ವಾಷಿಂಗ್ಟನ್(ಫೆ. 07): ಡಿಸೆಂಬರ್ 6ರಂದು ಅಮೆರಿಕದ ನೌಕಾ ನೆಲೆಯ ಮೇಲೆ ಅಲ್-ಖೈದಾ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ನಿನ್ನೆ ಗುರುವಾರ ಅಮೆರಿಕದ ಸೇನಾ ಪಡೆಗಳು ಆ ಸಂಘಟನೆಯ ಯೇಮನ್ ಘಟಕದ ಮುಖ್ಯಸ್ಥನನ್ನು ಸಂಹರಿಸಿವೆ. ಯೇಮನ್ ದೇಶದಲ್ಲಿ ಅಮೆರಿಕದ ಪಡೆಗಳು ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಅರೇಬಿಯನ್ ಪೆನಿನ್ಸುಲಾ ಅಲ್-ಖೈದಾ (AQAP) ಸಂಘಟನೆಯ ಸಂಸ್ಥಾಪಕ ಖಾಸಿಮ್ ಅಲ್-ರಿಮಿ ಹತರಾಗಿದ್ಧಾರೆಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಜಾಗತಿಕ ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರ ಸಂಘಟನೆಗಳ ಪೈಕಿ AQAP ಅನ್ನು ಅತ್ಯಂತ ಅಪಾಯಕಾರಿ ಸಂಘಟನೆಗಳಲ್ಲೊಂದೆಂದು ಅಮೆರಿಕ ಪರಿಗಣಿಸಿದೆ. ಸುನ್ನಿ ಮುಸ್ಲಿಮರ ಉಗ್ರ ಸಂಘಟನೆಯಾದ AQAP ಯೇಮನ್ ದೇಶದಲ್ಲಿ ಇತ್ತೀಚಿನ ವರ್ಷಗಳಿಂದ ಪ್ರವರ್ಧಮಾನಕ್ಕೆ ಬಂದಿದೆ. ಅಲ್ಲಿ ಯೇಮನ್ ದೇಶದ ಸರ್ಕಾರ ಹಾಗೂ ಶಿಯಾ ಮುಸ್ಲಿಮ್ ಬಂಡುಕೋರರ ಮಧ್ಯೆ ನಡೆಯುತ್ತಿರುವ ನಿರಂತರ ಯುದ್ಧದಿಂದಾಗಿ AQAP ತನ್ನ ಬಲ ವೃದ್ಧಿಸಿಕೊಳ್ಳುತ್ತಿತ್ತೆನ್ನಲಾಗಿದೆ.
ಇದನ್ನೂ ಓದಿ: ಕಾಶ್ಮೀರದ ಕಗ್ಗಂಟು: ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿಕೆ
ಖಾಸಿಮ್ ಅಲ್-ರಿಮಿ ನೇತೃತ್ವದಲ್ಲಿ ಆ ಸಂಘಟನೆಯು ಯೇಮನ್ ದೇಶದ ನಾಗರಿಕರ ಮೇಲೆ ಹಿಂಸಾಚಾರ ನಡೆಸುತ್ತಿತ್ತು. ಅಮೆರಿಕ ದೇಶ ಹಾಗೂ ನಮ್ಮ ಸೇನಾ ಪಡೆಗಳ ಮೇಲೆ ಹಲವಾರು ದಾಳಿಗಳಿಗೆ ಅದು ಪ್ರಚೋದನೆ ನೀಡುತ್ತಿತ್ತು. ಈಗ ರಿಮಿ ಹತ್ಯೆಯಾಗಿರುವುದರಿಂದ ನಮ್ಮ ರಾಷ್ಟ್ರೀಯ ಭದ್ರತೆಗಿರುವ ಅಪಾಯವನ್ನು ಒಂದಷ್ಟು ನೀಗಿಸಿಕೊಂಡಂತಾಗಿದೆ ಎಂದು ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ ತಿಳಿಸಿದ್ಧಾರೆ.
ಡಿಸೆಂಬರ್ 6ರಂದು ಫ್ಲೋರಿಡಾದಲ್ಲಿರುವ ಅಮೆರಿಕಾದ ನೌಕಾ ವಾಯು ನಿಲ್ದಾಣ ಮೇಲೆ ಸೌದಿ ವಾಯುಪಡೆಯ ಅಧಿಕಾರಿಯೊಬ್ಬರು ಶೂಟೌಟ್ ನಡೆಸಿದ್ದರು. ಆ ಘಟನೆಯಲ್ಲಿ ಅಮೆರಿಕ ಸೇನಾ ಪಡೆಯ 8 ಯೋಧರು ಗಾಯಗೊಂಡಿದ್ದರು. ದಾಳಿಕೋರ ಮೊಹಮ್ಮದ್ ಅಲ್ಶಾಮ್ರಾನಿ (21) ಎಂಬಾತನನ್ನು ಅಮೆರಿಕ ಪಡೆ ಸ್ಥಳದಲ್ಲೇ ಕೊಂದುಹಾಕಿತ್ತು. ಈ ದಾಳಿ ನಡೆಸುವ ಒಂದು ದಿನದ ಮುನ್ನ ಅಲ್ಶಾಮ್ರಾನಿ ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರೆನ್ನಲಾಗಿದೆ. ಅಮೆರಿಕವನ್ನು ದುಷ್ಟ ದೇಶ ಎಂದು ಈತ ತಾನು ಪೋಸ್ಟ್ ಮಾಡಿದ್ದ ಹೇಳಿಕೆಯಲ್ಲಿ ಬಣ್ಣಿಸಿದ್ದ.
ಇದನ್ನೂ ಓದಿ: ಸಿಎಎ ಬಗ್ಗೆ ಫೋನ್ನಲ್ಲಿ ಮಾತಾಡಿದ್ದೇ ತಪ್ಪಾಯ್ತ? ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ ಕ್ಯಾಬ್ ಚಾಲಕ
“ನೀವು ಮುಸ್ಲಿಮರ ಮೇಲಷ್ಟೇ ಅಲ್ಲ ಮಾನವೀಯತೆಯ ಮೇಲೂ ನಿತ್ಯ ಅಪರಾಧಗಳನ್ನು ಎಸಗುತ್ತಿದ್ದೀರಿ. ಅದಕ್ಕೆ ಹಣದ ನೆರವು ಮತ್ತು ಬೆಂಬಲ ನೀಡುತ್ತಾ ಬಂದಿದ್ದೀರಿ. ಅದಕ್ಕೆ ನಿಮ್ಮನ್ನು ಧ್ವೇಷಿಸುತ್ತೇನೆ” ಎಂದು ಈತ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದ ಮ್ಯಾನಿಫೆಸ್ಟೋದಲ್ಲಿ ಬರೆದಿದ್ದರೆನ್ನಲಾಗಿದೆ.
ಸೌದಿ ಅರೇಬಿಯಾ ರಾಜನ ಸೇನಾ ಪಡೆಯ ಎರಡನೇ ಲೆಫ್ಟಿನೆಂಟ್ ಅಧಿಕಾರಿಯಾಗಿದ್ದ ಈ ಮೊಹಮ್ಮದ್ ಅಲ್ಶಾಮ್ರಾನಿಯ ಕೃತ್ಯವನ್ನು ಸೌದಿ ದೊರೆ ಸಲ್ಮಾನ್ ಬಲವಾಗಿ ಖಂಡಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಡಿ. 6ರ ಶೂಟೌಟ್ನ ಹೊಣೆಯನ್ನು AQAP ಸಂಘಟನೆಯ ಹೊತ್ತುಕೊಂಡಿತ್ತು.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ