Farmers Protest: ಸ್ವಾರ್ಥ ಮತ್ತು ಬೌದ್ಧಿಕ ದಿವಾಳಿ ತನದಲ್ಲಿ ಕ್ರಿಕೆಟಿಗರು ಸಿನಿಮಾ ತಾರೆಯರನ್ನೂ ಮೀರಿಸಿದ್ದಾರೆ; ನಟ ಚೇತನ್ ಆಕ್ರೋಶ
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್, ಪಾಪ್ ಸಿಂಗರ್ ರಿಹಾನಾ, ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ಸೇರಿದಂತೆ ಹತ್ತಾರು ಜಾಗತಿಕ ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದರು.
ಬೆಂಗಳೂರು (ಫೆಬ್ರವರಿ 06); ಸ್ವಾರ್ಥ ಬೌದ್ಧಿಕ ದಿವಾಳಿತನ ಮತ್ತು ಬೆನ್ನುಮೂಳೆಗಳನ್ನು ಕಳೆದುಕೊಂಡ ಹೇಡಿ ತನದಲ್ಲಿ ಭಾರತೀಯ ಕ್ರಿಕೆಟಿಗರು ಸಿನಿಮಾ ತಾರೆಯರನ್ನೂ ಸಹ ಮೀರಿಸಿದ್ದಾರೆ ಎಂದು ನಟ ಸಾಮಾಜಿಕ ಹೋರಾಟಗಾರ ಚೇತನ್ ಟ್ವಿಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಕಳೆದ ಎರಡು ತಿಂಗಳಿನಿಂದ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟಿಸುತ್ತಿದ್ದಾರೆ. ಪ್ರತಿಭಟನೆ ವೇಳೆ 150ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ, ಈವರೆಗೆ ಯಾವ ಬಾಲಿವುಡ್ ನಟ-ನಟಿಯರು ಕ್ರಿಕೆಟಿಗರು ಈ ಕುರಿತು ಧ್ವನಿ ಎತ್ತಿರಲಿಲ್ಲ. ಆದರೆ, ಕಳೆದ ಬುಧವಾರ ದೆಹಲಿಯಲ್ಲಿನ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಅಮೆರಿಕದ ಖ್ಯಾತ ಪಾಪ್ ಹಾಡುಗಾರ್ತಿ ರಿಹಾನಾ ಟ್ವೀಟ್ ಮಾಡುತ್ತಿದ್ದಂತೆ, ಕ್ರಿಕೆಟರ್ಗಳಾದ ಸಚಿನ್ ತೆಂಡೂಲ್ಕರ್, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ನಟರಾದ ಅಕ್ಷಯ್ ಕುಮಾರ್, ಕಂಗನಾ ರಣಾವತ್ ಈ ಟ್ವೀಟ್ ವಿರೋಧಿಸಿ ರಾಷ್ಟ್ರೀಯತೆಯ ಬಗ್ಗೆ ಮಾತನಾಡಿದ್ದರು.
ಆದರೆ, ಕ್ರಿಕೆಟಿಗರು ಮತ್ತು ಸಿನಿ ತಾರೆಯರ ಈ ಟ್ವೀಟ್ಗಳಿಗೆ ಬಾಲಿವುಡ್ನ ಇನ್ನೂ ಕೆಲ ತಾರೆಯರಾದ ತಾಪ್ಸಿ ಪೊನ್ನು ಹಾಗೂ ಸ್ವರಾ ಭಾಸ್ಕರ್ ಚಕಾರ ಎತ್ತಿದ್ದರು. ಇದರ ಬೆನ್ನಿಗೆ ಇಂದು ನಟ ಚೇತನ್ ಸಹ ಈ ಕುರಿತು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Indian film actors are no more the most self-serving, intellectually vapid, spineless celebrity scourges on the block —> Indian cricket players now carry that mantle! :)
ಈ ಬಗ್ಗೆ ಟ್ವೀಟ್ ಮಾಡಿರುವ ಚೇತನ್, "ಅತ್ಯಂತ ಸ್ವಾರ್ಥಿಗಳು, ಬೌದ್ಧಿಕ ದುರ್ಬಲರು ಮತ್ತು ಹೇಡಿತನಕ್ಕೆ ಪ್ರಸಿದ್ದರಾದವರು ಕೇವಲ ಭಾರತೀಯ ಚಲನಚಿತ್ರ ನಟರು ಮಾತ್ರವಲ್ಲ. ಇನ್ನು ಮುಂದೆ ಆ ವಿಭಾಗಗಳಲ್ಲಿ ಭಾರತೀಯ ಕ್ರಿಕೆಟ್ ಆಟಗಾರರು ಮುನ್ನಡೆ ಸಾಧಿಸಲಿದ್ದಾರೆ" ಎಂದು ಹೇಳುವ ಮೂಲಕ ಕ್ರಿಕೆಟಿಗರ ಹೆಸರೇಳದೆ ಚೇತನ್ ಕಾಲೆಳೆದಿದ್ದಾರೆ.
ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್, ಪಾಪ್ ಸಿಂಗರ್ ರಿಹಾನಾ, ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ಸೇರಿದಂತೆ ಹತ್ತಾರು ಜಾಗತಿಕ ಸೆಲೆಬ್ರೆಟಿಗಳು ಟ್ವೀಟ್ ಮಾಡಿದ್ದರು.
ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ದೆಹಲಿ ಪೊಲೀಸರು ಘರ್ಷಣೆ ನಡೆಸಿದ ನಂತರ ಅಲ್ಲಿ ಇಂಟರ್ನೆಟ್ ಕಡಿತಗೊಳಿಸಿರುವುದನ್ನು ಉಲ್ಲೇಖಿಸಿ ಸಿಎನ್ಎನ್ ಹೋರಾಟದ ಬಗ್ಗೆ ವರದಿ ಮಾಡಿತ್ತು. ಇದನ್ನು ತನ್ನ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದ ಪಾಪ್ ತಾರೆ ರಿಹಾನಾ "ರೈತ ಹೋರಾಟದ ಬಗ್ಗೆ ನಾವೇಕೆ ಮಾತನಾಡುತ್ತಿಲ್ಲ" ಎಂದು ಪ್ರಶ್ನಿಸಿದ್ದರು.
ರಿಹಾನಾ ಟ್ವೀಟ್ ಮಾಡಿದ ನಂತರ ಭಾರತದ ರೈತ ಹೋರಾಟವು ಜಾಗತಿಕವಾಗಿ ಸದ್ದು ಮಾಡಿದ್ದು ಹಲವಾರು, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ರೈತ ಹೋರಾಟದ ಪರವಾಗಿ ಟ್ವೀಟ್ ಮಾಡುತ್ತಿದ್ದಾರೆ. ಇದರ ಬೆನ್ನಿಗೆ ಇಷ್ಟು ದಿನ ರೈತ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಭಾರತದ ಸೆಲೆಬ್ರಿಟಿಗಳೂ ಸಹ ಇದೀಗ ಪರ-ವಿರೋಧ ಚರ್ಚೆಯಲ್ಲಿ ತೊಡಗಿದ್ದು, ಈ ಹೋರಾಟ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ