ಅಯೋಧ್ಯೆ ಪ್ರಕರಣ: ವಕೀಲ ರಾಜೀವ್ ಧವನ್​ರನ್ನು ಕೈಬಿಟ್ಟ ಮುಸ್ಲಿಮ್ ಕಕ್ಷಿದಾರರು

“ಅವರು ಘನವೆತ್ತ ವ್ಯಕ್ತಿತ್ವದವರು. ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾದ ರೀತಿಯಿಂದ ಅವರಿಗೆ ನೋವಾಗಿದೆ. ಇನ್ನೂ ನಾಲ್ಕು ಅರ್ಜಿಗಳನ್ನು ಸಲ್ಲಿಸುವುದಿದೆ. ಅಷ್ಟರೊಳಗೆ ನಮ್ಮ ಪರವಾಗಿ ಬಂದು ವಾದಿಸುವಂತೆ ಧವನ್ ಅವರ ಮನವೊಲಿಸಲು ಪ್ರಯತ್ನಿಸುತ್ತೇವೆ” ಎಂದು ವಕೀಲರೊಬ್ಬರು ಹೇಳಿದ್ದಾರೆ.

news18
Updated:December 3, 2019, 5:08 PM IST
ಅಯೋಧ್ಯೆ ಪ್ರಕರಣ: ವಕೀಲ ರಾಜೀವ್ ಧವನ್​ರನ್ನು ಕೈಬಿಟ್ಟ ಮುಸ್ಲಿಮ್ ಕಕ್ಷಿದಾರರು
ರಾಜೀವ್ ಧವನ್
  • News18
  • Last Updated: December 3, 2019, 5:08 PM IST
  • Share this:
ನವದೆಹಲಿ(ಡಿ. 03): ಅಯೋಧ್ಯೆ ಬಾಬರಿ ಮಸೀದಿ ಪ್ರಕರಣದಲ್ಲಿ ರಾಮಜನ್ಮಭೂಮಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಮುಂದೇನು ಮಾಡಬೇಕೆಂಬ ವಿಚಾರದಲ್ಲಿ ಮುಸ್ಲಿಮ್ ಕಕ್ಷಿದಾರರ ಗುಂಪಿನಲ್ಲಿ ಗೊಂದಲಗಳು ಮಡುಗಟ್ಟಿವೆ. ಇದರ ಮಧ್ಯೆ, ಜಾಮಿಯಾತ್ ಉಲೇಮಾ ಇ ಹಿಂದ್ ಧಾರ್ಮಿಕ ಸಂಘಟನೆಯ ವತಿಯಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ನಿನ್ನೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ತಿಂಗಳುಗಟ್ಟಲೆ ಹಗಲೂ ಇರುಳು ಕಷ್ಟಪಟ್ಟು ಮುಸ್ಲಿಮ್ ಕಕ್ಷಿದಾರರ ಪರ ವಕಾಲತು ನಡೆಸಿದ್ದ ಹಿರಿಯ ವಕೀಲ ರಾಜೀವ್ ಧವನ್ ಅವರನ್ನು ಜಾಮಿಯಾತ್​ನವರು ಕೈಬಿಟ್ಟಿರುವ ಮಾಹಿತಿ ತಿಳಿದುಬಂದಿದೆ. ರಾಜೀವ್ ಧವನ್ ಅವರೇ ಈ ವಿಚಾರವನ್ನು ಬಹಿರಂಗಪಡಿಸಿದ್ದು, ತಮ್ಮನ್ನು ವಜಾಗೊಳಿಸಿದ ಕ್ರಮವನ್ನು ಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಹಾಗೆಯೇ, ತಮ್ಮನ್ನು ವಜಾಗೊಳಿಸಲು ನೀಡಿದ ಕಾರಣದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ನನಗೆ ಅನಾರೋಗ್ಯವಿಲ್ಲವೆಂಬ ಕಾರಣಕ್ಕೆ ವಜಾಗೊಳಿಸಲಾಗಿದೆ ಎಂಬ ಕಾರಣ ನೀಡಿರುವುದು ಸರಿಯಲ್ಲ ಎಂಬುದು ರಾಜೀವ್ ಧವನ್ ಅವರ ಆಕ್ಷೇಪವಾಗಿದೆ.

ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಅನುಮಾನಾಸ್ಪದ ಚೀನೀ ಹಡಗು ಹಿಮ್ಮೆಟ್ಟಿಸಿದ ಭಾರತೀಯ ನೌಕಾಪಡೆ

“ಬಾಬರಿ ಪ್ರಕರಣದಲ್ಲಿ ಜಾಮಿಯಾತ್​ನ್ನು ಪ್ರತಿನಿಧಿಸುತ್ತಿರುವ ಅಡ್ವೊಕೇಟ್ ಆನ್ ರೆಕಾರ್ಡ್(ಎಒಆರ್) ಇಜಾಜ್ ಮಕ್ಬೂಲ್ ಅವರು ನನ್ನನ್ನು ವಜಾಗೊಳಿಸಿದ್ಧಾರೆ. ಯಾವುದೇ ಆಕ್ಷೇಪವಿಲ್ಲದೇ ಈ ಕ್ರಮವನ್ನು ಒಪ್ಪಿಕೊಂಡು ಅಧಿಕೃತವಾಗಿ ಪತ್ರ ಬರೆದು ಕಳುಹಿಸಿದ್ಧೇನೆ. ಈ ಪ್ರಕರಣದಲ್ಲಾಗಲೀ ಅಥವಾ ಮರುಪರಿಶೀಲನಾ ಅರ್ಜಿಯಲ್ಲಾಗಲೀ ನಾನು ಭಾಗಿಯಾಗಿರುವುದಿಲ್ಲ” ಎಂದು ಫೇಸ್​ಬುಕ್ ಪೋಸ್ಟ್​ನಲ್ಲಿ ರಾಜೀವ್ ಧವನ್ ಸ್ಪಷ್ಟಪಡಿಸಿದ್ಧಾರೆ.

ಸುಪ್ರೀಂ ಕೋರ್ಟ್​ನಲ್ಲಿ ಇಡೀ ಪ್ರಕರಣದ ವಿಚಾರಣೆಯಲ್ಲಿ ಮುಸ್ಲಿಮ್ ಕಕ್ಷಿದಾರರ ಪರ ವಕಾಲತು ನಡೆಸಿದ್ದ ರಾಜೀವ್ ಧವನ್ ಅವರಿಲ್ಲದೆಯೇ ನಿನ್ನೆ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಜಾಮಿಯಾತ್ ಉಲೇಮಾ ಇ ಹಿಂದ್ ಸಂಘಟನೆ ಪರವಾಗಿ ಇಜಾಜ್ ಮಕ್ಬೂಲ್ ಅವರೇ ಅಡ್ವೋಕೇಟ್ ಆನ್ ರೆಕಾರ್ಡ್ ಆಗಿ ಈ ಅರ್ಜಿ ಸಲ್ಲಿಸಿದ್ಧಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಹೊಸ ಸಮಸ್ಯೆ ಸೃಷ್ಟಿಯಾಗದಂತೆ 370ನೇ ವಿಧಿ ರದ್ದು ಮಾಡಿದ್ದೇವೆ; ಜಾರ್ಖಂಡ್ ಚುನಾವಣಾ ಸಮಾವೇಶದಲ್ಲಿ ಮೋದಿ ಹೇಳಿಕೆ

ರಾಜೀವ್ ಧವನ್ ಅವರು ಸೋಮವಾರದಂದು ದಂತವೈದ್ಯ ಕ್ಲಿನಿಕ್​ನಲ್ಲಿದ್ದರು. ಹೀಗಾಗಿ, ಮರುಪರಿಶೀಲನಾ ಅರ್ಜಿ ಸಲ್ಲಿಸುವ ಮುನ್ನ ಅವರೊಂದಿಗೆ ಸಮಾಲೋಚನೆ ನಡೆಸಲು ಸಾಧ್ಯವಾಗಲಿಲ್ಲ ಎಂಬುದು ಇಜಾಜ್ ಮಕ್ಬೂಲ್ ಅವರ ಸ್ಪಷ್ಟನೆ. ಹಾಗೆಯೇ, ಜಾಮಿಯಾತ್ ಸಂಘಟನೆಯ ಅಧ್ಯಕ್ಷ ಅರ್ಷದ್ ಮದನಿ ಕೂಡ ಇದೇ ಕಾರಣ ನೀಡಿದ್ಧಾರೆ. ರಾಜೀವ್ ಧವನ್ ಅವರಿಗೆ ಅನಾರೋಗ್ಯವಿತ್ತು. ಹೀಗಾಗಿ, ಅವರ ಅನುಮೋದನೆ ಇಲ್ಲದೆಯೇ ಅರ್ಜಿ ಹಾಕಲಾಯಿತು ಎಂದಿದ್ದಾರೆ.ರಾಜೀವ್ ಧವನ್ ಅವರು ಇವರಿಬ್ಬರ ಸ್ಪಷ್ಟನೆಗೆ ತಿರುಗೇಟು ನೀಡಿದ್ಧಾರೆ: “ನನಗೆ ಅನಾರೋಗ್ಯವಿದ್ದರಿಂದ ಪ್ರಕರಣದಿಂದ ಕೈಬಿಡಲಾಯಿತು ಎಂದು ಮದನಿ ಹೇಳಿರುವುದು ಗೊತ್ತಾಗಿದೆ. ಇದು ನಿಜಕ್ಕೂ ಮೂರ್ಖತನ. ತಮ್ಮ ವಕೀಲ ಇಜಾಜ್ ಮಕ್ಬೂಲ್ ಮೂಲಕ ನನ್ನನ್ನು ವಜಾಗೊಳಿಸುವ ಹಕ್ಕು ಇದೆ. ಆದರೆ, ಅದಕ್ಕೆ ನೀಡಿರುವ ಕಾರಣ ಮಾತ್ರ ದುರುದ್ದೇಶಪೂರಿತ ಹಾಗೂ ಅಸತ್ಯದಿಂದ ಕೂಡಿದೆ” ಎಂದು ಟೀಕಿಸಿದ್ಧಾರೆ.

ಇದನ್ನೂ ಓದಿ: 370ನೇ ವಿಧಿ ರದ್ದಾದ ಬಳಿಕ ಜಮ್ಮು ಕಾಶ್ಮೀರದಲ್ಲಿ 88 ಭಯೋತ್ಪಾದಕ ಘಟನೆಗಳು; ಕೇಂದ್ರ

ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಮ್ ಗುಂಪುಗಳ ಪರ ಇದ್ದ ಇತರ ವಕೀಲರಿಗೆ ಈ ಹೊಸ ಬೆಳವಣಿಗೆಯು ಇರಿಸುಮುರುಸು ತಂದಿದೆ. ತಮ್ಮ ಗಮನಕ್ಕೆ ತಾರದೆಯೇ ಮೇಲ್ಮನವಿ ಅರ್ಜಿ ಸಲ್ಲಿಸಿರುವುದು ರಾಜೀವ್ ಧವನ್ ಅವರಿಗೆ ನೋವುಂಟು ಮಾಡಿದೆ ಎಂದು ವಕೀಲರೊಬ್ಬರು ಅಭಿಪ್ರಾಯಪಡುತ್ತಾರೆ.

“ಅವರು ಘನವೆತ್ತ ವ್ಯಕ್ತಿತ್ವದವರು. ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾದ ರೀತಿಯಿಂದ ಅವರಿಗೆ ನೋವಾಗಿದೆ. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಬೆಂಬಲದಲ್ಲಿ ಇನ್ನೂ ನಾಲ್ಕು ಅರ್ಜಿಗಳನ್ನು ಸಲ್ಲಿಸುವುದಿದೆ. ಅಷ್ಟರೊಳಗೆ ನಮ್ಮ ಪರವಾಗಿ ಬಂದು ವಾದಿಸುವಂತೆ ಧವನ್ ಅವರ ಮನವೊಲಿಸಲು ಪ್ರಯತ್ನಿಸುತ್ತೇವೆ” ಎಂದು ಈ ವಕೀಲರು ಹೇಳುತ್ತಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 3, 2019, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading