10 ವರ್ಷಗಳ ಕಾಲ ಒಂದೇ ಕೋಣೆಯಲ್ಲಿ ಬಂಧಿ, ಕಡೆಗೂ ಕೇರಳದ ಜೋಡಿಗೆ ಅಜ್ಞಾತವಾಸದಿಂದ ಮುಕ್ತಿ, ಮದುವೆ

Rahman and Sajitha Love Story: ರೆಹಮಾನ್​ ಮತ್ತು ಸಜಿತಾ ಮೂಲತಃ ಕೇರಳದ ಅಳಿಯೂರಿನವರು. 2010ರಲ್ಲಿ 18 ವರ್ಷದವಳಾಗಿದ್ದ ಸಜಿತಾ ರೆಹಮಾನ್​ ಜೊತೆ ಮದುವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಳು

Rahman and Sajitha

Rahman and Sajitha

 • Share this:
  Rahman Sajitha Love Story: ಇದೊಂದು ಅಪರೂಪದ ಪ್ರೇಮಕಥೆ. ಹತ್ತು ವರ್ಷಗಳ ಕಾಲ ಯುವ ಪ್ರೇಮಿಗಳು ಕುಟುಂಬದವರ ವಿರೋಧ ಕಟ್ಟಿಕೊಂಡು ಕದ್ದುಮುಚ್ಚಿ ಒಂದೇ ಕೋಣೆಯಲ್ಲಿ ಹತ್ತು ವರ್ಷ ಕಳೆದಿದ್ದರು. ಹೊರ ಜಗತ್ತಿಗೆ ತಿಳಿದರೆ ಪ್ರಾಣಕ್ಕೇ ಅಪಾಯ ಎಂಬತಿತ್ತು ಪರಿಸ್ಥಿತಿ. ಈ ಕಾರಣಕ್ಕೆ ಹುಡುಗ ಹುಡುಗಿಯನ್ನು ಹತ್ತು ವರ್ಷಗಳ ಕಾಲ ಕೋಣೆಯಿಂದ ಆಚೆ ಬರದಂತೆ ನೋಡಿಕೊಂಡಿದ್ದ. ಹಾಗಂತ ಆಕೆಯನ್ನು ಕಟ್ಟಿಹಾಕಿರಲಿಲ್ಲ. ಆಕೆಗೂ ಇದಕ್ಕೆ ಸಮ್ಮತಿಯಿತ್ತು. ಒಟ್ಟಿನಲ್ಲಿ ಇಬ್ಬರೂ ಒಂದಾಗಿರಬೇಕು ಎಂಬುದಷ್ಟೇ ಅವರ ಮುಖ್ಯ ಗುರಿಯಾಗಿತ್ತು. ಹತ್ತು ವರ್ಷಗಳ ಅಜ್ಞಾತವಾಸದ ನಂತರ ಇಂದು ಕಡೆಗೂ ಪ್ರೇಮಿಗಳು ಅಧಿಕೃತವಾಗಿ ಮದುವೆಯಾಗಿದ್ದಾರೆ. ರೆಹಮಾನ್​ ಮತ್ತು ಸಜಿತಾ ಇವರೇ ಈ ಅಪೂರ್ವ ಪ್ರೇಮಿಗಳು.

  ಕೇರಳದ ನೆನ್ಮಾರದಲ್ಲಿ ಇಂದು ಇಬ್ಬರೂ ಮದುವೆಯಾಗಿದ್ದಾರೆ. ರಿಜಿಸ್ಟರ್​ ಮದುವೆಯಾಗುವ ಮೂಲಕ ಹತ್ತು ವರ್ಷಗಳ ಅಜ್ಞಾತವಾಸವನ್ನು ಇಂದಿಗೆ ಅಂತ್ಯಗೊಳಿಸಿದ್ದಾರೆ. ಹತ್ತು ವರ್ಷಗಳ ಕಾಲ ಇವರು ಒಟ್ಟಾಗಿದ್ದರು ಎಂಬುದು ಹೊರ ಜಗತ್ತಿಗೆ ತಿಳಿದೇ ಇರಲಿಲ್ಲ. ಇಬ್ಬರ ಮನೆಯವರೂ ಕಾಣೆಯಾಗಿರುವ ದೂರು ನೀಡಿದ್ದರು, ಆದರೆ ಇಬ್ಬರೂ ಇಷ್ಟು ವರ್ಷ ಒಟ್ಟಾಗಿಯೇ ಇದ್ದರು.

  ರೆಹಮಾನ್​ ಮತ್ತು ಸಜಿತಾ ಮೂಲತಃ ಕೇರಳದ ಅಳಿಯೂರಿನವರು. 2010ರಲ್ಲಿ 18 ವರ್ಷದವಳಾಗಿದ್ದ ಸಜಿತಾ ರೆಹಮಾನ್​ ಜೊತೆ ಮದುವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಳು. ರೆಹಮಾನ್​ ಎಲೆಕ್ಟ್ರಿಕ್​ ಕೆಲಸ, ಪೇಂಟಿಂಗ್​ ರೀತಿಯ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಆಕೆ ಮನೆ ಬಿಟ್ಟು ಓಡಿ ಬಂದ ಮೇಲೆ ಸಣ್ಣದೊಂದು ರೂಂ ಮಾಡಿ ಇಬ್ಬರೂ ವಾಸಿಸಲು ಆರಂಭಿಸಿದ್ದರು.

  ಇದೇ ವರ್ಷದ ಮಾರ್ಚ್​ ತಿಂಗಳಲ್ಲಿ ಇಬ್ಬರೂ 10 ವರ್ಷಗಳ ಬಳಿಕ, ಸಣ್ಣ ಕೋಣೆಯಿಂದ ವಿತಾನಸ್ಸೆರಿಯ ಚಿಕ್ಕದೊಂದು ಮನೆಗೆ ಶಿಫ್ಟ್​ ಆಗಿದ್ದರು. ಈಗಲೂ ರೆಹಮಾನ್​ ಕಾಣೆಯಾಗಿದ್ದಾನೆ ಎಂದು ಕುಟುಂಬಸ್ಥರು ನೀಡಿದ ದೂರಿನ ಅನ್ವಯ ತನಿಖೆ ನಡೆಯುತ್ತಲೇ ಇದೆ. ಇತ್ತೀಚೆಗೆ ರೆಹಮಾನ್​ ಅಣ್ಣ, ನೆನ್ಮಾರದಲ್ಲಿ ರೆಹಮಾನ್​ನನ್ನು ನೋಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ನಂತರ ಪೊಲೀಸರು ತನಿಖೆ ನಡೆಸಿದಾಗ ಇಬ್ಬರ ಪ್ರೀತಿಯ ಕಥೆ ಬೆಳಕಿಗೆ ಬಂದಿದೆ.

  ಮೊದಲಿಗೆ, ಸಜಿತಾಳನ್ನು ರೆಹಮಾನ್​ ಕೂಡಿಟ್ಟಿದ್ದ ಎಂದೇ ನಂಬಲಾಗಿತ್ತು. ಆದರೆ ವಿಚಾರಣೆ ವೇಳೆ, ತನ್ನ ಇಚ್ಚೆಯಂತೆಯೇ ರೆಹಮಾನ್​ ನಾನು ಒಂದು ಕೋಣೆಯಲ್ಲಿದ್ದೆವು. ನಾನು ಆಚೆ ಬಂದರೆ ನಮ್ಮಿಬ್ಬರ ಪ್ರೀತಿಗೆ ಅಡೆತಡೆಗಳು ಉಂಟಾಗುವ ಸಾಧ್ಯತೆಯಿತ್ತು, ರೆಹಮಾನ್​ನನ್ನು ನಾನು ಪ್ರೀತಿಸುತ್ತೇನೆ ಎಂದು ಸಜಿತಾ ಹೇಳಿಕೆ ನೀಡಿದ್ದಳು. ಇದರ ಬಳಿಕ ಪ್ರಕರಣವನ್ನು ಪೊಲೀಸರು ಕ್ಲೋಸ್​ ಮಾಡಿದ್ದರು.

  ಇದನ್ನೂ ಓದಿ: ಮಾಜಿ ಶಾಸಕನ ಮಗನ ಮೇಲೆ ಅತ್ಯಾಚಾರ ಆರೋಪ: ಮದುವೆಯಾಗುವುದಾಗಿ ನಂಬಿಸಿ ಮೋಸ

  ಇದೀಗ ಬುಧವಾರ ಬೆಳಗ್ಗೆ ಸಜಿತಾ ಮತ್ತು ರೆಹಮಾನ್​ ಮದುವೆಯಾಗಿದ್ದಾರೆ. ಪುರೋಗಮನ ಕಲಾ ಸಾಹಿತ್ಯ ಸಂಗಮ್​ ಕೊಲ್ಲಂಕೋಡು ಸಮೀತಿ ಮದುವೆಯ ಖರ್ಚನ್ನು ಭರಿಸಿದೆ. ಈ ಮೂಲಕ ಹತ್ತು ವರ್ಷಗಳ ಪ್ರೀತಿಗೆ ಕಡೆಗೂ ನ್ಯಾಯ ಸಿಕ್ಕಂತಾಗಿದೆ.
  ಮದುವೆಯ ಬಳಿಕ ಪ್ರತಿಕ್ರಿಯೆ ನೀಡಿದ ರೆಹಮಾನ್​, ಅಧಿಕೃತ ಮದುವೆಯೊಂದೇ ನಮ್ಮಿಬ್ಬರಿಗೆ ರಕ್ಷೆ ನೀಡುತ್ತದೆ ಎಂಬ ಅರಿವು ನಮಗಿತ್ತು. ಈಗ ನಮಗೆ ನೆಮ್ಮದಿ ಸಿಕ್ಕಿದೆ, ಸುರಕ್ಷಿತ ಭಾವ ಈಗ ನಮ್ಮದಾಗಿದೆ ಎಂದು ರೆಹಮಾನ್​ ಹೇಳಿದ್ದಾನೆ. ಮದುವೆಗೆ ಸಾಕ್ಚಿಯಾದ ನೆನ್ಮಾರ ಶಾಸಕ ಕೆ ಬಾಬು ಪ್ರತಿಕ್ರಿಯಿಸಿ, ಇಬ್ಬರೂ ನೆಮ್ಮದಿಯ ಜೀವ ನಡೆಸಲಿ ಎಂಬುದಷ್ಟೇ ನಮ್ಮ ಆಶಯ. ಒಂದು ಮನೆ ಕಟ್ಟಿಕೊಳ್ಳಬೇಕು ಎಂಬುದು ಇಬ್ಬರ ಆಸೆಯಾಗಿದೆ, ಅದಕ್ಕೆ ಬೇಕಾದ ಸಹಾಯವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

  ಇದನ್ನೂ ಓದಿ: ಹೈದರಾಬಾದ್; 6 ವರ್ಷದ ಮಗುವನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಪರಾರಿ; ಎನ್​ಕೌಂಟರ್​ಗೆ ಒತ್ತಾಯ

  ಇಬ್ಬರ ಮುಂದಿನ ಜೀವನಕ್ಕೆ ಸಹಕಾರಿಯಾಗುವಂತೆ ಸರ್ಕಾರವೂ ಸಹಾಯಕ್ಕೆ ಬರುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ಕುಟುಂಬಸ್ಥರಿಗೆ ಹೆದರಿ, ಜೀವನದ ಅತ್ಯಮೂಲ್ಯ 10 ವರ್ಷಗಳನ್ನು ಇಬ್ಬರೂ ಒಂದೇ ಕೋಣೆಯಲ್ಲಿ ಕಳೆದಿದ್ದಾರೆ. ಮುಂದಿನ ಜೀವನವಾದರೂ ಸುಖಕರವಾಗಿರಲಿ ಎಂಬುದು ನಮ್ಮ ಆಶಯ.
  Published by:Sharath Sharma Kalagaru
  First published: