ಎರಡು ವರ್ಷಗಳ ಹಿಂದೆ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೊರೊನಾ (Corona Virus) ಮತ್ತೆ ಚೀನಾದಲ್ಲಿ (China) ತಾಂಡವವಾಡುತ್ತಿದೆ. ಮಹಾಮಾರಿ ಹೋಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಅದರ ಕರಿನೆರೆಳು ಆವರಿಸಿದೆ. Omicron ನ ಉಪ-ರೂಪಾಂತರ BF.7 ಚೀನಾದಲ್ಲಿ (Corona New Variant) ಜನರನ್ನು ಸಂಕಷ್ಟಕ್ಕೀಡು ಮಾಡಿದೆ. ಕೊರೊನಾ ಆಗಮವಾದಾಗಿನಿಂದ ಅದರ ವಿರುದ್ಧ ಹೋರಾಡಲು ಹಲವು ಔಷಧಿ ಸಸ್ಯಗಳ ಸೇವನೆ, ಲಿಂಬೆ, ಅರಿಶಿನ, ಹಣ್ಣುಗಳ ಬಳಕೆ ಹೆಚ್ಚಾಗಿದೆ. ಸದ್ಯ ಚೀನಾದಲ್ಲೂ ಇದೇ ವಿದ್ಯಾಮಾನ ಮತ್ತೆ ಅಸ್ತಿತ್ವಕ್ಕೆ ಬಂದಿದ್ದು ನಿಂಬೆಹಣ್ಣಿಗೆ (Lemon Price) ಬಂಗಾರದ ಬೆಲೆ ಬಂದಿದೆ.
ಚೀನಾದಲ್ಲಿ ಕೋವಿಡ್ ನರ್ತನ, ನಿಂಬೆ ಹಣ್ಣಿಗೆ ಬೇಡಿಕೆ
ಚೀನಾದಲ್ಲಿ ಕೋವಿಡ್ ಸೋಂಕಿನ ಅಲೆಗಳ ವಿರುದ್ಧ ಹೋರಾಡಲು ಅಲ್ಲಿನ ನಾಗರಿಕರು ನೈಸರ್ಗಿಕ ಪರಿಹಾರಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಚೀನಾದಲ್ಲಿ ನಿಂಬೆ ಕೃಷಿ ಇದ್ದಕ್ಕಿದ್ದಂತೆ ಪ್ರವರ್ಧಮಾನಕ್ಕೆ ಬಂದಿದೆ.
"ಮಾರುಕಟ್ಟೆಯಲ್ಲಿ ನಿಂಬೆ ಕೃಷಿಗೆ ಉತ್ತಮ ಬೇಡಿಕೆ ಬಂದಿದೆ. ಹೀಗಾಗಿ ಅದರ ಕೃಷಿ ಕೂಡ ಈಗ ಹೆಚ್ಚಾಗಿದೆ. ಹಿಂದೆ ಸಿಚುವಾನ್ನ ನೈಋತ್ಯ ಪ್ರಾಂತ್ಯದ ಕೌಂಟಿಯಾದ ಎನ್ಯುನಲ್ಲಿ ಕೇವಲ 5-6 ಟನ್ ಬೆಳೆಯುತ್ತಿದ್ದರು,
ಆದರೆ ಈಗ ಬೆಳೆ ದುಪ್ಪಟ್ಟಾಗಿದೆ. ಬೀಜಿಂಗ್ ಮತ್ತು ಶಾಂಘೈನಿಂದ ನಿಂಬೆ ಹಣ್ಣಿಗೆ ಬೇಡಿಕೆ ಬರುತ್ತಿದೆ" ಎಂದು ಚೀನಾದ ರೈತರೊಬ್ಬರು ಹೇಳಿದರು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿಂಬೆ ಹಣ್ಣು ಖರೀದಿ
ಚೀನಾದಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಖರೀದಿಸಲು ಜನ ಮುನ್ನುಗ್ಗುತ್ತಿರುವುದಾಗಿ ಬ್ಲೂಮ್ ಬರ್ಗ್ ಮಾಧ್ಯಮ ವರದಿ ಮಾಡಿದೆ.
"ಕಳೆದ ನಾಲ್ಕು ದಿನಗಳಲ್ಲಿ ನಿಂಬೆ ಬೆಲೆಗಳು ದ್ವಿಗುಣಗೊಂಡಿದೆ" ಎಂದು ರೈತ ಲಿಯು ಯಾಂಜಿಂಗ್ ಹೇಳಿದರು. ದೇಶದ ಎಲ್ಲೆಡೆಯಿಂದ ಬರುವ ಆರ್ಡರ್ಗಳನ್ನು ಪೂರೈಸಲು ದಿನ 14 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ ಎಂದು ಲಿಯು ಹೇಳಿದರು.
ಮೊದಲು ಅರ್ಧ ಕಿಲೋ ನಿಂಬೆಹಣ್ಣುಗಳು 2 ಅಥವಾ 3 ಯುವಾನ್ ಅಥವಾ ಸುಮಾರು 30 ರಿಂದ 40 US ಸೆಂಟ್ಗಳಿಗೆ ಮಾರಾಟವಾಗುತ್ತಿದ್ದವು. ಆದರೆ ಈಗ ನಿಂಬೆಹಣ್ಣಿಗೆ 6 ಯುವಾನ್ ಆಗಿದೆ ಎಂದು ರೈತರು ಹೇಳಿದರು.
ಕಿತ್ತಳೆ ಮತ್ತು ಪೇರಳೆ ಹಣ್ಣಿಗೂ ಡಿಮ್ಯಾಂಡ್
ನಿಂಬೆ ಹಣ್ಣಿನ ಜೊತೆಗೆ ಕಿತ್ತಳೆ, ಹಳದಿ ಪೀಚ್ ಮತ್ತು ಪೇರಳೆಗೂ ಬೆಲೆ ಬಂದಿದೆ ಎಂದು ವರದಿಗಳು ಹೇಳಿವೆ. ಚೀನಾದಲ್ಲಿ ತಾಜಾ ಉತ್ಪನ್ನಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಡಿಂಗ್ಡಾಂಗ್ ಮೈಕೈನಲ್ಲಿ ಕಿತ್ತಳೆ ಮತ್ತು ಪೇರಳೆ ಸೇರಿದಂತೆ ಇತರ ಹಣ್ಣುಗಳ ಮಾರಾಟವೂ ಗಗನಕ್ಕೇರಿದೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಈ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತವು ಮತ್ತು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿವೆ. ಹೀಗಾಗಿ ಈ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಒಡೆತನದ ಕಿರಾಣಿ ಸರಪಳಿಯಾದ ಫ್ರೆಶಿಪ್ಪೋದಲ್ಲಿ ಉತ್ಪನ್ನದ ಮಾರಾಟವು ಸುಮಾರು 900 ಪ್ರತಿಶತದಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Corona Virus: ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ? ಹೊಸ ವರ್ಷಾಚರಣೆಗೆ ಬ್ರೇಕ್ ಸಾಧ್ಯತೆ
ಇತರೆ ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ
ಕಳೆದ ತಿಂಗಳು ಕೋವಿಡ್ನಿಂದಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿ ರೈತರ ಹಲವು ಉತ್ಪನ್ನಗಳ ಮೇಲೆ ಪರಿಣಾಮ ಬೀರಿತ್ತು.
ಆದರೆ ನಿಂಬೆ ಹಣ್ಣು ಬೆಳೆಗಾರರಿಗೆ ಇದು ಪರಿಣಾಮ ಬೀರಿದಂತಿಲ್ಲ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಜನ ನಿಂಬೆ ಹಣ್ಣು ಖರೀದಿಗೆ ಮುಗಿಬಿದ್ದಿದ್ದು, ಮಾರುಕಟ್ಟೆಯಲ್ಲೂ ಸಹ ಒಳ್ಳೆಯ ಬೆಲೆ ಪಡೆದುಕೊಳ್ಳುತ್ತಿದೆ.
ಚೀನಾದಲ್ಲಿ ಮಿತಿಮೀರಿದೆ ಕೋರೊನಾ ಅಬ್ಬರ
ಚೀನಾದಲ್ಲಿ, ಕೊರೋನಾದಿಂದ ಸತ್ತವರ ಸಂಖ್ಯೆ ಅಧಿಕೃತವಾಗಿ 5200 ದಾಟಿದೆ. ಕಳೆದ ಬಾರಿಯಂತೆ ಈ ಸಲವೂ ಚೀನಾ ಕೊರೋನಾದಿಂದ ಮೃತಪಟ್ಟವರ ಸಾವು-ನೋವುಗಳ ಅಂಕಿಅಂಶಗಳನ್ನು ಮರೆಮಾಚುತ್ತಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ