ಮಹಾರಾಷ್ಟ್ರ(ಮೇ 24): ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್(ಕಪ್ಪು ಶಿಲೀಂಧ್ರ) ಜನರಲ್ಲಿ ಮತ್ತಷ್ಟು ಆತಂಕ ಹುಟ್ಟಿಸಿದೆ. ಈ ಬ್ಲ್ಯಾಕ್ ಫಂಗಸ್ ಮೂಲವನ್ನು ಪತ್ತೆ ಹಚ್ಚಲು ವೈದ್ಯರು ಹಾಗೂ ಸೂಕ್ಷ್ಮಾಣು ಜೀವಿ ತಜ್ಞರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈ ನಡುವೆ ಬ್ಲ್ಯಾಕ್ ಫಂಗಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆಂಫೊಟೆರಿಸಿನ್-ಬಿ ಇಂಜೆಕ್ಷನ್- Amphotericin-B Injection ರವಾನೆ ಮಾಡಿದೆ. ಮಹಾರಾಷ್ಟ್ರಕ್ಕೆ 5,090 ವಯಲ್ಸ್ ಹಂಚಿಕೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಉಲ್ಭಣಿಸುವ ಮೊದಲಿನ ಸಂದರ್ಭಕ್ಕೆ ಹೋಲಿಸಿದರೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸಲಾಗುವ amphotericin B ಇಂಜೆಕ್ಷನ್ಗೆ 100 ಪಟ್ಟು ಬೇಡಿಕೆ ಹೆಚ್ಚಾಗಿದೆ. ಈ ಮೊದಲು ತಿಂಗಳಿಗೆ 3,000ದಷ್ಟು ಬೇಡಿಕೆಯಿತ್ತು. ಆದರೆ, ಈಗ ಪ್ರತಿ ತಿಂಗಳು 3 ಲಕ್ಷ ಇಂಜೆಕ್ಷನ್ಗೆ ಬೇಡಿಕೆ ಉಂಟಾಗಿದೆ.
ಬ್ಲ್ಯಾಕ್ ಫಂಗಸ್ ಪತ್ತೆಯಾದ ಬಳಿಕ ಚಿಕಿತ್ಸೆಗೆ ಬಳಸಲಾಗುವ amphotericin B ಇಂಜೆಕ್ಷನ್ಗೆ ಬೇಡಿಕೆ ನೂರು ಪಟ್ಟು ಹೆಚ್ಚಾಗಿದೆ. 90ರಿಂದ 120 ವಯಲ್ಸ್ ಔಷಧಿಯ ಅಗತ್ಯತೆ ಇರುವವರು 6000-8000 ರೂ.ಹಣ ನೀಡಬೇಕು. ಹೀಗಾಗಿ ಆಂಫೊಟೆರಿಸಿನ್-ಬಿ ಇಂಜೆಕ್ಷನ್ ಪಡೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಔಷಧ ಕಂಪನಿಗಳು ಸಹ ಅಸಮರ್ಥವಾಗಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ:Remdesivir Black Marketing: ಗದಗದಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಅಕ್ರಮ ಮಾರಾಟ ಜಾಲ ಪತ್ತೆ; ನಾಲ್ವರ ಬಂಧನ, ಓರ್ವ ಪರಾರಿ
ಮಹಾರಾಷ್ಟ್ರದ ಪುಣೆಯಲ್ಲಿ ಈವರೆಗೆ 300ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ (ಮುಕೊರ್ಮೈಕೊಸಿಸ್) ಪ್ರಕರಣಗಳು ಪತ್ತೆಯಾಗಿವೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳನ್ನು ಗುರುತಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರನ್ನು ಪರೀಕ್ಷಿಸಲು ಪುಣೆ ಜಿಲ್ಲಾಡಳಿತ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ. ಜಿಲ್ಲಾಧಿಕಾರಿ ರಾಜೇಶ್ ದೇಶ್ಮುಖ್ ಅವರು ಭಾನುವಾರ ಹೊರಡಿಸಿದ ಆದೇಶದ ಪ್ರಕಾರ, ಏಪ್ರಿಲ್ 15ರ ಬಳಿಕ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರ ಪಟ್ಟಿಯನ್ನು ಪಡೆಯಬೇಕು. ಬಳಿಕ ಬ್ಲ್ಯಾಕ್ ಫಂಗಸ್ ಶಂಕಿತ ರೋಗಿಗಳ ತಪಾಸಣೆಯ ಮೊದಲ ಸುತ್ತನ್ನು ಮೇ 24ರಿಂದ 27ರವರೆಗೆ ನಡೆಸಬೇಕು ಎಂದು ಗ್ರಾಮೀಣ ಪ್ರದೇಶದ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ತಪಾಸಣೆಯ ಸಂದರ್ಭದಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾದರೆ, ಆ ಸೋಂಕಿತರನ್ನು ತಜ್ಞರಿಂದ ಪರೀಕ್ಷೆ ಮಾಡಿಸಬೇಕು. ಜೊತೆಗೆ ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ತೋಪೆ ಗುರುವಾರ ಮಾತನಾಡಿ, ಬ್ಲ್ಯಾಕ್ ಫಂಗಸ್ ಈವರೆಗೆ 90 ಜನರನ್ನು ಬಲಿ ಪಡೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಕಾಳಜಿ ಪ್ರಮುಖ ವಿಷಯವಾಗಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬಳಸಲಾಗುವ ಔಷಧಿಯ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಕೇಂದ್ರದಿಂದ ರಾಜ್ಯಕ್ಕೆ ಇನ್ನೂ ಹೆಚ್ಚಿನ ಔಷಧಿ ಪೂರೈಕೆ ಅವಶ್ಯವಿದೆ ಎಂದು ಹೇಳಿದ್ದರು.
ಬ್ಲ್ಯಾಕ್ ಫಂಗಸ್ ಹೊಡೆತ ಹೆಚ್ಚಾಗಿರುವ ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಶೇ.75ರಷ್ಟು ವಯಲ್ಸ್ ಹಂಚಿಕೆ ಮಾಡಿದೆ. ಇನ್ನುಳಿದ ಶೇ.25ರಷ್ಟು ವಯಲ್ಸ್ನ್ನು ರೋಗಿಗಳ ಸಂಖ್ಯೆಯನ್ನು ಪರಿಶೀಲಿಸಿದ ಬಳಿಕ ಹಂಚಿಕೆ ಮಾಡಲಾಗುತ್ತದೆ. ಗುಜರಾತ್ನಲ್ಲಿ ಅತೀ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣಗಳಿದ್ದು(2281), 5800 ವಯಲ್ಸ್ ಹಂಚಲಾಗಿದೆ. ಮಹಾರಾಷ್ಟ್ರದಲ್ಲಿ 2000 ಪ್ರಕರಣಗಳಿದ್ದು, 5090 ವಯಲ್ಸ್ ಹಂಚಿಕೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ