Afghanistan- ಪಂಜಶಿರ್ ಪ್ರಾಂತ್ಯದಲ್ಲಿ 13 ತಾಲಿಬಾನ್ ಉಗ್ರರನ್ನು ಸಂಹರಿಸಿದ ಪ್ರತಿರೋಧ ಪಡೆ

ಹಲವು ದಶಕಗಳಿಂದ ಯಾರಿಗೂ ತಲೆಬಾಗದ ಅಫ್ಘಾನಿಸ್ತಾನದ ಪಂಜಶಿರ್ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳುವ ತಾಲಿಬಾನ್ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ. ಇಂದು ನಡೆದ ಕಾಳಗದಲ್ಲಿ ಪಂಜಶಿರ್ ಪಡೆ 13 ತಾಲಿಬಾನಿಗಳನ್ನ ಸಂಹರಿಸಿದೆ.

ಅಫ್ಘಾನಿಸ್ತಾನ ಬಿಕ್ಕಟ್ಟು

ಅಫ್ಘಾನಿಸ್ತಾನ ಬಿಕ್ಕಟ್ಟು

 • Share this:
  ಕಾಬೂಲ್, ಸೆ. 02: ಅಫ್ಘಾನಿಸ್ತಾನವನ್ನು ಬಹುತೇಕ ವಶಕ್ಕೆ ಪಡೆದಿರುವ ತಾಲಿಬಾನ್ ಉಗ್ರ ಸಂಘಟನೆಗೆ ಆ ದೇಶದ ಪಂಜಶೀರ್ ಪ್ರಾಂತ್ಯ ತಲೆನೋವಾಗಿ ನಿಂತಿದೆ. ಏನೆಲ್ಲಾ ಪ್ರಯತ್ನ ಮಾಡಿದರೂ ಪಂಜಶೀರ್​ನ ಪ್ರತಿರೋಧ ದಾಟಲು ತಾಲಿಬಾನ್​ಗೆ ಸಾಧ್ಯವಾಗುತ್ತಿಲ್ಲ. ಪಂಜಶೀರ್ ಅನ್ನ ವಶಪಡಿಸಿಕೊಳ್ಳಲು ತಾಲಿಬಾನ್ ಮಾಡಿದ ಪ್ರಯತ್ನವೆಲ್ಲಾ ವಿಫಲವಅಗುತ್ತಿದೆ. ಪಂಜಶಿರ್​ನ ಚಿಕ್ರಿನೋ ಜಿಲ್ಲೆಯಲ್ಲಿ ನಡೆದ ಕಾಳದಲ್ಲಿ ರಾಷ್ಟ್ರೀಯ ಪ್ರತಿರೋಧ ಪಡೆಯ (National Resistance Force) ದಾಳಿಗೆ ತಾಲಿಬಾನ್ ತತ್ತರಿಸಿದೆ. 13 ತಾಲಿಬಾನ್ ಸದಸ್ಯರು ಹತ್ಯೆಯಾಗಿದ್ಧಾರೆ. ತಾಲಿಬಾನ್​ನ ಒಂದು ಯುದ್ಧ ಟ್ಯಾಂಕ್ ಕೂಡ ನಾಶವಾಗಿದೆ ಎಂದು ಪಂಜಶಿರ್​ನ ಸ್ಥಳೀಯ ಮಾಧ್ಯಮದಲ್ಲಿ ವರದಿಯಾಗಿದೆ. ಇದೇ ವೇಳೆ, ಪಂಜಶಿರ್​ನಲ್ಲಿ ನಡೆಯುತ್ತಿರುವ ಪ್ರತಿರೋಧವು ಕೇವಲ ಪಂಜಶೀರ್​ಗೆ ಮಾತ್ರ ಸೀಮಿತವಲ್ಲ. ಇದು ಎಲ್ಲಾ ಆಫ್ಘನ್ ಪ್ರಜೆಗಳ ಪ್ರತಿರೋಧವಾಗಿದೆ ಎಂದು ಮಾಜಿ ಅಫ್ಘನ್ ಉಪಾಧ್ಯಕ್ಷ ಅಮ್ರುಲ್ಲಾ ಸಾಲೆಹ ಹೇಳಿದ್ದಾರೆ. ಪಂಜಶೀರ್​ನಲ್ಲಿನ ಈ ಹೋರಾಟವು ಶೋಷಣೆ, ಪ್ರತೀಕಾರ, ವಂಚನೆ, ಕೆಟ್ಟ ಆಲೋಚನೆಯ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಬಯಸುವ ಜನರಿಗೆ ಆಶಾಕಿರಣವಾಗಿದೆ ಎಂದು ಸಾಲೆಹ್ ಹೇಳಿದ್ಧಾರೆ.

  ಅಫ್ಘಾನಿಸ್ತಾನದಲ್ಲಿ ಪಂಜಶಿರ್ ಪ್ರಾಂತ್ಯಕ್ಕೆ ಬಹಳ ವಿಶೇಷತೆ ಇದೆ. ಇದು ತುರ್ಕ ಮತ್ತು ಉಜ್ಬೆಕಿ ಜನಾಂಗದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರಾಂತ್ಯವಾಗಿದೆ. ಇದನ್ನ ವಶಪಡಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗಿಲ್ಲ. ರಷ್ಯನ್ನರು ಅಫ್ಘಾನ್ ಮೇಲೆ ಆಕ್ರಮಣ ಮಾಡಿದಾಗಲೂ ಪಂಜಶಿರ್ ದಕ್ಕಲಿಲ್ಲ. ರಷ್ಯನ್ನರು ಇಲ್ಲಿ ದಶಕದ ಕಾಲ ಇದ್ದಾಗ ಪಂಜಶಿರ್ ಪ್ರಾಂತ್ಯಕ್ಕೆ ಶಸ್ತ್ರಾಸ್ತ್ರ ಕೊಟ್ಟಿ ಗಟ್ಟಿಗೊಳಿಸಿದ್ದು ಅಮೆರಿಕವೇ ಎನ್ನಲಾಗಿದೆ. 1996ರಲ್ಲಿ ತಾಲಿಬಾನ್ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗಲೂ ಪಂಜಶಿರ್ ಅನ್ನು ವಶಕ್ಕೆ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿ ಅಧಿಕಾರಕ್ಕೆ ಮರಳಿದ ಬಳಿಕ ತಾಲಿಬಾನ್ ತನ್ನ ವಿಶೇಷ ಪಡೆಗಳನ್ನ ಪಂಜಶೀರ್ ಆಕ್ರಮಣಕ್ಕೆ ತಯಾರು ಮಾಡಿ ಕಳುಹಿಸಿದೆ. ಪ್ರಾಂತ್ಯಕ್ಕೆ ಎಲ್ಲಾ ಸರಬರಾಜನ್ನೂ ಬಂದ್ ಮಾಡಿ ಒತ್ತಡ ಹಾಕುತ್ತಿದೆ. ಆದರೂ ರಾಷ್ಟ್ರೀಯ ಪ್ರತಿರೋಧ ಪಡೆಯನ್ನ ದಾಟಿ ಹೋಗಲು ಸಾಧ್ಯವಾಗಿಲ್ಲ.

  ಇದನ್ನೂ ಓದಿ: Akhundzada- ಅಫ್ಘಾನಿಸ್ತಾನದ ಹೊಸ ತಾಲಿಬಾನ್ ಸರ್ಕಾರಕ್ಕೆ ಮುಲ್ಲಾ ಅಖುಂದ್​ಝಾದ ಮುಖ್ಯಸ್ಥ?

  ಪಂಜಶಿರ್ ಪ್ರಾಂತ್ಯದಲ್ಲಿ ಅಪ್ರತಿಮ ರಾಷ್ಟ್ರಭಕ್ತರು ಇದ್ದಾರೆನ್ನಲಾಗಿದೆ. ತಾಲಿಬಾನ್​ಗೆ ಮುಂಚೆ ಇದ್ದ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿದ್ದ ಅಮ್ರುಲ್ಲಾ ಸಾಲೆಹ್ ಅವರು ಇದೇ ಪ್ರಾಂತ್ಯದವರು. ಇಲ್ಲಿಯೇ ಅವರು ಸಮರ ಕಲೆಗಳನ್ನ ಕಲಿತವರು. ರಮ್ಯ ಮನೋಹರ ಕಣಿವೆಗಳಿರುವ ಈ ಪ್ರಾಂತ್ಯದ ಜನರು ಗೆರಿಲ್ಲಾ ಯುದ್ಧದಲ್ಲಿ ಸಿದ್ಧಹಸ್ತರೆನ್ನಲಾಗಿದೆ. ತಾಲಿಬಾನ್ ಆಕ್ರಮಣ ಮಾಡಿದಾಗ ಸಾವಿರಾರು ಅಫ್ಘನ್ ಯೋಧರು ತಪ್ಪಿಸಿಕೊಂಡು ಈ ಪ್ರಾಂತ್ಯಕ್ಕೆ ಬಂದು ಪ್ರತಿಹೋರಾಟಕ್ಕೆ ಬಲತುಂಬಿದ್ಧಾರೆ. ಅಷ್ಟೇ ಅಲ್ಲ, ಈ ಪ್ರಾಂತ್ಯಕ್ಕೆ ಬರಲು ಏಕೈಕ ದಾರಿ ಇದ್ದು ಅದು ಕಣಿವೆಯ ದುರ್ಗಮ ಹಾದಿಯಲ್ಲಿ ಸಾಗಿ ಬರಬೇಕಾಗುತ್ತದೆ. ಗುಡ್ಡಗಳ ಮೇಲೆ ಎಚ್ಚರಿಕೆಯಿಂದ ಕಾವಲು ಕಾಯುವ ರೆಸಿಸ್ಟೆನ್ಸ್ ಫೋರ್ಸ್ ಪಡೆ ಯಾವುದೇ ಶತ್ರುಗಳನ್ನ ಹಿಮ್ಮೆಟ್ಟಿಸುವ ಛಾತಿ ಹೊಂದಿದೆ.

  ಇನ್ನು, ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ಸಂಪೂರ್ಣ ಕಾಲ್ತೆಗೆದ ಬೆನ್ನಲ್ಲೇ ಅಲ್ಲಿ ಆಹಾರ ಅಭಾವ ಕಾಡುತ್ತಿದೆ. ವಿಶ್ವಸಂಸ್ಥೆ ಒದಗಿಸಿದ್ದ ಆಹಾರ ಸಾಮಗ್ರಿಗಳ ದಾಸ್ತಾನು ಈ ತಿಂಗಳವರೆಗೂ ಮಾತ್ರ ಇರಲಿದೆ. ತುರ್ತಾಗಿ ಆಹಾರ ವ್ಯವಸ್ಥೆ ಮಾಡಲು ಅಫ್ಘಾನಿಸ್ತಾನಕ್ಕೆ 200 ಮಿಲಿಯನ್ ಡಾಲರ್ (1460 ಕೋಟಿ ರೂಪಾಯಿ) ಹಣದ ಅಗತ್ಯತೆ ಇದೆ ಎಂದು ವಿಶ್ವಸಂಸ್ಥೆಯಲ್ಲಿರುವ ಆಫ್ಘನ್ ಪ್ರತಿನಿಧಿಯೊಬ್ಬರು ಹೇಳಿದ್ಧಾರೆ. ಸದ್ಯ ದೇಶದ ಜನರಿಗೆ ದಿನವೂ ಒಂದೊತ್ತಿನ ಊಟ ಸಿಗುತ್ತಿದೆ ಎಂಬುದು ಖಾತ್ರಿ ಇಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
  Published by:Vijayasarthy SN
  First published: