ ಪಲ್ಟಿ ಹೊಡೆದಿತ್ತು. ಈ ವೇಳೆ ಪೊಲೀಸರ ಬಳಿಯಿದ್ದ ಗನ್ ಎತ್ತಿಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದ ವಿಕಾಸ್ ದುಬೆಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು.
ಗುರುವಾರ ಮಧ್ಯಪ್ರದೇಶದಲ್ಲಿ ವಿಕಾಸ್ ದುಬೆಯನ್ನು ಬಂಧಿಸಲಾಗಿತ್ತು. ಆತನನ್ನು ಶುಕ್ರವಾರ ಬೆಳಗ್ಗೆ ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿತ್ತು. ಆತ್ಮರಕ್ಷಣೆಗಾಗಿ ಎನ್ಕೌಂಟರ್ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸರು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ತನಿಖೆಗೂ ಆಗ್ರಹಿಸಿದ್ದವು.
ರಸ್ತೆಗೆ ಎಮ್ಮೆಗಳು ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿತ್ತು. ಆಗ ನಮ್ಮ ಸಿಬ್ಬಂದಿಯ ಬಳಿಯಿದ್ದ ಗನ್ ಕಿತ್ತುಕೊಂಡು ವಿಕಾಸ್ ದುಬೆ ಪರಾರಿಯಾಗಲು ಪ್ರಯತ್ನಿಸಿದ. ಆಗ ಪೊಲೀಸರು ಆತನನ್ನು ಸುತ್ತುವರೆದು ಶರಣಾಗುವಂತೆ ಎಚ್ಚರಿಸಿದರಾದರೂ ಆತ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ. ಈ ವೇಳೆ ದುಬೆಯನ್ನು ಎನ್ಕೌಂಟರ್ ಮಾಡಬೇಕಾಗಿ ಬಂತು ಎಂದು ಪೊಲೀಸರು ಹೇಳಿದ್ದರು.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ