Afghanistan- ಕಾಬೂಲ್ ತಾಲಿಬಾನಿಗಳ ವಶವಾಗುವ ಮುನ್ನ ಶಾಂತಿ ಸೂತ್ರ? ಒಂದೆರಡು ದಿನದಲ್ಲಿ ಸ್ಪಷ್ಟಚಿತ್ರಣ

ಅಫ್ಘಾನಿಸ್ತಾನದಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡಿದ್ದ ತಾಲಿಬಾನ್ ಇದೀಗ ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ದಟ್ಟವಾಗಿದೆ. ಆಫ್ಘಾನಿಸ್ತಾನದ ಬಹುಭಾಗ ಇದೀಗ ತಾಲಿಬಾನ್ ವಶದಲ್ಲಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಯುವ ಸಾಧ್ಯತೆ ಇದೆ.

ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ

ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ

  • News18
  • Last Updated :
  • Share this:
ನವದೆಹಲಿ, ಆ. 15: ಆಫ್ಘಾನಿಸ್ತಾನದ ಬಹುಭಾಗ ಈಗ ತಾಲಿಬಾನಿಗಳ ವಶದಲ್ಲಿದೆ. ಉತ್ತರ ಭಾಗದಲ್ಲಿರುವ ಮಜರ್-ಎ-ಶರೀಫ್ ನಗರ ಮತ್ತು ಜಲಾಲಬಾದ್ ಅನ್ನು ಸುಪರ್ದಿಗೆ ಪಡೆದುಕೊಂಡಿರುವ ತಾಲಿಬಾನಿ ಹೋರಾಟಗಾರರು ಇದೀಗ ರಾಜಧಾನಿ ಕಾಬೂಲ್​ನತ್ತ ದಾಪುಗಾಲಿಕ್ಕುತ್ತಿದ್ದಾರೆ. ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘಾನಿ ಹತಾಶೆಯ ಸ್ಥಿತಿಯಲ್ಲಿದ್ದಾರೆ. ಕಾಬೂಲ್​ಗೆ ಹೆಜ್ಜೆ ಹಾಕಬಾರದೆಂದು ತಾಲಿಬಾನಿಗಳಿಗೆ ಅಮೆರಿಕ ಸೂಚಿಸಿರುವುದು ತಿಳಿದುಬಂದಿದೆ. ಕೆಲ ವರದಿಗಳನ್ನ ನಂಬುವುದಾದರೆ ಆಫ್ಗಾನಿಸ್ತಾನದಲ್ಲಿ ಶೀಘ್ರವೇ ಅಧಿಕಾರ ಮರುಹಂಚಿಕೆಯಾಗುವ ಸಾಧ್ಯತೆ ಇದೆ. ಅಶ್ರಫ್ ಘಾನಿ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟು ಅಮೆರಿಕದಲ್ಲಿ ಆಶ್ರಯ ಪಡೆಯಬಹುದು ಎನ್ನಲಾಗುತ್ತಿದೆ. ಒಂದೆರಡು ದಿನದಲ್ಲಿ ಸ್ಪಷ್ಟಚಿತ್ರಣ ಸಿಗಬಹುದೆಂದು ನಿರೀಕ್ಷಿಸಬಹುದು ಎಂದು ಆಫ್ಘನ್ ಸರ್ಕಾರದ ಮೂಲಗಳು ಹೇಳುತ್ತಿವೆ.

ಸದ್ಯ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹೋರಾಟಗಾರರ ಸಂಖ್ಯೆ ಅಂದಾಜು 50 ಸಾವಿರದಷ್ಟಿರಬಹುದು. ಆದರೆ, ಸರ್ಕಾರದ ಪರ ಇರುವ ಸೇನೆಯ ಸಂಖ್ಯೆ ಕೇವಲ 5 ಸಾವಿರ ಮಾತ್ರ. ಇಷ್ಟು ದಿನ ಅಮೆರಿಕ ಸೇನೆಯ ನೇರ ಬೆಂಬಲ ಇದ್ದರಿಂದ ತಾಲಿಬಾನ್​ಗಳು ಹೆಡೆ ಎತ್ತಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಏಕಾಏಕಿ ಅಮೆರಿಕ ಸೇನೆ ಕಾಲ್ತೆಗೆದ ಬೆನ್ನಲ್ಲೇ ತಾಲಿಬಾನ್ ಇನ್ನಿಲ್ಲದ ಹುಮ್ಮಸ್ಸಿನಲ್ಲಿ ಮುನ್ನುಗ್ಗಿ ಬಹಳ ಸುಲಭವಾಗಿ ಇಡೀ ದೇಶವನ್ನು ವಶಮಾಡಿಕೊಳ್ಳುತ್ತಿದೆ. ಈಗ ಅಮೆರಿಕ ತನ್ನ ಕೆಲ ತುಕಡಿಗಳನ್ನ ಕಾಬೂಲ್​ಗೆ ಕಳುಹಿಸಿರುವುದ ಶಾಂತಿ ಸೂತ್ರಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ.

“ತಾಲಿಬಾನ್ ಏನೂ ಬದಲಾಗಿಲ್ಲ. ಪಾಕಿಸ್ತಾನದ ನಿರ್ದೇಶನಗಳನ್ನ ಪಾಲಿಸುತ್ತಿದೆ” ಎಂದು ಆಫ್ಘಾನ್ ಸರ್ಕಾರದ ಅಧಿಕಾರಿಗಳು ಹೇಳುತ್ತಾರೆ. ಆಫ್ಘಾನಿಸ್ತಾನ ಸರ್ಕಾರದ ವಿಶೇಷ ಪಡೆಗಳು ಹಾಗೂ ವಾಯು ಪಡೆ ತುಕಡಿಗಳನ್ನ ಹೊರತುಪಡಿಸಿ ಉಳಿದ ಎಲ್ಲಾ ಸೇನಾ ಪಡೆಗಳು ತಾಲಿಬಾನ್​ಗೆ ಶರಣಾಗಿವೆ. ದೇಶದ ವಿವಿಧೆಡೆ ಜೈಲುಗಳಲ್ಲಿರುವ ತಾಲಿಬಾನ್ ಹೋರಾಟಗಾರರನ್ನ ಶೀಘ್ರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನೊಂದು ವಾರದಲ್ಲಿ ಆಫ್ಘಾನಿಸ್ತಾನದ ಆಡಳಿತ ನಡೆಸುವ ಅಧಿಕಾರವನ್ನು ಆಡಳಿತ ಮಂಡಳಿಗೆ ವಹಿಸುವ ನಿರೀಕ್ಷೆ ಇದೆ. ದೇಶದ ಎಲ್ಲಾ ಪ್ರಾಂತ್ಯಗಳಿಗೂ ತಾಲಿಬಾನ್ ಅಣತಿ ಮೇರೆಗೆ ರಾಜ್ಯಪಾಲರನ್ನ ನೇಮಕ ಮಾಡಬಹುದು.

ಇದನ್ನೂ ಓದಿ: Afghanistan VS Taliban: ತಾಲಿಬಾನಿಗರ ಮೇಲುಗೈ: ಅಫ್ಘಾನಿಸ್ತಾನದಿಂದ ಭಾರತ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗೆ ಸಿದ್ಧತೆ

ಇಪ್ಪತ್ತು ವರ್ಷಗಳ ಹಿಂದೆ ಆಫ್ಘಾನಿಸ್ತಾನದಲ್ಲಿ ತಾಲಿಬಾನಿಗಳದ್ದೇ ಆಡಳಿತ ಇತ್ತು. 1996ರಿಂದ 2001ರವರೆಗೆ ಅಧಿಕಾರದಲ್ಲಿದ್ದ ತಾಲಿಬಾನ್ ಆಫ್ಘಾನಿಸ್ತಾನದಲ್ಲಿ ಕಟ್ಟರ್ ಇಸ್ಲಾಮೀ ಧರ್ಮಾಧಾರಿತವಾಗಿ ಆಡಳಿತದ ಕಟ್ಟಳೆಗಳನ್ನ ರೂಪಿಸಿತ್ತು. 2001, ಸೆಪ್ಟೆಂಬರ್ 11ರಂದು ಅಮೆರಿಕದ ಅವಳಿ ಗೋಪುರಗಳ ಮೇಲೆ ವಿಮಾನ ದಾಳಿ ಘಟನೆ ಆದ ಬಳಿಕ ಅಲ್​-ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಅವರನ್ನ ಮಟ್ಟಹಾಕಲೆಂದು ಅಮೆರಿಕ ಆಫ್ಗಾನಿಸ್ತಾನದಲ್ಲಿ ಆಕ್ರಮಣ ಮಾಡಿತು. ತಾಲಿಬಾನ್ ಪಡೆಗಳನ್ನ ಸೋಲಿಸಿ ಅವರನ್ನ ಅಧಿಕಾರದಿಂದ ಕಿತ್ತೊಗೆದರು. ಅಮೆರಿಕ, ಬ್ರಿಟನ್ ಮೊದಲಾದ ರಾಷ್ಟ್ರಗಳ ಸೈನಿಕರು ಆಫ್ಘಾನಿಸ್ತಾನದಲ್ಲಿ ಮತ್ತೆ ತಾಲಿಬಾನಿಗಳು ತಲೆ ಎತ್ತದ ರೀತಿಯಲ್ಲಿ ಕಾವಲು ಕಾದಿದ್ದರು. ಆದರೆ, ಆಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನಿಕರನ್ನ ಸಂಪೂರ್ಣವಾಗಿ ಹಿಂತೆಗೆದುಕೊಂಡಿತು. ಪರಿಣಾಮವಾಗಿ, ಪಾಕಿಸ್ತಾನ ಮೊದಲಾದ ಕಡೆ ಅಡಗಿಕೊಂಡಿದ್ದ ತಾಲಿಬಾನ್ ಹೋರಾಟಗಾರರು ಮತ್ತೆ ಒಂದುಗೂಡಿ ಆಫ್ಘಾನಿಸ್ತಾನದ ಒಂದೊಂದೇ ನಗರ ಪಟ್ಟಣಗಳನ್ನ ವಶಪಡಿಸಿಕೊಳ್ಳುತ್ತಾ ಬಂದಿವೆ. ತಾಲಿಬಾನ್ ವಶವಾಗಲು ಬಾಕಿ ಉಳಿದಿರುವ ಒಂದೇ ಪ್ರಮುಖ ನಗರ ಎಂದರೆ ಕಾಬೂಲ್ ಮಾತ್ರವೇ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: