ಕ್ಯಾನ್ಸರ್ (Cancer) ರೋಗ ಎಷ್ಟು ಭಯಂಕರವಾಗಿದೆ ಅಂತ ಹೇಳಿದರೆ, ಇಡೀ ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವಿಗೆ ಎರಡನೇ ಮುಖ್ಯ ಕಾರಣ (Reason) ಈ ಕ್ಯಾನ್ಸರ್ ರೋಗವಂತೆ ಎಂದು ಹೇಳಲಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಈ ಗರ್ಭಕಂಠದ ಕ್ಯಾನ್ಸರ್ ರೋಗ ತುಂಬಾನೇ ಹೆಚ್ಚಾಗಿದೆ ಅಂತ ಹೇಳಬಹುದು. ಇತ್ತೀಚಿನ ಕೆಲವು ಅಂದಾಜಿನ ಪ್ರಕಾರ, ಭಾರತದಲ್ಲಿ (India) ಪ್ರತಿ ವರ್ಷ ಸುಮಾರು 80,000 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ಗೆ ಒಳಗಾಗುತ್ತಾರೆ ಮತ್ತು ಅವರಲ್ಲಿ 45,000 ಮಹಿಳೆಯರು ಚಿಕಿತ್ಸೆಯಿಂದ (Treatment) ಗುಣಮುಖರಾದರೆ, ಇನ್ನೂ 35,000 ಮಹಿಳೆಯರು ಈ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ.
ಈ ಗರ್ಭಕಂಠದ ಕ್ಯಾನ್ಸರ್ ರೋಗವು ಮಹಿಳೆಯರಲ್ಲಿ ಒಂದು ರೀತಿಯ ಭಯ ಮತ್ತು ಆತಂಕ ತಂದೊಡ್ಡಿದೆ. ಈಗ ನಮ್ಮ ದೇಶದ ಆರು ರಾಜ್ಯಗಳಲ್ಲಿ 9 ರಿಂದ 14 ವರ್ಷ ವಯಸ್ಸಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ ನಿರೋಧಕ ಲಸಿಕೆಯನ್ನು ಜೂನ್ ತಿಂಗಳಲ್ಲಿ ನೀಡಲು ಸರ್ಕಾರ ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಯಾವ ರಾಜ್ಯಗಳಲ್ಲಿ ಲಸಿಕಾ ಅಭಿಯಾನ ಶುರುವಾಗುವ ಸಾಧ್ಯತೆಯಿದೆ?
ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಹೋರಾಡಲು ಮಹಿಳೆಯರಿಗೆ ಲಸಿಕಾ ಅಭಿಯಾನ ಶುರು ಮಾಡಬಹುದು ಅಂತ ಹೇಳುತ್ತಿದ್ದಾರೆ. ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ, ಕರ್ನಾಟಕ, ತಮಿಳುನಾಡು, ಮಿಜೋರಾಂ, ಛತ್ತೀಸ್‌ಘಡ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ 2.55 ಕೋಟಿ ಬಾಲಕಿಯರಿಗೆ ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್‌ಪಿವಿ) ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅಧಿಕೃತ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.
ಕೇಂದ್ರ ಆರೋಗ್ಯ ಸಚಿವಾಲಯವು ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮದಲ್ಲಿ ಎಚ್‌ಪಿವಿ ಲಸಿಕೆಯನ್ನು ಹೊರತರಲು ಮಾರ್ಗಸೂಚಿಯನ್ನು ರೂಪಿಸಿದೆ ಮತ್ತು 2026ರ ವೇಳೆಗೆ 16.02 ಕೋಟಿ ಡೋಸ್ ಗಳನ್ನು ಸಂಗ್ರಹಿಸಲು ಏಪ್ರಿಲ್ ನಲ್ಲಿ ಜಾಗತಿಕ ಟೆಂಡರ್ ಕರೆಯುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: HD Kumaraswamy: ನಿಮ್ಮ ಯೋಗ್ಯತೆಗೆ ತಕ್ಕಂತೆ ಮಾತಾಡಿ, ನನ್ನ ಹೇಳಿಕೆಗೆ ಈಗಲೂ ಬದ್ಧ; ಹೆಚ್ಡಿಕೆ
ಈಗಾಗಲೇ ಲಸಿಕೆಯನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ
ಈಗಾಗಲೇ ಗರ್ಭಕಂಠದ ಕ್ಯಾನ್ಸರ್ ವಿರುದ್ಧ ಸೀರಮ್ ಇನ್ಸ್ಟಿಟ್ಯೂಟ್ ನ ಮೇಡ್ ಇನ್ ಇಂಡಿಯಾ ಲಸಿಕೆ ಸಿಇಆರ್‌ವಿಎಎಸಿಯನ್ನು ಕಳೆದ ತಿಂಗಳು ಬಿಡುಗಡೆ ಮಾಡಲಾಗಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ಐಐ) ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದು, ತಮ್ಮ ಮೊದಲ ಸ್ಥಳೀಯ ಎಚ್‌ಪಿವಿ ಲಸಿಕೆ ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿ ಡೋಸ್ ಗೆ 2,000 ರೂಪಾಯಿಗಳ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಸಿಇಆರ್‌ವಿಎಎಸಿ ಎರಡು ಡೋಸ್ ಗ್ಲಾಸ್ ಸೀಸೆ ಪ್ರಸ್ತುತಿಯಲ್ಲಿ ಲಭ್ಯವಿರುತ್ತದೆ. ಆರೋಗ್ಯ ಸಚಿವಾಲಯವು ಟೆಂಡರ್ ಕರೆದಾಗಲೆಲ್ಲಾ ಸಿಇಆರ್‌ವಿಎಎಸಿ ಅನ್ನು ಕೈಗೆಟುಕುವ ದರದಲ್ಲಿ ಪೂರೈಸಲಾಗುವುದು ಎಂದು ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈಗ ಒಂದೇ ಒಂದು ಎಚ್‌ಪಿವಿ ಲಸಿಕೆ ಮಾರುಕಟ್ಟೆಯಲ್ಲಿದೆಯಂತೆ
ಪ್ರಸ್ತುತ, ಕೇವಲ ಒಂದೇ ಒಂದು ಎಚ್‌ಪಿವಿ ಲಸಿಕೆ ಎಂದರೆ ಅಮೆರಿಕದ ಬಹುರಾಷ್ಟ್ರೀಯ ಮರ್ಕ್ಸ್ ಗಾರ್ಡಾಸಿಲ್ ಸಿಂಗಲ್ ಡೋಸ್ ಪೂರ್ವ ಭರ್ತಿ ಮಾಡಿದ ಸಿರಿಂಜ್ ಈಗ ಖಾಸಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಅದರ ಬೆಲೆ 10,850 ರೂಪಾಯಿ ಆಗಿದೆ.
ಭಾರತವು ವಿಶ್ವದ ಸುಮಾರು 16 ಪ್ರತಿಶತದಷ್ಟು ಮಹಿಳೆಯರಿಗೆ ನೆಲೆಯಾಗಿದೆ, ಆದರೆ ಇದು ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಕಾಲು ಭಾಗದಷ್ಟು ಮತ್ತು ಜಾಗತಿಕ ಗರ್ಭಕಂಠದ ಕ್ಯಾನ್ಸರ್ ಸಾವುಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟಿದೆ. ಭಾರತೀಯ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನಿಂದ ಉಂಟಾಗುವ ಜೀವಿತಾವಧಿಯ ಅಪಾಯವನ್ನು ಶೇಕಡಾ 1.6 ರಷ್ಟು ಮತ್ತು ಗರ್ಭಕಂಠದ ಕ್ಯಾನ್ಸರ್ ನಿಂದ ಶೇಕಡಾ 1 ರಷ್ಟು ಸಾವಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ