ನವ ದೆಹಲಿ (ಆಗಸ್ಟ್ 08) ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿ ದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ದೇಶದ ಜನ ಜೀವ ಉಳಿಸಿಕೊಂಡರೆ ಸಾಕು ಎಂಬ ಭಯದಲ್ಲಿ ಅನ್ಯ ದೇಶಗಳಿಗೆ ಪಲಾಯನ ಮಾಡಲು ವಿಮಾನ ನಿಲ್ದಾಣಗಳ ಲ್ಲಿ ಜಮಾಯಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಈ ನಡುವೆ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿ ಕೊಂಡ ಬಳಿಕ ಅಲ್ಲಿನ ನಾಗರಿಕರು ಪಾಕಿಸ್ತಾನಕ್ಕಿಂತ ಭಾರತದ ಮೇಲೆ ಹೆಚ್ಚು ನಿರೀಕ್ಷೆ ಮತ್ತು ಭರವಸೆಗಳನ್ನು ಹೊಂದಿದ್ದಾರೆ ಎಂದು ಕಾಬೂಲ್ನಿಂದ ಇಂದು ದೇಶಕ್ಕೆ ಹಿಂದಿರುಗಿರುವ ಪತ್ರಕರ್ತೆ ಕನಿಕಾ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
It took me 27 hours to reach from Kabul to Delhi. There was tension, security in numbers, a new exposure to the process of military evacuation. An experience of a lifetime. Safely home. 😃 pic.twitter.com/61tbfxdans
— Kanika Gupta| خبرنگار (@kanika0509) August 17, 2021
ಪತ್ರಕರ್ತೆ ಕನಿಕಾ ಗುಪ್ತಾ ಅಫ್ಘಾನ್ ಗಲಭೆ ಶುರುವಾದಾಗಿನಿಂದ ರಾಜಧಾನಿ ಕಾಬೂಲ್ ನಲ್ಲೇ ವಾಸ್ತವ್ಯ ಹೂಡಿದ್ದು, ಅಲ್ಲಿನ ಸುದ್ದಿಗಳನ್ನು ಭಾರತಕ್ಕೆ ತಲುಪಿಸುತ್ತಿದ್ದರು. ಆದರೆ, ಇದೀಗ ಕಾಬೂಲ್ ತಾಲಿಬಾನಿಗಳ ಕೈವಶವಾದ ಕಾರಣ ಅವರು ಅನಿರ್ವಾಯವಾಗಿ ಕಾಬೂಲ್ ನಗರವನ್ನು ತೊರೆಯಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರನ್ನು ಭಾರತೀಯ ವಾಯುಪಡೆಯ (ಐಎಎಫ್) ವಿಶೇಷ ವಿಮಾನದಲ್ಲಿ ನಿನ್ನೆ ಭಾರತೀಯ ರಾಯಭಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆಗೆ ಕಾಬೂಲ್ನಿಂದ ಭಾರತಕ್ಕೆ ಕರೆತರಲಾಗಿತ್ತು.
ಭಾರತಕ್ಕೆ ಹಿಂದಿರುಗುತ್ತಿದ್ದಂತೆ ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಇಲ್ಲಿ ರಾಷ್ಟ್ರೀಯ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಕನಿಕಾ ಗುಪ್ತಾ, "ತಾಲಿಬಾನಿಗಳು ನನ್ನನ್ನು ಮತ್ತು ನನ್ನ ಇನ್ನೊಬ್ಬ ಸಹೋದ್ಯೋಗಿಯನ್ನು ಹುಡುಕುತ್ತಿದ್ದಾಗ ನಾನು ಅಲ್ಲಿಂದ ಹೊರಡಲು ನಿರ್ಧರಿಸಿದೆ. ತಾಲಿಬಾನಿಗಳು ನಗರವನ್ನು ವಶಪಡಿಸಿಕೊಳ್ಳುತ್ತಿದ್ದಂತೆಯೇ, ನಾನು ಭಾರತದ ರಾಯಭಾರಿ ಕಚೇರಿಯೊಂದಿಗೆ ಮಾತನಾಡಿದೆ.
ಹೇಗಾದರೂ ರಾಯಭಾರಿ ಕಚೇರಿ ತಲುಪಬೇಕಿದ್ದ ನಮ್ಮನ್ನು ತಾಲಿಬಾನಿಗಳು ಚೆಕ್ಪಾಯಿಂಟ್ನಲ್ಲಿ ತಡೆದು ನಿಲ್ಲಿಸಿದ್ದರು. ನಾನು ಮಹಿಳೆಯಾಗಿದ್ದರಿಂದ ಅವರು ನನ್ನೊಂದಿಗೆ ಮಾತನಾಡುವುದನ್ನು ತಪ್ಪಿಸುತ್ತಿದ್ದರು. ನನ್ನ ಡ್ರೈವರ್ನೊಂದಿಗೆ ಮಾತನಾಡುತ್ತಿದ್ದರು. ನಾವು ವಾಪಸ್ ಹೋಗಬೇಕೆಂದು ಅವರು ಒತ್ತಾಯಿಸುತ್ತಿದ್ದರು, ಸುಮಾರು 2 ಗಂಟೆಗಳ ನಂತರ ಅವರು ನಮ್ಮನ್ನು ರಾಯಭಾರ ಕಚೇರಿಗೆ ಕರೆದೊಯ್ದರು" ಎಂದು ಕನಿಕಾ ಗುಪ್ತಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
"ನಾವು ನಿನ್ನೆ ರಾತ್ರಿ 10 ಗಂಟೆಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ಬಂದೆವು. ಆದರೆ, ವಿಮಾನ ನಿಲ್ದಾಣದ ಗೇಟ್ಗಳ ಹೊರಗೆ ಸಾವಿರಾರು ಜನರು ಒಳಗೆ ಹೋಗಲು ಪ್ರಯತ್ನಿಸುತ್ತಿದ್ದರು. ಅವರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಲು ಪ್ರಯತ್ನಿಸಿದರು. ನಾವು ವಿಮಾನ ನಿಲ್ದಾಣದ ಹೊರಗೆ ಐದು ಗಂಟೆಗಳ ಕಾಲ ಕಾದಿದ್ದೇವೆ. ಅಂತಿಮವಾಗಿ, ನಾವು ಯುಎಸ್ ಮತ್ತು ಟರ್ಕಿಶ್ ಪಡೆಗಳಿಂದ ನಿಯೋಜಿಸಲ್ಪಟ್ಟ ಇನ್ನೊಂದು ಗೇಟ್ ಬಳಸಿ ಒಳಗೆ ಹೋಗಬೇಕಾಯಿತು. ಬೆಳಿಗ್ಗೆ 6 ಗಂಟೆಗೆ ನಾವು ಭಾರತಕ್ಕೆ ಹೊರಟೆವು. 11 ಕ್ಕೆ ಇಲ್ಲಿಗೆ ಬಂದೆವು. ಏರ್ ಫೋರ್ಸ್ ನಮ್ಮನ್ನು ಬಹಳ ಕಾಳಜಿ ವಹಿಸಿ ಕರೆ ತಂದಿತು. ಅವರಿಗೆ ನಾನು ಕೃತಜ್ಞಳಾಗಿದ್ದೇನೆ" ಎಂದು ಪತ್ರಕರ್ತೆ ಹೇಳಿದ್ದಾರೆ.
ಕಾಬೂಲ್ ಮತ್ತು ಅಫ್ಘಾನ್ನ ಭವಿಷ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿರುವ ಕನಿಕಾ ಸಿಂಗ್, "ಪ್ರಸ್ತುತ ತಾಲಿಬಾನಿಗಳಿಂದ ಅಲ್ಲಿನ ಮಹಿಳೆಯರಿಗೆ ಅತಿ ಹೆಚ್ಚು ಭಯವಿದೆ. ಅವರು ತಮ್ಮನ್ನು ತಾವು ಬಟ್ಟೆಯಿಂದ ಸರಿಯಾಗಿ ಮುಚ್ಚಿಕೊಳ್ಳದಿದ್ದರೆ ಆಸಿಡ್ ದಾಳಿಯಂತಹ ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ತಾಲಿಬಾನಿಗಳು ಇಂದು ಯಾವುದೇ ತಾರತಮ್ಯ ಇಲ್ಲ ಎಂದು ಮಾತಾಡುವಾಗ ಅದರ ಬಗ್ಗೆ ವಿಶ್ವಾಸ ಮೂಡುವುದಿಲ್ಲ.
ನಾನು ಕಾಬೂಲ್ನಲ್ಲಿ ಕಳೆದ 1 ಅಥವಾ 2 ದಿನಗಳಲ್ಲಿ ಬಹಳಷ್ಟು ಬದಲಾವಣೆಯನ್ನು ನೋಡಿದೆ. ಬ್ಯೂಟಿ ಪಾರ್ಲರ್ಗಳಿಗೆ ಬಣ್ಣ ಬಳಿಯಲಾಗುತ್ತಿತ್ತು, ಬೀದಿಗಳಲ್ಲಿ ಮಹಿಳೆಯರಿರಲಿಲ್ಲ. ಕಾಬೂಲ್ ಕ್ರಿಯಾತ್ಮಕ, ಬುದ್ಧಿವಂತ ಮತ್ತು ಫ್ಯಾಶನ್ ಮಹಿಳೆಯರನ್ನು ಹೊಂದಿದೆ. ಆದರೆ, ಇನ್ನು ಅವರಿಗೆ ಅಲ್ಲಿ ಭವಿಷ್ಯವಿಲ್ಲದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ