21 ವರ್ಷಗಳ ಬಳಿಕ ನೆಹರು-ಗಾಂಧಿ ಕುಟುಂಬದವರನ್ನು ಬಿಟ್ಟು ಹೊರಗಿನವರಿಗೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟ!

ಒಂದು ವೇಳೆ ಖರ್ಗೆ ಕಾಂಗ್ರೆಸ್​ ಅಧ್ಯಕ್ಷರಾದರೆ, ಕರ್ನಾಟಕದಿಂದ ಈ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ಎರಡನೇಯವರಾಗುತ್ತಾರೆ. ಈ ಮೊದಲು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್​.ನಿಜಲಿಂಗಪ್ಪ 1968ರಿಂದ 69ರ ಅವಧಿಗೆ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು.

HR Ramesh | news18
Updated:July 4, 2019, 3:21 PM IST
21 ವರ್ಷಗಳ ಬಳಿಕ ನೆಹರು-ಗಾಂಧಿ ಕುಟುಂಬದವರನ್ನು ಬಿಟ್ಟು ಹೊರಗಿನವರಿಗೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟ!
ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
  • News18
  • Last Updated: July 4, 2019, 3:21 PM IST
  • Share this:
ಒಂದು ಕಾಲದಲ್ಲಿ 'ಗಾಂಧಿ ಮುಕ್ತ ಕಾಂಗ್ರೆಸ್'​ ಜಪ ಮಾಡುತ್ತಿದ್ದ ಬಿಜೆಪಿ ಆನಂತರದ ದಿನಗಳಲ್ಲಿ  'ಕಾಂಗ್ರೆಸ್​ ಮುಕ್ತ ಭಾರತ'ದ ಕನಸು ಕಾಣಲಾರಂಭಿಸಿತು. ಬಿಜೆಪಿಯ ಆ ಕನಸು ಬಹುತೇಕ ನನಸಾಗುವ ಸನಿಹದತ್ತ ಬಂದಂತಿದೆ. ಹೆಚ್ಚು ಕಡಿಮೆ ಕಾಂಗ್ರೆಸ್ ಇಂದು ಕೇಂದ್ರದಿಂದ ಹಿಡಿದು ದೇಶದ ಎಲ್ಲ ರಾಜ್ಯಗಳಲ್ಲೂ ತನ್ನ ಅಧಿಕಾರ ಕಳೆದುಕೊಂಡು (ಆರು ರಾಜ್ಯಗಳನ್ನು ಹೊರತುಪಡಿಸಿ) ಮುಳುಗುತ್ತಿರುವ ಹಡಗಾಗಿದೆ.

ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್,​ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿ ಎದುರು ಹೀನಾಯವಾಗಿ ಸೋತು ಸುಣ್ಣವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ, ಆಡಳಿತ ಪಕ್ಷದ ಎದುರು ಅಧಿಕೃತವಾಗಿ ವಿರೋಧ ಪಕ್ಷವಾಗಿ ಹೊರಹೊಮ್ಮಲು ಬೇಕಾದ ಸಂಖ್ಯಾ ಬಲವನ್ನು ಗಳಿಸಲು 140 ವರ್ಷ ಇತಿಹಾಸ ಹೊಂದಿರುವ ಪಕ್ಷಕ್ಕೆ ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದೆ.

ಬಿಜೆಪಿಯ ಎರಡು ಕನಸುಗಳಲ್ಲಿ ಒಂದು ಕನಸು ಇನ್ನೇನು ನೆರವೇರಲಿದೆ. ಅದು ಗಾಂಧಿ ಮುಕ್ತ ಕಾಂಗ್ರೆಸ್​. ಕಳೆದ ಎರಡೂವರೆ ವರ್ಷದ ಹಿಂದೆ ಪಕ್ಷದ ಜವಾಬ್ದಾರಿ ವಹಿಸಿಕೊಂಡ ರಾಹುಲ್ ಗಾಂಧಿ ಇಂದು ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಳೆದ 21 ವರ್ಷಗಳಲ್ಲಿ ಗಾಂಧಿ ಕುಟುಂಬದಲ್ಲೇ ಹಾಸುಹೊಕ್ಕಾಗಿದ್ದ ಕಾಂಗ್ರೆಸ್​ ಅಧ್ಯಕ್ಷ ಪಟ್ಟ ಹೊರಗಿನವರ ಪಾಲಾಗುತ್ತಿದೆ.

ರಾಹುಲ್​ ಗಾಂಧಿಗೂ ಮುನ್ನ ಅವರ ತಾಯಿ ಸೋನಿಯಾ ಗಾಂಧಿ ಸತತ 18 ವರ್ಷಗಳ ಕಾಲ ಕಾಂಗ್ರೆಸ್​ ಅಧಿನಾಯಕಿಯಾಗಿದ್ದರು. ಈ 21 ವರ್ಷ ಕಾಂಗ್ರೆಸ್​ ಅಧ್ಯಕ್ಷ ಪಟ್ಟ ಗಾಂಧಿ ಕುಟುಂಬದವರ ಪಾಲಾಗಿತ್ತು. ಇದಕ್ಕೂ ಮುನ್ನ 1991ರಿಂದ 98ರವರೆಗೆ ನೆಹರು-ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು.

ಸ್ವಾತ್ರಂತ್ರ್ಯಾನಂತರದ ಭಾರತದಲ್ಲಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನವನ್ನು ನೆಹರು ಅವರಿಂದ ಹಿಡಿದು ಹಲವು ನಾಯಕರು ನಿಭಾಯಿಸಿದ್ದರು. ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದ್ದ ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ 1978ರಿಂದ ನಿಂತುಹೋಯಿತು. 1978ರಿಂದ 1991ರವರೆಗೆ ಇಂದಿರಾ ಗಾಂಧಿ ಮತ್ತು ರಾಜೀವ್​ ಗಾಂಧಿ ಇಬ್ಬರೇ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದರು. 1978ರಲ್ಲಿ ಎರಡನೇ ಬಾರಿಗೆ ಇಂದಿರಾ ಗಾಂಧಿ ಕಾಂಗ್ರೆಸ್​ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ, 1984ರಂದು ತಮ್ಮ ಅಂಗರಕ್ಷಕರ ಗುಂಡಿಗೆ ಬಲಿಯಾದ್ದರಿಂದ ಪ್ರಧಾನಿ ಸ್ಥಾನದ ಜೊತೆಗೆ ಕಾಂಗ್ರೆಸ್​ ಅಧ್ಯಕ್ಷ ಪಟ್ಟವನ್ನು ಅವರ ಮಗನಾದ ರಾಜೀವ್ ಗಾಂಧಿ ವಹಿಸಿಕೊಂಡರು. ಇವರು ಕೂಡ 1991ರಂದು ಎಲ್​ಟಿಟಿಇ ಬಾಂಬ್​ ದಾಳಿಗೆ ಹತರಾದ ಬಳಿಕ, ರಾಜೀವ್​ ಗಾಂಧಿ ಜವಾಬ್ದಾರಿಯನ್ನು ಹೊತ್ತುಕೊಳ್ಳುವಂತೆ ಅವರ ಪತ್ನಿ ಸೋನಿಯಾ ಗಾಂಧಿ ಮೇಲೆ ಒತ್ತಡ ಬಂದಿತ್ತಾದರೂ ಅವರು ಅದನ್ನು ನಿರಾಕರಿಸಿದರು. ಹೀಗಾಗಿ ಕಾಂಗ್ರೆಸ್​ ಅಧ್ಯಕ್ಷ ಸ್ಥಾನವನ್ನು ಪಿ.ವಿ.ನರಸಿಂಹರಾವ್​ ಅವರು ವಹಿಸಿಕೊಂಡರು. ಸತತ ಐದು ವರ್ಷಗಳ ಕಾಲ ಪಿವಿಎನ್​ ಈ ಜವಾಬ್ದಾರಿ ನಿರ್ವಹಿಸಿದ ಬಳಿಕ 1996ರಲ್ಲಿ ಕೇಸರಿ ಸೀತಾರಾಮ್​ ಕಾಂಗ್ರೆಸ್​ ಅಧ್ಯಕ್ಷರಾದರು.

ಇದನ್ನು ಓದಿ: ರಾಹುಲ್ ಗಾಂಧಿ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಆಯ್ಕೆ ಸಾಧ್ಯತೆ

ಅದಾದ ಎರಡು ವರ್ಷಗಳ ಸೋನಿಯಾ ಗಾಂಧಿ ಕಾಂಗ್ರೆಸ್​ ಅಧ್ಯಕ್ಷ ಪಟ್ಟ ಅಲಂಕರಿಸಿದರು. 1998ರಿಂದ 2017ರವರೆಗೆ ಇವರು ಆ ಸ್ಥಾನದಲ್ಲಿ ಮುಂದುವರೆಯುವ ಮೂಲಕ ಕಾಂಗ್ರೆಸ್​ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಗೆ ಅಧ್ಯಕ್ಷರಾದ ಕೀರ್ತಿಗೆ ಭಾಜನರಾದರು. ಬಳಿಕ ಈ ಸ್ಥಾನವನ್ನು ತಮ್ಮ ಮಗನಿಗೆ ಧಾರೆ ಎರೆದರು.ಈಗ ರಾಹುಲ್​ ಗಾಂಧಿ ಅವರು ಅಧ್ಯಕ್ಷ ಸ್ಥಾನವನ್ನು ತೊರೆದಿದ್ದಾರೆ. ಹೀಗಾಗಿ ಕಾಂಗ್ರೆಸ್​  ಅಧ್ಯಕ್ಷ ಪಟ್ಟ 21 ವರ್ಷಗಳ ಬಳಿಕ ಗಾಂಧಿ ಕುಟುಂಬದವರಲ್ಲದ ನಾಯಕರ ಪಾಲಾಗುತ್ತಿದೆ. ಈ ಸ್ಥಾನಕ್ಕೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಖರ್ಗೆ ಕಾಂಗ್ರೆಸ್​ ಅಧ್ಯಕ್ಷರಾದರೆ, ಕರ್ನಾಟಕದಿಂದ ಈ ಸ್ಥಾನಕ್ಕೆ ಆಯ್ಕೆಯಾದವರಲ್ಲಿ ಎರಡನೇಯವರಾಗುತ್ತಾರೆ. ಈ ಮೊದಲು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್​.ನಿಜಲಿಂಗಪ್ಪ 1968ರಿಂದ 69ರ ಅವಧಿಗೆ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು.

  • ರಮೇಶ್​ ಹಂಡ್ರಂಗಿ


First published: July 4, 2019, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading