Kabul, Afghanistan: ಇಡೀ ಜಗತ್ತೇ ಈಗ ಅಫ್ಘನಿಸ್ತಾನದ ಕಡೆ ತಿರುಗಿ ನೋಡುತ್ತಿದೆ. ವರ್ಷಗಟ್ಟಲೆ ತಾಲಿಬಾನ್ (Taliban) ಉಗ್ರರಿಂದ ಸಾಧ್ಯವಾದಷ್ಟರ ಮಟ್ಟಿಗೆ ಬಚಾವಾಗಿದ್ದ ಅಫ್ಘನಿಸ್ತಾನ ಈಗ ಧಿಡೀರನೆ ಚೂರು ಚೂರಾಗಿದೆ. ಜನ ಜೀವಭಯದಿಂದ ಬದುಕುಳಿದರೆ ಸಾಕು ಎಂದು ಎಂಥಾ ಸನ್ನಿವೇಶಕ್ಕೂ ಸಿದ್ಧರಾಗ್ತಿದ್ದಾರೆ. ಆದರೆ ಇದುವರಗೆ ಈ ದೇಶದ ಮುಂದಾಳತ್ವ ವಹಿಸಿದ್ದ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಮಾತ್ರ ತಾಲಿಬಾನ್ ಬರುತ್ತಿದೆ ಎಂದು ತಿಳಿಯುತ್ತಿದ್ದಂತೆ ಪರಾರಿಯಾಗಿಬಿಟ್ಟಿದ್ದಾನೆ. ಹಾಗಂತ ಅವನೇನು ಬರಿಗೈಯಲ್ಲಿ ಓಡಿಹೋಗಿಲ್ಲ..ಹೋಗುತ್ತಾ ದೊಡ್ಡ ಖಜಾನೆಯನ್ನೇ ತೆಗೆದುಕೊಂಡು ಹೋಗಿದ್ದಾನೆ. ಬರೋಬ್ಬರಿ 4 ಕಾರುಗಳು ಮತ್ತು ಒಂದು ಹೆಲಿಕಾಪ್ಟರ್ ತುಂಬಾ ಹಣ ತುಂಬಿಕೊಂಡು ಎಸ್ಕೇಪ್ ಆಗಿದ್ದಾನೆ. ಇದಿಷ್ಟೇ ಅಲ್ಲ, ಇದರ ಅನೇಕ ಪಟ್ಟು ಹಣವನ್ನು ಅವನ ಅಧಿಕೃತ ನಿವಾಸದಲ್ಲಿ ಇಟ್ಟಿದ್ದಾನಂತೆ. ಅದೆಲ್ಲವೂ ಈಗ ತಾಲಿಬಾನಿಗಳ ಕೈಸೇರಿರುವ ಶಂಕೆ ಇದೆ. ಈ ಎಲ್ಲಾ ವಿಚಾರಗಳನ್ನು ಕಾಬುಲ್ನಲ್ಲಿರುವ ರಷ್ಯಾ ರಾಯಭಾರಿ ಕಚೇರಿ ಹೇಳಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಅಶ್ರಫ್ ಘನಿ ತನ್ನ ಅರಮನೆಯಲ್ಲಿ ರಹಸ್ಯವಾಗಿ ಭಾರೀ ಪ್ರಮಾಣದ ಹಣ ಶೇಖರಿಸಿ ಇಟ್ಟಿದ್ದನಂತೆ. ಆದರೆ ತಾಲಿಬಾನ್ ಉಗ್ರರು ಕಾಬುಲ್ನ್ನು ತಮ್ಮ ವಶಕ್ಕೆ ಪಡೆಯಲು ಬೇಗನೇ ಬಂದ ಹಿನ್ನೆಲೆಯಲ್ಲಿ ಸಿಕ್ಕಷ್ಟು, ಸಾಧ್ಯವಾದಷ್ಟು ಹಣವನ್ನು ತುಂಬಿಕೊಂಡು ಅಶ್ರಫ್ ಘನಿ ಓಟಕಿತ್ತಿದ್ದಾನೆ. ಅರ್ಜೆಂಟಿಗೆ ಎಂದು ಆತ ತುಂಬಿಕೊಂಡ ಹಣವೇ ನಾಲ್ಕು ಕಾರು, ಒಂದು ಹೆಲಿಕಾಪ್ಟರ್ನಲ್ಲಿ ಇಡುವಷ್ಟು ಇತ್ತು ಎಂದರೆ ಆತನ ಬಳಿ ಇನ್ನೆಷ್ಟು ಹಣ ಶೇಖರಣೆಯಾಗಿರಬೇಡ? ಅರಮನೆಯಲ್ಲಿ ರಹಸ್ಯವಾಗಿ ಇಟ್ಟ ಹಣವನ್ನು ಆತ ಕೊಂಡೊಯ್ಯಲು ಸಾಧ್ಯವಾಗದೆ ಅಲ್ಲೇ ಬಿಟ್ಟು ಹೋಗಿದ್ದಾನಂತೆ.
ಇಷ್ಟೊಂದು ಹಣ ತೆಗೆದುಕೊಂಡು ಹೋದರೂ ಅಶ್ರಫ್ ಘನಿಗೆ ಸದ್ಯ ನೆಮ್ಮದಿಯಾಗಿ ಇರಲು ಸಾಧ್ಯವಾಗಿಲ್ಲ. ಕಾಬುಲ್ನಿಂದ ಹೊರಟ ಘನಿ ತಜಕಿಸ್ತಾನಕ್ಕೆ ತೆರಳಿದ್ದಾರೆ ಎನ್ನಲಾಗಿತ್ತು. ಆದರೆ ಅಶ್ರಫ್ ವಿಮಾಣ ಲ್ಯಾಂಡ್ ಆಗೋಕೆ ತಜಕಿಸ್ತಾನ ಒಪ್ಪಲಿಲ್ಲ. ಆದ್ದರಿಂದ ಬೇರೆ ಮಾರ್ಗವಿಲ್ಲದೆ ಸದ್ಯ ಓಮನ್ನಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಅಲ್ಲಿಂದ ಅಮೇರಿಕಾಗೆ ಪ್ರಯಾಣ ಬೆಳೆಸುವ ತಯಾರಿ ಮಾಡಿಕೊಳ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.
ಹಣ ತುಂಬಿಕೊಂಡು ದೇಶ ತೊರೆಯುವ ಕೆಲವೇ ಗಂಟೆಗಳ ಮುಂಚೆ ಅಶ್ರಫ್ ಘನಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಯಾವುದೇ ಕಾರಣಕ್ಕೂ ಅಫ್ಘನಿಸ್ತಾನದಲ್ಲಿ ರಕ್ತಪಾತವಾಗಲು ತಾನು ಬಿಡುವುದಿಲ್ಲ ಎಂದಿದ್ದರು. ಇದು ಅಲ್ಲಿನ ಜನರಿಗೆ ಸ್ವಲ್ಪವಾದರೂ ಧೈರ್ಯ ನೀಡಿತ್ತೇನೋ. ಆದ್ರೆ ಇದಾಗಿ ಕೆಲವೇ ಗಂಟೆಗಳಲ್ಲಿ ಖುದ್ದು ಅಧ್ಯಕ್ಷರೇ ದೇಶ ಬಿಟ್ಟು ಓಡಿ ಹೋಗಿದ್ದಾರೆ ಎಂದರೆ ಅಲ್ಲಿನ ಜನರ ಪರಿಸ್ಥಿತಿ ಹೇಗಿರಬೇಡ. ಸದ್ಯಕ್ಕಂತೂ ಅಫ್ಘನಿಸ್ತಾನದ ಜನ ದೇಶ ಬಿಟ್ಟು ಹೊರಗೆ ಓಡಿ ಹೋಗಲು ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ