Afghan Crisis- ಕಚೇರಿಯಿಂದ ಪತ್ರಕರ್ತೆಯನ್ನ ಮನೆಗೆ ಕಳುಹಿಸಿದ ತಾಲಿಬಾನ್; ಶಾಕ್ ಆದ ಆಂಕರ್

ಮಹಿಳೆಯರಿಗೆ ಕೆಲಸಕ್ಕೆ ಹೋಗಲು, ಶಾಲೆ ಕಾಲೇಜಿಗೆ ಹೋಗಲು ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದ ತಾಲಿಬಾನ್ ಇದೀಗ ಸರ್ಕಾರಿ ಸುದ್ದಿ ವಾಹಿನಿಯ ಪತ್ರಕರ್ತೆಯೊಬ್ಬರಿಗೆ ಕೆಲಸಕ್ಕೆ ಹಾಜರಾಗದಂತೆ ವಾಪಸ್ ಮನೆಗೆ ಕಳುಹಿಸಿದ ಘಟನೆ ನಡೆದಿದೆ.

ಪತ್ರಕರ್ತೆ ಶಬ್ನಂ ದಾವ್ರನ್

ಪತ್ರಕರ್ತೆ ಶಬ್ನಂ ದಾವ್ರನ್

  • News18
  • Last Updated :
  • Share this:
    ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪಾರುಪತ್ಯೆ ಶುರುವಾಗುತ್ತಿದ್ದಂತೆಯೇ ಅಲ್ಲಿನ ಮಹಿಳೆಯರಿಗೆ ಎರಡು ದಶಕಗಳ ಹಿಂದಿನ ನರಕ ನೆನಪಾಗಿ ಬೆಚ್ಚಿಬೀಳುವಂತಾಗಿದೆ. ಅದಕ್ಕೆ ಪುಷ್ಟಿ ನೀಡುವಂಥ ಒಂದು ಘಟನೆ ವರದಿಯಾಗಿದೆ. ಅಫ್ಘಾನಿಸ್ತಾನದ ಜನಪ್ರಿಯ ನ್ಯೂಸ್ ಆಂಕರ್​ವೊಬ್ಬಳು ತನ್ನ ಹತಾಶೆ ವ್ಯಕ್ತಪಡಿಸಿ ಆನ್​ಲೈನ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ. ಆರ್​ಟಿಎ ಎಂಬ ಸರ್ಕಾರಿ ನ್ಯೂಸ್ ಚಾನಲ್​ನಲ್ಲಿ ಆರು ವರ್ಷಗಳಿಂದ ನ್ಯೂಸ್ ಆಂಕರ್ ಆಗಿ ಕೆಲಸ ಮಾಡುತ್ತಿದ್ದ ಶಬ್ನಂ ಡಾವ್ರನ್ ಅವರು ಇತ್ತೀಚೆಗೆ ಮಾಮೂಲಿಯಂತೆ ಕೆಲಸಕ್ಕೆ ಹಾಜರಾಗಲು ಹೋದಾಗ ಶಾಕ್ ಕಾದಿತ್ತು. ಕಚೇರಿಯಲ್ಲಿ ಪುರುಷ ಉದ್ಯೋಗಿಗಳನ್ನಷ್ಟೇ ಒಳಗೆ ಬಿಡಲಾಗುತ್ತಿತ್ತು. ಈಕೆಗೆ ಒಳಹೋಗಲು ಅವಕಾಶ ನಿರಾಕರಿಸಲಾಯಿತು. ಆದರೂ ಆಕೆ ತನ್ನ ಐಡಿ ಕಾರ್ಡ್ ತೋರಿಸಿ ಒಳ ಹೋಗಲು ಮಾಡಿದ ಪ್ರಯತ್ನ ವಿಫಲವಾಯಿತು.

    ತಾಲಿಬಾನ್ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಅನೇಕ ಕಚೇರಿಗಳಲ್ಲಿ ವ್ಯವಸ್ಥೆ ಬದಲಾಗಿದೆ. ಮಹಿಳೆಯರನ್ನ ಕೆಲಸಕ್ಕೆ ಬರಲು ಅನುಮತಿ ನಿರಾಕರಿಸಲಾಗುತ್ತಿದೆ. ಈ ಸುದ್ದಿ ವಾಹಿನಿಯೂ ಇದಕ್ಕೆ ಹೊರತಾಗಿಲ್ಲ. “ಪುರುಷ ಸಹೋದ್ಯೋಗಿಗಳು ಐಡಿ ಕಾರ್ಡ್ ತೋರಿಸಿ ಕಚೇರಿಗೆ ಹೋಗುತ್ತಿದ್ದರು. ಆದರೆ, ನಾನು ಹಾಗೆ ಮಾಡಲು ಹೋದಾಗ, ಇಲ್ಲಿನ ವ್ಯವಸ್ಥೆ ಬದಲಾಗಿದ್ದು, ಒಳಗೆ ಪ್ರವೇಶ ಇಲ್ಲ ಎಂದು ನನಗೆ ಹೇಳಿದರು” ಎಂದು ಶಬ್ನಂ ಹೇಳುತ್ತಾರೆ.

    “ನನ್ನ ಈ ಮಾತುಗಳನ್ನ ಕೇಳುತ್ತಿರುವವರಿಗೆ ನಾನು ಕೇಳಿಕೊಳ್ಳುವುದು ಇದು – ನಮ್ಮ ಜೀವ ಅಪಾಯದಲ್ಲಿದೆ. ನಮಗೆ ಸಹಾಯ ಮಾಡಿ” ಎಂದು ಶಬ್ನಂ ತಮ್ಮ ವಿಡಿಯೋಯದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಶಬ್ನಂ ಅವರ ಈ ವಿಡಿಯೋವನ್ನು ಅವರ ಮಾಜಿ ಸಹೋದ್ಯೋಗಿ ಹಾಗೂ ಟೋಲೋ ನ್ಯೂಸ್ ಎಂಬ ಸುದ್ದಿವಾಹಿನಿಯ ಸಂಪಾದಕ ಮಿರಾಖ ಪೋಪಾಲ್ ಶೇರ್ ಮಾಡಿದ್ದಾರೆ. “ಟೋಲೋ ನ್ಯೂಸ್​ನಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ಶಬ್ನಂ ದಾವ್ರನ್ ಅವರಿಗೆ ಕೆಲಸ ಮಾಡಲು ತಾಲಿಬಾನ್ ಅವಕಾಶ ಕೊಡಲಿಲ್ಲ” ಎಂದು ಪೋಪಾಲ್ ಟ್ವೀಟ್ ಮಾಡಿದ್ದಾರೆ. ಆದರೆ, ತಮ್ಮ ಟೋಲೋ ನ್ಯೂಸ್ ವಾಹಿನಿಯಲ್ಲಿ ಕೆಲಸ ಮಾಡುವ ಮಹಿಳಾ ಆಂಕರ್​ಗಳು ಕರ್ತವ್ಯಕ್ಕೆ ಹಾಜರಾದ ವಿಚಾರವನ್ನು ಅವರು ಇದೇ ವೇಳೆ ತಿಳಿಸಿ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ದಬ್ಬಾಳಿಕೆ ಸ್ವಲ್ಪ ಸಮಯವಷ್ಟೇ, ಜಾಸ್ತಿ ದಿನ ನಡೆಯಲ್ಲ: ಪ್ರಧಾನಿ ಮೋದಿ

    1996ರಿಂದ 2001ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ್ದ ತಾಲಿಬಾನ್ ತನ್ನ ಉಗ್ರ ಆಚರಣೆಗೆ ಕುಖ್ಯಾತವಾಗಿತ್ತು. ಶರಿಯಾ ಕಾನೂನು ಕಟ್ಟಳೆಗಳನ್ನ ಕಟ್ಟುನಿಟ್ಟಾಗಿ ಜಾರಿಗೆ ತಂದಿತ್ತು. ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುವಂತಿರಲಿಲ್ಲ. ಬಾಲಕಿಯರು ಶಾಲೆಗಳಿಗೆ ಹೋಗುವಂತಿರಲಿಲ್ಲ. ಮಹಿಳೆಯರು ಯಾವುದೇ ಮನರಂಜನೆ ಕಾರ್ಯಕ್ರಮ ನೋಡುವಂತಿರಲಿಲ್ಲ. ಇದನ್ನ ಉಲ್ಲಂಘಿಸಿದರೆ ಘೋರ ಶಿಕ್ಷೆ ವಿಧಿಸಲಾಗುತ್ತಿತ್ತು. ಇಪ್ಪತ್ತು ವರ್ಷಗಳ ನಂತರ ಮತ್ತೆ ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರುತ್ತಿರುವ ತಾಲಿಬಾನ್ ಸಾಕಷ್ಟು ಬದಲಾಗಿದ್ದೇವೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡುತ್ತಿದೆ. ಶರಿಯಾ ಕಾನೂನಿನ ಪ್ರಕಾರ ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನ ನೀಡಲಾಗುತತದೆ. ಶಿಕ್ಷಣ ಮತ್ತು ಕೆಲಸಕ್ಕೆ ಹೋಗಬಹುದು. ಮಾಧ್ಯಮದವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದು ಎಂದು ತಾಲಿಬಾನ್ ಹೇಳಿದೆ. ಒಬ್ಬ ತಾಲಿಬಾನ್ ಅಧಿಕಾರಿ ಟಿವಿಯಲ್ಲಿ ಮಹಿಳಾ ಪತ್ರಕರ್ತೆಗೆ ಸಂದರ್ಶನವನ್ನೂ ನೀಡಿ ತಾಲಿಬಾನ್ ಮಹಿಳಾ ವಿರೋಧಿಯಲ್ಲ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದರು.

    ಆದರೆ, ತಾಲಿಬಾನ್ ತನ್ನ ಮಹಿಳಾ ವಿರೋಧಿ ಧೋರಣೆಯನ್ನ ಬದಲಾಯಿಸಿಕೊಂಡಿದೆ ಎಂಬುದನ್ನು ಬಹಳ ಜನರು ಒಪ್ಪುವುದಿಲ್ಲ. ಕೆಲ ತಿಂಗಳ ಹಿಂದೆ ತಾಲಿಬಾನ್ ಉಗ್ರರು ಮಹಿಳಾ ಪತ್ರಕರ್ತರನ್ನ ಗುರಿ ಮಾಡಿಕೊಂಡು ದಾಳಿ ಮಾಡಿದ ಅನೇಕ ನಿದರ್ಶನಗಳಿವೆ.
    Published by:Vijayasarthy SN
    First published: