ಜೆಎನ್​ಯು-ಪ್ರೆಸಿಡೆನ್ಸಿಗಳಲ್ಲಿ ಕನ್ಹಯ್ಯ ಕುಮಾರ್​ ನಂತಹ ಸಾವಿರಾರು ವಿದ್ಯಾರ್ಥಿಗಳಿಗೆ ಆದರ್ಶವಾಗಿದ್ದ ಅಭಿಜಿತ್​ ಸಾಧನೆಯ ಹಾದಿ

ಪ್ರೆಸಿಡೆನ್ಸಿಯಲ್ಲಿ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ಪದವಿ ಪಡೆದ ನಂತರ ಅಭಿಜಿತ್ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರೆಸಿ ನಂತರ ಹೆಚ್ಚಿನ ಸಂಶೋಧನೆಗಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. 1988 ರಲ್ಲಿ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಪಡೆದರು.

ನೊಬೆಲ್ ಪುರಸ್ಕೃತ ದಂಪತಿಗಳಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಪ್ಲೊ.

ನೊಬೆಲ್ ಪುರಸ್ಕೃತ ದಂಪತಿಗಳಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡುಪ್ಲೊ.

  • Share this:
ಕೋಲ್ಕತಾ (ಅಕ್ಟೋಬರ್ 15); ಪಶ್ಚಿಮ ಬಂಗಾಳ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರಿಗೆ ಸೋಮವಾರ ಪ್ರಸ್ತುತ ಸಾಲಿನ ಅರ್ಥಶಾಸ್ತ್ರದ ನೊಬೆಲೆ ಪ್ರಶಸ್ತಿ ಘೋಷಿಸಲಾಗಿದೆ. ಈ ಮೂಲಕ ಇಲ್ಲಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ನೊಬೆಲ್ ಪ್ರಶಸ್ತಿ ಪಡೆದಂತಾಗಿದೆ. ಇದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಅಮರ್ಥ್ಯಸೇನ್ 1998ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮೊದಲ ಬಾರಿಗೆ ಸ್ವೀಕರಿಸಿದ್ದರು.

ಭಾರತದಿಂದ ಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಸ್ವೀಕರಿಸಿದ್ದ ಅಮರ್ಥ್ಯಸೇನ್ ಪ್ರಸ್ತುತ ಹಾರ್ವರ್ಡ್​ನಲ್ಲಿನ ಥಾಮಸ್ ಡಬ್ಲ್ಯೂ. ಲ್ಯಾಮೆಂಟ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 1951ರಲ್ಲಿ ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಹೀಗಾಗಿ ಇಬ್ಬರು ಅರ್ಥಶಾಸ್ತ್ರ ನೊಬೆಲ್ ಪುರಸ್ಕೃತರನ್ನು ದೇಶಕ್ಕೆ ನೀಡಿದ ಹಿರಿಮೆಗೆ ಈ ವಿಶ್ವವಿದ್ಯಾಲಯ ಪಾತ್ರವಾಗಿದೆ.

ಸೋಮವಾರ ಅಭಿಜಿತ್ ಬ್ಯಾನರ್ಜಿ ಅವರಿಗೆ ನೊಬೆಲ್ ಪ್ರಶಸ್ತಿ ಘೋಷಿಸುತ್ತಿದ್ದಂತೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡರು.

ನ್ಯೂಸ್ 18 ಜೊತೆಗೆ ಈ ಕುರಿತು ಸಂತಸ ಹಂಚಿಕೊಂಡಿರುವ ವಿಶ್ವವಿದ್ಯಾಲಯದ ಕುಲಪತಿ ಅನುರಾಧಾ ಲೋಹಿಯಾ, “ಇಬ್ಬರು ನೊಬೆಲ್ ಪುರಸ್ಕೃತರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಹೆಮ್ಮೆಗೆ ಇದೀಗ ಪ್ರೆಸಿಡೆನ್ಸಿ ಪಾತ್ರವಾಗಿದೆ. ಈ ಸಂತೋಷದ ಕ್ಷಣಗಳನ್ನು ವ್ಯಕ್ತಪಡಿಸಲು ಪದಗಳಿಲ್ಲ. ಪ್ರೆಸಿಡೆನ್ಸಿ ಈ ಮುಂಚೆ ಕಾಲೇಜ್ ಆಗಿತ್ತು. ಆದರೆ, ಇದು ವಿಶ್ವವಿದ್ಯಾನಿಲಯಕ್ಕೆ ರೂಪಾಂತರಗೊಂಡಾಗ ಹೊಸ ವಿಶ್ವವಿದ್ಯಾಲಯವನ್ನು ನಿರ್ಮಿಸುವಲ್ಲಿ ಅಭಿಜಿತ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಮಾರ್ಗದರ್ಶಿ ಗುಂಪಿನ ಪ್ರಮುಖ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಇದಲ್ಲದೆ ಅವರು ನಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸಲು ವ್ಯಯಕ್ತಿಕ ಆಸಕ್ತಿ ವಹಿಸಿದ್ದರು. ಪ್ರೆಸಿಡೆನ್ಸಿಯಲ್ಲಿ ತಮ್ಮ ತಂದೆ ದೀಪಕ್ ಬ್ಯಾನರ್ಜಿ ಹೆಸರಿನಲ್ಲಿ ಅವರು ನಡೆಸಿಕೊಡುತ್ತಿದ್ದ ಉಪನ್ಯಾಸ ಸರಣಿಗಳಿಂದಲೇ ಅಭಿಜಿತ್ ಬ್ಯಾನರ್ಜಿ ಇಡೀ ಕ್ಯಾಂಪಸ್​ನಲ್ಲಿ ಸಾಕಷ್ಟು ಜನಪ್ರಿಯರಾಗಿದ್ದರು” ಎಂದು ಲೋಹಿಯ ಹಳೆಯ ದಿನಗಳನ್ನು ಮೆಲುಕು ಹಾಕಿದರು.

"ನಾವು 2017 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನ ದ್ವಿಶತಮಾನೋತ್ಸವವನ್ನು ಆಚರಿಸಲು ಯೋಜಿಸುತ್ತಿದ್ದಾಗ ಅಭಿಜಿತ್ ನಮ್ಮ ಸಂಘಟನಾ ಗುಂಪಿನ ಅತ್ಯಂತ ಸಕ್ರಿಯ ಸದಸ್ಯರಾಗಿದ್ದರು. ಅವರು ಆ ಸಮಾರಂಭದ ಪ್ರಮುಖ ಭಾಷಣಕಾರರಾಗಿದ್ದರು. ಅಲ್ಲದೆ, ಪ್ರೆಸಿಡೆನ್ಸಿ ಕಾಲೇಜಿನ ಯಶಸ್ವಿ ಪ್ರಯಾಣ, ಇತಿಹಾಸ ಹಾಗೂ 1819ರಿಂದ ನಮ್ಮ ಶೈಕ್ಷಣಿಕ ಉತ್ಕೃಷ್ಟತೆಯ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ. ಅವರು ನಮ್ಮ ವಿಶ್ವವಿದ್ಯಾಲಯದ ಪ್ರಮುಖ ಆಧಾರಸ್ತಂಭವಾಗಿದ್ದು, ಈ ಬಾರಿ ಡಿಸೆಂಬರ್-ಜನವರಿಯಲ್ಲಿ ನಾವು ಅವರನ್ನು ಸ್ಮಾರಕ ಉಪನ್ಯಾಸಕ್ಕಾಗಿ ಆಹ್ವಾನಿಸಲಿದ್ದೇವೆ” ಎಂದು ಪ್ರೆಸಿಡೆನ್ಸಿ ಕುಲಪತಿ ಲೋಹಿಯ ತಿಳಿಸಿದ್ದಾರೆ.

"ಜೆಎನ್​ಯುನ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಸೌಂದರ್ಯಶಾಸ್ತ್ರದ ಪ್ರಾಧ್ಯಾಪಕ ಮತ್ತು ದಿವಂಗತ ಹಿರಿಯ ನಟ ಉತ್ಪಾಲ್ ದತ್ ಅವರ ಪುತ್ರಿ ಬಿಷ್ಣುಪ್ರಿಯಾ ದತ್ತಾ ಅವರು ಪ್ರೆಸಿಡೆನ್ಸಿಯಲ್ಲಿ ಅಭಿಜಿತ್ ಬ್ಯಾನರ್ಜಿಯ ಕಿರಿಯರಾಗಿದ್ದರು. 80 ರ ದಶಕದಲ್ಲಿ ಪ್ರೆಸಿಡೆನ್ಸಿಯಲ್ಲಿ ಅಭಿಜಿತ್ ನನಗೂ ಹಿರಿಯರಾಗಿದ್ದರು. ಆದರೂ, ನಾವು ಒಟ್ಟಾಗಿ ಗುಂಪುಗಳಾಗಿ ಆಗಾಗ್ಗೆ ಒಟ್ಟಿಗೆ ಸುತ್ತಾಡುತ್ತಿದ್ದೆವು. ವಿದ್ಯಾರ್ಥಿ ಜೀವನದಲ್ಲಿ ಅಭಿಜಿತ್​ ಸ್ಫುರದ್ರೂಪಿ ವಿದ್ಯಾರ್ಥಿಯಾಗಿದ್ದರು.

ಅವರ ತಂದೆ ದೀಪಕ್ ಬ್ಯಾನರ್ಜಿ ಸಹ ಆರ್ಥಿಕ ಶಿಕ್ಷಕರಾಗಿ ಅಪಾರ ಜನಪ್ರಿಯರಾಗಿದ್ದರು. ಅಭಿಜಿತ್ ಅವರ ದೃಷ್ಟಿ ಮತ್ತು ಆಲೋಚನೆಗಳ ವಿಷಯದಲ್ಲಿ ಇತರರಿಗಿಂತ ಸ್ವಲ್ಪ ಭಿನ್ನರಾಗಿದ್ದರು. ಕನ್ಹಯ್ಯ ಕುಮಾರ್ ಸಂಚಿಕೆ ವೇಳೆ ಅವರೂ ಸಹ ಸಾಮೂಹಿಕ ಅರ್ಜಿಗೆ ಸಹಿ ಹಾಕಿದ್ದರು. ಈ ವಿಚಾರದಲ್ಲಿ ನಾನು ನಿಜವಾಗಿಯೂ ಅವರ ಕುರಿತು ಹೆಮ್ಮೆ ಪಡುತ್ತೇನೆ" ಎಂದು ಲೋಹಿಯ ತಿಳಿಸಿದ್ದಾರೆ.

ಕೋಲ್ಕತ್ತಾದ ಸಾಮಾಜಿಕ ವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಇತಿಹಾಸ ಪ್ರಾಧ್ಯಾಪಕರಾದ ತಪತಿ ಗುಹಾ ಠಾಕೂರ್ತಾ ಮಾತನಾಡಿ, “ಕಾಲೇಜು ದಿನಗಳಲ್ಲಿ ನಾನು ಅಭಿಜಿತ್​ಗಿಂತ ಹಿರಿಯ ವಿದ್ಯಾರ್ಥಿ. ಆದರೆ, ಪ್ರತಿಯೊಬ್ಬ ಭಾರತೀಯನು ಇಂದು ಆತನ ಬಗ್ಗೆ ಹೆಮ್ಮೆ ಪಡಬೇಕು. ಅಭಿಜಿತ್ ಪ್ರೆಸಿಡೆನ್ಸಿಯಲ್ಲಿ ನನಗೆ ಕಿರಿಯರಾಗಿದ್ದರೂ ನನ್ನ ಸಹೋದರನಂತೆ ಇದ್ದರು. ಕಳೆದ ವರ್ಷ ನಾನು ಕೆಲಸದ ಮೇಲೆ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ತೆರಳಿದ್ದಾಗ ಅಭಿಜಿತ್ ಅವರನ್ನು ಅಲ್ಲಿ ಭೇಟಿಯಾಗಿದ್ದೆ. ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಸಹ ಅತ್ಯುತ್ತಮ ಅರ್ಥಶಾಸ್ತ್ರಜ್ಞೆ” ಎಂದು ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

ಪ್ರೆಸಿಡೆನ್ಸಿಯಲ್ಲಿ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ಪದವಿ ಪಡೆದ ನಂತರ ಅಭಿಜಿತ್ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರೆಸಿ ನಂತರ ಹೆಚ್ಚಿನ ಸಂಶೋಧನೆಗಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. 1988 ರಲ್ಲಿ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ಪಡೆದರು. ಪ್ರಸ್ತುತ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಫೋರ್ಡ್ ಫೌಂಡೇಶನ್ ಅಂತಾರಾಷ್ಟ್ರೀಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯೂರೋ ಫಾರ್ ರಿಸರ್ಚ್ ಇನ್ ದಿ ಎಕನಾಮಿಕ್ ಅನಾಲಿಸಿಸ್ ಆಫ್ ಡೆವಲಪ್ಮೆಂಟ್ ಅಧ್ಯಕ್ಷರಾಗಿಯೂ ಸಹ ಅಭಿಜಿತ್ ಬ್ಯಾನರ್ಜಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ, ಎನ್​ಬಿಇಆರ್​ ರಿಸರ್ಚ್ ಅಸೋಸಿಯೇಟ್, ಸಿಇಪಿಆರ್ ರಿಸರ್ಚ್ ಫೆಲೋ, ಕೀಲ್ ಇನ್ಸ್ಟಿಟ್ಯೂಟ್​ ಅಂತಾರಾಷ್ಟ್ರೀಯ ರಿಸರ್ಚ್ ಫೆಲೋ, ಅಮೇರಿಕನ್ ಅಕಾಡೆಮಿ ಆಫ್ ಆರ್ಟ್ಸ್ ಅಂಡ್ ಸೈನ್ಸಸ್, ದಿ ಇಕೋನೊಮೆಟ್ರಿಕ್ ಸೊಸೈಟಿ, ಗುಗೆನ್ಹೀಮ್ ಫೆಲೋ. ಆಲ್ಫ್ರೆಡ್ ಪಿ. ಸ್ಲೋನ್ ಫೆಲೋ ಮತ್ತು ಇನ್ಫೋಸಿಸ್ ಸೇರಿದಂತೆ ಹತ್ತಾರು ಪ್ರಶಸ್ತಿಗಳಿಗೆ ಅಭಿಜಿತ್ ಭಾಜನರಾಗಿದ್ದಾರೆ.

ಇದನ್ನೂ ಓದಿ : ಭಾರತೀಯ ಮೂಲದ ಅಭಿಜಿತ್ ಬ್ಯಾನರ್ಜಿ ಸೇರಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ

First published: