ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯಲು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಆಪ್; ಸಿಎಎ ವಿಚಾರವಾಗಿ ತಟಸ್ಥ ನಿಲುವು

ಆಮ್ ಆದ್ಮಿ ಪಕ್ಷವೇನೋ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ವಿಷಯದಲ್ಲಿ ಡಿಪ್ಲೊಮೆಟಿಕ್ ಆದ ಅಥವಾ ನಾಜೂಕುತನದ ನಡೆ ಇಡುತ್ತಿದೆ‌. ಆದರೆ ಇದೇ ಕಾಯಿದೆ ವಿಷಯದಲ್ಲಿ ಆಪ್ ಅನ್ನು ಸಂಕಷ್ಟಕ್ಕೆ ಸಿಲುಕಿಸಲು ಬಿಜೆಪಿ ಏನು ತಂತ್ರಗಾರಿಕೆ ಮಾಡುತ್ತೆ? ಎನ್ನುವುದನ್ನು ಇನ್ನೂ ಕುತೂಹಲಕಾರಿ ವಿಷಯ.

news18-kannada
Updated:January 13, 2020, 7:18 PM IST
ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯಲು ಎಚ್ಚರಿಕೆಯ ಹೆಜ್ಜೆ ಇಡುತ್ತಿರುವ ಆಪ್; ಸಿಎಎ ವಿಚಾರವಾಗಿ ತಟಸ್ಥ ನಿಲುವು
ಮೋದಿ ಮತ್ತು ಕೇಜ್ರಿವಾಲ್​​
  • Share this:
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೆಡೆ ಕೊರೆಯುವ ಚಳಿ, ಇನ್ನೊಂದೆಡೆ ವಿಧಾನಸಭೆ ಚುನಾವಣೆಯ ಬಿಸಿ. ಮತ್ತೊಮ್ಮೆ ದೆಹಲಿ ಗದ್ದುಗೆ ಹಿಡಿಯಲು ಆಡಳಿತಾರೂಢ ಆಮ್ ಆದ್ಮಿ‌ ಪಕ್ಷ ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇವತ್ತು ಕಾಂಗ್ರೆಸ್ ಕರೆದಿದ್ದ ವಿರೋಧ ಪಕ್ಷಗಳ ಸಭೆಗೆ ಆಮ್ ಆದ್ಮಿ‌ ಪಕ್ಷ ಗೈರು ಆಗಿರುವುದು.

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ವಿಷಯಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಂಚೂಣಿ ನಾಯಕರು ಮಾತನಾಡಿದ್ದರಾದರೂ ನಿರ್ದಿಷ್ಟವಾಗಿ ನಮ್ಮದು ಇದೇ ನಿಲುವು ಅಂತಾ ಹೇಳಿಲ್ಲ. ಇದೇ ರೀತಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ತೀವ್ರವಾಗಿ ಮತ್ತು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್ ಕರೆದಿದ್ದ ವಿಪಕ್ಷಗಳ ಸಭೆಯಿಂದಲೂ ಆಮ್ ಆದ್ಮಿ ಪಕ್ಷ ದೂರ ಉಳಿದಿದೆ‌.

ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿದರೆ ಕೆಲ ಪ್ರಮಾಣದಲ್ಲಾದರೂ ಹಿಂದೂ ಮತಗಳು ದೂರವಾಗಬಹುದು ಎಂಬುದು ಆಮ್ ಆದ್ಮಿ ಪಕ್ಷದ ಸಿಂಪಲ್ ಲೆಕ್ಕಾಚಾರ. ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸುವುದರಿಂದ ಅಥವಾ ವಿರೋಧಿಸುವುದರಿಂದ ಇಂಥದೇ ಪರಿಣಾಮ ಬೀರಬಹುದು ಎಂಬುದು ಇನ್ನೂ ಸ್ಪಷ್ಟವಾಗಿ ಸಾಬೀತಾಗಿಲ್ಲ. ಈ‌ ಕಾಯಿದೆ ಜಾರಿ ಆದ ಮೇಲೆ ಜಾರ್ಖಂಡ್ ಚುನಾವಣೆ ನಡೆಯಿತು. ಅಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸೋತಿತು. ಹಾಗಂತ ಜನ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಇದ್ದಾರೆ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಜಾರ್ಖಂಡ್ ನಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಕಳೆದ ಬಾರಿಗಿಂತ ಹೆಚ್ಚಾಗಿದೆ. ಹೀಗೆ ಈ ವಿವಾದಾತ್ಮಕ ಕಾಯಿದೆ ಬೀರುವ ಪರಿಣಾಮದಲ್ಲಿ ಸ್ಪಷ್ಟತೆ ಇಲ್ಲದಿರುವುದರಿಂದ ಆಮ್ ಆದ್ಮಿ ಪಕ್ಷ ಕೂಡ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಇಂದಿನ ವಿಪಕ್ಷಗಳ ಸಭೆಯಿಂದ ದೂರ ಉಳಿಯುವ ಮೂಲಕ ಆಮ್ ಆದ್ಮಿ ಪಕ್ಷ ಇನ್ನೊಂದು ಸಂದೇಶವನ್ನೂ ರವಾನಿಸಿದೆ. ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರೆ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್ ಪರ ಎಂಬ ಅಥವಾ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಸಂದೇಶಗಳು ಹೋಗುವ ಸಾಧ್ಯತೆ ಇತ್ತು. ಅಥವಾ ಬಿಜೆಪಿ ಇಂಥ ಆರೋಪ ಮಾಡುತ್ತಿತ್ತು. ಕಳೆದ ಬಾರಿ ಮಾಡಿತ್ತು. ಈ ಎಲ್ಲದರ ಗೊಡವೆಯೇ ಬೇಡ ಎಂದು ಆಮ್ ಆದ್ಮಿ ಪಕ್ಷ ಅಂತರ ಕಾಯ್ದುಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಆಪ್ ಸಮಾನವಾದ ಅಂತರ ಕಾಯ್ದುಕೊಂಡಿತ್ತು‌‌. ಜೊತೆಗೆ 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ 67 ಕ್ಷೇತ್ರದಲ್ಲಿ ಗೆಲ್ಲುವ ಮೂಲಕ‌ ಕ್ಲೀನ್ ಸ್ವೀಪ್ ಮಾಡಿತ್ತು.

ಇದನ್ನು ಓದಿ: ದೆಹಲಿ ಚುನಾವಣೆಗೆ ಮುನ್ನ ಕಾಂಗ್ರೆಸ್​ಗೆ ಭಾರೀ ಹಿನ್ನೆಡೆ; ಕೈ ತೊರೆದು ಆಪ್ ಸೇರಿದ ಮತ್ತಿಬ್ಬರು ನಾಯಕರು

ಆಮ್ ಆದ್ಮಿ ಪಕ್ಷವೇನೋ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ವಿಷಯದಲ್ಲಿ ಡಿಪ್ಲೊಮೆಟಿಕ್ ಆದ ಅಥವಾ ನಾಜೂಕುತನದ ನಡೆ ಇಡುತ್ತಿದೆ‌. ಆದರೆ ಇದೇ ಕಾಯಿದೆ ವಿಷಯದಲ್ಲಿ ಆಪ್ ಅನ್ನು ಸಂಕಷ್ಟಕ್ಕೆ ಸಿಲುಕಿಸಲು ಬಿಜೆಪಿ ಏನು ತಂತ್ರಗಾರಿಕೆ ಮಾಡುತ್ತೆ? ಎನ್ನುವುದನ್ನು ಇನ್ನೂ ಕುತೂಹಲಕಾರಿ ವಿಷಯ.
First published: January 13, 2020, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading