ನವದೆಹಲಿ (ಫೆಬ್ರವರಿ 23); ಭಾರತದ ರೈತ ಹೋರಾಟವನ್ನು ಬೆಂಬಲಿಸುವ ಟೂಲ್ಕಿಟ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಬೆಂಗಳೂರಿನ ವಿದ್ಯಾರ್ಥಿನಿ, ಪರಿಸರ ಕಾರ್ಯಕರ್ತೆ ದಿಶಾ ರವಿ (22) ಅವರಿಗೆ ಕೊನೆಗೂ ಇಂದು ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ದಿಶಾ ರವಿ ಅವರ ಜಾಮೀನಿಗೆ ಸಮ್ಮತಿ ನೀಡಿರುವ ಪಟಿಯಾಲ ಹೌಸ್ನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು 1,00,000 ರೂ.ಗಳ ಎರಡು ಜಾಮೀನು ಬಾಂಡ್ ಅನ್ನು ಕೋರ್ಟ್ನಲ್ಲಿಡಲು ಸೂಚಿಸಿದೆ.
ಪಿತೂರಿ ಮತ್ತು ದೇಶದ್ರೋಹದ ಆರೋಪ ಎದುರಿಸುತ್ತಿರುವ ರವಿ ಈ ಹಿಂದೆ ಜಾಮೀನಿಗಾಗಿ ದೆಹಲಿ ಹೈಕೋರ್ಟ್ಗೆ ಮೊಕದ್ದಮೆ ಹೂಡಿದ್ದರು. ಅಲ್ಲದೆ, ತನ್ನ ಮತ್ತು ಇತರೆ ವ್ಯಕ್ತಿಗಳ ನಡುವಿನ ವಾಟ್ಸಾಪ್ ಸೇರಿದಂತೆ ಯಾವುದೇ ಖಾಸಗಿ ಚಾಟ್ಗಳ ವಿಷಯಗಳು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ತಡೆಯಲು ಅರ್ಜಿಯಲ್ಲಿ ಕೋರಲಾಗಿತ್ತು.
ಫೆಬ್ರವರಿ 14 ರಂದು ದೆಹಲಿ ನ್ಯಾಯಾಲಯವು ದಿಶಾ ರವಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿತ್ತು. ಭಾರತ ಸರ್ಕಾರದ ವಿರುದ್ಧ ದೊಡ್ಡ ಪಿತೂರಿ ನಡೆಸಲಾಗಿದೆ ಮತ್ತುಖಲಿಸ್ತಾನ್ ಆಂದೋಲನಕ್ಕೆ ಸಂಬಂಧಿಸಿದ ಅವರ ಪಾತ್ರವನ್ನು ಖಚಿತಪಡಿಸಿಕೊಳ್ಳಲು ತನಿಖೆಗಾಗಿ ಪೊಲೀಸರು ದಿಶಾ ರವಿ ಅವರನ್ನು ಸುಪರ್ದಿಗೆ ಪಡೆದಿದ್ದರು. ಆದರೆ, ಇಂದು ಅವರಿಗೆ ಕೊನೆಗೂ ಜಾಮೀನು ಮಂಜೂರಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ