ಅಫ್ಘಾನಿಸ್ತಾನ ಆಳಲು ತಾಲಿಬಾನ್​ಗೆ ಆಗಲ್ಲ; ನುಂಗಲು ಪಾಕ್​ಗೆ ಆಗಲ್ಲ: ಹಂಗಾಮಿ ಅಧ್ಯಕ್ಷ ಸಾಲೆಹ್

ಉಗ್ರಗಾಮಿಗಳಿಗೆ ಹದರಿ ಕೂರುವ ಅಧ್ಯಾಯ ನಿಮ್ಮ ಇತಿಹಾಸ ಪುಟದಲ್ಲಿ ಮೂಡಲು ಅವಕಾಶ ಕೊಡದಿರಿ ಎಂದು ಆಫ್ಘಾನಿಸ್ತಾನ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಾಲೆಹ್ ಕರೆ ನೀಡಿದ್ದಾರೆ. ರಾಷ್ಟ್ರಪ್ರೇಮಿ ಶಕ್ತಿಗಳನ್ನ ಒಗ್ಗೂಡಿಸುವ ಪ್ರಯತ್ನ ಅವರು ಮಾಡುತ್ತಿದ್ದಾರೆ.

ಅಮ್ರುಲ್ಲಾ ಸಾಲೆಹ್

ಅಮ್ರುಲ್ಲಾ ಸಾಲೆಹ್

  • News18
  • Last Updated :
  • Share this:
ಕಾಬೂಲ್: ಅಫ್ಗಾನಿಸ್ತಾನದ ಬಹುತೇಕ ಭಾಗವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿದೆ. ತಾಲಿಬಾನಿಗಳು ರಾಜಧಾನಿ ಕಾಬೂಲ್ ಪ್ರವೇಶ ಮಾಡುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಕಾಲ್ಕಿತ್ತು ವಿದೇಶದಲ್ಲಿ ತಲೆಮರೆಸಿಕೊಂಡಿದ್ಧಾರೆ. ತಾಲಿಬಾನ್ ಎರಡು ದಶಕಗಳ ನಂತರ ಅಧಿಕಾರ ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ. ಇದೇ ವೇಳೆ, ಅಫ್ಘಾನ್ ಉಪಾಧ್ಯಕ್ಷ ಅಮ್ರುಲ್ಲಾ ಸಾಲೆಹ್ ಅವರು ಹೊಸ ಸರ್ಕಾರ ಸ್ಥಾಪನೆ ಆಗುವವರೆಗೂ ತಾನು ಹಂಗಾಮಿ ಅಧ್ಯಕ್ಷ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ. ಭಾನುವಾರ ಅವರು ಭೂಗತ ಆಗುವ ಮುನ್ನ ಕೆಲ ಮಹತ್ವದ ಸಂದೇಶಗಳನ್ನ ದೇಶವಾಸಿಗಳಿಗೆ ನೀಡಿದ್ದಾರೆ. ಭಯೋತ್ಪಾದಕ ಸಂಘಟನೆಗಳಿಗೆ ತಲೆಬಾಗದಿರಿ ಎಂದು ರಾಷ್ಟ್ರವಾದಿ ಶಕ್ತಿಗಳಿಗೆ ಅವರು ಕರೆ ನೀಡಿದ್ಧಾರೆ. ಹಾಗೆಯೇ, ಪಾಕಿಸ್ತಾನಕ್ಕಾಗಲೀ, ತಾಲಿಬಾನ್​ಗಾಗಲೀ ಅಫ್ಘಾನಿಸ್ತಾನವನ್ನು ಆಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

“ರಾಷ್ಟ್ರಗಳು ಕಾನೂನಿಗೆ ಬೆಲೆ ಕೊಡಬೇಕೇ ಹೊರತು ಹಿಂಸಾಚಾರಕ್ಕಲ್ಲ. ಅಫ್ಗಾನಿಸ್ತಾನದಂಥ ದೊಡ್ಡ ದೇಶವನ್ನು ನುಂಗಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ತಾಲಿಬಾನ್​ಗೂ ಈ ದೊಡ್ಡ ದೇಶವನ್ನು ಆಳಲು ಸಾಧ್ಯವಿಲ್ಲ. ಉಗ್ರ ಶಕ್ತಿಗಳಿಗೆ ತಲೆಬಾಗಿ ಅವಮಾನ ಆಗುವಂತಹ ಅಧ್ಯಾಯವು ನಿಮ್ಮ ಇತಿಹಾಸ ಪುಟದಲ್ಲಿ ಬರಲು ಅವಕಾಶ ಕೊಡದಿರಿ” ಎಂದು ಅಮ್ರುಲ್ಲಾ ಸಾಲೆಹ್ ತಮ್ಮ ದೇಶದ ಜನತೆಗೆ ಕರೆ ನೀಡಿದ್ದಾರೆ.

“ನನ್ನ ಮಾತನ್ನು ಅಲಿಸುತ್ತಿರುವ ಜನರಿಗೆ ನಾನು ನಿರಾಸೆ ಮಾಡುವುದಿಲ್ಲ. ನಾನು ಯಾವತ್ತೂ ಕೂಡ ತಾಲಿಬಾನ್​ಗೆ ಶರಣಾಗಲಾರೆ” ಎಂದು ಭಾನುವಾರ ಅವರು ಟ್ವೀಟ್ ಮಾಡಿದ್ದರು. ಅದಾದ ಬಳಿಕ ಅವರು ಭೂಗತರಾಗಿದ್ದಾರೆ. ಮರುದಿನ, ಅಂದರೆ ಸೋಮವಾರ ಅವರು ತಮ್ಮ ಗುರು ಹಾಗೂ ತಾಲಿಬಾನ್ ವಿರೋಧಿ ಹೋರಾಟಗಾರ ಅಹ್ಮದ್ ಶಾ ಮಸೂದ್ ಅವರ ಮಗ ಅಹ್ಮದ್ ಮಸ್ಸೂದ್ ಅವರ ಜೊತೆ ಇರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದವು. ಅಹ್ಮದ್ ಮಸೂದ್ ಅವರ ಕೈಗೆಳಗೆ ಪ್ರಬಲ ಹೋರಾಟಗಾರರ ಪುಟ್ಟ ಪಡೆ ಇದೆ. ಕೆಲ ವರದಿಗಳ ಪ್ರಕಾರ, ಸಾಲೆಹ್ ಮತ್ತು ಮಸೂದ್ ಇಬ್ಬರೂ ಪಂಜಶೀರ್ ಎಂಬ ಕಣಿವೆ ಪ್ರದೇಶದಲ್ಲಿ ರಕ್ಷಣೆ ಪಡೆದಿದ್ದಾರೆನ್ನಲಾಗಿದೆ.

ಇದನ್ನೂ ಓದಿ: Afghanistan Crisis| "ಶೂಗಳನ್ನು ಧರಿಸಲೂ ಸಾಧ್ಯವಾಗಲಿಲ್ಲ": ಪಲಾಯನದ ವಿವರ ಬಿಚ್ಚಿಟ್ಟ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ

ಹಿಂದೂಕುಶ್ ಪರ್ವತಕ್ಕೆ ಹೊಂದಿಕೊಂಡಂತಿರುವ ಪಂಜಶೀರ್ ಕಣಿವೆ ಎಂದರೆ ದೇಶವಿರೋಧಿಗಳು ಬೆಚ್ಚಿಬೀಳುತ್ತಾರೆ. ಯಾವ ವಿದೇಶೀ ಶಕ್ತಿಗಳಿಗೂ ಈ ಕಣಿವೆಯನ್ನ ವಶಪಡಿಸಿಕೊಳ್ಳಲು ಆಗಿಲ್ಲ. ತಾಲಿಬಾನ್​ಗೂ ಇದು ಸಾಧ್ಯವಾಗಿಲ್ಲ. ಇಡೀ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವಶ ಆಗದಿರುವ ಪ್ರದೇಶ ಇದ್ದರೆ ಅದು ಪಂಜಶೀರ್ ಮಾತ್ರವೇ. ಅಷ್ಟರ ಮಟ್ಟಿಗೆ ಈ ಕಣಿವೆ ಪ್ರದೇಶವು ಪ್ರತಿರೋಧ ಶಕ್ತಿಯ ಆವಾಸಸ್ಥಾನವಾಗಿದೆ. ಅಮ್ರುಲ್ಲಾ ಸಾಲೆಹ್ ಅವರು ಇದೇ ಪಂಜಶೀರ್ ಪ್ರಾಂತ್ಯದಲ್ಲೇ ಹುಟ್ಟಿದವರು. ಇಲ್ಲಿಯೇ ಅವರು ಹೋರಾಟದ ಕಲೆ ಕಲಿತಿದ್ಧಾರೆ.

ಕುತೂಹಲದ ವಿಷಯವೆಂದರೆ ಅಮ್ರುಲ್ಲಾ ಸಾಲೆಹ್ ಅವರು ತಾಲಿಬಾನ್ ಅನ್ನ ಸೋಲಿಸಲು ಪಂಜಶೀರ್​ನಿಂದಲೇ ತಂತ್ರಗಾರಿಕೆ ನಡೆಸುತ್ತಿದ್ಧಾರೆ. ರಾಷ್ಟ್ರವಾದಿ ಶಕ್ತಿಗಳನ್ನ ಒಗ್ಗೂಡಿಸುವ ಪ್ರಯತ್ನದಲ್ಲಿದ್ದಾರೆ. ಅವರ ಜೊತೆಗೆ ಅಹ್ಮದ್ ಮಸೂದ್ ಅವರ ಶಕ್ತಿ ಇದೆ. ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಖಾನ್ ಮೊಹಮ್ಮದಿ ಕೂಡ ಕೈ ಜೋಡಿಸಿದ್ಧಾರೆ. ಈ ಮೂವರು ವ್ಯಕ್ತಿಗಳು ತಾಲಿಬಾನ್ ವಿರೋಧಿ ಶಕ್ತಿಯನ್ನ ಒಂದೆಡೆ ಸೇರಿಸಿ ಗೆರಿಲ್ಲಾ ಮಾದರಿಯ ಆಕ್ರಮಣದ ಮೂಲಕ ತಾಲಿಬಾನ್ ಅನ್ನು ಸೋಲಿಸಲು ತಂತ್ರ ರೂಪಿಸುತ್ತಿದ್ದಾರೆ. ಇವರ ಕರೆಯ ಮೇರೆಗೆ ತಾಲಿಬಾನ್ ವಿರೋಧಿಯಾಗಿರುವ ಸೈನಿಕರು ಪಂಜಶೀರ್​ನತ್ತ ಧಾವಿಸಿ ಹೋಗುತ್ತಿದ್ದಾರೆಂಬ ಸುದ್ದಿ ಇದೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: