ಹನುಮಂತ ಮಂದಿರಕ್ಕೆ ಕೇಜ್ರಿವಾಲ್ ಭೇಟಿ – ಎಎಪಿ, ಬಿಜೆಪಿ ‘ಮಲಿನ’ ಸಮರ

ದಲಿತರಿಗೆ ದೇವಸ್ಥಾನ ಪ್ರವೇಶದ ಅವಕಾಶ ಇಲ್ಲದಿದ್ದ ಕಾಲದಲ್ಲೇ ಬಿಜೆಪಿಯವರು ಇದ್ದಾರೆ. ಆ ಶ್ರೀ ರಾಮನೂ ಕೂಡ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಮೂದಲಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

  • News18
  • Last Updated :
  • Share this:
ನವದೆಹಲಿ(ಫೆ. 08): ಇವತ್ತು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಜನರು ಮತಚಲಾಯಿಸುತ್ತಿದ್ದರೂ ರಾಜಕಾರಣಿಗಳ ಬಿಸಿ ಮಾತ್ರ ಆರಲಿಲ್ಲ. ಇವತ್ತೂ ಕೂಡ ವಾಗ್ಸಮರ ಬಲು ಜೋರಾಗೇ ನಡೆದಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿನ್ನೆ ಹನುಮಂತನ ಮಂದಿರಕ್ಕೆ ಹೋಗಿದ್ದು ಈಗ ಬಿಸಿಬಿಸಿ ಚರ್ಚೆ, ವಾಗ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿದೆ. ಕೇಜ್ರಿವಾಲ್ ಭೇಟಿಯ ನಂತರ ಹನುಮಾನ್ ಮಂದಿರ ಅಶುದ್ಧಗೊಂಡಿತು ಎಂದು ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ದೇವರು ಎಲ್ಲರಿಗೂ ಹರಸುತ್ತಾನೆ. ಬಿಜೆಪಿಯವರು ಯಾಕಿಂತಹ ರಾಜಕಾರಣ ಮಾಡುತ್ತಾರೆ ಎಂದು ಕೇಜ್ರಿವಾಲ್ ಇವತ್ತು ಟ್ವೀಟ್ ಮಾಡಿದ್ದಾರೆ.

“ಟಿವಿ ವಾಹಿನಿಯೊಂದರಲ್ಲಿ ಹನುಮಾನ್ ಚಾಲೀಸ ಹೇಳಿದಾಗಿನಿಂದಲೂ ಬಿಜೆಪಿ ನನ್ನನ್ನು ಅಣಗಿಸುತ್ತಲೇ ಇದೆ. ನಿನ್ನೆ ನಾನು ಹನುಮಾನ್ ಮಂದಿರಕ್ಕೆ ಹೋಗಿದ್ದೆ. ನನ್ನ ಭೇಟಿಯಿಂದ ಆ ದೇವಸ್ಥಾನ ಮಲಿನಗೊಂಡಿತು ಎಂದು ಇವತ್ತು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೆಂಥ ರಾಜಕಾರಣ? ದೇವರು ಎಲ್ಲರಿಗೂ ಸೇರಿದ್ದಾನೆ. ಬಿಜೆಪಿಯವರೂ ಸೇರಿದಂತೆ ಎಲ್ಲರಿಗೂ ಆಶೀರ್ವದಿಸುತ್ತಾನೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ಧಾರೆ.

ಇದನ್ನೂ ಓದಿ: ಜಪಾನಿನ ಹಡಗಿನಲ್ಲಿ ಕೊರೊನಾ ರೋಗಪೀಡಿತರ ಮಧ್ಯೆ ಸಿಲುಕಿರುವ 200ಕ್ಕೂ ಹೆಚ್ಚು ಭಾರತೀಯರು

ನಿನ್ನೆ ಶುಕ್ರವಾರದಂದು ದೆಹಲಿಯ ಕನಾಟ್ ಪ್ಲೇಸ್ ಪ್ರದೇಶದಲ್ಲಿರುವ ಪ್ರಖ್ಯಾತ ಹನುಮಾನ್ ಮಂದಿರಕ್ಕೆ ಕೇಜ್ರಿವಾಲ್ ತಮ್ಮ ಪತ್ನಿ ಸಮೇತರಾಗಿ ಹೋಗಿದ್ದರು. ಆ ಫೋಟೋವನ್ನೂ ಅವರು ಶೇರ್ ಮಾಡಿದ್ದರು. ದೆಹಲಿ ಘಟಕದ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರು ಈ ಘಟನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ದೇವಸ್ಥಾನವೇ ಮಲಿನಗೊಂಡಿತು ಎಂದು ಟೀಕಿಸಿದ್ದರು.

“ಅವರು ಪೂಜೆ ಮಾಡಲು ಹೋಗಿದ್ದರೋ ಅಥವಾ ಹನುಮಂತನನ್ನು ಅಶುದ್ಧಗೊಳಿಸಲು ಹೋಗಿದ್ದರೋ? ಚಪ್ಪಲಿ ಬಿಚ್ಚಿದ ಕೈಯಲ್ಲೇ ದೇವರಿಗೆ ಹೂ ತೆಗೆದುಕೊಂಡು ಹೋದರಲ್ಲ, ಅದೆಂಥ ಅಪಚಾರ? ಒಬ್ಬ ನಕಲಿ ಭಕ್ತ ಬಂದರೆ ಆಗುವುದು ಹೀಗೆಯೇ. ನಾನು ಪೂಜಾರಿಗೆ ಹೇಳಿದ ಬಳಿಕ ಹನುಮಂತನ ವಿಗ್ರಹವನ್ನು ಹಲವು ಬಾರಿ ತೊಳೆದರು” ಎಂದು ಮನೋಜ್ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದರು.

ದೆಹಲಿ ಬಿಜೆಪಿ ನಾಯಕನ ಈ ಮಾತಿನ ವರಸೆಗೆ ಎಎಪಿ ನಾಯಕರೂ ತಿರುಗೇಟು ನೀಡಿದರು. “ಬಿಜೆಪಿ ನಾಯಕರು ಒಬ್ಬ ಮುಖ್ಯಮಂತ್ರಿಯನ್ನು ಇಷ್ಟು ಅಸ್ಪೃಶ್ಯತಾ ಭಾವನೆಯಲ್ಲಿ ನೋಡುತ್ತದಾ? ಇದಕ್ಕಿಂತ ಕೆಟ್ಟ ಪ್ರತಿಕ್ರಿಯೆ ಸಾಧ್ಯವಿಲ್ಲ. ದಲಿತರಿಗೆ ದೇವಸ್ಥಾನ ಪ್ರವೇಶದ ಅವಕಾಶ ಇಲ್ಲದಿದ್ದ ಕಾಲದಲ್ಲೇ ನೀವು ಈಗಲೂ ಇದ್ದೀರಿ. ಆ ಶ್ರೀ ರಾಮ ದೇವನೂ ಕೂಡ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ” ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮೂದಲಿಸಿದರು.

ಇದನ್ನೂ ಓದಿ: ಮೀಸಲಾತಿ ನೀಡಿ ಎಂದು ರಾಜ್ಯ ಸರ್ಕಾರಗಳಿಗೆ ಕೋರ್ಟ್ ನಿರ್ದೇಶಿಸಲು ಸಾಧ್ಯವಿಲ್ಲ; ಸುಪ್ರೀಂ ಮಹತ್ವದ ಆದೇಶ

ಕೆಲ ದಿನಗಳ ಹಿಂದೆ ಟಿವಿ ವಾಹಿನಿಯಲ್ಲಿ ಅರವಿಂದ್ ಕೇಜ್ರಿವಾಲ್ ಹನುಮಾನ್ ಚಾಲೀಸ ಪಠಿಸಿದ್ದಕ್ಕೂ ಬಿಜೆಪಿ ನಾಯಕರು ಥರಹೇವಾರಿ ಪ್ರತಿಕ್ರಿಯೆ ನೀಡಿದ್ದರು. “ಈಗ ಅರವಿಂದ್ ಕೇಜ್ರಿವಾಲ್ ಹನುಮಾನ್ ಚಾಲೀಸ ಪಠಿಸಲು ಆರಂಭಿಸಿದ್ಧಾರೆ. ಮುಂದಿನ ದಿನಗಳಲ್ಲಿ ಒವೈಸಿಯೂ ಕೂಡ ಇದನ್ನೇ ಪಠಿಸುತ್ತಾರೆ. ಇದು ನಿಶ್ಚಿತ” ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಚೋದ್ಯ ಮಾಡಿದ್ದರು.

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಇವತ್ತು ಚುನಾವಣೆ ನಡೆದಿದೆ. ಅರವಿಂದ್ ಕೇಜ್ರಿವಾಲ್ ಸತತ ಮೂರನೇ ಬಾರಿ ಸಿಎಂ ಗಾದಿ ಹಿಡಿಯುವ ನಿರೀಕ್ಷೆಯಲ್ಲಿದ್ಧಾರೆ. ಸಿಎಎ, ಎನ್​ಆರ್​ಸಿ ವಿವಾದವು ತಮ್ಮ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿಯೂ ಇನ್ನಿಲ್ಲದ ಕಸರತ್ತು ನಡೆಸಿದೆ. ಫೆ. 11, ಮಂಗಳವಾರ ಮತ ಎಣಿಕೆ ನಡೆಯಲಿದ್ದು, ದೆಹಲಿ ಮತದಾರ ಯಾರ ಕೈಹಿಡಿಯುತ್ತಾನೆ ಎಂಬುದು ಗೊತ್ತಾಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: