36 ವರ್ಷದ ಬಳಿಕ ತಾಯ್ನಾಡಿಗೆ ಮರಳಿದ ಭಾರತೀಯ: ಪಾಕಿಸ್ತಾನದಿಂದ 30 ಕೈದಿಗಳ ಬಿಡುಗಡೆ

news18
Updated:August 13, 2018, 2:02 PM IST
36 ವರ್ಷದ ಬಳಿಕ ತಾಯ್ನಾಡಿಗೆ ಮರಳಿದ ಭಾರತೀಯ: ಪಾಕಿಸ್ತಾನದಿಂದ 30 ಕೈದಿಗಳ ಬಿಡುಗಡೆ
news18
Updated: August 13, 2018, 2:02 PM IST
ನ್ಯೂಸ್​18 ಕನ್ನಡ

ಇಸ್ಲಮಾಬಾದ್​/ ಜೈಪುರ (ಆ. 13): 36 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಗ ಪಕ್ಕದ ರಾಷ್ಟ್ರ ಪಾಕಿಸ್ತಾನದ ಜೈಲಿನಿಂದ ಇಂದು ಬಿಡುಗಡೆಯಾಗುತ್ತಿದ್ದಾನೆ. ಪಾಕ್​ನವರು ಬಂಧಿಸುವಾಗ ಆತನಿಗಿನ್ನೂ 32ರ ಹರೆಯ. ಈಗ ನೋಡಿದರೂ ಮನೆಯವರಿಗೆ ಗುರುತು ಹಿಡಿಯಲಾರದಂತಹ ಸ್ಥಿತಿ. ಬದುಕಿರುವ ಬಗ್ಗೆ ನಿರೀಕ್ಷೆಯನ್ನೇ ಕಳೆದುಕೊಂಡಿದ್ದವರಿಗೆ ಇದೀಗ ಇನ್ನಿಲ್ಲದ ಸಂಭ್ರಮ ಕೇಳಲು ಸಿನಿಮಾ ಕತೆಯಂತಿದ್ದರೂ ಇದು ಸತ್ಯಕತೆ.

ನಾಳೆ ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಹಾಗೇ,  ನಮ್ಮ ದೇಶದ ಜೈಪುರ ಕೂಡ ನಾಳೆಯೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಇದೇನಪ್ಪಾ! ಶತ್ರು ರಾಷ್ಟ್ರವಾದ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವಕ್ಕೂ ಜೈಪುರಕ್ಕೂ ಎಲ್ಲಿಯ ಸಂಬಂಧ ಎಂದು ನಿಮಗೆ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣವೂ ಇಲ್ಲದಿಲ್ಲ...


36 ವರ್ಷಗಳ ಹಿಂದೆ ಪಾಕಿಸ್ತಾನದ ಗಡಿಯೊಳಗೆ ಕಾಲಿಟ್ಟಿದ್ದ ಜೈಪುರದ ಗಜಾನಂದ್​ ಶರ್ಮ ನಾಳೆ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನಾಚರಣೆಪ್ರಯುಕ್ತ ಇಂದು ಬಿಡುಗಡೆಯಾಗುತ್ತಿದ್ದಾರೆ. ಬರೋಬ್ಬರಿ 36 ವರ್ಷಗಳ ನಂತರ ಸ್ವದೇಶಕ್ಕೆ ಮರಳುತ್ತಿರುವ ಶರ್ಮ ನಾಳೆ ಜೈಪುರ ತಲುಪಲಿದ್ದು, ಅವರನ್ನು ಬರಮಾಡಿಕೊಳ್ಳಲು ಊರಿನ ಜನರು ಸಂಭ್ರಮ, ಕಾತುರದಿಂದ ಕಾಯುತ್ತಿದ್ದಾರೆ.

ಬದುಕಿರುವ ಸಂಗತಿಯೇ ಗೊತ್ತಿರಲಿಲ್ಲ!:
ಗಜಾನಂದ್​ ಶರ್ಮ ಅವರಿಗೆ 32 ವರ್ಷವಾಗಿದ್ದಾಗ ದಾರಿ ತಪ್ಪಿ ಪಾಕಿಸ್ತಾನದ ಗಡಿಯೊಳಗೆ ಹೋಗಿದ್ದರು. ಅವರನ್ನು ಪಾಕ್​ ಗಡಿಯಲ್ಲಿ ಪಾಕಿಸ್ತಾನ ರೇಂಜರ್ಸ್​ ಡೆಪ್ಲಾಯ್ಡ್​ ಪಡೆ ಬಂಧಿಸಿತ್ತು. ವಾಸ್ತವವಾಗಿ ಯಾವ ಅಪರಾಧಕ್ಕಾಗಿ ಗಜಾನಂದ್​ ಅವರನ್ನು ಬಂಧಿಸಲಾಗಿತ್ತು ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ. ಆದರೆ, ಗೊತ್ತಿಲ್ಲದೆ ಮಾಡಿದ ಸಣ್ಣದೊಂದು ತಪ್ಪಿಗೆ ಶರ್ಮ ಅವರು ಅನುಭವಿಸಿದ ಶಿಕ್ಷೆ ಮಾತ್ರ ಅತ್ಯಂತ ಘೋರವಾದುದು. ಇಷ್ಟಕ್ಕೂ ಗಜಾನಂದ್​ ಶರ್ಮ ಅವರ ಮನೆಯವರಿಗೆ ತಮ್ಮ ಮಗ ಬದುಕಿದ್ದಾನೆಂಬ ವಿಷಯವೇ ಗೊತ್ತಿರಲಿಲ್ಲ!
Loading...

ಆಶ್ಚರ್ಯವಾದರೂ ಇದು ಸತ್ಯ. 36 ವರ್ಷದ ಹಿಂದೆ ಕಾಣೆಯಾಗಿದ್ದ ಗಜಾನಂದ್​ ಶರ್ಮ ಅವರಿಗಾಗಿ ಒಂದೆರಡು ವರ್ಷ ಕಾದ ಕುಟುಂಬದವರು ನಂತರ ಆತ ಸತ್ತುಹೋಗಿದ್ದಾನೆ ಎಂದೇ ಅಂದುಕೊಂಡಿದ್ದರು. ಆದರೆ, ಆಶ್ಚರ್ಯವೆಂಬಂತೆ ನಾಳೆಯ ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸನ್ನಡತೆಯ ಆಧಾರದಲ್ಲಿ ಪಾಕ್​ ಜೈಲಿನಿಂದ ಬಿಡುಗಡೆ ಮಾಡುತ್ತಿರುವ 30 ಭಾರತೀಯ ಕೈದಿಗಳ ಪಟ್ಟಿಯಲ್ಲಿ ಗಜೇಂದ್ರ ಶರ್ಮ ಅವರ ಹೆಸರು ಇರುವ ವಿಷಯ 2 ತಿಂಗಳ ಹಿಂದಷ್ಟೆ ಶರ್ಮ ಅವರ ಕುಟುಂಬಕ್ಕೆ ತಿಳಿದಿದೆ. ಈ ವಿಷಯ ತಿಳಿದ ನಂತರ ಗಜಾನಂದ್​ ಅವರ ಕುಟುಂಬದಲ್ಲಿ ಉತ್ಸಾಹ, ಕಾತುರತೆ ಮನೆಮಾಡಿದೆ. 36 ವರ್ಷದ ನಂತರ ಸ್ವಾತಂತ್ರ್ಯ ಪಡೆದು ಸ್ವದೇಶಕ್ಕೆ ಮರಳುತ್ತಿರುವ ಊರಿನ ಮಗನನ್ನು ಬರಮಾಡಿಕೊಳ್ಳಲು ಜೈಪುರದ ಜನರು ಕೂಡ ಉತ್ಸುಕರಾಗಿದ್ದಾರೆ.

32 ವಯಸ್ಸಾಗಿದ್ದಾಗ ಪಾಕ್​ನ ಜೈಲು ಸೇರಿದ ಗಜಾನಂದ್​ ಶರ್ಮ ಅವರಿಗೆ ಈಗ 68 ವರ್ಷ. ಜೀವನದ ಬಹುಮುಖ್ಯ ಅವಧಿಯನ್ನು ಪರದೇಶದ ಜೈಲಿನಲ್ಲಿಯೇ ಕಳೆದಿರುವ ಗಜಾನಂದ್​ ಅವರಿಗೆ ಈ ಬಾರಿಯ ಆಗಸ್ಟ್​ 15 ನಿಜವಾದ ಸ್ವಾತಂತ್ರ್ಯ ಸಿಕ್ಕಿದ ದಿನ.

30 ಕೈದಿಗಳ ಬಿಡುಗಡೆ:
ಭಾರತ ಸರ್ಕಾರದ ದಾಖಲೆಯ ಪ್ರಕಾರ ಭಾರತದ 418 ಮೀನುಗಾರರೂ ಸೇರಿದಂತೆ 470 ಜನ ಪಾಕಿಸ್ತಾನದಲ್ಲಿ ಬಂಧಿಯಾಗಿದ್ದಾರೆ. ಅವರಲ್ಲಿ 27 ಮೀನುಗಾರರು ಸೇರಿದಂತೆ ಒಟ್ಟು 30 ಜನರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇಂದು ಮಧ್ಯಾಹ್ನ ಪಂಜಾಬ್​ನ ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತೀಯ 30 ಕೈದಿಗಳನ್ನು ಹಸ್ತಾಂತರಿಸಲಾಗುತ್ತದೆ. ಗಜಾನಂದ್​ ಶರ್ಮ ಅವರನ್ನು ಬರಮಾಡಿಕೊಳ್ಳಲು ಈಗಾಗಲೇ ಅವರ ಹೆಂಡತಿ ಮಕ್ಷ್ಣಿ, ಮಗ ಮುಖೇಶ್​ ಮತ್ತು ಕುಟುಂಬದವರು ಗಡಿಭಾಗದಲ್ಲಿ ಕಾದಿದ್ದಾರೆ.

 

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...