Terror in Afghanistan: ಅಫ್ಘಾನಿಸ್ತಾನದ ಪರಿಸ್ಥಿತಿ ಹೇಳತೀರದು, ದಿನದಿಂದ ದಿನಕ್ಕೆ ಆಫ್ಘಾನಿಸ್ತಾನದಲ್ಲಿ ರಕ್ಕಸರ ಅಟ್ಟಹಾಸ ಮಿತಿಮೀರುತ್ತಿದೆ. ಇಲ್ಲಿನ ಜನರ ಸ್ಥಿತಿ ದೇವರೇ ಗತಿ. ತಾಲಿಬಾನ್ ಸರ್ಕಾರಕ್ಕೆ (Taliban Rule) ಇಲ್ಲಿನ ಜನ ರೋಸಿ ಹೋಗಿದ್ದಾರೆ. ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬೇರೆಡೆ ಹೋಗುವ (Flee the country) ಆಲೋಚನೆಯಲ್ಲಿದ್ದಾರೆ ಅಲ್ಲಿನ ಜನ. ಮನೆಯಿಂದ ಆಚೆ ಬಂದರೆ ಎಲ್ಲಿ ನಮ್ಮನ್ನ ಕೊಲ್ಲುತ್ತಾರೆ ಅನ್ನೋ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಹೊರ ಹೋಗಲು ಆಗದೆ, ಒಳಗಿರಲು ಆಗದೆ ಚಿತ್ರಹಿಂಸೆ ಪಡುತ್ತಿದ್ದಾರೆ. ನಮ್ಮನ್ನ ಬೆಂಬಲಿಸಿ ಬದುಕಿ, ಇಲ್ಲವಾದರೆ ಸಾಯಿರಿ ಎಂಬ ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿದ್ದಾರೆ. ಹೇಗಾದರು ತಪ್ಪಿಸಿಕೊಳ್ಳಬೇಕೆಂದು ಧೈರ್ಯ ಮಾಡಿ ಸಾವಿರಾರು ಆಫ್ಘನಿಗಳು ಮುಂದಾಗಿದ್ದರು. ಆಫ್ಘಾನಿಸ್ತಾನದ ದಕ್ಷಿಣ ಗಡಿಯಾದ ಸ್ಪಿನ್ ಬೋಲ್ಡಾಕ್ (Spin Boldak) ಗಡಿ ಮೂಲಕ ಪಾಕಿಸ್ತಾನ(Pakistan)ಕ್ಕೆ ತೆರಳುವ ಪ್ರಯತ್ನವನ್ನ ಅಫ್ಘಾನಿಸ್ತಾನದ ಪ್ರಜೆಗಳು ಮಾಡಿದ್ದಾರೆ. ಆದರೆ ಅವರ ಪ್ರಯತ್ನವೆಲ್ಲವು ವಿಫಲಗೊಂಡಿದೆ. ಬಾರ್ಡರ್ ನಲ್ಲಿ ಕಾದುಕುಳಿತಿದ್ದ ತಾಲಿಬಾನಿಗಳು ಅವರನ್ನ ಹೊರ ಕಳುಹಿಸಲು ನಿರಾಕರಿಸಿದ್ದಾರೆ.
ಎಲ್ಲಾ ಗಡಿಗಳನ್ನು ಕಬ್ಜಾ ಮಾಡಿಕೊಂಡಿರುವ ತಾಲಿಬಾನಿಗಳು, ಅಫ್ಘಾನಿಸ್ತಾನದ ಸಾರ್ವಜನಿಕರನ್ನು ಹೊರಹೋಗದಂತೆ ತಡೆಯುತ್ತಿದ್ದಾರೆ.ಇಲ್ಲಿ ಮಾಡಲು ಯಾವುದೇ ಕೆಲಸವಿಲ್ಲ, ಹೀಗಾಗಿ ನಾವು ಗುಳೆ ಹೊರಟಿದ್ದೇವೆ. ಆದರೆ ನಮ್ಮನ್ನ ಇವರು ಹೊರಗೆ ಕಳಿಸಲು ಬಿಡುತ್ತಿಲ್ಲ. ಗಡಿಯತ್ತ ಒಂದು ಹೆಜ್ಜೆ ಮುಂದಿಟ್ಟರೆ
ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಅಂತ ಅಲ್ಲಿನ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. "ಇದು ನಿಮ್ಮ ದೇಶ, ಈ ದೇಶ ಬಿಟ್ಟು ಎಲ್ಲಿ ಹೋಗುತ್ತೀರಾ. ಇಲ್ಲೇ ಇದ್ದು ನಮ್ಮ ಜೊತೆ ಕೈಜೋಡಿಸಿ" ಎಂದು ತಾಲಿಬಾನಿಗಳು ಅಫ್ಘಾನಿಸ್ತಾನದ ಜನರಿಗೆ ಒತ್ತಾಯಿಸಿದ್ದಾರೆ.
ದೇಶ ಬಿಟ್ಟು ಓಡಿ ಹೋಗಲು ಕಾಯ್ತಿದ್ದಾರೆ ಜನ
ಪ್ರತಿದಿನ, 8,000 ರಿಂದ 9,000 ಜನರು ಸೂಕ್ತ ದಾಖಲೆ ಇಲ್ಲದೆ ಗಡಿ ದಾಟಲು ಪ್ರಯತ್ನಿಸುತ್ತಿದ್ದಾರೆ. ಗಡಿಯಲ್ಲಿ
ಸರ್ಪಗಾವಲು ಹಾಕಿರುವ ತಾಲಿಬಾನಿಗಳು ಅವರನ್ನೆಲ್ಲ ತಡೆದು ವಾಪಸ್ ಕಳಿಸುತ್ತಿದ್ದಾರೆ. ಇನ್ನು ಕಂದಹಾರ್ ಪ್ರಾಂತ್ಯದ ತಾಲಿಬಾನ್ ಅಧಿಕಾರಿ ಮೌಲ್ವಿ ನೂರ್ ಮೊಹಮ್ಮದ್ ಸಯೀದ್, ದೇಶವನ್ನು ತೊರೆಯದಂತೆ ಜನರಿಗೆ ಹೇಳಿದ್ದಾರೆ. ನೀವೇನಾದರೂ ಈ ರೀತಿ ಅಫ್ಘಾನಿಸ್ತಾನವನ್ನು ತೊರೆದರೆ ನಮ್ಮ ಸಂಸ್ಕೃತಿ, ಗೌರವವನ್ನ ನಾವೇ ಹಾಳು ಮಾಡಿಕೊಂಡಂತೆ ಎಂದು ಹೇಳಿದ್ದಾರೆ. ಸ್ವಲ್ಪ ದಿನ ಇಲ್ಲೇ ಇರಿ, ನಿಮಗೆ ಬೇಕಿರುವ ಎಲ್ಲಾ ಸವಲತ್ತುಗಳನ್ನು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Taliban| ತಾಲಿಬಾನ್ಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ; ವರದಿ ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್ನಿಂದ ಹಲ್ಲೆ
ಅಫ್ಘನ್ನರ ಬಳಿ ಈಗ ಹಣವಿಲ್ಲ!
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶ ಪಡೆದ ನಂತರ, ವಿದೇಶಗಳಿಂದ ಬರುತ್ತಿದ್ದ ನೆರವಿನ ಹಣವು ಸಂಪೂರ್ಣವಾಗಿ ನಿಂತುಹೋಗಿದೆ. ಹೆಚ್ಚಿನ ಅಫ್ಘನ್ನರು ಆರ್ಥಿಕ ಕುಸಿತದ ಅಂಚಿನಲ್ಲಿರುವ ದೇಶವನ್ನು ಬಿಡಲು ನಾ ಮುಂದು ತಾ ಮುಂದು ಎಂಬಂತೆ ತುದಿಗಾಲಲ್ಲಿ ನಿಂತಿದ್ದಾರೆ. ಒಂದೆಡೆ
ಉಗ್ರರ ಅಟ್ಟಹಾಸ, ಮತ್ತೊಂದೆಡೆ ಬರಗಾಲ ಅಫ್ಘನಿಸ್ತಾನದ ರೈತರನ್ನು ಚಿಂತೆಗೀಡುಮಾಡಿದೆ. ಗಡಿದಾಟಿ ಬೇರೆಡೆ ಹೋಗದೆ ಬೇರೆ ದಾರಿಯೇ ಇಲ್ಲ ಅಂತಿದ್ದಾರೆ ಇಲ್ಲಿನ ರೈತರು.
ಗಡಿ ಸಂಪೂರ್ಣ ಲಾಕ್
ಇನ್ನೂ ಕೋವಿಡ್ ಹಾಗೂ
ತಾಲಿಬಾನಿಗಳ ಅಟ್ಯಾಕ್ ಗೂ ಮುನ್ನ ಸ್ಪಿನ್ ಬೋಲ್ಡಾಕ್ ಗಡಿಯಲ್ಲಿ ಹೆಚ್ಚಿನ ಜನರು ಸಂಚರಿಸುತ್ತಿದ್ದರು. ಪ್ರತಿದಿನ ಸಾವಿರಾರು ಮಂದಿ ಕೆಲಸಕ್ಕೆಂದು ಗಡಿ ಮೂಲಕ ಹೋಗಿ ಬರುತ್ತಿದ್ದರು. ಆದರೆ ಈ ಗಡಿಯನ್ನು ತಾಲಿಬಾನಿಗಳು ಕಬ್ಜಾ ಮಾಡಿಕೊಳ್ಳುತ್ತಿದ್ದಂತೆ ಗಡಿಯ ಎಲ್ಲಾ ಗೇಟ್ ಗಳನ್ನು ಮುಚ್ಚಲಾಗಿದೆ. ದುಡಿಯಲು ಕೆಲಸವಿಲ್ಲದೆ, ತಿನ್ನಲು ಆಹಾರವಿಲ್ಲದೆ, ಮಲಗಲು ಸೂಕ್ತ ಜಾಗವಿಲ್ಲದೆ ಅಅಫ್ಘಾನಿಸ್ತಾನದ ಪ್ರಜೆಗಳ ಬದುಕು ಬೀದಿಗೆ ಬಿದ್ದಿದೆ.
(ವರದಿ - ವಾಸುದೇವ್. ಎಂ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ