ಚೆನ್ನೈ: ತಮಿಳುನಾಡಿನ (Tamil Nadu) ಧರ್ಮಪುರಿ ಜಿಲ್ಲೆಯಲ್ಲಿಯಲ್ಲಿರುವ ಕಾವೇರಿ ನದಿಗೆ (Cauvery River) ಅಡ್ಡವಾಗಿ ಕಟ್ಟಲಾಗಿರುವ ಅತ್ಯಂತ ದೊಡ್ಡ ಅಣೆಕಟ್ಟುಗಳಲ್ಲಿ (Dam) ಒಂದಾದ ಮೆಟ್ಟೂರು ಡ್ಯಾಂ (Mettur Dam) ಈ ವರ್ಷ ಹೊಸದೊಂದು ದಾಖಲೆ ಬರೆದಿದೆ. ಮುಂಗಾರು ಮಳೆಯ (Mansoon Rain) ಅಬ್ಬರ ಪರಿಣಾಮ ಪ್ರಸಕ್ತ ನೀರಾವರಿ ವರ್ಷದಲ್ಲಿ ಮೆಟ್ಟೂರು ಅಣೆಕಟ್ಟಿನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿದ್ದು, 62 ವರ್ಷಗಳ ನಂತರ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಹಿಂದೆ ಅಂದರೆ 1961ರಲ್ಲಿ 321 ಟಿಎಂಸಿ ನೀರನ್ನು ಬಿಡಲಾಗಿತ್ತು. ಆದಾದ ಬಳಿಕ ಬರೋಬ್ಬರಿ 62 ವರ್ಷಗಳ ನಂತರ 472.6 ಟಿಎಂಸಿ ಹೆಚ್ಚುವರಿ ನೀರನ್ನು ಡ್ಯಾಂನಿಂದ ಹೊರಬಿಡಲಾಗಿದೆ.
ಕಾವೇರಿ ನದಿ ಮುಖಜ ಭೂಮಿಗೆ 249 ದಿನಗಳ ಕಾಲ ನೀರು
ಕಾವೇರಿ ನದಿ ಮುಖಜ ಭೂಮಿಗೆ ನೀರುಣಿಸಲು ಪ್ರತಿ ವರ್ಷ ಜೂನ್ 12 ರಿಂದ ಜನವರಿ 28 ರವರೆಗೆ 230 ದಿನಗಳ ಕಾಲ ನೀರು ಬಿಡಲಾಗುತ್ತದೆ. ನೀರಿನ ಲಭ್ಯತೆಯ ಆಧಾರದ ಮೇಲೆ, ಈ ದಿನಾಂಕಗಳು ಬದಲಾಗಬಹುದು ಕೂಡ. ಆದರೆ ಈ ವರ್ಷ ಹೆಚ್ಚಿನ ಮಳೆಯಿಂದಾಗಿ ಡ್ಯಾಂ ತುಂಬಿ ಹರಿದಿದೆ.
ಇದೇ ಕಾರಣಕ್ಕಾಗಿ ಕಾವೇರಿ ನದಿ ಮುಖಜ ಭೂಮಿಗೆ ಮೇ 24, 2022 ರಿಂದ 249 ದಿನಗಳ ಕಾಲ ನೀರನ್ನು ಹರಿಸಲಾಗಿದ್ದು, ಮೊನ್ನೆ ಶನಿವಾರ ಮೆಟ್ಟೂರು ಅಣೆಕಟ್ಟಿನಿಂದ ಹೊರಬಿಡಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.
ಮೆಟ್ಟೂರು ಅಣೆಕಟ್ಟಿನಿಂದ ಹೊರಬರುತ್ತಿರುವ ನೀರಿನಿಂದ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಾದ ನಾಮಕ್ಕಲ್, ಈರೋಡ್, ತಿರುಚ್ಚಿ, ತಿರುವರೂರ್, ನಾಗಪಟ್ಟಣಂ, ಕಡಲೂರು, ಕರೂರ್, ಪೆರಂಬಲೂರು, ತಂಜಾವೂರು ಮತ್ತು ಪುದುಕ್ಕೊಟ್ಟೈ ಜಿಲ್ಲೆಗಳ ಕೃಷಿಭೂಮಿಗಳು ಪ್ರಯೋಜನ ಪಡೆದಿವೆ.
ಕಾಲುವೆಗಳಿಗೂ ಹರಿದ ಹೆಚ್ಚುವರಿ ನೀರು
ಕಾವೇರಿ ನದಿ ಮುಖಜ ಭೂಮಿಗೆ ನೀರುಣಿಸುವುದರ ಜೊತೆಗೆ ಕಾಲುವೆಗಳಿಗೂ ನೀರು ಹರಿಸಲು ಮೆಟ್ಟೂರು ಅಣೆಕಟ್ಟಿನಿಂದ ಸಾಮಾನ್ಯವಾಗಿ ಆಗಸ್ಟ್ 1 ರಿಂದ ಡಿಸೆಂಬರ್ 15 ರ ನಡುವೆ ನೀರನ್ನು ಬಿಡಲಾಗುತ್ತದೆ. ಕಾಲುವೆ ನೀರಾವರಿಗೂ ಸಹ ಈ ವರ್ಷ ಡ್ಯಾಂ ನೀರಿನ ಲಭ್ಯತೆಯ ಕಾರಣ ಜುಲೈ 17, 2022 ರಿಂದ ಪ್ರಾರಂಭವಾಗಿ ಈ ನೀರಾವರಿ ವರ್ಷ ಜನವರಿ 15 ರಂದು ಕೊನೆಗೊಂಡಿದೆ.
682 ಟಿಎಂಸಿ ನೀರನ್ನು ಹೊರಬಿಡಲಾಗಿದೆ
ಈ ವರ್ಷ ಮಳೆ ಉತ್ತಮವಾಗಿದ್ದರಿಂದ ಮೆಟ್ಟೂರು ಡ್ಯಾಂ ಗರಿಷ್ಠ ಪ್ರಮಾಣದಲ್ಲಿ ತುಂಬಿ ತುಳುಕಿತ್ತು. ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಅಧಿಕಾರಿಗಳು ಮೆಟ್ಟೂರು ಅಣೆಕಟ್ಟು ತನ್ನ ಹಿಂದಿನ ವರ್ಷದ ಹಲವು ದಾಖಲೆಗಳನ್ನು ಈ ವರ್ಷ ಮುರಿಯುತ್ತಿದೆ ಎಂದು ತಿಳಿಸಿದ್ದಾರೆ.
ಈ ನೀರಾವರಿ ವರ್ಷದಲ್ಲಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ 670 ಟಿಎಂಸಿ ನೀರು ಬಂದಿದ್ದು, ಒಟ್ಟು 682 ಟಿಎಂಸಿ ನೀರನ್ನು ಹೊರಬಿಡಲಾಗಿದೆ.
ಡೆಲ್ಟಾ ನೀರಾವರಿಗೆ 201 ಟಿಎಂಸಿ ನೀರು
ಇದರಲ್ಲಿ ಡೆಲ್ಟಾ ನೀರಾವರಿಗೆ 201 ಟಿಎಂಸಿ, ಕಾಲುವೆ ನೀರಾವರಿಗೆ 8.4 ಟಿಎಂಸಿ. ಉಳಿದ 472.6 ಟಿಎಂಸಿಯನ್ನು ಅಣೆಕಟ್ಟಿನಿಂದ ಹೆಚ್ಚುವರಿ ನೀರು ಬಿಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಮಾಹಿತಿ ನೀಡಿದೆ.
ಅಣೆಕಟ್ಟಿನ 89 ವರ್ಷಗಳ ಇತಿಹಾಸದಲ್ಲಿ, ಇದು 62 ವರ್ಷಗಳ ಹಿಂದೆ 1961 ರ ನೀರಾವರಿ ವರ್ಷದಲ್ಲಿ ಬಿಡುಗಡೆಯಾದ 321 ಟಿಎಂಸಿಯ ಹಿಂದಿನ ದಾಖಲೆಯನ್ನು ಹಿಂದಿಕ್ಕಿ ಅತಿ ಹೆಚ್ಚು ಹೆಚ್ಚುವರಿ ನೀರನ್ನು ಹೊರಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ 103.87 ಅಡಿ ನೀರು ಹೊಂದಿರುವ ಮೆಟ್ಟೂರು ಡ್ಯಾಂ
ಶನಿವಾರ ಬೆಳಿಗ್ಗೆ, ಮೆಟ್ಟೂರು ಅಣೆಕಟ್ಟಿನ ಸಾಮರ್ಥ್ಯವು ಅದರ ಒಟ್ಟು 120 ಅಡಿಗಳಲ್ಲಿ 103.87 ಅಡಿಗಳಷ್ಟು ನೀರನ್ನು ಹೊಂದಿತ್ತು. ಅದರ ಪೂರ್ಣ ಸಂಗ್ರಹವಾದ 93.47 ಟಿಎಂಸಿಗೆ ಹೋಲಿಸಿದರೆ ಸಂಗ್ರಹಣೆ ಮಟ್ಟವು 69.94 ಟಿಎಂಸಿಯಷ್ಟಿತ್ತು.
ಶುಕ್ರವಾರ 896 ಕ್ಯೂಸೆಕ್‌ನಿಂದ 933 ಕ್ಯೂಸೆಕ್‌ಗೆ ಒಳಹರಿವು ಹೆಚ್ಚಿದೆ. ಅಣೆಕಟ್ಟು ಮತ್ತು ಪವರ್‌ಹೌಸ್ ಸುರಂಗದ ಮೂಲಕ ಕಾವೇರಿ ನದಿಗೆ 6,000 ಕ್ಯೂಸೆಕ್‌ಗಳಷ್ಟು ನೀರು ಬಿಡಲಾಗುತ್ತಿದೆ.
ಅಣೆಕಟ್ಟಿನಲ್ಲಿ 100 ಅಡಿಗಿಂತ ಹೆಚ್ಚು ನೀರು ಇರುವುದರಿಂದ ಮುಂಬರುವ ನೀರಾವರಿ ವರ್ಷದಲ್ಲಿ ಡೆಲ್ಟಾ ನೀರಾವರಿಗಾಗಿ, ಜೂನ್ 12ರ ವಾಡಿಕೆಯಂತೆ ನೀರನ್ನು ಹರಿಸುವುದರಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು WRD ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ