HOME » NEWS » National-international » ACTOR AJAZ KHAN ARRESTED BY NCB AT MUMBAI IN DRUG CASE HTV SNVS

Ajaz Khan - ಏಜಾಜ್ ಖಾನ್ ಮತ್ತೊಮ್ಮೆ ಅರೆಸ್ಟ್; ಡ್ರಗ್ಸ್ ಕಿಂಗ್​ಪಿನ್ ಜೊತೆ ನಟನಿಗೆ ಇತ್ತಾ ನೇರ ಸಂಪರ್ಕ?

ದ್ವೇಷಪೂರಿತ ಭಾಷಣದ ಆರೋಪದ ಮೇಲೆ ಹಿಂದೆ ಬಂಧಿತರಾಗಿದ್ದ ಬಾಲಿವುಡ್ ನಟ ಏಜಾಜ್ ಖಾನ್ ಅವರನ್ನು ಇದೀಗ ಡ್ರಗ್ಸ್ ಪ್ರಕರಣ ಸಂಬಂಧ ಮತ್ತೊಮ್ಮೆ ಬಂಧಿಸಲಾಗಿದೆ. ಡ್ರಗ್ ಪೆಡ್ಲಿಂಗ್ ಮಾಡುವ ಬಟಾಟಾ ಗ್ಯಾಂಗ್ ಜೊತೆ ಏಜಾಜ್​ಗೆ ಸಂಬಂಧ ಇರುವ ಶಂಕೆ ಇದೆ.

news18-kannada
Updated:March 31, 2021, 11:06 AM IST
Ajaz Khan - ಏಜಾಜ್ ಖಾನ್ ಮತ್ತೊಮ್ಮೆ ಅರೆಸ್ಟ್; ಡ್ರಗ್ಸ್ ಕಿಂಗ್​ಪಿನ್ ಜೊತೆ ನಟನಿಗೆ ಇತ್ತಾ ನೇರ ಸಂಪರ್ಕ?
ಏಜಾಜ್ ಖಾನ್
  • Share this:
ಮುಂಬೈ: ಬಿಗ್ ಬಾಸ್ ಇತ್ಯಾದಿ ಹಲವಾರು ಕಿರುತೆರೆ ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ನಟ ಏಜಾಜ್ ಖಾನ್‍ಗೆ (Ajaz Khan) ಸಲ್ಲುತ್ತದೆ. ಆದರೆ ಕಳೆದ 15 ವರ್ಷಗಳಿಂದ ಇಷ್ಟೆಲ್ಲಾ ಅವಕಾಶಗಳು ಸಿಕ್ಕಿದ್ದರೂ ಏಜಾಜ್ ಸಿನಿಮಾ ಅಥವಾ ಸೀರಿಯಲ್ ಅಥವಾ ಶೋಗಳಿಗಿಂತ ಹೆಚ್ಚಾಗಿ ಸುದ್ದಿ ಮಾಡಿದ್ದು ವಿವಾದಗಳಿಂದ. ಇಂತಹ ಏಜಾಜ್ ಖಾನ್ ಈಗ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ರಾಜಸ್ತಾನದಿಂದ ಮುಂಬೈಗೆ ಬಂದಿಳಿದ ಏಜಾಜ್ ಖಾನ್ ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿ ಕರೆದೊಯ್ದಿದ್ದಾರೆ. ಸಿನಿಮಾರಂಗದಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಪ್ರಮುಖ ಕಿಂಗ್‍ಪಿನ್ ಜೊತೆಗೆ ಏಜಾಜ್ ಖಾನ್ ನಿಕಟ ಸಂಪರ್ಕ ಹೊಂದಿದ್ದು, ಆ ಕುರಿತು ವಿಚಾರಣೆ ನಡೆಸಲು ಎನ್‍ಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

ಏಜಾಜ್ ಖಾನ್ ಬಂಧಿಸಿದ ಬೆನ್ನಲ್ಲೇ ಅವರ ಮನೆ ಹಾಗೂ ಕಚೇರಿ ಸೇರಿದಂತೆ ಎರಡು ಸ್ಥಳಗಳಲ್ಲಿ ಎನ್‍ಸಿಬಿ ಅಧಿಕಾರಿಗಳು ರೇಡ್ ಮಾಡಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಏಜಾಜ್ ಖಾನ್ ಡ್ರಗ್ಸ್ ಪೆಡ್ಲಿಂಗ್‍ನಲ್ಲಿ ತೊಡಗಿರುವ ಬಟಾಟಾ ಗ್ಯಾಂಗ್‍ನ ಸದಸ್ಯ ಎನ್ನಲಾಗಿದೆ. ಫಾರೂಖ್ ಬಟಾಟಾನ ಪುತ್ರ ಶಾದಾಬ್ ಬಟಾಟಾನನ್ನು ಕೆಲ ದಿನಗಳ ಹಿಂದಷ್ಟೇ ಪೊಲೀಸರು ಬಂಧಿಸಿದ್ದರು. ಮಾತ್ರವಲ್ಲ ಶಾದಾಬ್ ಬಟಾಟಾನನ್ನು ಬಂಧಿಸಿದ ಎನ್‍ಸಿಬಿ ಅಧಿಕಾರಿಗಳು ಆತನಿಂದ ಬರೋಬ್ಬರಿ 2 ಕೋಟಿ ರೂಪಾಯಿ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಡ್ರಗ್ ಪೆಡ್ಲರ್‍ಗಳ ಪೈಕಿ ಬಟಾಟಾ ಗ್ಯಾಂಗ್ ಹಾಗೂ ಶಾದಾಬ್ ಬಟಾಟಾನ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು, ಆ ನಿಟ್ಟಿನಲ್ಲೇ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಈಗ ಈ ಬಟಾಟಾ ಗ್ಯಾಂಗ್ ಜತೆಗೆ ಏಜಾಜ್ ಖಾನ್ ಹೆಸರೂ ಥಳಕು ಹಾಕಿಕೊಂಡಿರುವುದು ಸಾಕಷ್ಟು ಕುತೂಹಲಕ್ಕೀಡು ಮಾಡಿದೆ.

ಇದನ್ನೂ ಓದಿ: ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ: ಒಂದೇ ದಿನ 53,480 ಹೊಸ ಪ್ರಕರಣಗಳು ಪತ್ತೆ

ಹಾಗಂತ ಏಜಾಜ್ ಖಾನ್ ವಿವಾದಕ್ಕೀಡಾಗಿರುವುದು, ಬಂಧನಕ್ಕೊಳಗಾಗಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಏಪ್ರಿಲ್‍ನಲ್ಲಿ ಫೇಸ್‍ಬುಕ್ ಲೈವ್ ಬಂದಿದ್ದ ಏಜಾಜ್ ಖಾನ್ ಧರ್ಮಗಳ ನಡುವೆ ದ್ವೇಷ ಬಿತ್ತುವಂತಹ, ಕೋಮುಗಲಭೆ ಉಂಟು ಮಾಡುವಂತಹ ಹೇಳಿಕೆಗಳನ್ನು ನೀಡಿದ್ದ. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಬೇಲ್ ಮೇಲೆ ಹೊರಬಂದ ಏಜಾಜ್ ಕೆಲ ದಿನಗಳ ಕಾಲ ಸುಮ್ಮನಿದ್ದ. ಈಗ ಡ್ರಗ್ಸ್ ಪ್ರಕರಣ ಅವರನ್ನ ಜೈಲಿಗೆ ಮತ್ತೆ ಎಳೆದುಕೊಂಡುಹೋಗುವಂತೆ ಮಾಡಿದೆ.

2020ರ ಜೂನ್ 14ರಂದು ಮುಂಬೈನ ತಮ್ಮ ಮನೆಯಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೂ ಡ್ರಗ್ಸ್‍ಗೂ ನಂಟಿದೆ ಎಂದು ಮುಂಬೈ ಪೊಲೀಸರು ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಅದಾಗಿ ಕೆಲ ದಿನಗಳಲ್ಲೇ ಕರ್ನಾಟಕ ಪೊಲೀಸರು ಹಾಗೂ ಸಿಸಿಬಿಯವರೂ ಸಹ ಅದೇ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದರು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವೆಡೆ ಹಲವಾರು ತಾರೆಯರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಕರ್ನಾಟಕದಲ್ಲಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಬಂಧನವಾಗಿ, ಬಿಡುಗಡೆ ಸಹ ಆಗಿದ್ದಾರೆ. ಆದರೆ ಆ ಸಂದರ್ಭದಲ್ಲಿ ಏಜಾಜ್ ಖಾನ್ ಮೌನಕ್ಕೆ ಶರಣಾಗಿದ್ದು, ಪ್ರಕರಣಕ್ಕೂ ತನಗೂ ಸಂಬಂಧವೇ ಇಲ್ಲವೇನೋ ಎಂಬಷ್ಟು ಅಂತರ ಕಾಯ್ದುಕೊಂಡಿದ್ದರು. ಆದರೆ ಈಗ ಡ್ರಗ್ಸ್ ಪ್ರಕರಣ ಸುತ್ತಿ ಬಳಸಿ ಏಜಾಜ್ ಬುಡಕ್ಕೇ ಬಂದು ನಿಂತಿದೆ.

ವರದಿ: ಹರ್ಷವರ್ಧನ್ ಎಸ್.ಆರ್.
Published by: Vijayasarthy SN
First published: March 31, 2021, 11:06 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories