ಗೂಡು ಬದಲಿಸುವುದೇ ಹಳ್ಳಿ ಹಕ್ಕಿ? ಹೆಚ್. ವಿಶ್ವನಾಥ್ ಗೆ AAP ಪಕ್ಷ ಗಾಳ

ಎಎಪಿ ನಾಯಕರೊಂದಿಗೆ ಹೆಚ್​ ವಿಶ್ವನಾಥ್​​

ಎಎಪಿ ನಾಯಕರೊಂದಿಗೆ ಹೆಚ್​ ವಿಶ್ವನಾಥ್​​

ದೆಹಲಿಯಲ್ಲಿ ಹೆಚ್. ವಿಶ್ವನಾಥ್ ಅವರನ್ನು ಭೇಟಿ ಮಾಡಿದ ದೆಹಲಿಯ ಆಪ್ ಶಾಸಕ ದಿನೇಶ್ ಮೊಹನೀಯ ಅವರು 'ಹಳ್ಳಿ ಹಕ್ಕಿ'ಗೆ 'ಪೊರಕೆಯಲ್ಲಿ ಗೂಡು ಕಟ್ಟಿಕೊಳ್ಳುವಂತೆ' ಕೇಳಿಕೊಂಡಿದ್ದಾರೆ. ನಿಮ್ಮಂತಹ ಹಿರಿಯರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  • Share this:

ನವದೆಹಲಿ, ಮಾ. 31: ಇತ್ತೀಚೆಗೆ ಗಡಿ ರಾಜ್ಯ ಪಂಜಾಬ್‌ನಲ್ಲಿ (Border State Punjab) ಅಧಿಕಾರ ಗಳಿಸಿದ ಬಳಿಕ ಭಾರೀ ಹುಮ್ಮಸ್ಸಿನಲ್ಲಿರುವ ಆಮ್ ಆದ್ಮಿ ಪಕ್ಷ (Aam Admi Party) ಈಗ ಕರ್ನಾಟಕದಲ್ಲೂ (Karnataka) ನೆಲೆಯೂರಲು ಪ್ರಯತ್ಬಿಸುತ್ತಿದೆ. ಈಗಾಗಲೇ ಹಲವಾರು ನಾಯಕರ ಸಂಪರ್ಕ ಮಾಡಿದೆ. ಇದೀಗ ಸದಾ ಸುದ್ದಿಯಲ್ಲಿರುವ, ವಿವಾದಗಳಿಗೆ ಎದೆಗುಂದದ, ಯಾವುದೇ ಪಕ್ಷದಲ್ಲಿದ್ದರೂ ಅಲ್ಲಿನ ವ್ಯವಸ್ಥೆ ಬಗ್ಗೆ ದನಿ ಎತ್ತುವ 'ಹಳ್ಳಿ ಹಕ್ಕಿ' ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್  (Vishwanath H) ಅವರನ್ನು ಆಮ್ ಆದ್ಮಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು‌ ತಿಳಿದುಬಂದಿದೆ. 


ವಿಶ್ವನಾಥ್ - ದಿನೇಶ್ ಮೊಹನೀಯ ಭೇಟಿ
ಗುರುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಹೆಚ್. ವಿಶ್ವನಾಥ್ ಅವರನ್ನು ಭೇಟಿ ಮಾಡಿದ ದೆಹಲಿಯ ಸಂಗಂ ವಿಹಾರ್ ಕ್ಷೇತ್ರದ ಹಿರಿಯ ಶಾಸಕ ದಿನೇಶ್ ಮೊಹನೀಯ ಅವರು 'ಹಳ್ಳಿ ಹಕ್ಕಿ'ಗೆ 'ಪೊರಕೆಯಲ್ಲಿ ಗೂಡು ಕಟ್ಟಿಕೊಳ್ಳುವಂತೆ' ಕೇಳಿಕೊಂಡಿದ್ದಾರೆ. ದೇಶದಲ್ಲಿ ಆಮ್ ಆದ್ಮಿ ಪಕ್ಷ ಬಹಳ ವೇಗವಾಗಿ ಬೆಳೆಯುತ್ತಿದೆ. ನಮ್ಮದು 'ಭವಿಷ್ಯದ ಪಕ್ಷ', ನಿಮ್ಮಂತಹ ಹಿರಿಯರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.


ಬಿಜೆಪಿ ಕೋಮು ರಾಜಕಾರಣಕ್ಕೆ ವಿಶ್ವನಾಥ್ ತರಾಟೆ
ಕಾಕತಾಳೀಯ ಎಂಬಂತೆ ಗುರುವಾರ ಬೆಳಿಗ್ಗೆ ವಿಶ್ವನಾಥ್ ಅವರು ರಾಜ್ಯದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಘರ್ಷದ ಬಗ್ಗೆ ಕ್ರಮ ಕೈಗೊಳ್ಳದೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ತಮ್ಮದೇ ಬಿಜೆಪಿ ಪಕ್ಷದ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದರು. ರಾಜ್ಯದಲ್ಲಿ ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ. ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ ಅಥವಾ ಭಜರಂಗದಳದ ಸರ್ಕಾರ ಅಲ್ಲ. ಕೆಲವು ಸಂಘಟನೆಗಳು ಸಂವಿಧಾನವನ್ನು ಮೀರಿ ವರ್ತಿಸುತ್ತಿವೆ‌ ಎಂದು ಕಿಡಿ ಕಾರಿದ್ದರು.


ಇದನ್ನು ಓದಿ: ಸಂವಿಧಾನ ಮೀರಿ ವರ್ತಿಸಲು ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ; RSS, VHP, ಬಜರಂಗದಳ ಸರ್ಕಾರ ಅಲ್ಲ: ಹೆಚ್. ವಿಶ್ವನಾಥ್


ಟಿಪ್ಪು ಸುಲ್ತಾನ್ ಒಂದು ಇತಿಹಾಸ
ಟಿಪ್ಪು ಸುಲ್ತಾನ್ ಒಂದು ಇತಿಹಾಸ. ಈ ಭೂಮಿ ಮೇಲೆ ಸೂರ್ಯ ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರುತ್ತಾರೆ‌ ಟಿಪ್ಪು ಸುಲ್ತಾನ್ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಆಡಳಿತದ ವಿರುದ್ಧ ದ್ವನಿ ಎತ್ತಿದ್ದವರು ಅವರ ತೇಜೋವಧೆ ಸಲ್ಲದು ಎಂದ ವಿಶ್ವನಾಥ್ ಅವರು ಸದ್ಯ ದೇವಸ್ಥಾನ ಬಳಿ ಮುಸ್ಲಿಮರು ವ್ಯಾಪಾರ ಮಾಡಬೇಡಿ, ಹಲಾಲ್ ಮಾಡಬೇಡಿ ಎನ್ನುವುದು ಸರಿಯಲ್ಲ. ಇವೆಲ್ಲವೂ ಸಮಾಜವನ್ನು ಘಾಸಿಗೊಳಿಸುತ್ತವೆ. ಕೆಲವು ಸಂಘಟನೆಗಳು ಸಂವಿಧಾನಕ್ಕಿಂತ ಮೀರಿ ವರ್ತಿಸುತ್ತಿವೆ. ಹದ್ದು ಮೀರಿ ವರ್ತಿಸುತ್ತಿವೆ. ಜನರಿಂದ ಆಯ್ಕೆಯಾದ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಆಗ್ರಹಕ್ಕೆ ಮಾಡುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದಲ್ಲಿ ಶಾಂತಿಯನ್ನು ಕಾಪಡಬೇಕು ಎಂದು ಒತ್ತಾಯಿಸಿದ್ದರು.


ಆಪ್  ಉಸ್ತುವಾರಿಯಾಗಿ ದಿಲೀಪ್‌ ಕುಮಾರ್‌ ನೇಮಕ
ಕರ್ನಾಟಕದಲ್ಲಿ ಮುಂದಿನ‌ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ನಿರ್ಧರಿಸಿರುವ ಆಪ್ ಕರ್ನಾಟಕ ಚುನಾವಣಾ ಉಸ್ತುವಾರಿಯಾಗಿ ದೆಹಲಿ ಶಾಸಕ ದಿಲೀಪ್‌ ಪಾಂಡೆ ಅವರನ್ನು ನೇಮಕ ಮಾಡಿದೆ. ಉತ್ತರಪ್ರದೇಶ ಮೂಲದವರಾದ ದಿಲೀಪ್‌ ಪಾಂಡೆ 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಭಾರತ ಸತ್ಯಾಗ್ರಹದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದರು. ನಂತರ ಅರವಿಂದ್‌ ಕೇಜ್ರಿವಾಲ್‌ ಆಮ್‌ ಆದ್ಮಿ ಪಾರ್ಟಿ ಸ್ಥಾಪಿಸಿದಾಗ ಪಕ್ಷಕ್ಕೆ ಸೇರ್ಪಡೆಯಾದರು. 2015ರಲ್ಲಿ ಪಕ್ಷದ ದೆಹಲಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ದಿಲೀಪ್‌ ಪಾಂಡೆ ಅದೇ ವರ್ಷ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಬಹುಮತದೊಂದಿಗೆ ಗೆದ್ದಿದ್ದರ ಹಿಂದೆ ಮಹತ್ವದ ಪಾತ್ರವಹಿಸಿದ್ದರು. ಪ್ರಸ್ತುತ ದೆಹಲಿಯ ತಿಮಾರ್ಪುರ ಕ್ಷೇತ್ರದ ಶಾಸಕರಾಗಿ , ದೆಹಲಿ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಎಎಪಿ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಇದನ್ನು ಓದಿ: ನಾಳೆ ತುಮಕೂರಿಗೆ Amit Shah; ಸಿದ್ದಗಂಗಾ ಮಠದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದ ಸಿಎಂ


ಈಗಾಗಲೇ ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹೊಂದಿರುವ ಆಮ್‌ ಆದ್ಮಿ ಪಾರ್ಟಿಗೆ ಇತರೆ ರಾಜ್ಯಗಳಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದಿಲೀಪ್‌ ಪಾಂಡೆಯವರು ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವುದು ಮಹತ್ವ ಪಡೆದುಕೊಂಡಿದೆ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕದ ಮಾಧ್ಯಮ ಸಂಚಾಲಕ ಜಗದೀಶ್‌ ವಿ. ಸದಂ ತಿಳಿಸಿದ್ದಾರೆ.

First published: