ಠಾಕೂರ್​ ಅಧಿಪತ್ಯದ ಹಳ್ಳಿಯಲ್ಲಿ 80 ವರ್ಷದ ಬಳಿಕ ವೈಭವದಿಂದ ಸಾಗಿತು ದಲಿತ ವಧುವಿನ ದಿಬ್ಬಣ


Updated:July 16, 2018, 2:23 PM IST
ಠಾಕೂರ್​ ಅಧಿಪತ್ಯದ ಹಳ್ಳಿಯಲ್ಲಿ 80 ವರ್ಷದ ಬಳಿಕ ವೈಭವದಿಂದ ಸಾಗಿತು ದಲಿತ ವಧುವಿನ ದಿಬ್ಬಣ

Updated: July 16, 2018, 2:23 PM IST
ನ್ಯೂಸ್​ 18 ಕನ್ನಡ

ಲಕ್ನೋ(ಜು.16): 6 ತಿಂಗಳು ಕಾದ ಬಳಿಕ ಕೊನೆಗೂ ದಲಿತ ಯುವಕ ಸಂಜಯ್​ ಜಾಟವ್​ರ ಮದುವೆ ದಿಬ್ಬಣ ಕೊನೆಗೂ ಮೇಲ್ಜಾತಿ ವರ್ಗದವರೆನ್ನಲಾಗುವ ಠಾಕೂರರ ಅಧಿಪತ್ಯವಿರುವ ಹಳ್ಳಿಯ ಮೂಲಕ ಸಾಗಿದೆ. ರವಿವಾರದಂದು ಸಂಜಯ್​ ಮದುವೆ ದಿಬ್ಬಣವು ಬಹಳಷ್ಟು ವೈಭವದಿಂದ ಸಾಗಿದೆ. ಉತ್ತರ ಪ್ರದೇಶದ ಕಾಸ್​ಗಂಜ್​ ಜಿಲ್ಲೆಯ, ಬಸಯೀ ಹಳ್ಳಿಯ ನಿವಾಸಿ ಸಂಜಯ್​ ನಿಜಾಂಪುರದ ಶೀತಲ್​ರನ್ನು ವರಿಸಿದ್ದಾರೆ. ಇಲ್ಲಿ ಕಳೆದ 80 ವರ್ಷಗಳಿಂದ ಯಾವೊಬ್ಬ ದಲಿತ ವ್ಯಕ್ತಿಯೂ ಇಷ್ಟು ವೈಭವಯುತವಾಗಿ ಮದುವೆಯಾಗಿರಲಿಲ್ಲ ಎಂಬುವುದು ಗಮನಾರ್ಹ.

ಈ ಮದುವೆಯನ್ನು ಸಂಪನ್ನಗೊಳಿಸಲು 10 ಪೊಲೀಸ್​ ಇನ್ಸ್​ಪೆಕ್ಟರ್ಸ್​, 22 ಸಬ್​ ಇನ್ಸ್​ಸ್ಪೆಕ್ಟರ್​ಗಳು, 35 ಹೆಡ್​ ಕಾನ್ಸ್​ಸ್ಟೇಬಲ್ಸ್, 100 ಕಾನ್ಸ್​ಸ್ಟೇಬಲ್​ ಹಾಗೂ ಪಿಎಸ್​ನ ಒಂದು ತುಕಡಿ ನಿಯೋಜಿಸಲಾಗಿತ್ತು. ಈ ದಿಬ್ಬಣದಲ್ಲಿ 30 ವಾಹನಗಳಿದ್ದು, ಅವುಗಳಿಗೆ ಪೊಲೀಸ್​ ವಾಹನಗಳು ಬೆಂಗಾವಲಾಗಿದ್ದವು.

ನೀಲಿ ಬಣ್ಣದ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದ ಸಂಜಯ್​ ಜಾಟವ್​ ಮಾತನಾಡುತ್ತಾ "ನಾವು 21ನೆ ಶತಮಾನದಲ್ಲಿ ಬದುಕುತ್ತಿದ್ದೇವೆ. ಆದರೆ ಕೆಲವರು ಇನ್ನೂ ದಲಿತರಿಗೆ ಗೌರವವಿಲ್ಲ ಎಂಬ ಭಾವನೆ ಹೊಂದಿದ್ದಾರೆ. ಈ ಹಳ್ಳಿಯಿಂದ ಮದುವೆ ದಿಬ್ಬಣ ಕೊಂಡೊಯ್ಯುತ್ತಿರುವ ಮೊದಲ ವ್ಯಕ್ತಿ ನಾನು. ಇದು ಬಾಬಾ ಸಾಹೆಬ್​ ಅಂಬೇಡ್ಕರ್​ ಹಾಗೂ ಅವರು ರಚಿಸಿದ ಸಂವಿಧಾನದಿಂದಾಗಿ ಸಾಧ್ಯವಾಗಿದೆ" ಎಂದಿದ್ದಾರೆ.

ಈ ಹಳ್ಳಿಯಲ್ಲಿ ಅಧಿಪತ್ಯ ಹೊಂದಿರುವ ಠಾಕೂರರ ವಿರೋಧದಿಂದಾಗಿ ಆರಂಭದಲ್ಲಿ ಜಿಲ್ಲಾಡಳಿತವು ನಿಜಾಂಪುರದಿಂದ ಮದುವೆ ದಿಬ್ಬಣ ಕೊಂಡೊಯ್ಯಲು ಅನುಮತಿ ನೀಡಿರಲಿಲ್ಲ. ಆದರೆ ಜಾಟವ್​ ಇದಕ್ಕೆ ಬಗ್ಗಲಿಲ್ಲ, ಹಾಗೀ ಜಿಲ್ಲಾಧಿಕಾರಿ, ಎಸ್​ಪಿ, ಅಲಹಾಬಾದ್​ ಹೈಕೋರ್ಟ್​ ಅಲ್ಲದೇ ಮುಖ್ಯಮಂತ್ರಿಯ ಕಚೇರಿಗೂ ಈ ಕುರಿತಾಗಿ ದೂರು ನೀಡಿದ್ದರು. ಸಂಜಯ್​ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಅವರ ಮದುವೆ ದಿಬ್ಬಣ ಬಹಳಷ್ಟು ವೈಭವದಿಂದ ಸಾಗಿದೆ.

ಮದುವೆ ಕುರಿತಾಗಿ ಮಾತನಾಡಿದ ಮದುಮಗಳ ತಾಯಿ "ಹಳ್ಳಿಯ ಠಾಕೂರರು ನಮ್ಮ ಮನೆಗೆ ಬರುತ್ತಿದ್ದ ಮದುವೆ ದಿಬ್ಬಣವನ್ನು ನಿಲ್ಲಿಸಿದ್ದು ಇದೇ ಮೊದಲ ಬಾರಿಯಲ್ಲ. ಇದಕ್ಕಿಂತ ಮೊದಲು, ನನ್ನ ಮೂವರು ನಾದಿನಿಯರ ಮದುವೆಯಾಗಿದೆ. ಮೊದಲನೆಯ ನಾದಿನಿಯ ಮದುವೆ ದಿಬ್ಬಣವು ಸಂಗೀತ ವಾದ್ಯಗಳೊಂದಿಗೆ ಅರ್ಧ ದಾರಿಯವರೆಗೂ ತಲುಪಿತ್ತು. ಆದರೆ ಈ ವಿಚಾರ ಠಾಕೂರರಿಗೆ ತಿಳಿಯುತ್ತಿದ್ದಂತೆಯೇ ಅವರು ದಿಬ್ಬಣವನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ, ಜಗಳ ಆರಂಭಿಸಿದ್ದರು. ದಿಬ್ಬಣವು ಯಾವುದೇ ಸಂಗೀತ ವಾದ್ಯಗಳಿಲ್ಲದೇ ಮನೆ ಬಾಗಿಲಿಗೆ ಬಂದಿತ್ತು" ಎಂದಿದ್ದಾರೆ.
First published:July 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...