ದೀದಿ ಕಡೆ ಮುಖ ಮಾಡಿದ ಶತ್ರುಘ್ನಸಿನ್ಹಾ: ಟಿಎಂಸಿ ಸೇರಲಿರುವ ನಟ, ರಾಜಕಾರಣಿ

ಹೊಸದಾಗಿ ಪಕ್ಷಕ್ಕೆ ಬರಲಿರುವ ಶ್ರತ್ರುಘ್ನ ಸಿನ್ಹಾ ಅವರಿಗೆ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು.  ಟಿಎಂಸಿಯ ಎರಡು ರಾಜ್ಯ ಸಭಾ ಸ್ಥಾನಗಳು ಖಾಲಿಯಾಗಿದ್ದು, ಇದರಲ್ಲಿ ಒಂದು ಸ್ಥಾನವನ್ನು ಶ್ರತ್ರುಘ್ನ ಸಿನ್ಹಾ ಅವರಿಗೆ ನೀಡಬಹುದು.

ಶತ್ರುಘ್ನ ಸಿನ್ಹಾ

ಶತ್ರುಘ್ನ ಸಿನ್ಹಾ

 • Share this:
  ದಿನದಿಂದ ದಿನಕ್ಕೆ ರಾಷ್ಟ್ರ ರಾಜಕಾರಣದ ಸ್ವರೂಪಗಳು ಬದಲಾಗುತ್ತಿದ್ದು. ಮಹತ್ತರವಾದ ಬೆಳವಣಿಗೆಗಳು ಕಾಣತೊಡಗಿವೆ. 2024ರ ಲೋಕಾಸಭಾ ಚುನಾವಣೆಗೆ ಈಗಲೇ ನಿಧಾನಕ್ಕೆ ವೇದಿಕೆ ಸಿದ್ದವಾಗುತ್ತಿದ್ದು. ರಾಷ್ಟ್ರೀಯ ಪಕ್ಷಗಳ ಕಡೆಗೆ ಒಬ್ಬೊಬ್ಬರೇ ಮುಖ ತಿರುಗಿಸಿ ಹೋಗುತ್ತಿರುವುದು ನೋಡಿದರೆ ಏನಿದು ಲೆಕ್ಕಾಚಾರ ಎಂಬುದೇ ತಿಳಿಯದಾಗಿದೆ.

  ರಾಷ್ಟ್ರ ರಾಜಕಾರಣದಲ್ಲಿ ಶುಕ್ರವಾರ ಮಹತ್ವದ ಸಂಗತಿ ನಡೆದಿದೆ.  ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಕಾಂಗ್ರೆಸ್‌ನಿಂದ ತೃಣಮೂಲ ಕಾಂಗ್ರೆಸ್‌ಗೆ ಸೇರಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

  ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಮತ್ತೊಬ್ಬ ಹಿರಿಯ ರಾಜಕಾರಣಿ ಟಿಎಂಸಿ ಕಡೆಗೆ ವಾಲಿದ್ದಾರೆ.  ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಶತ್ರುಘ್ನ ಸಿನ್ಹಾ ಅವರು 2019ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಇದೀಗ ಹಿರಿಯ ತೃಣಮೂಲ ನಾಯಕರು ಶತ್ರುಘ್ನ ಸಿನ್ಹಾ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎನ್ನಲಾಗಿದೆ. ಎಲ್ಲವೂ ಯೋಜಿಸಿದಂತೆ ನಡೆದರೆ ಅವರು ಜುಲೈ 21 ರಂದು ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

  ಶತ್ರುಘ್ನ ಅವರ ಇತ್ತೀಚಿನ ಕೆಲವು ಟ್ವೀಟ್‌ಗಳನ್ನು ಗಮನಿಸಿದ್ದ ರಾಜಕೀಯ ವಿಶ್ಲೇಷಕರು ಸಿನ್ಹಾ ಅವರು ಮತ್ತೆ ಬಿಜೆಪಿಗೆ ಸೇರಲಿದ್ದಾರೆ ಎಂದು ಸೂಚಿಸಿದ್ದರು. ಆದರೆ ಇದೀಗ ಅವರು ಪಶ್ಚಿಮ ಬಂಗಾಳದಲ್ಲಿ ಒಂಟಿಯಾಗಿ ನಿಂತು ಬಲಿಷ್ಠ ಬಿಜೆಪಿಯನ್ನು ಸೋಲಿಸಿದ್ದ ಮಮತಾ ಬ್ಯಾನರ್ಜಿ ಅವರ ತೃಣಮೂಲದ ಕಡೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ.

  ಬಿಜೆಪಿ ಪಕ್ಷವು “ಒನ್ ಮ್ಯಾನ್ ಪಾರ್ಟಿ ಮತ್ತು ಟೂ ಮೆನ್ ಆರ್ಮಿ” ಆಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿ ಅವರು ಬಿಜೆಪಿಯಿಂದ ಹೊರ ನಡೆದಿದ್ದರು.

  ಇದಲ್ಲದೇ ಮಮತಾ ಬ್ಯಾನರ್ಜಿ ಅವರು ತಮ್ಮ ಸುತ್ತಾ ಬಲಿಷ್ಟವಾದ ಪಡೆಯನ್ನೇ ಕಟ್ಟಿಕೊಳ್ಳುತ್ತಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಪ್ರಧಾನಿ ಕುರ್ಚಿಯ ಮೇಲೆ ಏನಾದರೂ ಮಮತಾ ಬ್ಯಾನರ್ಜಿ ಕಣ್ಣಿಟ್ಟಿದ್ದಾರಾ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣ.  ಏಕೆಂದರೆ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಒಬ್ಬಂಟಿಯಾಗಿ ನಿಂತು ಬಿಜೆಪಿಯನ್ನು ಸದೆಬಡಿದಿದ್ದು ರಾಜಕೀಯ ಇತಿಹಾಸದಲ್ಲೇ ರೋಚಕ ಆವೃತ್ತಿ ಎಂದೇ ಕರೆಯಬಹುದು. ಇಡೀ ಬಿಜೆಪಿಯ ಪರಿವಾರವೇ ಬಂಗಾಳದಲ್ಲಿ  ಬೀಡು ಬಿಟ್ಟಿದ್ದರೂ ದೀದಿ ಮುಂದೆ ಮೋದಿ- ಅಮಿತ್​ ಶಾ ಜೋಡಿ ಮಂಡಿಯೂರಲೇ ಬೇಕಾಯಿತು ಆದ ಕಾರಣ. ದೀದಿಯ ಎಲ್ಲಾ ನಡೆಗಳು ಕುತೂಹಲ ಭರಿತ ಎಂದರೆ ತಪ್ಪಾಗಲಾರದು.

  ಹೊಸದಾಗಿ ಪಕ್ಷಕ್ಕೆ ಬರಲಿರುವ ಶ್ರತ್ರುಘ್ನ ಸಿನ್ಹಾ ಅವರಿಗೆ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು.  ಟಿಎಂಸಿಯ ಎರಡು ರಾಜ್ಯ ಸಭಾ ಸ್ಥಾನಗಳು ಖಾಲಿಯಾಗಿದ್ದು, ಇದರಲ್ಲಿ ಒಂದು ಸ್ಥಾನವನ್ನು ಶ್ರತ್ರುಘ್ನ ಸಿನ್ಹಾ ಅವರಿಗೆ ನೀಡಬಹುದು.

  ರಾಜ್ಯ ಸಭಾ ಸದಸ್ಯರಾಗಿದ್ದ, ಮಾಜಿ ಸಚಿವ ದಿನೇಶ್ ತ್ರಿವೇದಿ ಅವರು ಬಂಗಾಳ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ್ದು ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಮನಸ್ ಭೂನಿಯಾ ಅವರು ರಾಜ್ಯದ ಚುನಾವಣೆಯಲ್ಲಿ ಸ್ಪರ್ಧಿಸಿ ಮಮತಾ ಅವರ ಸತತ ಮೂರನೇ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಟಿಎಂಸಿಯ ಎರಡು ರಾಜ್ಯ ಸಭಾ ಸ್ಥಾನಗಳು ತೆರವುಗೊಂಡಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: