ಮುಂಬೈ: ವಿಮೆ (Insurance) ಹಣಕ್ಕಾಗಿ (Money) ಕೊಲೆ ಮಾಡಿರುವ ಹಲವು ಘಟನೆಗಳ ಬಗ್ಗೆ ನಾವು ಕೇಳಿರುತ್ತೇವೆ. ಆದರೆ ತಾಯಿಯೊಬ್ಬಳು ಬದುಕಿರುವ ತನ್ನ ಮಗ ಸತ್ತಿದ್ದಾನೆಂದು ಇನ್ಶೂರೆನ್ಸ್ ಹಣಕ್ಕೆ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿರುವ ಘಟನೆ ಬಳಕಿಗೆ ಬಂದಿದೆ. 50 ವರ್ಷದ ಮಹಿಳೆಯೊಬ್ಬರು ತನ್ನ 29 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಸುಳ್ಳು ದಾಖಲೆ (Fake Document) ಸೃಷ್ಟಿಸಿ 2 ಕೋಟಿ ವಿಮೆ ಪಡೆಯಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ( Maharashtra) ನಡೆದಿದೆ. ತಾಯಿಯ ಈ ಮಾಸ್ಟರ್ ಪ್ಲಾನ್ ಹಿಂದೆ ಮಗನೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿ ಪಾರ್ಕ್ ಪೊಲೀಸರು ಅಹಮದ್‌ನಗರ ಮೂಲದ ಮಹಿಳೆ ನಂದಾಬಾಯಿ ಪ್ರಮೋದ ತಕ್ಸಾಲೆ ಮತ್ತು ಅವರ ಮಗ ದಿನೇಶ್ ವಿರುದ್ಧ ವಂಚನೆ, ನಕಲಿ ಮತ್ತು ನಂಬಿಕೆ ದ್ರೋಹದ ಅಪರಾಧವನ್ನು ದಾಖಲಿಸಿದ್ದಾರೆ.
ಅಪಘಾತದಲ್ಲಿ ಸಾವು ಎಂದು ನಕಲಿ ದಾಖಲೆ ಸೃಷ್ಟಿ
ದಿನೇಶ್ 2015ರಲ್ಲಿ ಎಲ್‌ಐಸಿ ದಾದರ್ (ಪಶ್ಚಿಮ) ಶಾಖೆಯಿಂದ ಪಾಲಿಸಿಯನ್ನು ಖರೀದಿಸಿ ಪ್ರೀಮಿಯಂ ಪಾವತಿಸಿದ್ದರು. ಮಾರ್ಚ್ 14, 2017 ರಂದು ನಂದಾಬಾಯಿ ತಕ್ಸಾಲೆ ತಮ್ಮ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಇನ್ಶೂರೆನ್ಸ್ ಹಣಕ್ಕೆ ಅರ್ಜಿಸಲ್ಲಿಸಿದ್ದರು. ದಿನೇಶ್ ಡಿಸೆಂಬರ್ 25, 2016 ರಂದು ಅಹಮದ್ ನಗರ ಜಿಲ್ಲೆಯ ನಗರ ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.
ನಕಲಿ ದಾಖಲೆ, ಮರಣ ಪ್ರಮಾಣ ಪತ್ರ ಸಲ್ಲಿಕೆ
ಆದರೆ ಎಲ್‌ಐಸಿ ಅಧಿಕಾರಿಗಳು ಆಕೆಯ ಅರ್ಜಿಯನ್ನು ಪರಿಶೀಲಿಸುವಾಗ, ಕೆಲವು ದಾಖಲೆಗಳು ಬೋಗಸ್ ಎಂದು ಕಂಡುಬಂದಿದ್ದು, ಮಹಿಳೆಯ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಅಲ್ಲದೆ ಆಕೆ ಸಲ್ಲಿಸಿದ್ದ ಮರಣ ಪ್ರಮಾಣಪತ್ರವೂ ಸಹ ನಕಲಿ ಎಂಬುದು ಸಾಬೀತಾಗಿದೆ ಎಂದು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮೆ ಹಣ ತೆಗೆದುಕೊಳ್ಳಲು ನಂದಾಬಾಯಿ ತಮ್ಮ ಮಗ ದಿನೇಶ್ ಅವರ ವಾರ್ಷಿಕ ಆದಾಯ 8 ಕೋಟಿ ಎಂದು ಅರ್ಜಿಯ ಜೊತೆಗೆ ಕೆಲವು ದಾಖಲಾತಿಗಳನ್ನು ಸಲ್ಲಿಸಿದ್ದರು. ಅಲ್ಲದೆ 38.85 ಲಕ್ಷ ಕೃಷಿ ಆದಾಯ ಮತ್ತು ಹೋಟೆಲ್ ಉದ್ಯಮದಿಂದ 3 ಲಕ್ಷ ಆದಾಯವಿದೆ ಎಂದು ನಾಲ್ಕು ವರ್ಷಗಳ ನಕಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮೆ ಹಣಕ್ಕಾಗಿ ತಂದೆ ಕೊಲೆ
ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಅಪಘಾತ ವಿಮೆ ಹಣವನ್ನು ಪಡೆಯಲು ತನ್ನ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಇದು ಅಪಘಾತವಲ್ಲ ಕೊಲೆ ಎಂದು ಸಾಬೀತಾಗಿತ್ತು.
ಆರೋಪಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ತನ್ನ 52 ವರ್ಷದ ತಂದೆ ಮೃತಪಟ್ಟಿದ್ದಾರೆ ಎಂದು ಸೆಂಧ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿದಾಗ ಇದು ಅಪಘಾತವಲ್ಲ, ಪೂರ್ವ ನಿಯೋಜಿತ ಕೊಲೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಏಕೆಂದರೆ ಕೊಲೆಯಾದ ವ್ಯಕ್ತಿಗೆ ಡಿಕ್ಕಿ ಹೊಡೆದ ವಾಹನ ಅದೇ ಸ್ಥಳದಲ್ಲಿ ಸುತ್ತುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪತ್ತೆಯಾಗಿತ್ತು. ಸಂತ್ರಸ್ತರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಸಂಚು ರೂಪಿಸಲಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತಂದೆ ಹೊರ ಹೋಗಿದ್ದನ್ನು ಕರೆ ಮಾಡಿ ತಿಳಿಸಿದ್ದ ಮಗ
ಸಂತ್ರಸ್ತ ವ್ಯಕ್ತಿಗೆ ಪ್ರತಿದಿನ ಬೆಳಗ್ಗೆ ವಾಕಿಂಗ್‌ಗೆ ಹೋಗುವ ಅಭ್ಯಾಸವಿತ್ತು. ನವೆಂಬರ್ 10 ರಂದು ಆರೋಪಿ ತನ್ನ ತಂದೆ ವಾಕಿಂಗ್‌ಗೆ ಮನೆಯಿಂದ ಹೊರಟರು ಎಂಬ ಮಾಹಿತಿಯನ್ನು ಕೊಲೆಗಾರನಿಗೆ ದೂರವಾಣಿ ಕರೆ ಮಾಡಿದ್ದಾನೆ. ನಂತರ ಆರೋಪಿಗಳು ಸಂತ್ರಸ್ತನನ್ನು ಹಿಂಬಾಲಿಸಿ ಯಾರು ಇಲ್ಲದ ಸ್ಥಳದಲ್ಲಿ ಕಾರು ಹರಿಸಿ ಕೊಂದು ಪರಾರಿಯಾಗಿದ್ದಾರೆ.
2.5 ಲಕ್ಷಕ್ಕೆ ಸುಪಾರಿ
ತನಿಖೆಯ ನಂತರ ಶಂಕಿತ ಕರಣ್ ಶಿಂಧೆ ಎಂಬುವವನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ, ಸಂತ್ರಸ್ತರ ಮಗ ಈ ಕೊಲೆಗೆ 2.5 ಲಕ್ಷ ರೂಪಾಯಿ ನೀಡುವುದಾಗಿ ಸುಪಾರಿ ನೀಡಿದ್ದಾನೆಂದು ಆತ ಒಪ್ಪಿಕೊಂಡಿದ್ದಾನೆ.
ಸಂತ್ರಸ್ತನ ಮಗ ತನ್ನ ತಂದೆಗೆ 10 ಲಕ್ಷ ರೂಪಾಯಿಯ ಅಪಘಾತ ವಿಮೆ ಮಾಡಿಸಿದ್ದು, ಆ ಹಣವನ್ನು ಪಡೆಯಲು ತಂದೆಯಲ್ಲಿ ಕೊಲ್ಲಿಸಲು ಕೊಲೆಗಾರನನ್ನು ನೇಮಿಸಿದ್ದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ