Rajya Sabha ಚುನಾವಣೆಗೆ AAP ಅಭ್ಯರ್ಥಿಗಳ ಪಟ್ಟಿ ಔಟ್: ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಕಣಕ್ಕೆ

ಮುಂದಿನ ತಿಂಗಳು ಏಪ್ರಿಲ್ 9 ರಂದು ಐದು ರಾಜ್ಯಸಭಾ ಸೀಟುಗಳು ತೆರವುಗೊಳ್ಳಲಿದ್ದು, ಆ ಸ್ಥಾನಗಳ ಮರುಭರ್ತಿಗಾಗಿ ಇದೇ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಆಪ್ ಪಕ್ಷವು ಈ ಬಗ್ಗೆ ಅಧಿಕೃತವಾಗಿ ಟ್ವಿಟ್ ಮಾಡಿದ್ದು ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ.

ಆಪ್​​ ಅಭ್ಯರ್ಥಿಗಳು

ಆಪ್​​ ಅಭ್ಯರ್ಥಿಗಳು

 • Share this:
  ಇತ್ತೀಚೆಗಷ್ಟೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ (Election Results) ಹೊರಬಿದ್ದಿದ್ದು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ(BJP) ಜಯಭೇರಿ ಬಾರಿಸಿದ್ದರೆ ಪಂಜಾಬ್ ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಆಪ್ (AAP) ಪಕ್ಷವು ಅಭೂತಪೂರ್ವ ಸಾಧನೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಮಧ್ಯೆ ಪಂಜಾಬ್ ಜನರನ್ನು ಸಂಸತ್‌ನ ಮೇಲ್ಮನೆಯಲ್ಲಿ ಪ್ರತಿನಿಧಿಸಲು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ (Rajya Sabha Election 2022) ಇದೇ ಮಾರ್ಚ್ 31 ರಂದು ಚುನಾವಣೆ ನಡೆಯಲಿದ್ದು ಅದಕ್ಕಾಗಿ ಸ್ಪರ್ಧಿಸಲು ಆಪ್ ಪಕ್ಷವು ನಾಮನಿರ್ದೇಶಿತರ ಪಟ್ಟಿಯನ್ನು ಅಂತಿಮಗೊಳಿಸಿ ಬಿಡುಗಡೆ ಮಾಡಿದೆ. ಆಮ್ ಆದ್ಮಿ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಸಹ ಚುನಾವಣೆಯ ಕಣಕ್ಕಿಳಿದಿದ್ದಾರೆಂಬುದು ವಿಶೇಷ. ಇವರ ಜೊತೆ ಐಐಟಿಯ ಪ್ರೊಫೆಸರ್ ಆಗಿರುವ ಸಂದೀಪ್ ಪಾಠಕ್, ಶಿಕ್ಷಣ ತಜ್ಞ ಅಶೋಕ್ ಕುಮಾರ್ ಮಿತ್ತಲ್ ಹಾಗೂ ದೆಹಲಿ ಕ್ಷೇತ್ರದ ಶಾಸಕರಾದ ರಾಘವ್ ಚಡ್ಡಾ ನಾಮಿನೇಶನ್ ಸಲ್ಲಿಸಿದ್ದಾರೆ.

  ಮಾರ್ಚ್ 31 ರಂದು ಚುನಾವಣೆ

  ಮುಂದಿನ ತಿಂಗಳು ಏಪ್ರಿಲ್ 9 ರಂದು ಐದು ರಾಜ್ಯಸಭಾ ಸೀಟುಗಳು ತೆರವುಗೊಳ್ಳಲಿದ್ದು, ಆ ಸ್ಥಾನಗಳ ಮರುಭರ್ತಿಗಾಗಿ ಇದೇ ಮಾರ್ಚ್ 31 ರಂದು ಚುನಾವಣೆ ನಡೆಯಲಿದೆ. ಆಪ್ ಪಕ್ಷವು ಈ ಬಗ್ಗೆ ಅಧಿಕೃತವಾಗಿ ಟ್ವಿಟ್ ಮಾಡಿದ್ದು ತನ್ನ ಅಭ್ಯರ್ಥಿಗಳನ್ನು ಹೆಸರಿಸಿದೆ. ಆಪ್ ಹಂಚಿಕೊಂಡಿರುವ ಫೋಟೋದಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಅವರು ನಾಮಿನೇಶನ್ ಸಲ್ಲಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಧರಿಸಿದ್ದ ಹಳದಿ ಬಣ್ಣದ ಸಿಖ್ ಪೇಟದಿಂದ ಪ್ರಭಾವಿತರಾದಂತೆ ಕಂಡುಬಂದ ಹರ್ಭಜನ್ ಸಹ ನಾಮಿನೇಶನ್ ಸಲ್ಲಿಸುವಾಗ ಹಳದಿ ಬಣ್ಣದ ಟರ್ಬನ್ ಧರಿಸಿದ್ದನ್ನು ಕಾಣಬಹುದು.

  ಇದನ್ನೂ ಓದಿ: Punjab Cabinet: ಆಪ್ ಸರ್ಕಾರದ 10 ಸಚಿವರಲ್ಲಿ ನಾಲ್ವರು ದಲಿತರು!

  ನಾಮಿನೇಶನ್ ಸಲ್ಲಿಸುವ ತುಣುಕು ವಿಡಿಯೋ ಹಂಚಿಕೊಂಡಿರುವ ಆಪ್ "ಕ್ರಿಕೆಟರ್ ಹರ್ಭಜನ್ ಸಿಂಗ್ ಅವರು ಆಪ್ ಪಕ್ಷದ ವತಿಯಿಂದ ಪಂಜಾಬ್ ಕ್ಷೇತ್ರದಿಂದ ರಾಜ್ಯಸಭಾ ಎಂಪಿಗಾಗಿ ತಮ್ಮ ಉಮ್ಮೇದುವಾರಿಕೆಯನ್ನು ಸಲ್ಲಿಸಿದರು. ಬೌಲಿಂಗ್ ದಂತಕಥೆಯಾಗಿ ಭಾರತ ಹೆಮ್ಮೆ ಪಡುವಂತೆ ಮಾಡಿದ ನಂತರ ಶ್ರೀ ಟರ್ಬೊನೇಟರ್ ಅವರು ಇದೀಗ ಸಂಸತ್‌ನಲ್ಲಿ ತಮ್ಮ ಪಂಜಾಬ್ ಜನರಿಗಾಗಿ ಧ್ವನಿ ಎತ್ತಲಿದ್ದಾರೆ " ಎಂದು ಬರೆದುಕೊಂಡಿದೆ.

  ಹರ್ಭಜನ್ ಸಿಂಗ್​ ಆಯ್ಕೆ  

  ಪಂಚರಾಜ್ಯ ಚುನಾವಣೆಗಳ ಮುಂಚೆ ಹರ್ಭಜನ್ ಸಿಂಗ್ ಅವರು ಮತ್ತೊಬ್ಬ ಮಾಜಿ ಕ್ರಿಕೆಟಿಗ ಹಾಗೂ ಪ್ರಸ್ತುತ ಕಾಂಗ್ರೆಸ್ ನಾಯಕರಾಗಿರುವ ನವಜೋತ್ ಸಿಂಗ್ ಸಿದ್ಧು ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಹರ್ಭಜನ್ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ದಟ್ಟ ಊಹಾಪೋಹಗಳು ಹರಿದಾಡಿದ್ದವು. ಆದರೆ ಹರ್ಭಜನ್ ಅವರು ಇದನ್ನು ತಳ್ಳಿಹಾಕಿದ್ದರು ಹಾಗೂ ಇದು ಸತ್ಯವಲ್ಲ ಎಂದು ಹೇಳಿದ್ದರು. ಅದರಂತೆಯೇ ಹರ್ಭಜನ್ ಅವರು ಕಾಂಗ್ರೆಸ್ ಸೇರದೆ ಆಪ್ ಸೇರಿಕೊಂಡು ಚುನಾವಣೆಗೆ ನಿಂತಿದ್ದು ಅವರ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಸಂತಸ ಉಂಟು ಮಾಡಿದೆ ಎಂತಲೇ ಹೇಳಬಹುದು.

  ಇದನ್ನೂ ಓದಿ: 2ನೇ ಬಾರಿಗೆ ಮಣಿಪುರ ಸಿಎಂ ಆದ Biren Singh.. ಫುಟ್ಬಾಲ್ ಆಟಗಾರ, ಯೋಧ, ಪತ್ರಕರ್ತ CM ಆಗಿದ್ದೇ ರೋಚಕ!

  ಆಪ್​​ ಬಲಾಬಲ 

  ಈಗಾಗಲೇ ನಿಮಗೆ ಗೊತ್ತಿರುವಂತೆ ಪಂಜಾಬ್ ರಾಜ್ಯದ 117 ವಿಧಾನಸಭೆ ಸೀಟುಗಳ ಪೈಕಿ ಆಮ್ ಆದ್ಮಿ ಪಕ್ಷವು ಭರ್ಜರಿಯಾಗಿ 92 ಸೀಟುಗಳನ್ನು ಗೆದ್ದಿದೆ. ಅಚ್ಚರಿಯೆಂದರೆ ಕಾಂಗ್ರೆಸ್‌ನ ಭದ್ರಕೋಟೆಯೆಂದೇ ಪರಿಗಣಿಸಲ್ಪಡುತ್ತಿದ್ದ ಪಂಜಾಬ್‌ನಲ್ಲಿ ಎಂದಿಗೂ ಕಾಣದಂತಹ ಸೋಲು ಇಲ್ಲಿ ಕಂಡಿದೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ನವಜೋತ್ ಸಿಂಗ್ ಸಿದ್ಧು ಅವರು ಸಹ ಚುನಾವಣೆಯಲ್ಲಿ ಸ್ಪರ್ದಿಸಿ ಸೋತಿರುವುದು ಕಾಂಗ್ರೆಸ್‌ಗೆ ಒಂದು ರೀತಿಯಲ್ಲಿ ನುಂಗಲಾರದ ತುತ್ತಾದಂತಾಗಿದೆ. ಈಗ ಮತ್ತೆ ರಾಜ್ಯಸಭಾ ಚುನಾವಣೆ ನಡೆಯಲಿದ್ದು ಇದಾದ ಬಳಿಕ ಮೇಲ್ಮನೆಯಲ್ಲಿ ಆಪ್ ಸ್ಥಾನಗಳ ಬಲಾಬಲ ಏನಿಲ್ಲವೆಂದರೂ ಮೂರರಿಂದ ಎಂಟು ಸ್ಥಾನಕ್ಕೆ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ.

  ನಾಮಿನೇಶನ್ ಸಲ್ಲಿಸಿರುವ ಎಎಪಿಯ ಮತ್ತೊಬ್ಬ ಅಭ್ಯರ್ಥಿಯಾದ ಸಂದೀಪ್ ಪಾಠಕ್ ಅವರು ವೃತ್ತಿಯಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಪಂಜಾಬ್ ನಲ್ಲಿ ಆಪ್ ಇಷ್ಟೊಂದು ಅಭೂತಪೂರ್ವ ಗೆಲುವು ಸಾದಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆನ್ನಲಾಗಿದೆ. ಸಂದೀಪ್ ಅವರು ಅರವಿಂದ ಕೆಜ್ರಿವಾಲ್ ಹಾಗೂ ಇತ್ತೀಚಿಗಷ್ಟೇ ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಭಗವಂತ್ ಮಾನ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆನ್ನಲಾಗಿದೆ.
  Published by:Kavya V
  First published: