Indian Railway: ಚಲಿಸುತ್ತಿದ್ದ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಆಕೆಗೆ ವೈದ್ಯಕೀಯ ನೆರವನ್ನು ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಕೂಡ ಟ್ವಿಟರ್​ ಮೂಲಕ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮುಂಬೈ (ಆ. 30):  ಚಲಿಸುತ್ತಿದ್ದ ರೈಲಿನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಗೋರಖ್​ಪುರ್​- ಪನ್ವೇಲ್​ ಎಕ್ಸ್​ಪ್ರೆಸ್​ನಲ್ಲಿ (Gorakhpur-Panvel Express) ಪ್ರಯಾಣಿಸುತ್ತಿದ್ದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ರೈಲ್ವೇ ಸಚಿವಾಲಯ (Railway ministry) ಟ್ವೀಟ್​ ಮೂಲಕ ತಿಳಿಸಿದೆ. ಮಹಾರಾಷ್ಟ್ರದಿಂದ ಪ್ರಯಾಣಿಸುತ್ತಿದ್ದ ಮಹಿಳೆಗೆ ಮಾರ್ಗ ಮಧ್ಯೆದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಮುನ್ನವೇ ಆಕೆಗೆ ರೈಲಿನಲ್ಲಿ ಹೆರಿಗೆಯಾಗಿದೆ. ಈ ವೇಳೆ ಭೂಸವಲ್​ ನಿಲ್ದಾಣದಲ್ಲಿ ಹಾಜರಿದ್ದ ವೈದ್ಯರು ಆಕೆಯ ಸಹಾಯಕ್ಕೆ ಬಂದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

    ಮಹಾರಾಷ್ಟ್ರದ ಜಲಗಾಂವ್​​ನ ಭೂಸವಾಲ್​ನಿಂದ ಪ್ರಯಾಣ ಆರಂಭಿಸುತ್ತಿದ್ದಂತೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಲ್ಲಿಯೇ ಆಕೆಗೆ ವೈದ್ಯಕೀಯ ನೆರವನ್ನು ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಕೂಡ ಟ್ವಿಟರ್​ ಮೂಲಕ ತಿಳಿಸಿದೆ. ಶನಿವಾರ ಈ ಘಟನೆ ನಡೆದಿದ್ದು, ತಾಯಿ ಮತ್ತು ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಸಿವಿಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ತಿಳಿಸಲಾಗಿದೆ.
    ರೈಲ್ವೇ ಇಲಾಖೆ ತಾಯಿ ಮತ್ತು ಮಗುವಿನ ಫೋಟೋವನ್ನು ಹಂಚಿಕೊಂಡಿದ್ದು, ಅಮ್ಮನ ಪಕ್ಕದಲ್ಲಿ ನವಜಾತ ಶಿಶು ಅಳುತ್ತಿರುವ ದೃಶ್ಯಗಳು ಎಲ್ಲರ ಮನಗೆದ್ದಿದೆ.



    ಚಲಿಸುವ ರೈಲಿನಲ್ಲಿ ಹೆರಿಗೆಯಾಗಿರುವ ಪ್ರಕರಣಗಳು ಇದೇ ಮೊದಲಲ್ಲ. ಈ ರೀತಿಯ ಹತ್ತಾರು ಪ್ರಕರಣಗಳು ನಡೆದಿದೆ, ಕಳೆದ ವರ್ಷ ಕೂಡ ಶ್ರಮಿಕ್​ ವಿಶೇಷ ರೈಲಿನಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು.

    ರೈಲಿನಲ್ಲಿ ಈ ರೀತಿಯ ಘಟನೆಗಳು ನಡೆದ ಸಂದರ್ಭದಲ್ಲಿ ಅಥವಾ ಅನಾರೋಗ್ಯ ಮತ್ತಿತ್ತರ ಸಮಸ್ಯೆ ಕಂಡು ಬಂದಾಗ ಈ ಕುರಿತು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದರೆ ಸಾಕು. ಮುಂದಿನ ನಿಲ್ದಾಣದಲ್ಲಿ ವೈದ್ಯಕೀಯ ಸಹಾಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ರೈಲ್ವೆ ಕಾಲೋನಿಯಲ್ಲಿರುವ ವೈದ್ಯರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಕಾಪಾಡಲು ಸನ್ನದ್ಧರಾಗಿರುತ್ತಾರೆ ಎಂದು ರೈಲ್ವೇ ಇಲಾಖೆ ವಕ್ತಾರರು ತಿಳಿಸಿದ್ದಾರೆ.

    ರೈಲ್ವೇ ಇಲಾಖೆ ಮಗುವಗೆ ಜನ್ಮ ನೀಡಿದ ಕುರಿತು ಸುದ್ದಿ ಹಂಚಿಕೊಳ್ಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅನೇಕರು, ಮಗುವಿಗೆ ಜೀವನ ಪೂರ್ತಿ ರೈಲಿನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದಿದ್ದಾರೆ. ಅಲ್ಲದೇ, ಅನೇಕರು ಅವರಿಗೆ ದೇವರು ಕಾಪಾಡಲಿ ಎಂದು ಟ್ವೀಟ್​ ಮಾಡಿದ್ದಾರೆ.





    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: