ನವ ದೆಹಲಿ (ಜೂನ್ 15): ಭಾರತೀಯ ನಾಗರಿಕರಿಗೆ ಅತ್ಯಂತ ಮಹತ್ವದ ದಾಖಲೆಯಾಗಿರುವ ಆಧಾರ್ (Aadhar) ಕಾರ್ಡ್‌ನ ಡೇಟಾ ಮತ್ತೊಮ್ಮೆ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ ಸರ್ಕಾರ (Government of India) ನೀಡುವ ಆಧಾರ್ ಜನರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುತ್ತದೆ. ಇದು ಲೀಕ್ ಆಗಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಈ ಬಾರಿ ಸರ್ಕಾರಿ ವೆಬ್ ಸೈಟ್ ಮೂಲಕ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿಗಳು ತಿಳಿದುಬಂದಿದೆ. ಭದ್ರತಾ ಸಂಶೋಧಕರ ವರದಿಯ ಪ್ರಕಾರ, ದೇಶದ ರೈತರ (Farmer) ಅನುಕೂಲಕ್ಕಾಗಿ ರಚಿಸಲಾದ ಸರ್ಕಾರಿ ವೆಬ್‌ಸೈಟ್ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ‘ (Pradhan Mantri Kisan Samman Nidhi) ಪೋರ್ಟಲ್‌ನಿಂದ ಸುಮಾರು 11 ಕೋಟಿ ರೈತರ ಆಧಾರ್ ಡೇಟಾ ಸೋರಿಕೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಡೇಟಾ ಏನಾದರೂ ಸೈಬರ್ ದರೋಡೆಕೋರರು ಕೈ ಸೇರಿದ್ದಲ್ಲಿ ಅದನ್ನು ಬಳಸಿಕೊಂಡು ಮೋಸ ಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಯಾವ ವಿವರಗಳು ಸೋರಿಕೆಯಾಗಿವೆ:
ಭದ್ರತಾ ಸಂಶೋಧಕ ಅತುಲ್ ನಾಯರ್ ಅವರ ಮಾಹಿತಿಯಂತೆ, ‘ಪ್ರಧಾನ ಮಂತ್ರಿ ಕಿಸಾನ್ ಯೋಜನಾ ವೆಬ್‌ಸೈಟ್‌ನ ಒಂದು ಭಾಗದ ಮೂಲಕ ನೋಂದಾಯಿತ ರೈತರ ಆಧಾರ್ ಸಂಖ್ಯೆಗಳು ಸೋರಿಕೆಯಾಗಿವೆ. ಪೋರ್ಟಲ್‌ನಲ್ಲಿನ ದೋಷದಿಂದಾಗಿ, ವೆಬ್‌ಸೈಟ್‌ನ ಒಂದು ಭಾಗವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ನೋಂದಾಯಿಸಲಾದ ರೈತರ ಆಧಾರ್ ಸಂಖ್ಯೆಯನ್ನು ತೋರಿಸುತ್ತಿದೆ. ಜನವರಿ ಅಂತ್ಯದಲ್ಲಿ ಈ ಸಮಸ್ಯೆಯನ್ನು ಸಂಶೋಧಕರು ಮೊದಲು ಗಮನಿಸಿದರು ಮತ್ತು ಭಾರತ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಗೆ ವರದಿ ಮಾಡಲಾಗಿದೆ‘ ಎಂದು ಹೇಳಿದ್ದಾರೆ.
ಕೆಲವೇ ತಿಂಗಳಲ್ಲಿ ಸಮಸ್ಯೆಗೆ ಪರಿಹಾರ:
ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಕೂಡಲೇ ಈ ವರದಿಯನ್ನು ನೋಡಲ್ ಏಜೆನ್ಸಿ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ ಕೆಲವೇ ತಿಂಗಳಲ್ಲಿ ಸಮಸ್ಯೆ ಸರಿಪಡಿಸಲಾಗಿದೆ. ಜನವರಿಯಲ್ಲಿ ಬಂದ ಈ ಸಮಸ್ಯೆ ಮೇ ಅಂತ್ಯದ ವೇಳೆಗೆ ಸಂಪೂರ್ಣ ನಿವಾರಣೆಯಾಗಿದೆ ಎಂದು ನಾಯರ್ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. CERT-In ಸಹ ಸಮಯಕ್ಕೆ ಸಮಸ್ಯೆ ಪರಿಹಾರದಲ್ಲಿ ಸಹಾಯ ಮಾಡಿದ್ದಕ್ಕಾಗಿ ಸಂಶೋಧಕರನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: PM Kisan: ರೈತರಿಗೆ ಹಣ ಕೊಟ್ಟು ಜೊತೆಗೆ ಶಾಕ್ ಕೊಟ್ಟ ಸರ್ಕಾರ! ಸಾವಿರಾರು ಅನ್ನದಾತರಿಗೆ ನೋಟಿಸ್
ಪಿಎಂ ಕಿಸಾನ್‌ನಲ್ಲಿ ಎಷ್ಟು ನೋಂದಣಿಯಾಗಿದೆ:
ರೈತರಿಗೆ ನೇರ ನಗದು ಪ್ರಯೋಜನಗಳನ್ನು ನೀಡಲು ಸರ್ಕಾರವು 2019ರಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಮೂಲಕ ರೈತರ ನೋಂದಣಿಯನ್ನು ಈ ಸರ್ಕಾರಿ ವೆಬ್‌ಸೈಟ್‌ನಲ್ಲಿ ಮಾಡಲಾಗಿದೆ. ಇದುವರೆಗೆ ಸುಮಾರು 11 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಯೋಜನೆಯಡಿ ರೈತರಿಗೆ ಪ್ರತಿ ತಿಂಗಳು 500 ರೂ.ಗಳನ್ನು ನೀಡಲಾಗುತ್ತಿದ್ದು, ಇದರ ಕಂತನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ನೇರವಾಗಿ ಖಾತೆಗೆ 2,000 ರೂ. ಹಾಕಲಾಗುತ್ತದೆ. ಸರ್ಕಾರಿ ವೆಬ್‌ಸೈಟ್‌ನಿಂದ ಆಧಾರ್ ಕಾರ್ಡ್ ವಿವರಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಜಾರ್ಖಂಡ್ ಸರ್ಕಾರದ ಸಾವಿರಾರು ಉದ್ಯೋಗಿಗಳ ಆಧಾರ್ ಡೇಟಾ ಸೋರಿಕೆಯಾಗಿತ್ತು.
ಇದನ್ನೂ ಓದಿ: PM Kisan Scheme: 11ನೇ ಕಂತಿನ ಹಣ ಖಾತೆಗೆ ಬಂದಿಲ್ವಾ? ಹಾಗಿದ್ರೆ ನೀವು ಹೀಗ್ ದೂರು ನೀಡ್ಬಹುದು
ಪಿಎಂ ಕಿಸಾನ್ ಹಣ ಬಂದಿಲ್ಲದಿದ್ದರೆ ಹೀಗೆ ದೂರು ನೀಡಿ:
ಒಂದು ವೇಳೆ ನಿಮಗೆ ಹನ್ನೊಂದನೇ ಕಂತಿನ ಹಣ ಜಮೆ ಆಗಿಲ್ಲದಿದ್ದರೆ, ನೀವು ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ - 011-24300606 ಗೆ ಕರೆ ಮಾಡಬಹುದು. ನೀವು ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ 18001155266 ಕ್ಕೂ ಕೂಡಾ ಕರೆ ಮಾಡಬಹುದು. ಇದಲ್ಲದೇ PMkisan-ict@gov.in ಗೆ ಮೇಲ್ ಮಾಡುವ ಮೂಲಕ ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿಗೆ ಹಣವನ್ನು ಸ್ವೀಕರಿಸದ ಕಾರಣವನ್ನು ನೀವು ಕೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ