ದೇಶಾದ್ಯಂತ ಹೋರಾಟಗಾರರ ಬಂಧನ; ಮತ್ತೆ ಮುನ್ನೆಲೆಗೆ ಬಂದ ಪ್ರಧಾನಿ ಮೋದಿ ಹತ್ಯೆಗೆ ಸಂಚಿನ ಪ್ರಕರಣ

ಭೀಮಾ - ಕೋರೆಗಾಂವ್​ ಗಲಭೆ ಪ್ರಕರಣ ಮತ್ತು ಪ್ರಧಾನಿ ಮೋದಿ ಹತ್ಯೆಗೆ ಸಂಚಿನ ಬಗೆಗಿನ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ದೇಶಾದ್ಯಂತ ವಿಚಾರವಾದಿಗಳನ್ನು ಬಂಧಿಸಲಾಗುತ್ತಿದೆ.

news18
Updated:August 28, 2018, 6:09 PM IST
ದೇಶಾದ್ಯಂತ ಹೋರಾಟಗಾರರ ಬಂಧನ; ಮತ್ತೆ ಮುನ್ನೆಲೆಗೆ ಬಂದ ಪ್ರಧಾನಿ ಮೋದಿ ಹತ್ಯೆಗೆ ಸಂಚಿನ ಪ್ರಕರಣ
ಸಾಂದರ್ಭಿಕ ಚಿತ್ರ
news18
Updated: August 28, 2018, 6:09 PM IST
ನ್ಯೂಸ್​ 18 ಕನ್ನಡ

ಮುಂಬೈ (ಆ.28): ನಕ್ಸಲರೊಂದಿಗೆ ಸಂಪರ್ಕವನ್ನು ಹೊಂದಿರುವ ಶಂಕೆ ಮೇಲೆ ಪುಣೆ ಪೊಲೀಸರು ಅನೇಕ  ಹೋರಾಟಗಾರರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಗ್ರಾಮದನಲ್ಲಿ ನಡೆದ ಹಿಂಸಾಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚು ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ.

ಹೈದರಾಬಾದಿನ ಎಡಪಂಥೀಯ ನಾಯಕ ಹಾಗೂ ಕವಿ ವರವರ  ರಾವ್​ ಅವರ ನಿವಾಸ, ಹೋರಾಟಗಾರರಾದ ವೆರ್ನಾನ್​ ಗೊನ್ಜಾಲ್ವಿಸ್​​,  ಅರುಣ್​ ಪರೇರಾ ಮತ್ತು ಕಾರ್ಮಿಕ ಒಕ್ಕೂಟ ಕಾರ್ಯಕರ್ತೆ ಸುಧಾ ಭಾರದ್ವಾಜ್​ , ತಂದೆ ಸ್ಟಾನ್​ ಸ್ವಾಮಿ, ನಾಗರೀಕ ಹಕ್ಕು ಕಾರ್ಯಕರ್ತ ಗೌತಮ್​ ನವಲಕಾ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.

ಕಳೆದ ವರ್ಷ ಪುಣೆಯ ಭೀಮಾ-ಕೋರೆಗಾಂವ್​ ಯುದ್ಧದ 200ನೇ ವಿಜಯೋತ್ಸವದ ಸಂದರ್ಭದಲ್ಲಿ ಕೇಸರಿ ಧ್ವಜ ಹಿಡಿದಿದ್ದ ಯುವಕರು, ದಲಿತ ಸಮುದಾಯದವರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆ ಹಿಂಸಾ ಸ್ವರೂಪ ಪಡೆದು ಮರಾಠ ಸಮುದಾಯದ ಯುವಕನೊಬ್ಬ ಸಾವನ್ನಪ್ಪಿದ್ದ.

ಭೀಮಾ ಕೋರೆಗಾಂವ್​ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ನ್ಯಾಯಾಂಗ ತನಿಖೆಗೆ ಕೂಡ ಆದೇಶ ನೀಡಿತ್ತು.

ಈ ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆ ಪೊಲೀಸರು ನಕ್ಸಲರ ಸಂಪರ್ಕವನ್ನು ಹೊಂದಿದ್ದಾರೆ ಎಂದು 9 ಸಾಮಾಜಿಕ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Loading...

ಕಳೆದ ವರ್ಷ ಡಿಸೆಂಬರ್​ 31ರಂದು ಇಲ್ಘರ್​ ಪರಿಷದ್​ ಕಾರ್ಯಕ್ರಮದಲ್ಲಿ ಐವರನ್ನು ಬಂಧಿಸಲಾಗಿತ್ತು. ಈ ಬಂಧಿತರಲ್ಲಿ ಒಬ್ಬರ ಮನೆಯಲ್ಲಿ ಕವಿ ವರವರ ರಾವ್​ ಹೆಸರು ಹರಿದ ಕಾಗದದಲ್ಲಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭೀಮಾ ಕೊರೇಂಗಾವ್​ನಲ್ಲಿ ಪ್ರಚೋದನಕಾರಿ ಭಾಷಣ ನಡೆಸಿ ಹಿಂಸಾಚಾರಕ್ಕೆ ಕಾರಣವಾಗಿದ್ದರು ಎನ್ನಲಾದ ಐದು ಜನರನ್ನು ಪೊಲೀಸರು ಬಂಧಿಸಿದ್ದರು. ಈ ಐವರು ನಕ್ಸಲರೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು ಎಂದು ಪುಣೆ ಪೊಲೀಸ್​ ಮೂಲಗಳು ತಿಳಿಸಿವೆ.

ನಿರ್ಬಂಧಿತ ನಕ್ಸಲ್​ ಸಂಘಟನೆಯ ಜತೆ ಬಂಧಿತರು ಪ್ರತ್ಯಕ್ಷ ಮತ್ತು ಪರೋಕ್ಷ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬುಕರ್​ ಪ್ರಶಸ್ತಿ ವಿಜೇತೆ ಆರುಂಧತಿ ರಾಯ್​ “ಈ ಗಲಭೆಯಲ್ಲಿ ಭಾಗಿಯಾದ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ವಕೀಲರು, ಕವಿ, ಬರಹಗಾರರು, ದಲಿತ ಹಕ್ಕು ಹೋರಾಟಗಾರರು, ಬುದ್ದಿಜೀವಿಗಳ ಮನೆ ಮೇಲೆ ದಾಳಿಯಾಗಿದೆ. ಮುಂಬರುವ ಚುನಾವಣೆಯ ದೃಷ್ಟಿಯಿಂದ ಈ ದಾಳಿ ನಡೆಯುತ್ತಿದೆ. ಇದು ಅಪಾಯಕಾರಿ. ನಾವೆಲ್ಲಾ ಒಟ್ಟಾಗಬೇಕು. ಇಲ್ಲದಿದ್ದಲ್ಲಿ ನಮ್ಮ ಸ್ವಾತಂತ್ರವನ್ನು ಕಳೆದುಕೊಳ್ಳುತ್ತೇವೆ," ಎಂದಿದ್ದಾರೆ.

ಈ ದಾಳಿಗೆ ಖಂಡನೆ ವ್ಯಕ್ತಪಡಿಸಿರುವ ಆಮ್ನೆಸ್ಟಿ ಇಂಡಿಯಾ ಸಂಸ್ಥೆ “ ಜನರ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ರಕ್ಷಿಸಬೇಕು ಎಂದು ಟ್ವೀಟ್​ ಮಾಡಿದೆ.

ಪುಣೆಯ ಸ್ವರ್ಗೇಟ್​ ಪೊಲೀಸ್​ ಠಾಣೆಯಿಂದ ಈ ದಾಳಿಗೆ ನಿರ್ದೇಶನ ಹೋಗಿದೆ ಎನ್ನಲಾಗಿದೆ. ಆದರೆ ಈ ಠಾಣೆಯ ಇನ್ಸ್​ಪೆಕ್ಟರ್​ರನ್ನು ನ್ಯೂಸ್​ 18 ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಮಾಹಿತಿ ಅವರ ಬಳಿ ಇರಲಿಲ್ಲ.

ಒಂದೆಡೆ ವಿಚಾರವಾದಿಗಳ ಹತ್ಯೆ ಹಿನ್ನೆಲೆಯಲ್ಲಿ ಸನಾತನ ಸಂಸ್ಥಾದಂತಹ ಹಿಂದುತ್ವವಾದಿ ಸಂಘಟನೆಗಳ ಬಗೆಗೆ ಚರ್ಚೆ ಆರಂಭವಾಗಿರುವ ಹೊತ್ತಿಗೆ ದೇಶದ ಪ್ರಧಾನಿ ಹತ್ಯೆ ಸಂಚಿನ ವಿಚಾರವೂ ಸುದ್ದಿ ಕೇಂದ್ರಕ್ಕೆ ಬಂದಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...