ಕಾಬೂಲ್ (ಆಗಸ್ಟ್ 26); ಉಗ್ರ ತಾಲಿಬಾನ್ (Taliban) ಸಂಘಟನೆ ಅಫ್ಘಾನಿಸ್ತಾನ ವನ್ನು (Afghanistan) ಆಕ್ರಮಿಸಿ ತನ್ನ ಅಧಿಕಾರವನ್ನು ಸ್ಥಾಪಿಸಿದೆ. ಈ ಮೂಲಕ 20 ವರ್ಷಗಳ ಪ್ರಜಾಪ್ರಭುತ್ವ (Democracy) ಕೊನೆಗೂ ಅಂತ್ಯವಾಗಿದ್ದು, ಮತ್ತೆ ಉಗ್ರರು ತಮ್ಮ ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದು ವರದಿಯಾಗುತ್ತಲೇ ಇದೆ. ಕಳೆದ ವಾರ ಅಫ್ಘಾನ್ ಸ್ವಾತಂತ್ರ್ಯ ದಿನಾಚರಣೆಯ ದಿನ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದ ತಾಲಿಬಾನ್ ಉಗ್ರರು, ಇದೀಗ ಮನೆ ಮನೆಗ ನುಗ್ಗಿ ಅಡಿಗೆ ಮಾಡಿಕೊಂಡುವಂತೆ ಜನರನ್ನು ಹಿಂಸಿಸುತ್ತಿದ್ದಾರೆ ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳ ಸಂಖ್ಯೆಯೂ ಅಧಿಕವಾಗುತ್ತಿದೆ ಎಂಬ ವರದಿ ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಅಫ್ಘನ್ ಮಹಿಳೆಯರಿಗೆ ಎಚ್ಚರಿಕೆ ನೀಡಿರುವ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ (Zabiullah Mujahid), "ಈಗಿನ ತಾಲಿಬಾನ್ ಆಡಳಿತದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳು ತ್ತೇವೆ. ಹೀಗಾಗಿ ತಾಲಿಬಾನ್ ಸರ್ಕಾರ, ಅಫ್ಘಾನ್ ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ" ಎಂದು ತಿಳಿಸಿದ್ದಾರೆ.
"ಮಹಿಳೆಯರು ತಮ್ಮ ಸುರಕ್ಷತೆಗಾಗಿ ಕೆಲಸಕ್ಕೆ ಹೋಗಬಾರದು, ನಮ್ಮ ಸೈನಿಕರ ಗುಂಪು ಇನ್ನು ಹಳೆಯ ಮನಸ್ಥಿತಿಯಲ್ಲಿಯೇ ಇದೆ. ಹೊಸ ಬದಲಾವಣೆ ಬರಲು ಸಮಯ ಬೇಕಾಗಿದೆ. ಹೀಗಾಗಿ ಮಹಿಳೆಯರು ಮನೆಯಲ್ಲಿಯೇ ಇರುವ ಕ್ರಮವು ಅಗತ್ಯವಾಗಿದೆ. ಏಕೆಂದರೆ ತಾಲಿಬಾನ್ ಬದಲಾಗುತ್ತಲೇ ಇದೆ ಮತ್ತು ಅವರಿಗೆ ಮಹಿಳೆಯರಿಗೆ ಗೌರವ ಕೊಡುವ ತರಬೇತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ತರಬೇತಿಯನ್ನು ನೀಡುವ ಮೂಲಕ ಮಹಿಳೆಯರಿಗೆ ರಕ್ಷಣೆ ನೀಡಲಾಗುವುದು" ಎಂದು ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
1996 ಮತ್ತು 2001 ರ ನಡುವೆ ತಾಲಿಬಾನ್ ಅಧಿಕಾರದಲ್ಲಿದ್ದಾಗ ಮಹಿಳೆಯರು ಕೆಲಸಕ್ಕೆ ಹೋಗುವುದನ್ನು ನಿಷೇಧಿಸಿತ್ತು. ಅವರನ್ನು ಮನೆಯಿಂದ ಹೊರಹೋಗದಂತೆ ತಡೆಹಿಡಿದಿತ್ತು. ಕಾಲುಗಳು ಕೂಡ ಕಾಣದಂತೆ ಸಂಪೂರ್ಣ ದೇಹವನ್ನು ಬುರ್ಖಾ ಹಾಕುವ ಮೂಲಕ ಮುಚ್ಚುವಂತೆ ಒತ್ತಾಯಿಸಲಾಗಿತ್ತು. ಅಲ್ಲದೆ, ನಿಯಮ ಮೀರಿದ ಮಹಿಳೆಯರಿಗೆ ಶಿಕ್ಷೆ ನೀಡಿದ ನಿದರ್ಶನಗಳೂ ಸಾಕಷ್ಟಿವೆ.
ಈ ನಡುವೆ ಈ ಬಾರಿ ತಾಲಿಬಾನ್ ತನ್ನ ಹೊಸ ಯುಗವು ಹೆಚ್ಚು ಆಶಾದಾಯಕವಾಗಿರುತ್ತದೆ ಎಂದು ಭರವಸೆ ನೀಡಿತ್ತು. ಆದರೆ, ತಾಲಿಬಾನ್ ನಾಯಕರು ಮಹಿಳಾ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಭರವಸೆ ನೀಡಲು ನಿರಾಕರಿಸಿದ್ದಾರೆ. ಈಗಾಗಲೇ ಅನೇಕ ಮಹಿಳೆಯರು ಹಿಂಸೆಯನ್ನು ಎದುರಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನವನ್ನು ತೊರೆದ ಒಟ್ಟು ಜನಸಂಖ್ಯೆ 19,000. ಇದರಲ್ಲಿ 11,200 ಜನರು 42 ಯುಎಸ್ ಮಿಲಿಟರಿ ವಿಮಾನಗಳಲ್ಲಿ ಸ್ಥಳಾಂತರಗೊಂಡಿದ್ದಾರೆ. ಇತರ 7,800 ಜನರನ್ನು ಒಕ್ಕೂಟದ ಪಾಲುದಾರರಿಂದ ಸ್ಥಳಾಂತರಿಸಲಾಗಿದೆ ಎಂದು ಬುಧವಾರ ಘೋಷಿಸಿಸಲಾಗಿದೆ.
ಇನ್ನು, ಅಫ್ಘಾನ್‌ನಿಂದ ಭಾರತಕ್ಕೆ ಬಂದಿರುವ ನೂರಾರು ಅಫ್ಘಾನಿಸ್ತಾನದ ಪ್ರಜೆಗಳು ನಿರಾಶ್ರಿತರ ಕಾರ್ಡ್‌ಗಾಗಿ ಒತ್ತಾಯಿಸಿ ಬುಧವಾರ ನವದೆಹಲಿಯಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ನಿರಾಶ್ರಿತರ ಕಾರ್ಡ್‌ಗಾಗಿ ಅಫ್ಘಾನ್ ನಿರಾಶ್ರಿತರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನಿರಾಶ್ರಿತರ ಕಾರ್ಡುಗಳು ಸಿಗದ ಹಿನ್ನೆಲೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ