‘ಕಾಪಾಡಿ ಮಿಸ್ಟರ್ ಪ್ರೆಸಿಡೆಂಟ್’ – ಅಫ್ಘಾನಿಸ್ತಾನದಲ್ಲಿ ಅಮೆರಿಕ ಅಧ್ಯಕ್ಷನ ಜೀವ ಉಳಿಸಿದವನಿಂದ ಅಂಗಲಾಚನೆ

Afghan Man Appeals for US President's Help- 2008ರಲ್ಲಿ ಸೆನಟರ್ ಆಗಿದ್ದಾಗ ಜೋ ಬೈಡನ್ ಅಫ್ಘಾನಿಸ್ತಾನಕ್ಕೆ ಬಂದ ವೇಳೆ ಹಿಮಗಾಳಿಯಿಂದಾಗಿ ದುರ್ಗಮ ಕಣಿವೆಯಲ್ಲಿ ಸಿಲುಕಿಕೊಂಡಿದ್ದರು. ಆಗ ಅವರ ಪ್ರಾಣ ರಕ್ಷಿಸಿದ್ದ ಅಫ್ಘನ್ ವ್ಯಕ್ತಿ ಈಗ ತನಗೆ ಸಹಾಯ ಮಾಡಬೇಕೆಂದು ಅಮೆರಿಕ ಅಧ್ಯಕ್ಷರಿಗೆ ಮನವಿ ಮಾಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಅದೊಂದು ಭಾವೋದ್ವೇಗದ ಕ್ಷಣ. ಅನೇಕ ವರ್ಷಗಳ ಹಿಂದೆ ಆಗ ಸೆನೆಟರ್ ಆಗಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ (America President Joe Biden) ಅವರ ಜೀವ ಉಳಿಸಿದ್ದ ವ್ಯಕ್ತಿಯೊಬ್ಬ ತನ್ನ ಪ್ರಾಣ ಉಳಿಸಬೇಕೆಂದು ಅಂಗಲಾಚುತ್ತಿದ್ದಾನೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಸಂಪೂರ್ಣ ಕಾಲ್ತೆಗೆದ ಬಳಿಕ ಸಾವಿರಾರು ಅಮೆರಿಕನ್ನರು ಈಗಲೂ ಅಫ್ಘಾನ್ ನೆಲದಲ್ಲಿ ಸಿಲುಕಿದ್ದಾರೆ. ಅವರನ್ನ ಸಂಪೂರ್ಣವಾಗಿ ಸಾಗಿಸುವ ಮುನ್ನವೇ ಅಮೆರಿಕ ಸೇನೆ (US Army) ಹೊರನಡೆದಿದೆ. ಅಫ್ಘಾನಿಸ್ತಾನದಲ್ಲಿ ಅಮೆರಿಕನ್ ಪ್ರಜೆಗಳ ಜೊತೆಗೆ ಅಲ್ಲಿನ ಹಿಂದಿನ ಸರ್ಕಾರಕ್ಕೆ ಹಾಗೂ ಅಮೆರಿಕ ಸೇನೆಗೆ ವಿವಿಧ ಸ್ತರಗಳಲ್ಲಿ ನೆರವಾಗಿದ್ದ ಮಂದಿಗೂ ಜೀವ ಭಯ ಕಾಡತೊಡಗಿದೆ. ಅಮೆರಿಕ ಅಧ್ಯಕ್ಷರ ಪ್ರಾಣ ಉಳಿಸಿದ್ದ ವ್ಯಕ್ತಿಯೂ ಅಂತಹ ಜನರ ಪೈಕಿ ಇದ್ದಾನೆ. ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ಮಾತನಾಡಿರುವ ಈತ “ಹೆಲೋ ಮಿಸ್ಟರ್ ಪ್ರೆಸಿಡೆಂಟ್, ನನ್ನನ್ನು ಮತ್ತು ನನ್ನ ಕುಟುಂಬವನ್ನು ಬಚಾವ್ ಮಾಡಿ…. ನನ್ನನ್ನು ಮರೆಯಬೇಡಿ…” ಎಂದು ಈತ ಮನವಿ ಮಾಡಿಕೊಂಡಿದ್ಧಾನೆ. ಗೌಪ್ಯತೆಯ ದೃಷ್ಟಿಯಿಂದ ಈತ ತನ್ನ ಪೂರ್ಣ ಹೆಸರನ್ನು ಬಹಿರಂಗಪಡಿಸದೆ ಮೊಹಮ್ಮದ್ ಎಂಬ ಹೆಸರಿನಿಂದ ಈ ಹೇಳಿಕೆ ನೀಡಿದ್ದಾನೆ. ಆದರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಈತನನ್ನು ಅಕ್ಷರಶಃ ಮರೆತಿಲ್ಲ. ಪ್ರಾಣ ಉಳಿಸಿದ ವ್ಯಕ್ತಿಯನ್ನ ಮರೆಯಲಾದರೂ ಹೇಗೆ? ಸಹಾಯ ಮಾಡಲು ವ್ಯವಸ್ಥೆ ಮಾಡುವಂತೆ ಅಮೆರಿಕದ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ಕೊಟ್ಟಿದ್ಧಾರೆನ್ನಲಾಗಿದೆ.

13 ವರ್ಷಗಳ ಹಿಂದೆ, 2008ರಲ್ಲಿ ಜೋ ಬಿಡೆನ್ ಅವರು ಸೆನೆಟರ್ ಅಗಿದ್ಧಾಗ ತಮ್ಮ ಸಹ ಸೆನಟರ್​ಗಳಾದ ಚಕ್ ಹಾಗೆಲ್ ಮತ್ತು ಜಾನ್ ಕೆರಿ ಜೊತೆ ಅಫ್ಘಾನಿಸ್ತಾನಕ್ಕೆ ಕರ್ತವ್ಯ ನಿಮಿತ್ತ ತೆರಳಿದ್ದರು. ಹೆಲಿಕಾಪ್ಟರ್​ನಲ್ಲಿ ಹೋಗುತ್ತಿದ್ದಾಗ ಹಿಮಗಾಳಿ ಅಪ್ಪಳಿಸಿದ ಪರಿಣಾಮ ಅಲ್ಲಿಯ ದುರ್ಗಮ ಕಣಿವೆಯೊಂದರಲ್ಲಿ ಅವರು ತುರ್ತಾಗಿ ನೆಲಕ್ಕಿಳಿಯಬೇಕಾಯಿತು. ಆಗ ಇವರ ಜೊತೆ ಇದ್ದವರಲ್ಲಿ ಮೊಹಮ್ಮದ್​ ಕೂಡ ಒಬ್ಬರು. ಕೊರೆಯುವ ಚಳಿಯಲ್ಲಿ 30 ಗಂಟೆ ಕಾಲ ಇದ್ದು ಸೆನೆಟರ್​ಗಳಿಗೆ ಅನಾಹುತವಾಗದಂತೆ ಕಾವಲು ಕಾದಿದ್ದನು. ಅಗ ಮೊಹಮ್ಮದ್ ಅವರು ಅಮೆರಿಕ ಸೇನೆಗೆ ಇಂಟರ್​ಪ್ರಿಟರ್ (ಭಾಷಾಂತರಕಾರ) ಆಗಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ.

ಇದನ್ನೂ ಓದಿ: Biden on ISIS: ಸೈನ್ಯ ಮರಳಿರಬಹುದು, ಯುದ್ಧ ನಿಂತಿಲ್ಲ; ಅಗತ್ಯ ಬಿದ್ದಾಗ ಅಫ್ಘನಿಸ್ತಾನದಲ್ಲಿ ಡ್ರೋನ್ ದಾಳಿ ನಡೆಸುತ್ತೇವೆ: ಅಮೇರಿಕಾ ಗುಡುಗು

ಈ ರೀತಿ ಅಮೆರಿಕನ್ನರಿಗೆ ಸೇವೆ ಸಲ್ಲಿಸಿದ್ದ ಸಾವಿರಾರು ಜನರು ಅಫ್ಘಾನಿಸ್ತಾನದಲ್ಲಿ ಪ್ರಾಣಭಯದಲ್ಲಿದ್ಧಾರೆ. ಹಿಂದಿನ ಸರ್ಕಾರಕ್ಕೆ ಮತ್ತು ಅಮೆರಿಕಾ ಸೇನೆಗೆ ಸಹಾಯ ಮಾಡಿದ್ದ ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ಹೇಳುತ್ತಿದ್ದರೂ ಯಾರೂ ನಂಬುವ ಸ್ಥಿತಿಯಲ್ಲಿಲ್ಲ. ಅಜ್ಞಾತ ಸ್ಥಳದಲ್ಲಿರುವ ಮೊಹಮ್ಮದ್ ಇದೀಗ ತನ್ನನ್ನು ಹಾಗೂ ಹೆಂಡತಿ ಮತ್ತು ನಾಲ್ವರು ಮಕ್ಕಳಿರುವ ಕುಟುಂಬ ಸದಸ್ಯರನ್ನು ಇಲ್ಲಿಂದ ಕರೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದಾನೆ. ಮನೆಯಿಂದ ಆಚೆ ಹೋಗಲು ಸಾಧ್ಯವಾಗುತ್ತಿಲ್ಲ. ನನಗೆ ಭಯವಾಗುತ್ತಿದೆ ಎಂದು ಆತ ಪರಿತಪಿಸಿದ್ದಾನೆ. ಮೊಹಮ್ಮದ್ ಕೂಗು ನಮ್ಮ ಅಧ್ಯಕ್ಷರ ಕಿವಿಗೆ ಬಿದ್ದಿದ್ದು, ಅವರ ಕುಟುಂಬವನ್ನು ಹೊರಸಾಗಿಸಲು ಅಮೆರಿಕ ಬದ್ಧವಾಗಿದೆ ಎಂದು ವೈಟ್ ಹೌಸ್​ನ ಪ್ರೆಸ್ ಸೆಕ್ರೆಟರಿ ಜೆನ್ ಸಾಕಿ (Jen Psaki) ಭರವಸೆ ನೀಡದ್ದಾರೆ. “ನೀವು ಮಾಡಿರುವ ಸೇವೆಯನ್ನ ಗೌರವಿಸುತ್ತೇವೆ. ನಿಮ್ಮನ್ನ ಹೊರಗೆ ಕರೆತರುತ್ತೇವೆ. ಅದಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಅವರು ಹೇಳಿಕೆ ನೀಡಿದ್ಧಾರೆ.

ಆದರೆ, ಅಫ್ಘಾನಿಸ್ತಾನದಿಂದ ಹೊರಹೋಗಲು ಇಚ್ಛಿಸಿರುವ ಜನರಿಗೆ ಈಗ ವೀಸಾದ ತೊಡರುಗಾಲು ಎದುರಾಗಿದೆ. ಅಮೆರಿಕದ ವಲಸೆ ವೀಸಾ ಪಡೆಯಲು ಸುದೀರ್ಘ ಪ್ರಕ್ರಿಯೆ ಇದೆ. 14 ಹಂತಗಳ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಹಿಡಿಯುತ್ತವೆ. ಮೇಲಾಗಿ ಈಗ ಅಮೆರಿಕದ ರಾಜತಾಂತ್ರಿಕ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ಅಫ್ಘಾನಿಸ್ತಾನ ನೆಲದಿಂದ ಆದಷ್ಟು ಬೇಗ ಬಚಾವಾಗಿ ಹೋಗಲು ಹಾತೊರೆಯುತ್ತಿರುವ ಜನರೀಗ ಹತಾಶಗೊಂಡಿದ್ದಾರೆ. ಬೈಡನ್ ಸರ್ಕಾರ ಈಗ ಇಮ್ಮೈಗ್ರೇಶನ್ ವೀಸಾದ ಪ್ರಕ್ರಿಯೆಯನ್ನ ಆದಷ್ಟೂ ಸರಳಗೊಳಿಸುವ ಪ್ರಯತ್ನ ಮಾಡುತ್ತಿದೆ. ಈ ಮುಂಚೆ ಒಂದು ತಿಂಗಳಿಗೆ ಕೇವಲ 100 ಮಂದಿಗೆ ಮಾತ್ರ ವಲಸೆ ವೀಸಾ ಕೊಡಲು ಸಾಧ್ಯವಾಗುತ್ತಿತ್ತು. ಈಗ ಸರಳೀಕೃತ ಪ್ರಕ್ರಿಯೆಯಿಂದಾಗಿ ವಾರದಲ್ಲಿ 813 ಮಂದಿಗೆ ವೀಸಾ ನೀಡಲಾಗಿದೆಯಂತೆ. ಈ ವಿಚಾರವನ್ನು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರರಾದ ನೆಡ್ ಪ್ರೈಸ್ ತಿಳಿಸಿದ್ದಾರೆ.
Published by:Vijayasarthy SN
First published: