ನವ ದೆಹಲಿ: ಹೋಳಿ ಹಬ್ಬ ಆಚರಣೆ (Holi Celebration) ವೇಳೆ ಜಪಾನ್ ಮೂಲದ ಯುವತಿಯೊಬ್ಬಳಿಗೆ (Japan Girl) ಯುವಕರ ಗುಂಪು ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಹೋಳಿ ಹಬ್ಬದ ವೇಳೆ ಬಣ್ಣ ಎರಚುವ ಆಟ ಆಡುತ್ತಿದ್ದರು. ಈ ವೇಳೆ ಯುವಕರ ಗುಂಪು ಯುವತಿಯೊಬ್ಬಳನ್ನು ಹಿಡಿದು ಎಳೆದಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಆಕ್ರೋಶ ಕೇಳಿ ಬಂದಿದೆ.
ದೆಹಲಿಯ ಪಹರಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೋಳಿ ಹಬ್ಬದ ಸಂಭ್ರಮದ ನಡುವೆ ಯುವಕರ ಗುಂಪು ಜಪಾನ್ ಯುವತಿಯನ್ನು ಹಿಡಿದು ಎಳೆದಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ತಲೆಗೆ ಮೊಟ್ಟೆ ಒಡೆದಿದ್ದಾರೆ. ಬಣ್ಣ ಎರಚಿದ್ದು ಮಾತ್ರವಲ್ಲ, ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಅನುಚಿತವಾಗಿಯೂ ವರ್ತಿಸಿದ್ದಾರೆ. ಈ ವೇಳೆ ಯುವತಿ ಯುವಕನೊಬ್ಬನ ಕೆನ್ನೆಗೆ ಹೊಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಈ ಕುರಿತು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕಪಾಳಕ್ಕೆ ಬಾರಿಸಿದ ಯುವತಿ
ಇನ್ನು ಜಪಾನ್ ಯುವತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕನ ಕಪಾಳಕ್ಕೆ ಬಾರಿಸುತ್ತಿದ್ದಂತೆ ಅಲ್ಲಿಂದ ಯುವಕರನ್ನು ಇದು ಮತ್ತೂ ಕೆರಳಿಸಿದ್ದು, ಮತ್ತೇನಾಯಿತು ಅಂತ ನೊಡೋವಷ್ಟರಲ್ಲಿ ವಿಡಿಯೋ ಕೊನೆಗೊಂಡಿದೆ. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಯುವಕರ ಪತ್ತೆಗಾಗಿ ತಂಡವನ್ನು ರಚಿಸಿ ಶೋಧ ಆರಂಭಿಸಿದ್ದಾರೆ.
ಮೂವರ ಬಂಧನ
ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿಗೆ ಕಿರುಕುಳ ನೀಡಿದ ಮೂವರು ಯುವಕರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ ಈ ಘಟನೆ ನಡೆದ ನಂತರ ಯುವತಿ ಭಾರತದಿಂದ ವಾಪಸ್ ಹೋಗಿದ್ದಾಳೆ ಎಂದು ತಿಳಿದು ಬಂದಿದ್ದು, ಆಕೆ ಭಾರತದಿಂದ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಯುವತಿ ಮೇಲೆ ಮೊಟ್ಟೆ ಎಸೆತ
ವೈರಲ್ ಆಗಿರುವ ವಿಡಿಯೋದಲ್ಲಿ ಹೋಳಿ ಇದೆ ಎಂದು ಕೂಗುತ್ತಾ ಯುವತಿಯ ಮೇಲೆ ಬಲವಂತವಾಗಿ ಬಣ್ಣ ಎರಚಿದ್ದಾರೆ. ಮತ್ತೊಬ್ಬ ಯುವಕ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡರೆ ಮತ್ತೊಬ್ಬ ಆಕೆಯ ತಲೆ ಮೇಲೆ ಮೊಟ್ಟೆ ಒಡೆಯುತ್ತಿರುವುದು ಕಾಣಿಸುತ್ತದೆ. ಈ ಯುವಕರಿಂದ ತಪ್ಪಿಸಿಕೊಳ್ಳಲು ಆಕೆ, "ಬೈ, ಬೈ" ಎಂದು ಹೇಳುತ್ತಾಳೆ. ಆದರೂ ಅವರು ಬಿಟ್ಟಿಲ್ಲ. ಕೊನೆಗೆ ಆಕೆ ಒಬ್ಬನ ಕೆನ್ನೆಗೆ ಹೊಡೆದು ಅಲ್ಲಿಂದ ಹೊರಡುತ್ತಾಳೆ.
ಹಲವರು ಈ ವಿಡಿಯೋವನ್ನು ದೆಹಲಿ ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಟ್ಯಾಗ್ ಮಾಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿರುವ ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಯುವತಿಯ ಸಂಪರ್ಕ ಮಾಡಲು ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೆಹಲಿ ಪೊಲೀಸರು ಜಪಾನ್ ರಾಯಭಾರ ಕಚೇರಿಯನ್ನು ಸಂಪರ್ಕ ಮಾಡಿ ಮಾಹಿತಿ ತಲುಪಿಸಿದ್ದು, ವಿಡಿಯೋದಲ್ಲಿ ಕಿರುಕುಳಕ್ಕೆ ಒಳಗಾದ ಮಹಿಳೆಯನ್ನು ಗುರುತಿಸಿ ಮಾಹಿತಿ ನಿಡುವಂತೆ ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ