ಅಫ್ಘಾನ್‌ನಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ: ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ

ಪೋಲಿಯೋ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ ಹಾಕಲು ನಾವು ನಿರ್ಧರಿಸಿದ್ದೇವೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಭಾನುವಾರ ಟ್ವೀಟ್ ಮಾಡಿದ್ದಾರೆ.

ಆಫ್ಘನ್​ನಿಂದ ಮರಳಿದವರಿಗೆ ಲಸಿಕೆ ನೀಡುತ್ತಿರುವುದು.

ಆಫ್ಘನ್​ನಿಂದ ಮರಳಿದವರಿಗೆ ಲಸಿಕೆ ನೀಡುತ್ತಿರುವುದು.

 • Share this:
  ನವ ದೆಹಲಿ (ಆಗಸ್ಟ್​ 22); ಅಫ್ಘಾನಿಸ್ತಾನದಲ್ಲಿ ಉಗ್ರಗಾಮಿ ತಾಲಿಬಾನ್ ಪಡೆ ತನ್ನ ಅಧಿಪತ್ಯವನ್ನು ಸಾಧಿಸುತ್ತಿದ್ದಂತೆ ಎಲ್ಲಾ ದೇಶಗಳೂ ಕಾಬೂಲ್​ನಲ್ಲಿದ್ದ ತಮ್ಮ ರಾಯಭಾರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಂ ಡಿತ್ತು. ಅದರಂತೆ ಭದ್ರತಾ ದೃಷ್ಟಿಯಿಂದ ಭಾರತ ಸರ್ಕಾರ ಸಹ ಎರಡು ವಿಶೇಷ ವಿಮಾನಗಳಲ್ಲಿ ತನ್ನ ರಾಯಭಾರ ಕಚೇರಿ ಅಧಿಕಾರಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆಸಿಕೊಂಡಿದೆ. ಆದರೆ, ಅಫ್ಘಾನಿಸ್ತಾನದಿಂದ ವಾಪಸ್ ಆದವರಿಗೆ ಪೋಲಿಯೋ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಉಚಿತವಾಗಿ ಪೋಲಿಯೋ ಲಸಿಕೆ ಹಾಕಲು ಭಾರತ ನಿರ್ಧರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ತಿಳಿಸಿದ್ದಾರೆ.

  ಅಫ್ಘಾನಿಸ್ತಾನದಿಂದ ವಾಪಸ್ ಬಂದವರು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವನ್ನು ಆರೋಗ್ಯ ಸಚಿವರು ಹಂಚಿಕೊಂಡಿದ್ದಾರೆ. ವಿಶ್ವದಲ್ಲಿ ಅಫ್ಘಾನಿಸ್ಥಾನ ಮತ್ತು ಪಾಕಿಸ್ತಾನ ಮಾತ್ರ ಪೋಲಿಯೊ ರೋಗವನ್ನು ಹೊಂದಿರುವ ಎರಡು ದೇಶಗಳಾಗಿವೆ.  "ಪೋಲಿಯೋ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಅಫ್ಘಾನಿಸ್ತಾನದಿಂದ ಮರಳಿದವರಿಗೆ ಉಚಿತ ಪೋಲಿಯೋ ಲಸಿಕೆ ಹಾಕಲು ನಾವು ನಿರ್ಧರಿಸಿದ್ದೇವೆ" ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಭಾನುವಾರ ಟ್ವೀಟ್ ಮಾಡಿದ್ದಾರೆ.

  ಕಳೆದ ವಾರ ತಾಲಿಬಾನ್ ಅಫ್ಘಾನ್ ರಾಜಧಾನಿ ಕಾಬೂಲ್ ಸ್ವಾಧೀನಪಡಿಸಿಕೊಂಡ ನಂತರ ಐಎಎಫ್ ನ ಸೇನಾ ವಿಮಾನದಲ್ಲಿ 107 ಭಾರತೀಯರು ಸೇರಿದಂತೆ 168 ಜನರನ್ನು ಭಾರತಕ್ಕೆ ಭಾನುವಾರ ಸ್ಥಳಾಂತರಿಸಲಾಗಿದೆ.

  ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಐಎಎಫ್ ನ ಎರಡು ಸಿ -17 ಹೆವಿ-ಲಿಫ್ಟ್ ವಿಮಾನದಲ್ಲಿ ಭಾರತೀಯ ರಾಯಭಾರಿ ಮತ್ತು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಇತರ ಸಿಬ್ಬಂದಿ ಸೇರಿದಂತೆ 200 ಜನರನ್ನು ಈ ಹಿಂದೆ ಸ್ಥಳಾಂತರಿಸಲಾಗಿತ್ತು.

  ಇದನ್ನೂ ಓದಿ: Afghanistan Crisis| ಭಾರತದ ರಾಯಭಾರಿ ಕಚೇರಿ ಸಿಬ್ಬಂದಿಗಳ ಸ್ಥಳಾಂತರವನ್ನು ತಾಲಿಬಾನಿಗಳು ಬಯಸಿರಲಿಲ್ಲವಂತೆ!

  ಭಾರತವು ತನ್ನ ಎಲ್ಲಾ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ. ಆದರೆ ಅಂದಾಜು 1,000 ನಾಗರಿಕರು ಅಫ್ಘಾನಿಸ್ತಾನದ ಹಲವಾರು ನಗರಗಳಲ್ಲಿ ಉಳಿದಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಅವರು ಇರುವ ಸ್ಥಳ ಮತ್ತು ಪರಿಸ್ಥಿತಿಯನ್ನು ಖಚಿತಪಡಿಸಿಕೊಳ್ಳುವುದು ಒಂದು ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

  ಭಾರತಕ್ಕೆ ಮರಳಿದ ರಾಯಭಾರ ಕಚೇರಿ ಸಿಬ್ಬಂದಿಗಳು;

  ತಾಲಿಬಾನ್ ಉಗ್ರರು ಅಫ್ಘಾನ್ ರಾಜಧಾನಿ ಕಾಬೂಲ್​ಗೆ ಪ್ರವೇಶಿಸುತ್ತಿದ್ದಂತೆ ಭಾರತವು ಕಳೆದ ಭಾನುವಾರವೇ ಎರಡು ವಾಯುಪಡೆಯ C-17 ಸಾರಿಗೆ ವಿಮಾನಗಳನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿತ್ತು. 45 ಭಾರತೀಯ ಸಿಬ್ಬಂದಿಯನ್ನು ಸೋಮವಾರ ಸ್ಥಳಾಂತರಿಸಲಾಗಿದ್ದರೆ, ರಾಯಭಾರಿ ರುದ್ರೇಂದ್ರ ಟಂಡನ್ ಸೇರಿದಂತೆ 120 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮಂಗಳವಾರ ಸ್ಥಳಾಂತರಿಸಲಾಗಿದೆ. ಈ ಮೂಲಕ ಭಾರತ ಸೇರಿದಂತೆ ಎಲ್ಲಾ ದೇಶಗಳು ಅಫ್ಘನ್​ನಿಂದ ತಮ್ಮ ರಾಜತಾಂತ್ರಿಕರನ್ನು ಹಿಂದಕ್ಕೆ ಕರೆಸಿಕೊಂಡಂತಾಗಿದೆ. ಅಲ್ಲದೆ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಯಾವ ಯುರೋಪ್​ ರಾಷ್ಟ್ರಗಳೂ ಸಹ ತಾಲಿಬಾನಿಗಳ ಸರ್ಕಾರವನ್ನು ಒಪ್ಪಿಕೊಂಡು ದೇಶದ ಮಾನ್ಯತೆ ನೀಡಲು ಸಿದ್ದರಿಲ್ಲ ಎಂದು ತಿಳಿದುಬಂದಿದೆ.

  ಇದನ್ನೂ ಓದಿ: Pakistan tik-tok: ಚಪ್ಪಲಿ ತೋರಿಸಿದರು ಮಹಿಳೆಯನ್ನು ಹಿಂಬಾಲಿಸಿ ಮುತ್ತು ಕೊಡಲು ಬಂದ ವ್ಯಕ್ತಿ; ಪಾಕಿಸ್ತಾನದ ವಿಡಿಯೋ ವೈರಲ್

  ಅಫ್ಘಾನ್​ನಲ್ಲಿರುವ ಗುರುದ್ವಾರದಲ್ಲಿ 200ಕ್ಕೂ ಹೆಚ್ಚು ಸಿಖ್ಖರು ಇದ್ದಾರೆ. ಅಲ್ಲದೆ, ಹಲವು ಹಿಂದೂಗಳು ಅಲ್ಲಿ ಆಶ್ರಯ ಪಡೆದಿದ್ದಾರೆ. ಇವರನ್ನು ರಕ್ಷಣೆ ಮಾಡುವಂತೆ ಪಂಜಾಬ್ ಸಿಎಂ ಅಮರೀಂದರ್​ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ತಾಲಿಬಾನ್ ನಾಯಕರು ಗುರುವಾರ ಆ ಗುರುದ್ವಾರಕ್ಕೆ ಖುದ್ದು ಭೇಟಿ ನೀಡಿ ತಮ್ಮಿಂದ ಯಾವ ಸಿಖ್ಖರು ಮತ್ತು ಹಿಂದೂಗಳಿಗೂ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದರು. ಅವರು ಭರವಸೆ ನೀಡಿದ್ದ ವಿಡಿಯೋ ನಿನ್ನೆ ಟ್ವಿಟರ್​ನಲ್ಲಿ ಟ್ರೆಂಡ್ ಆಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: