ನವ ದೆಹಲಿ (ಏಪ್ರಿಲ್ 17); ಜನವರಿ 26ರಂದು ದೆಹಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ವಿಧ್ವಂಸಕ ಕೃತ್ಯದ ರುವಾರಿ ಎಂದು ಗುರುತಿಸಲಾಗಿರುವ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಇಂದು ಜಾಮೀನು ನೀಡಿ ಮಹತ್ವದ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ 5 ತಿಂಗಳಿನಿಂದ ದೆಹಲಿಯಲ್ಲಿ ಹೋರಾಟದಲ್ಲಿ ತೊಡಗಿದ್ದಾರೆ. ಈ ನಡುವೆ ಕಳೆದ ಜನವರಿ 26 ರಂದು ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. ಆದರೆ, ಈ ವೇಳೆ ರೈತರ ಒಂದು ಗುಂಪು ಕೆಂಪುಕೋಟೆಗೆ ಮುತ್ತಿಗೆ ಹಾಕಿ ಕೋಟೆಯನ್ನು ವಶಪಡಿಸಿಕೊಂಡಿತ್ತು. ಈ ವೇಳೆ ನಡೆದ ಘರ್ಷಣೆಯಲ್ಲಿ ಓರ್ವ ಹೋರಾಟಗಾರ ಮೃತಪಟ್ಟಿದ್ದ. ಈ ಘಟನೆ ನಂತರ ಸ್ಥಳದಿಂದ ಕಾಲ್ಕಿತ್ತಿದ್ದ ದೀಪ್ ಸಿಧುವನ್ನು ನಂತರ ಬಂಧಿಸಲಾಗಿತ್ತು.
ತದನಂತರ ಗಲಭೆಯ ಪ್ರಮುಖ ಆರೋಪಿ ದೀಪ್ ಸಿಧು ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ವಿಚಾರಣೆಗಾಗಿ ದೆಹಲಿ ನ್ಯಾಯಾಲಯ ಆತನನ್ನು ಪೊಲೀಸ್ ಕಸ್ಟಡಿಗೂ ನೀಡಿತ್ತು. ಆದರೆ, ಆತನ ಜಾಮೀನು ಅರ್ಜಿಯ ಕುರಿತ ಆದೇಶವನ್ನು ದೆಹಲಿ ನ್ಯಾಯಾಲಯ ಸೋಮವಾರ ಕಾಯ್ದಿರಿಸಿತ್ತು. ವಿಶೇಷ ನ್ಯಾಯಾಧೀಶ ನೀಲೋಫರ್ ಅಬಿದಾ ಪರ್ವೀನ್, ಸಿಧು ಅವರ ಜಾಮೀನು ಅರ್ಜಿಯ ಆದೇಶವನ್ನು ಏಪ್ರಿಲ್ 15 ರಂದು ಘೋಷಿಸಲಾಗುವುದು ಎಂದಿದ್ದರು.
A Delhi Court grants bail to Deep Sidhu, an accused in the 26th January violence case.
(File photo) pic.twitter.com/vzrEEYuL1d
— ANI (@ANI) April 17, 2021
ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ಪಬ್ಲಿಕ್ ಪ್ರಾಸಿಕ್ಯೂಟರ್, ಸಿಧು ಹಿಂಸಾಚಾರವನ್ನು ಉಂಟುಮಾಡಲು ಮತ್ತು ರಾಷ್ಟ್ರಧ್ವಜವನ್ನು ಕಡೆಗಣಿಸುವ ಉದ್ದೇಶದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಕಾನೂನುಬಾಹಿರ ಘಟನೆಯ ಮುಖ್ಯ ಪ್ರಚೋದಕ ಅವರೆ ಆಗಿದ್ದಾರೆ ಎಂದು ನ್ಯಾಯಾಲಯದಲ್ಲಿ ವಾದಿಸಿದ್ದರು.
ಧಾರ್ಮಿಕ ಧ್ವಜವನ್ನು ಹಾರಿಸಲು ಕೆಂಪು ಕೋಟೆಯಲ್ಲಿ ಜನಸಮೂಹವನ್ನು ಪ್ರಚೋದಿಸಲಿಲ್ಲ ಮತ್ತು ಪ್ರತಿಭಟಿಸುವ ತಮ್ಮ ಮೂಲಭೂತ ಹಕ್ಕು ಚಲಾಯಿಸಿದ್ದೇನೆ ಎಂದು ದೀಪ್ ಸಿಧು ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿದ್ದರು.
"ಪ್ರತಿಭಟಿಸುವ ಹಕ್ಕು ಮೂಲಭೂತ ಹಕ್ಕು, ಅದಕ್ಕಾಗಿಯೇ ನಾನು ಅಲ್ಲಿದ್ದೆ. ನಾನು ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ, ಹಿಂಸಾಚಾರದಲ್ಲಿ ಪಾಲ್ಗೊಳ್ಳುವಂತೆ ನಾನು ಯಾರನ್ನೂ ಒತ್ತಾಯಿಸಲಿಲ್ಲ" ಎಂದು ಸಿಧು ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಲಭೂತ ಹಕ್ಕುಗಳು ಎಂದು ಪೊಲೀಸ್ ಅಧಿಕಾರಿಗಳಿಗೆ ಹಾನಿ ಮಾಡಬಹುದೆಂದು ಅರ್ಥವಲ್ಲ ಎಂದು ದೆಹಲಿ ಪೊಲೀಸರ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದ್ದರು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಕಳೆದ 5 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಜನವರಿ 26 ರಂದು ಬೃಹತ್ ಟ್ರ್ಯಾಕ್ಟರ್ ಪರೇಡ್ ನಡೆಸಲು ರೈತ ಒಕ್ಕೂಟ ಕರೆ ನೀಡಿತ್ತು.
ಗ್ಯಾಂಗ್ಸ್ಟರ್ ಪಾತ್ರಧಾರಿ ಸಿಧು:
36 ವರ್ಷದ ದೀಪ್ ಸಿಧು ಪಂಜಾಬ್ನ ಮುಕ್ಸರ್ ಜಿಲ್ಲೆಯವರು. ಕಾನೂನು ಪದವೀಧರರಾದ ಇವರು ಕಿಂಗ್ಫಿಶರ್ ಮಾಡೆಲ್ ಹಂಟ್ ಪ್ರಶಸ್ತಿ ಪಡೆದು ಬಳಿಕ 2015ರಲ್ಲಿ ಪಂಜಾಬ್ ಸಿನಿರಂಗ ಪ್ರವೇಶ ಮಾಡಿದರು. ರಮ್ತಾ ಜೋಗಿ ಇವರ ಮೊದಲ ಸಿನಿಮಾ. ಮೂರು ವರ್ಷಗಳ ನಂತರ ಜೋರಾ ದಾಸ್ ನುಂಬ್ರಿಯಾ ಎಂಬ ಪಂಜಾಬೀ ಸಿನಿಮಾದಲ್ಲಿ ಇವರು ಗ್ಯಾಂಗ್ಸ್ಟರ್ ಪಾತ್ರ ಮಾಡಿ ಪ್ರಖ್ಯಾತರಾದರು. ಬಿಜೆಪಿ ಸಂಸದ ಸನ್ನಿ ದೇವಲ್ ಅವರ ಜೊತೆಯೂ ಗುರುತಿಸಿಕೊಂಡಿದ್ದರು.
ರೈತರ ಪ್ರತಿಭಟನೆ ಹೊತ್ತಿಕೊಂಡ ಬೆನ್ನಲ್ಲೇ ಬಿಜೆಪಿಯಿಂದ ದೂರವಾಗಿ ರೈತರ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ತಿಳಿದುಬಂದಿದೆ. ಕಳೆದ ನವೆಂಬರ್ನಲ್ಲಿ ಶಂಬು ಗಡಿಭಾಗದಲ್ಲಿ ಪೊಲೀಸರು ಹಾಕಿದ್ದ ತಡೆಗಳನ್ನ ರೈತರು ಮುರಿದುಹಾಕಿದ ಘಟನೆಯ ವೇಳೆಯೂ ಇವರಿದ್ದರು. ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಎಂಬ ಸಂಘಟನೆ ವಿರುದ್ಧದ ಪ್ರಕರಣ ಸಂಬಂಧ ಜನವರಿಯಲ್ಲಿ ದೀಪ್ ಸಿಧು ಮತ್ತವರ ಸಹೋದರ ಮಂದೀಪ್ ಸಿಂಗ್ ಅವರನ್ನ ಎನ್ಐಎ ವಿಚಾರಣೆ ನಡೆಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ